

ಕ್ಯಾತೆ ತಿಪ್ಪನ ವಿಷ ಮುಂಡಿಗೆ ಬಳ್ಳಿ ವಿಷಯ ಬರೆಯಲಿಕ್ಕೆ ಹೋದರೆ ಒಂದು ದೊಡ್ಡ ಪುರಾಣ. ಮುಂಡಕಸರದ ಆ ಹಳುವಿನ ಬಳಿ ನೀರುಕಾಗೆಗಳು ಮೀನುಗಳಿಗಾಗಿ ಕಾದು ಕುಳಿತಿರುವಲ್ಲಿ ಹಳುವಿಗೆ ಇಳಿದು ವಿಷ ಮುಂಡಿಗೆ ಬಳ್ಳಿ ತರಬೇಕಾದರೆ ಕ್ಯಾತೆ ತಿಪ್ಪನಿಗೆ ಸಾಕುಸಾಕಾಗಿ ಹೋಗುತ್ತದೆ. ಆ ಒಂದು ಬಳ್ಳಿಯ ದೆಸೆಯಿಂದ ಅವನು ಹಾವು ಕಚ್ಚಿದವರನ್ನು ಬದುಕಿಸುತ್ತ ಬಂದಿದ್ದಾನೆ. ದಿನವೂ ದೂರ ದೂರದ ಊರುಗಳಿಂದ ಕ್ಯಾತೆ ತಿಪ್ಪನಿಗಾಗಿ ಜನ ಹುಡುಕಿಕೊಂಡು ಬರುತ್ತಾರೆ.
ವಿಷಮುಂಡಿಗೆ ಬಳ್ಳಿ ವಿಷಯ ಅವನಿಗೆ ತಿಳಿಸಿಕೊಟ್ಟದ್ದು ಒಬ್ಬ ಜೋಗಿ. ಕ್ಯಾತೆ ತಿಪ್ಪ ಮೊದಲು ಏನೂ ಕೆಲಸ ಮಾಡುತ್ತಿರಲಿಲ್ಲ. ಕೆಲಸವೂ ಇರಲಿಲ್ಲ. ಅವನು ಮುಂಡಕಸರದ ಬಳಿ ನೀರುಕಾಗೆಗಳ ಜತೆ ತಾನೂ ಧ್ಯಾನಮಗ್ನನಾಗಿ ಕುಳಿತುಕೊಳ್ಳುತ್ತಿದ್ದ. ಇವನ ಜನ್ಮವೇ ಹೀಗೆ ಎಂದು ಯಾರೂ ಅವನನ್ನು ಮಾತನಾಡಿಸುತ್ತಲೂ ಇರಲಿಲ್ಲ. ಒಂದು ವೇಳೆ ಮಾತನಾಡಿಸಿದರೆ ಅವರ ಕತೆ ಮುಗಿಯಿತೆಂದೇ ಲೆಕ್ಕ. ಅವನಿಗೆ ತಮಾಷೆ ಮಾಡಿದವರಿಗೆ ಅವನು ಮೂಗಲ್ಲಿ ರಕ್ತ ಬರುವ ಹಾಗೆ ಹೊಡೆದಿದ್ದ. ಆಮೇಲೆ ಅವನ ಸುದ್ದಿಗೆ ಹೋದವರೇ ಕಡಿಮೆ. ಸ್ವಭಾವತಃ ಕ್ಯಾತೆ ತಿಪ್ಪನಿಗೆ ಆಗದವರು ಆಗುವವರು ಎಂದು ಯಾರೂ ಇರುತ್ತಿರಲಿಲ್ಲ. ಸಿಟ್ಟು ಬಂದರೆ ಎಲ್ಲರೂ ಒಂದೇ, ಬರದಿದ್ದರೆ ಎಲ್ಲರೂ ಒಂದೇ.
ಕ್ಯಾತೆ ತಿಪ್ಪನಿಗೆ ಹೆದರದೆ ಇದ್ದ ಆಸಾಮಿ ಎಂದರೆ ಆ ಊರಿನ ಸೈಕಲ್ ಮಾಸ್ತರ್ ಒಬ್ಬರೆ. ಅವರು ಕೂಡ ಊರಿನವರ ಮಟ್ಟಿಗೆ ಕ್ಯಾತೆ ತಿಪ್ಪನಷ್ಟೆ ವಿಚಿತ್ರ. ಕ್ಯಾತೆತಿಪ್ಪ ಹಸಿವಾದರೆ ಅವರ ಮನೆಗೇ ಹೋಗಿ ಊಟ ಮಾಡುತ್ತಿದ್ದ. ತಿಪ್ಪನ ಊಟವೆಂದರೆ ಅವನು ಮೂರು ದಿನದ ಊಟ ಒಂದೇ ದಿನ ಮಾಡುತ್ತಿದ್ದ. ಅದಕ್ಕಾಗಿ ಸೈಕಲ್ ಮಾಸ್ತರ ಹೆಂಡತಿ ಅವನು ಊಟಕ್ಕಾಗಿ ಬಂದರೆ ಅವನಿಗಾಗಿ ಅನ್ನ ಬೇರೆಯೇ ಬೇಯಿಸುತ್ತಿದ್ದಳು. ಅವಳಿಗೆ ಕ್ಯಾತೆ ತಿಪ್ಪನ ಸ್ವಭಾವ ಚೆನ್ನಾಗಿ ಗೊತ್ತಿತ್ತು. ಕ್ಯಾತೆ ತಿಪ್ಪನೂ ತನ್ನ ಹಸಿವು ನೀಗುತ್ತಿತ್ತಾದುದರಿಂದ ಅರ್ಧ ದಿನ ಕಾಯುತ್ತಿದ್ದ.
ಸೈಕಲ್ ಮಾಸ್ತರರಿಗೆ ಕ್ಯಾತೆ ತಿಪ್ಪನ ಬಗ್ಗೆ ವಿಶೇಷ ವ್ಯಾಮೋಹವಿತ್ತು. ತಿಪ್ಪ ಎಲ್ಲಿಂದಲೋ ಬಂದು ಆ ಊರು ಸೇರಿಕೊಂಡಿದ್ದ. ಅವನಿಂದ ಯಾರಿಗೂ ಏನೂ ಅಪಾಯವಿರಲಿಲ್ಲ. ಒಂದು ಕಂಡಿಶನ್ ಅಂದರೆ ಅವನನ್ನು ಯಾರೂ ಮಾತನಾಡಿಸಲು ಹೋಗಬಾರದು. ಎಲ್ಲರ ಹಾಗೆ ಮನೆ ಬದುಕು ಇಲ್ಲದೆ ಇದ್ದುದರಿಂದ ಸೈಕಲ್ ಮಾಸ್ತರರಿಗೆ ತಿಪ್ಪನೆಂದರೆ ತಮ್ಮ ಹಾಗೆ ಸ್ವಾರ್ಥಿಯಲ್ಲ ಅನಿಸುತ್ತಿತ್ತು. ಎಲ್ಲರ ಜತೆ ಕ್ಯಾತೆ ತಿಪ್ಪನ ಬಗ್ಗೆ ಅವರು ವಾದಿಸುತ್ತಿದ್ದರು. ಕ್ಯಾತೆತಿಪ್ಪ ತಮ್ಮಂತೆ ಒಬ್ಬ ಮನುಷ್ಯ ಹೇಗಾದಾನೂ ಎಂದೂ ಅವರು ಯೋಚಿಸುತ್ತಿದ್ದರು.
ಸೈಕಲ್ ಮಾಸ್ತರರ ಮನೆಗೆ ಬರುವರೆಲ್ಲರೂ ಚಿತ್ರವಿಚಿತ್ರ ಸ್ವಭಾವದ ಜನ. ವಿಕ್ಷಿಪ್ತರು, ಜೋಗಿಗಳು, ದಾಸಯ್ಯನವರು ಇತ್ಯಾದಿ. ಆದ್ದರಿಂದ ಸೈಕಲ್ ಮಾಸ್ತರರ ಮನೆಯ ಕಡೆ ಸಾಮಾನ್ಯ ಜನ ಹೋಗುತ್ತಿದ್ದುದು ಕಡಿಮೆ. ಸೈಕಲ್ ಮಾಸ್ತರರ ಸೈಕಲ್ಲೇ ಒಂದು ಥರ ವಿಚಿತ್ರ. ಬಿಸಿಲಾಗದ ಹಾಗೆ ಅದಕ್ಕೆ ಛತ್ರಿ ಎಲ್ಲ ಕಟ್ಟಿಕೊಂಡು ಒಂದು ರೀತಿ ರಥದ ಹಾಗೆ ಮಾಡಿಕೊಂಡು ಸೈಕಲ್ ಮಾಸ್ತರರು ಹೋಗುತ್ತಿದ್ದರು.
ಹೀಗಿರಲಾಗಿ ಒಂದು ದಿನ ಗಡ್ಡದ ಬಾಬಾ ಒಬ್ಬ ಸೈಕಲ್ ಮಾಸ್ತರರ ಮನೆಗೆ ಬಂದ. ಮಾಸ್ತರರಿಗೂ ಅವರಿಗೂ ನಡುವೆ ಏನೋ ಮಾತುಕತೆ ನಡೆಯಿತು. ಮಾತುಕಕತೆಯ ನಂತರ ಬಾಬಾ ನೇರವಾಗಿ ಮುಂಡಕಸರ ಹಳುವಿನ ಹತ್ತಿರ ಹೋಗಿ ಸುಮ್ಮನೆ ಕುಳಿತ ತಿಪ್ಪನ ತಲೆ ನೇವರಿಸಿದರು. ತಿಪ್ಪ ಅವರಿಗೆ ಬಾಗಿ ನಮಿಸಿದ. ಹಳುವಿನ ಒಂದು ಬದಿಯಲ್ಲಿ ತಿಪ್ಪನನ್ನು ಬಾಬಾ ಮುಳುಗಲು ಹೇಳಿದರು. ಮೇಲೆ ಬರುವಾಗ ತಿಪ್ಪನ ಕೈಯಲ್ಲಿ ವಿಷ ಮುಂಡಿಗೆ ಬಳ್ಳಿಯಿತ್ತು.
ಅಂದಿನಿಂದ ಕ್ಯಾತೆ ತಿಪ್ಪನ ಅದೃಷ್ಟ ಖುಲಾಯಿಸಿತು. ವಿಷಮುಂಡಿಗೆ ಬಳ್ಳಿಯಿಂದ ಎಂಥ ವಿಷದ ಹಾವಿನ ಕಡಿತಕ್ಕೂ ಮದ್ದು ಸಾಧ್ಯವಿತ್ತು. ಕ್ಯಾತೆ ತಿಪ್ಪ ಯಾರಿಂದಲೂ ಹಣ ಪಡೆಯುತ್ತಿರಲಿಲ್ಲ. ಆದರೆ ಆತನಿಗೆ ಕಾಣಿಕೆಯಾಗಿ ಅರ್ಪಿಸಿದ ಹಣದಿಂದಲೇ ಅವನು ಮುಂಡಕಸರದ ಬಳಿ ಒಂದಷ್ಟು ಜಮೀನು ತೆಗೆದುಕೊಂಡ. ತೋಟ ಮಾಡಿದ, ಮನೆ ಕಟ್ಟಿಸಿಕೊಂಡ. ಸೈಕಲ್ ಮಾಸ್ತರರಿಗೆ ಅವನ ಬದುಕು ಒಂದು ನೆಲೆಗೆ ಮುಟ್ಟಿತೆಂದು ಸಂತೋಷವಾಯಿತು.
ಆದರೆ ಇದ್ದಕ್ಕಿದ್ದ ಹಾಗೆ ಹಳುವಿನಲ್ಲಿನ ವಿಷಮುಂಡಿಗೆ ಬಳ್ಳಿ ಖಾಲಿಯಾಗಿ ಕ್ಯಾತೆ ತಿಪ್ಪನಿಗೆ ದಿಕ್ಕೇ ಕಾಣದಾಯಿತು. ಅವನು ಮೊದಲಿನ ಹಾಗೆ ನೀರುಕಾಗೆಗಳು ಮೀನು ಕಾಯುವ ಹಳುವಿನಲ್ಲಿ ಚಿಂತಾಕ್ರಾಂತನಾಗಿ ಕುಳಿತ. ಸ್ವಲ್ಪ ದಿನಗಳ ನಂತರ ಅದೇ ಜೋಗಿ ಸೈಕಲ್ ಮಾಸ್ತರರಲ್ಲಿಗೆ ಬಂದ. ಇಬ್ಬರೂ ಕ್ಯಾತೆ ತಿಪ್ಪನ ಬಳಿ ಬಂದರು. ಕ್ಯಾತೆ ತಿಪ್ಪನ ಕಣ್ಣಲ್ಲಿ ನೀರು ಸುರಿಯುತ್ತಿತ್ತು.
ಸೈಕಲ್ ಮಾಸ್ತರು ಹೇಳಿದರು, 'ತಿಪ್ಪ ಈಗ ನೀನು ನಮ್ಮೆಲ್ಲರ ಹಾಗೆ ಜಮೀನು ಮನೆ ಮಾಡಿಕೊಂಡಿದ್ದೀಯ. ಈ ಜೋಗಿ ಬಾಬಾ ನಿನ್ನ ಹಾಗೆ ಇನ್ನೊಬ್ಬ ಅನಾಥನಿಗೆ ವಿಷಮುಂಡಿಗೆ ಬಳ್ಳಿ ನೀಡಲು ನಿರ್ಧರಿಸಿದ್ದಾರೆ. ನೀನು ಜಮೀನು ಮನೆ ನೋಡಿಕೊಂಡು ಸುಖವಾಗಿರು. ಇನ್ನೊಬ್ಬ ನಿರ್ಗತಿಕ ವ್ಯಕ್ತಿಯನ್ನು ಜೋಗಿ ಬಾಬಾ ಉದ್ಧಾರ ಮಾಡಬೇಕಾಗಿದೆ'.
ಕ್ಯಾತೆ ತಿಪ್ಪ ಮಾತನಾಡಲಿಲ್ಲ. ಸೀದಾ ಎದ್ದು ತನ್ನ ಮನೆಗೆ ಹೋದ. ಈಗ ಅವನು ಮನೆ ಮಕ್ಕಳು ಮಡದಿ ಎಂದು ಸಾಮಾನ್ಯ ಜನರಂತೆ ಇದ್ದಾನೆಂದು ಹೇಳುತ್ತಾರೆ.
- ಗುರುರಾಜ ಮಾರ್ಪಳ್ಳಿ