

ನುಡಿಸುವೆನು ನಿನ್ನ ಕೊಳಲ
ಮುರಳೀಧರ
ಹೊಮ್ಮಿಸುವ ಆಸೆ
ಹೊಸ ರಾಗವ
ಚಿಮ್ಮಿಸುವ ಬಯಕೆ
ನವ ಭಾವವಾ
ಹಾಡಲಾರೆನೆ ನಾನು
ನಿನ್ನಾ ಥರ
ಕಲಕಲಾರದೆ ಎದೆಯ
ನನ್ನೀ ಸ್ವರ
ಹಾಯುವ ರಾಗದಲೆಗಳು
ಹಸಿದ ಗೋಪಿಯರ ತಲುಪಿ
ತುಂಬಲಾರದೇನು ಒಡಲು
ಸರಸದ ಸ್ವರ ಸಂಚಾರ
ಮುಗಿಲ ಬಾಗಿಲ ಮುಟ್ಟಿ
ಚೆಲ್ಲುವುದು ನೋಡು ಬೆಳದಿಂಗಳು
ಬಿತ್ತಿ ಬೆಳೆವ ಮನದ
ಖಾಲಿ ಬತ್ತಳಿಕೆಯು
ಕೊಳಲ ಸೊಲ್ಲ ಕೇಳಿ
ತೂಗಲಾರದೆ ತೆನೆ
ಬಯಕೆಯಾ ಬೇನೆ
ಅಲೆಅಲೆಯಾಗಿ ತೇಲಿ ತೇಲಿ
ಕೂಡಲಾರದ ಬೆಸುಗೆ
ಕಳಚಿ ಹೋದ ಕೊಂಡಿ
ಕೊಳಲ ಗಾನ ಸುಧೆಗೆ
ಬೆಸೆಯಲಾರದೆ ಮತ್ತೆ
ಹಲುಬುವುದು ಗೊತ್ತೆ
ಕಣ್ಣಲ್ಲೆ ಮಿಂಚು ಕೊನೆಗೆ
ದೂರಬೇಡವೋ ಸಖ
ನಿನಗಿಲ್ಲೇನು ಕೆಲಸ
ಸರಿವೆ ನೀನು ಮರೆಗೆ
ಸರಿಸಿ ನೋವ ತೆರೆಗೆ
ನುಡಿಸುವೆನು ಕೊಳಲ
ಸಾಗಲದು ದೂರ ತೀರ
ದಾಟಿ ಎಲ್ಲ ಮೇರೆ
ಸುಖದ ಸ್ವಪ್ನ ಧಾರೆ
- ಮಮತಾ ಅರಸೀಕೆರೆ
mamathaarsikere@gmail.com