

ಬೇಸಿಗೆ ಬಂತೆಂದರೆ ಸಾಕು, ಮೈಮನಗಳು ನೀರು, ನದಿ, ತೊರೆ ಜಲಪಾತಗಳತ್ತ ಹಾತೊರೆಯುವುದು ಸಹಜ. ಹಾಗಂತ ಈಗ ಜಲವಿಹಾರಕ್ಕಾಗಿ ಕೇರಳ, ಪಾಂಡಿಚೇರಿಗಳಷ್ಟು ದೂರ ಹೋಗಬೇಕೆಂದಿಲ್ಲ. ಇಲ್ಲೇ ಬೆಂಗಳೂರು- ಮೈಸೂರು ಸಮೀಪದ ತಲಕಾಡಿಗೆ ಹೋದರೆ ಸಾಕು, ಅಲ್ಲಿ ಭರಪೂರ ಜಲವಿಹಾರದ ಸಿಂಚನ! ಜಲಕ್ರೀಡೆಗಳ ಆಮೋದಪ್ರಮೋದಗಳ ಸಂಗಮ!
ತಲಕಾಡಿನ ವಿಶೇಷ ಆಕರ್ಷಣೆಯೆಂದರೆ ಅಲ್ಲಿ ವಿಶಾಲವಾಗಿ ಮಡುಗಟ್ಟಿರುವ ಕಪಿಲಾ- ಕಾವೇರಿ ನದಿಗಳ ಹಿನ್ನೀರು ಪ್ರದೇಶದಲ್ಲಿ ತಲೆ ಎತ್ತಿ ನಿಂತ ಪುಟ್ಟ ಹಸಿರು ದ್ವೀಪ. 'ಜಲಧಾಮ' ರೆಸಾರ್ಟ್ ಈ ಅಪೂರ್ವ ನಿಸರ್ಗದ ಕೊಡುಗೆಗಳನ್ನು ಬಳಸಿಕೊಂಡೇ ಅತ್ಯಂತ ವ್ಯವಸ್ಥಿತವಾಗಿ ಅಲ್ಲಿ ಜಲವಿಹಾರ ಸೌಲಭ್ಯ ಕಲ್ಪಿಸಿದೆ. ನಿರ್ಮಲ ಜಲಲಧಾರೆಯ ವಿಶಾಲ ಪ್ರದೇಶದಲ್ಲಿ ತೇಲುವ ರೆಸ್ಟೋರೆಂಟ್ ಮತ್ತು ಸುಸಜ್ಜಿತ ಬೋಟ್ನಲ್ಲಿಯೇ ಊಟತಿಂಡಿ ವ್ಯವಸ್ಥೆ ಕಲ್ಪಿಸಿರುವುದು ಇಲ್ಲಿಯ ವಿಶೇಷ.
ತಲಕಾಡಿನ ನಡುಗಡ್ಡೆಯಲ್ಲಿ ಚೆಲುವು ಸೂಸುವ ಗಿಡಮರಗಳ ತಪ್ಪಲಿನಲ್ಲಿರುವ 'ಜಲಧಾಮ' ರೆಸಾರ್ಟ್ನಲ್ಲಿ ಪ್ರವಾಸಿಗರಿಗೆ ಹಿತ ನೀಡುವ ಹಲವು ಕಾಟೇಜ್ಗಳಿವೆ. ಆದರೆ ಈ ಕಾಟೇಜ್ಗಳಿಗೆ ಬರುವ ಹಲವರು ಹಿನ್ನೀರು ಪ್ರದೇಶದಲ್ಲಿಯೇ ಕಾಲ ಕಳೆಯುವುದನ್ನು ಗಮನಿಸಿದ 'ಜಲಧಾಮ'ದ ರೂವಾರಿ ನಾರಾಯಣ್, ಈ ಹಿನ್ನೀರಿನಲ್ಲಿಯೇ ತೇಲುವ ರೆಸ್ಟೋರೆಂಟ್ ನಿರ್ಮಿಸುವ ಮತ್ತು ಮೊಬೈಲ್ ಹೋಟೆಲ್ ಪ್ರಯೋಗ ಜಾರಿಗೊಳಿಸಿದರು. ಬೇಸಿಗೆಯಲ್ಲಿ ಇಲ್ಲಿ ಹಲವಾರು ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಪಕ್ಷಿ ಛಾಯಾಗ್ರಾಹಕರ ಕ್ಯಾಮೆರಾಗಳಿಗಂತೂ ಇದು ಹಬ್ಬದೂಟವೇ.
ಇನ್ನು ಚಿಣ್ಣರಿಗೆ, ಯುವಕಯುವತಿಯರಿಗೆ ಇಲ್ಲಿಯ ಜಲಹಾಸಿನಲ್ಲಿ ವಿವಿಧ ವಿನೋದಾವಳಿಗಳಿಗೆ- ಸಾಹಸ ಕ್ರೀಡೆಗಳಿಗೆ ಅನುವಾಗಲು ಬನಾನ ರೈಡ್, ಸ್ಪೀಡ್ ಬೋಟ್, ಹನಿಮೂನ್ ಬೋಟ್, ಸ್ಕೂಟರ್ ಬೋಟ್, ಬೆಟ್ ಸ್ಕೀ, ಪೆಡ್ಲಿಂಗ್ ಬೋಟ್ಗಳ ಆಕರ್ಷಣೆಯೂ ಉಂಟು.
ಡ್ಯಾನ್ಸ್ಫ್ಲೋರ್, ಈಜುಕೊಳ, ಆಯುರ್ವೇದ ಮಸಾಜ್, ಹೊರಾಂಗಣ, ಒಳಾಂಗಣ ಕ್ರೀಡೆಗಳಿಗೂ ಇಲ್ಲಿ ವಿಫುಲ ಅವಕಾಶ. ಇನ್ಫೋಸಿಸ್, ವಿಪ್ರೋದಂಥ ಪ್ರತಿಷ್ಠಿತ ಕಂಪನಿಗಳು ಈ ನಿಸರ್ಗಧಾಮದಲ್ಲಿ ಸಭೆ- ಸಮಾರಂಭ, ತರಬೇತಿ ಶಿಬಿರಗಳನ್ನು ಏರ್ಪಡಿಸುವುದುಂಟು.
ಹೆಚ್ಚಿನ ವಿವರಗಳಿಗೆ ಮೊ. 99456- 95948, ವೆಬ್ಸೈಟ್ ಢಿಢಿಢಿ.ಞಛಟಛಝಛಟಛ.ಟಿಜಡಿ ಸಂಪರ್ಕಿಸಬಹುದು. <
ಸಮೀಪದ ಆಕರ್ಷಣೆಗಳು
- ತಲಕಾಡಿನ ಪುರಾತನ ದೇಗುಲಗಳು, ಮರಳುದಿಬ್ಬ
- ಸೋಮನಾಥಪುರ
- ಶಿಂಷಾ
- ರಂಗನತಿಟ್ಟು ಪಕ್ಷಿಧಾಮ
ಶ್ರೀರಂಗಪಟ್ಟಣ
- ನಂಜನಗೂಡು
- ಮೈಸೂರು
ಜಲಧಾಮಕ್ಕೆ ದಾರಿ
ಬೆಂಗಳೂರಿನಿಂದ: ಕನಕಪುರ, ಮಳವಳ್ಳಿ, ಪೂರಿಗಾಲಿ ಮಾರ್ಗ (125 ಕಿ.ಮೀ.)
ಮೈಸೂರಿನಿಂದ: ಟಿ. ನರಸೀಪುರ, ಮಾದಾಪುರ ಮಾರ್ಗ (45 ಕಿ.ಮೀ.)
- ಮಮತಾ ಅಡಕಳ್ಳಿ
ಚಿತ್ರಗಳು: ಶಿವಾನಂದ್