ಮೋದಿಕಲ್ ರಿಯಾಲಿಸಂ

ಭಾನುವಾರ ಕಳೆದರೆ ಜಗತ್ತಿಗೆಲ್ಲ ಸೋಮವಾರ ಬಂದು ಬಾಗಿಲು ತಟ್ಟುತ್ತದೆ. ಏಳು ವರುಷದ ಕೆಳಗೆ, ಪದವಿ ಓದುತ್ತಿದ್ದಾಗ ...
ಮೋದಿಕಲ್ ರಿಯಾಲಿಸಂ
Updated on: 

ಭಾನುವಾರ ಕಳೆದರೆ ಜಗತ್ತಿಗೆಲ್ಲ ಸೋಮವಾರ ಬಂದು ಬಾಗಿಲು ತಟ್ಟುತ್ತದೆ. ಏಳು ವರುಷದ ಕೆಳಗೆ, ಪದವಿ ಓದುತ್ತಿದ್ದಾಗ ನನ್ನ ಪಾಲಿಗದು ಮೋದಿವಾರ. 'ಅವರ ತಲೆಯಲ್ಲಿ ಕಮ್ಯುನಿಸಂ ತುಂಬಿಕೊಂಡಿದೆ. ಅಂಥವರಿಗೆ ನಮ್ಮ ವಿಚಾರ ತಲುಪಿಸಬೇಕು' ಅಂತ ಆರೆಸ್ಸೆಸ್‌ನ ಹಿರಿಯರು ಶಿವಮೊಗ್ಗದ ನೆಹರು ಸ್ಟೇಡಿಯಮ್ಮಿನ ಹಿಂಬದಿಯ ಮೂರ್ತಿ ಎಂಬವರ ಮನೆಗೆ ನನ್ನನ್ನು ವಾರಾನ್ನಕ್ಕೆ ಜೋಡಿಸಿದರು. ವಾರದ ಆರೂ ಊಟದ ಮನೆ ಸಂಘನಿಷ್ಠರದ್ದೇ. ಆದರೆ ಈ ಮನೆ ಸಂಘದವರು ಅಂದುಕೊಂಡಂತೆ ಪಕ್ಕಾ ಪಶ್ಚಿಮ ಬಂಗಾಳ ಆಗಿರಲಿಲ್ಲ. ಅಲ್ಲೊಂದು ಸುಂದರ ಗುಜರಾತ್ ಅವಿತಿತ್ತು. ಚೆಗುವಾರ, ಜಾನ್ ಲೀ, ಫಿಡೆಲ್ ಕ್ಯಾಸ್ಟ್ರೋ, ಭಗತ್‌ಸಿಂಗ್ ಅಲ್ಲದೆ ಅವರ ಮನೆಯಲ್ಲಿ ಮೋದಿ ಕುರಿತ ಪುಸ್ತಕಗಳೂ- ಭಾಷಣದ ಸಿಡಿಗಳೂ ಇದ್ದವು. ಬಲಪಂಥೀಯರಲ್ಲಿ ಅವರಿಗೆ ಆಗಿಬರುವುದು ಮೋದಿಯೊಬ್ಬರೇ. ಗೋಧ್ರಾ ಗಲಭೆ ವಿವಾದವೇ ಅನಗತ್ಯ, ಅದನ್ನು ಜಗ್ಗಾಡುವ ಬರ್ಕಾ ದತ್‌ಗೆ ತಲೆಜುಟ್ಟಿನಂತೆ ಬುದ್ಧಿ ಕಮ್ಮಿ. ಗುಜರಾತಿನ ಅಭಿವೃದ್ಧಿ ದೇಶದ ಮಿಕ್ಕೆಡೆ ಯಾಕಾಗುವುದಿಲ್ಲ ಎನ್ನುತ್ತಾ ಮೋದಿಗೆ ಸ್ಪಷ್ಟ ಬಹುಮತ ಕೊಡಿಸಿ, ಮಾತಿನಲ್ಲೇ ಭವಿಷ್ಯದ ಪ್ರಧಾನಿ ಮಾಡಿಸುತ್ತಿದ್ದರು ನಿಷ್ಪಕ್ಷಿ ಮೂರ್ತಿ. ಅವರೂ ಕೆಲ ಕಾಲ ಗುಜರಾತಿನಲ್ಲೇ ಇದ್ದವರು.
ಲೋಕದಲ್ಲಿ ಎಲ್ಲ ಮೂರ್ತಿಗಳೂ ಹಾಗಿರುವುದಿಲ್ಲ ಅಥವಾ ಮೂರ್ತಿಗಳು ಹಾಗಿರಬೇಕೆಂದು ಲೋಕ ಬಯಸುವುದೂ ತಪ್ಪು. ದೇವರನ್ನು ಒಪ್ಪದ ಎ.ಎನ್. ಮೂರ್ತಿರಾಯರಿದ್ದರು; ಕಮ್ಯುನಿಸಮ್ಮನ್ನು ಅಲ್ಲಗಳೆಯುತ್ತಿದ್ದ ಹಿರಿಯೂರು ಕೃಷ್ಣಮೂರ್ತಿಗಳಿದ್ದರು; ಬಂದೂಕಿನೊಂದಿಗೆ ಕಾಣಿಸಿಕೊಳ್ಳುವ ನಕ್ಸಲ್ ಬಿ.ಜಿ. ಕೃಷ್ಣಮೂರ್ತಿಯೂ ಬದುಕಿದ್ದಾನೆ ಅಂತ ಮಾಧ್ಯಮಗಳನ್ನುತ್ತವೆ; ಮೋದಿಯನ್ನು ನಿದ್ರೆಯಲ್ಲೂ ಕ್ಷಮಿಸದ ಅನಂತಮೂರ್ತಿಯವರೂ ಪ್ರಸ್ತುತರಾಗುತ್ತಲೇ ನಮ್ಮೆದುರಿದ್ದಾರೆ. ಈ ಎಡ- ಬಲ ಸಿದ್ಧಾಂತದ ಗುಹೆಗಳೇ ಗಹನ. ಅಲ್ಲಿನ ಬೆಳಕು ಇನ್ನೊಬ್ಬರಿಗೆ ಕತ್ತಲು. ಅಲ್ಲಿನ ಕತ್ತಲು ಸಿದ್ಧಾಂತಿಗಳ ಕಣ್ಣಿಗೆ ಬೀದಿದೀಪ. ಒಮ್ಮೆ ಹೊಕ್ಕರೆ ಹೊರಹಾದಿ ತೋರಿಸುವ ಒಬ್ಬನೇ ಒಬ್ಬ ಪುಣ್ಯಾತ್ಮನೂ ಆ ಗುಹೆಗಳಲ್ಲಿ ಸಿಗುವುದಿಲ್ಲ. ಅದಿರಲಿ... ಈ ಊಟದ ಮನೆಯ ಮೂರ್ತಿಯವರು ಕಂಡ ಗುಜರಾತಿಗೆ ನಾನೂ ಹೋಗಬೇಕನ್ನಿಸಿ, 2011ರಲ್ಲಿ ಹೊರಟೆ. ಬಹುಪಾಲು ಕಮ್ಯುನಿಸ್ಟರ ಅಂತರಂಗ ಗೆದ್ದ ಆ 'ಮೋದಿ'ಕಲ್ ರಿಯಲಿಸಂ ಆ ಗುಜರಾತಿಗಳ ಎದೆಯಲ್ಲಿ ಕಾಣಿಸಿತು.
ಪೋರ್‌ಬಂದರ್‌ನ ಸನಿಹದಲ್ಲೇ ಚೋರ್‌ವಾಡ್ ಎಂಬುದಿದೆ. ಉದ್ಯಮಿ ಧೀರೂಬಾಯಿ ಅಂಬಾನಿಯ ಹುಟ್ಟೂರು. ಸಿಹಿತಿಂಡಿ ಮಾರಿಕೊಂಡು ನಾಲ್ಕಾಣೆ ಹೆಕ್ಕುತ್ತಿದ್ದ ಈ ಹುಡುಗ ಇಪ್ಪತ್ನಾಲ್ಕು ವರುಷದ ವರೆಗೂ ಇಲ್ಲೇ ಇದ್ದ. ನಂತರ 'ಬಟ್ಟೆ ಉದ್ಯಮದ ಹಿಂದೆ ಬಿದ್ದವನು ಈ ಊರನ್ನು ಹಿಂದಿರುಗಿಯೂ ನೋಡಲಿಲ್ಲ ಪಾಪಿ' ಅನ್ನೋದು ಊರಿನವರ ದೂರು. ದೇಶದ ಸಿರಿವಂತ ಕುಟುಂಬ ಅಂಬಾನಿ ಬ್ರದರ್ಸ್‌ಗೆ ಇವತ್ತು ಈ ಊರಿನ ನೆನಪಿಲ್ಲ. ಹನ್ನೆರಡು ಸಾವಿರ ಜನಸಂಖ್ಯೆಯಿರುವ ಚೋರ್‌ವಾಡ್ ಉತ್ತರ ಭಾರತಕ್ಕೆ ಬಗೆಬಗೆಯ ಸಿಹಿತಿಂಡಿ ಹಂಚುತ್ತದೆ. 'ಪುರಾಣ್‌ಪಾಲಿ', 'ಬಾಸುಂಡಿ' ಸ್ವೀಟುಗಳಿಗೆ ಅವರ ಕೈಗಳು ಕೊಡುವ ಗುಣಮಟ್ಟವೇ ಬೇರೆ. ಊರ ಕುಬೇರನ ನೆನಪಿಗಾಗಿಯೇ ಸ್ಥಳೀಯರು ಬೃಹತ್ 'ಅಂಬಾನಿ ದ್ವಾರ' ಕಟ್ಟಿಸಿದ್ದಾರೆ. 'ಊರನ್ನೇ ಮರೆತವನಿಗೆ ಇದು ಪ್ರೀತಿಯ ಸ್ಮಾರಕನಾ?' ಅಂತ ಅಲ್ಲಿನ ಡಾಬಾದವನಿಗೆ ಕೇಳಿದೆ; 'ನಮಗಿರುವ ಪ್ರೀತಿ ಆ ಹಣವಂತನ ಮೇಲಲ್ಲ ಸಾರ್. ಮುಖ್ಯಮಂತ್ರಿ ಮೇಲೆ. ಗುಜರಾತಿಗಳಾಗಿ ಅಂಥ ಮಹಾಶಯನನ್ನು ಮರೆತರಲ್ಲ ಎಂಬ ಮುಜುಗರದ ದುಃಖ ಇದೇ ಹೈವೇಯಲ್ಲಿ ಹಾದುಹೋಗುವ ಮೋದಿಜೀಗೆ ಆಗಬಾರದು' ಎಂದ.
ಗಾಂಧಿನಗರಕ್ಕೆ ಹೋಲಿಸಿದರೆ ಅಹ್ಮದಾಬಾದಿನಲ್ಲಿ ಮುಸ್ಲಿಂ ಪ್ರಾಬಲ್ಯ ಜಾಸ್ತಿ. ಆದರೆ, ಅಲ್ಲಿನ ಮುಸ್ಲಿಮರ ಹೋಟೆಲ್ಲುಗಳಲ್ಲೇ ನಾನ್‌ವೆಜ್ ಸಿಗುವುದಿಲ್ಲ. ಆ ನೆಲದಲ್ಲಿ ಗಾಂಧಿ ಹುಟ್ಟಿದ್ದಕ್ಕೆ ಕೊಡುತ್ತಿರುವ ಗೌರವವೂ ಅದಿರಬಹುದು. ಶೇ.75 ಗುಜರಾತಿಗಳಿಗೆ ನಾನ್‌ವೆಜ್ ಎಂದರೇನೇ ನಾಲಗೆ ಕಹಿಯಾಗುತ್ತದೆ. ಕಚ್ ಬಾರ್ಡರ್‌ನ ಸೈನಿಕರು ಡ್ಯೂಟಿಯಿಂದ ಹೊರಬಂದಾಗ ಎದುರಿಸುವ ಸಮಸ್ಯೆ ಎರಡೇ; ಹಾಕಲು ಎಣ್ಣೆ ಇಲ್ಲ, ತೇಗೋದಿಕ್ಕೆ ಬಿರಿಯಾನಿ ಇಲ್ಲ. ನಮ್ಮೊಟ್ಟಿಗೆ ಟ್ರೈನಿನಲ್ಲಿ ಬಂದ ನೌಕಾದಳದ ಕ್ಯಾಪ್ಟನ್, ಸೂರತ್‌ನಲ್ಲಿ ಯಾವುದೋ ಓಣಿಯೊಳಗೆ ನಮಗೆ ಬಿರಿಯಾನಿ ಕೊಡಿಸಿದ. ವಾರ್ಷಿಕ 39 ಸಾವಿರ ಟನ್ ಮೀನು ಉತ್ಪಾದಿಸುವ ಆ ರಾಜ್ಯ, ತನಗಾಗಿ ಬಳಸಿಕೊಳ್ಳುವುದು ಕೇವಲ 2,300 ಟನ್ನುಗಳನ್ನಷ್ಟೇ. ಗುಜರಾತಿಗಳು ಶೋಕಿವಾಲಗಳು. ಆದರೆ, ಮಹಾ ಜಿಪುಣರು. ಆ ಶೋಕಿತನ- ಜಿಪುಣತನ ಮೋದಿಯಲ್ಲೂ ಇದೆ. ಅಭಿವೃದ್ಧಿಯೆಂದರೆ ಅಲ್ಲಿ ಪೈಸೆಪೈಸೆಗಳ ಲೆಕ್ಕಾಚಾರ. ಬಿಡಿಗಾಸೂ ಬಿಚ್ಚುವುದಿಲ್ಲ. ಲೆಕ್ಕದಲ್ಲೂ ಪಾಕಡಾ. ದ್ವಾರಕೆಯಿಂದ ಬರುವಾಗ ನಮ್ಮ ಟ್ಯಾಕ್ಸಿಯ ಮೀಟರ್ ಬಿಲ್ಲು 3,951 ರು. ಆಗಿತ್ತು. ಡ್ರೈವರ್ ಶಿವ ಜೋಷಿ ಪ್ರಾಮಾಣಿಕವಾಗಿ, ಯಾರದ್ದೋ ಅಂಗಡಿಯಿಂದ ಚಿಲ್ಲರೆ ಮಾಡಿಸಿ, 49 ರುಪಾಯಿಯನ್ನು ಕೈಗಿಟ್ಟಿದ್ದ. ಮತ್ತೆ ಗುಜರಾತ್ ಬಿಜೆಪಿ ಕಚೇರಿ ಪ್ರಮುಖ್ ವ್ಯವಸ್ಥೆ ಮಾಡಿದ್ದ ಕಾರೇ ಆಗಿತ್ತದು. ಅನುದಾನದ ವಿಚಾರದಲ್ಲಿ ಮೋದಿಯೂ ಹಾಗೆ. ಅಗತ್ಯಕ್ಕಿಂತ ತುಸು ಕಡಿಮೆಯೇ ಅನುದಾನದ ಬಿಡುಗಡೆ. ಅಷ್ಟರಲ್ಲೇ ಅಭಿವೃದ್ಧಿ ತೋರಿಸಬೇಕು.
ನಾವಿಲ್ಲಿ ಸಾವಿರ ಕೋಟಿ ಚೆಲ್ಲಿ, ಬೆಂಗಳೂರಿನ ಬುರುಡೆ ಮೇಲೆ ಮೆಟ್ರೋ ಬಿಟ್ಟಿದ್ದೇವೆ. ಆದರೆ, ಗುಜರಾತ್ ಆ ರಿಸ್ಕಿಗೆ ಹೋಗಿಲ್ಲ. ಅಲ್ಲಿ ಸಿಟಿ ಬಸ್ಸಿಗೆ ಪ್ರತ್ಯೇಕ ಮಾರ್ಗವಿದೆ. ಬಿಆರ್‌ಟಿಎಸ್ (ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಂ) ಅವರ ತಾಂತ್ರಿಕ ಜಾಣತವನ್ನು ಕಣ್ಣಿಗೆ ಕಟ್ಟುತ್ತದೆ. ನಮ್ಮ ಮೆಟ್ರೋ ರೈಲಿನಷ್ಟೇ ಸಾಗುವ ಈ ಬಸ್ಸುಗಳು ಇತರೆ ವಾಹನಗಳಿಗೆ ಅಡ್ಡಬರುವುದೇ ಇಲ್ಲ. ಹಗಲು ಹೊತ್ತಲ್ಲೇ ನೀವೀ ರಸ್ತೆಯ ಒಂದು ಬದಿಯಲ್ಲಿ ಶಟಲ್ ಕಾಕ್ ಆಡಬಹುದು. ದೇಶದಲ್ಲೇ ಮೆಟ್ರೋ ಮಾದರಿಯ ಮೊದಲ ಬಸ್ ಜಾಲವಿದು. ಮೆಕ್ಸಿಕೋ, ಬ್ರೆಜಿಲ್‌ನಲ್ಲಷ್ಟೇ ಇದ್ದ ಈ ಮಾದರಿಯನ್ನು ಗುಜರಾತಿಗೆ ಕರೆತಂದಿದ್ದೂ ಮೋದಿಯೇ.
ಬೀದಿಗೆ ಮೂರ್ನಾಲ್ಕೆಂಬಂತೆ ಅಲ್ಲಿ ದರ್ಶಿನಿಗಳಿಲ್ಲ. ಬಣ್ಣದ ಬಾವುಟ ಮುಂದಿಟ್ಟುಕೊಂಡ ತ್ರೀಸ್ಟಾರ್- ಫೈವ್ ಸ್ಟಾರ್ ಹೋಟೆಲ್ಲುಗಳೂ ಕಡಿಮೆಯೇ. ಇಲ್ಲಿನ ಹೋಟೆಲ್ಲುಗಳಿಗಿಂತ ಚೆನ್ನಾಗಿ ಅಲ್ಲಿನ ಕೈಗಾಡಿಗಳು ಶುದ್ಧ ಆಹಾರವನ್ನು ಒದಗಿಸುತ್ತವೆ. ದೊಡ್ಡ ದೊಡ್ಡ ಆಫೀಸರ್ಸ್ ಅಲ್ಲದೆ ಕಾಲೇಜು ಹುಡುಗ- ಹುಡುಗಿಯರ ಪಾರ್ಟಿಯೂ ಅಂಥ ಗಾಡಿಗಳಲ್ಲೇ ನಡೆಯುತ್ತದೆ. ತೇಪ್ಲಾದ ಜೊತೆಗೆ ಎಣ್ಣೆಯಲ್ಲಿ ಹುರಿದ ಹಸಿಮೆಣಸನ್ನು ಕಚಕಚನೆ ಕಡಿಯುತ್ತಾ, ಎಡಗೈಯಲ್ಲಿ ಬಿಸಿ ಚಾ ಕುಡಿಯುತ್ತಾ ಶಾಖ ಮತ್ತು ಶಕ್ತಿಯನ್ನು ಜನರೇಟ್ ಮಾಡಿಕೊಳ್ಳುತ್ತಿದ್ದ ಗಾಂಧಿನಗರದ ಹುಡುಗಿಯರೂ ಅಮುಲ್ ಹಾಲಿನ ಉತ್ಪನ್ನದಂತೆ. ಪಿಜ್ಜಾ ಕಾರ್ನರ್, ಕಾಫಿ ಡೇಯಲ್ಲೇ ಪಾರ್ಟಿ ಬಯಸುವ ಬೆಂಗಳೂರಿನ ಹುಡುಗಿಯರಿಗೂ ಆ ಲೆಕ್ಕದಲ್ಲಿ ಗುಜರಾತ್ ಮಾದರಿ. ಅಲ್ಲಿ ಅಭಿವೃದ್ಧಿ ಎನ್ನುವುದು ದೊಡ್ಡ ದೊಡ್ಡ ಕಟ್ಟಡಗಳಲ್ಲಿಲ್ಲ. ಹಳೇಮನೆಗಳನ್ನು ಕೆಡವಿ ಹೊಸತನ್ನು ಕಟ್ಟದಷ್ಟು ಕಂಜೂಸ್‌ತನ ಗುಜರಾತಿಗಳದ್ದು. ಆದರೆ ಮನೆಯ ಇಂಟೀರಿಯರ್ ಅನ್ನು ಅದ್ಭುತವಾಗಿ ಅಲಂಕರಿಸುತ್ತಾರೆ. ಮಣಿನಗರ, ಆನಂದ್, ಗಾಂಧಿನಗರಗಳಲ್ಲಿ ಈಗೀಗ ಹೊಸ ಮನೆಗಳಾಗುತ್ತಿವೆ. ದೇಶದಲ್ಲಿ ಅತಿಹೆಚ್ಚು ತಲಾ ಆದಾಯ ಹೊಂದಿರುವ ಗುಜರಾತಿಗಳಿಗೆ ವ್ಯಾಪಾರವೇ ಜೀವ. ಬಟ್ಟೆಯ ದೊಡ್ಡ ಗಂಟು ಹೊತ್ತುಕೊಂಡು ಕೋಟ್ಯಾಧಿಪತಿ ಅಜ್ಜನೂ ವ್ಯಾಪಾರಕ್ಕೆ ಹೊರಡುತ್ತಾನೆ. ಸೂರತ್‌ನಲ್ಲಂತೂ ಆ ಸೊಗಸು, ಕಣ್ಣಿಗೆಇನ್ನೂ ಖುಷಿ. ದೇಶದ ಕಾಲುಭಾಗ ಜವಳಿಯನ್ನು ಸೂರತ್‌ನ ತಾತಪ್ಪಂದಿರು ಹಗಲೂರಾತ್ರಿ ಶ್ರಮಪಟ್ಟು ನೇಯುತ್ತಾರೆ. ಸುಸ್ತಾಗದ ಸಾಧಕರು. ಅರ್ಧ ಅಡಿ ಜಾಗದಲ್ಲೇ ಅರಮನೆಯ ಖುಷಿ ಕಂಡವರು. ವಜ್ರವನ್ನು ಕತ್ತರಿಸಿ, ಅದಕ್ಕೆ ಮಾಂತ್ರಿಕ ಹೊಳಪು ಕೊಡುವಲ್ಲೂ ಸೂರತ್ ವಿಶ್ವಖ್ಯಾತಿ.
ದೇಶದ ಎಲ್ಲೆಡೆಯ ಎನ್‌ಫೀಲ್ಡ್ ಬೈಕುಗಳ ಎಂಜಿನ್ನು- ಮುಂದಿನ ಚಕ್ರಗಳನ್ನು ಗುಜರಾತಿಗಳು ತುದಿಗಾಲಲ್ಲಿ ನಿಂತು ಖರೀದಿಸುತ್ತಾರೆ. ಅದರಿಂದ ನಿರ್ಮಿಸುವ 'ಚಕಡಿ' ಅಲ್ಲಿನ ಪ್ರಧಾನ ಗ್ರಾಮೀಣ ಸಾರಿಗೆ. ಇಲ್ಲಿ ಇಬ್ಬರು ಕೂರುವ ಬೈಕು, ಅಲ್ಲಿ 15 ಜನರನ್ನು ಏದುಸಿರು ಬಿಡದೆ ಒಯ್ಯುವ ಚಕಡಿ! ಚಕಡಿಗೂ ಅಲ್ಲಿ ಲೈಸೆನ್ಸ್ ಇದೆ. ಕರಕುಶಲ ವಸ್ತುಗಳಿಗೆ ವಿಶ್ವಮಾರುಕಟ್ಟೆ ಒದಗಿಸುವ ಅಲ್ಲಿನ ರಣ್ ಉತ್ಸವದ ರಂಗೇ ಬೇರೆ. ರಾಜ್ಯದ ಆದಾಯದಲ್ಲಿ ಗುಡಿ ಕೈಗಾರಿಕೆಗಳ ಪಾಲೂ ಅಧಿಕವಿರುವುದು ಅದೊಂದೇ ರಾಜ್ಯದಲ್ಲಿ.
ಪವರ್ ಕಟ್ ಕಾಣದ, 'ಇವತ್ತು ನೀರಿಲ್ಲ' ಅಂತ ಪತ್ರಿಕಾ ಪ್ರಕಟಣೆ ಇಲ್ಲದ, ಘೋರ ಭೂಕಂಪವಾದರೂ ಆ ಗುರುತನ್ನೆಲ್ಲ ಅಭಿವೃದ್ಧಿಯ ಮೇಕಪ್‌ನಿಂದ ಮುಚ್ಚಿಕೊಂಡ ಗುಜರಾತ್ ಕೆಲವು ವಿಚಾರಗಳಲ್ಲಿ ಹಿಂದುಳಿದಿದೆ. ಕನ್ನಡಿಗರಿಗೆ ಮೊದಲ ಜ್ಞಾನಪೀಠ ಸಿಕ್ಕಿದ್ದು 1967ರಲ್ಲಿ. ಗುಜರಾತಿಗಳಿಗೆ (ಉಮಾಕಾಂತ ಜೋಷಿ) ಸಿಕ್ಕಿದ್ದೂ ಅದೇ ವರ್ಷವೇ. ನಾವೀಗ 8-3 ಸೆಟ್‌ಗಳಿಂದ ಮುಂದೆ. ನಮ್ಮ 'ನಿತ್ಯೋತ್ಸವ'ದಂಥ ಅದ್ಭುತ ಕವಿತೆಗಳನ್ನು ಗುಜರಾತಿಗಳೇನು ಹೊಮ್ಮಿಸಿಲ್ಲ. ಅಲ್ಲಿನ ಭಜನಾಶೈಲಿ ರಾಗ- ಸಂಗೀತಗಳಿವೆ. ಅಜಯ್ ಜಡೇಜಾ, ನಯನ್ ಮೋಂಗಿಯಾರಂಥ ಕ್ರಿಕೆಟ್ ಕಳಂಕಿತರನ್ನು ಕಂಡ ನೆಲವೂ ಹೌದದು. ಇಲ್ಲಿನ ಇನ್ಪೋಸಿಸ್- ವಿಪ್ರೋದಂಥ ಸಾಫ್ಟ್‌ವೇರ್ ಕಂಪನಿಗಳಂಥವು ಅಲ್ಲಿ ಹುಟ್ಟಲು ಇನ್ನೂ ಕೆಲ ಸಮಯ ಹಿಡಿಸೀತು. ಭದ್ರತೆ ವಿಚಾರದಲ್ಲಿ, ಅಕ್ಷರಧಾಮ- ಸೋಮನಾಥದಲ್ಲಿ ಜೇಬಲ್ಲಿರುವ ಚಾಕೊಲೇಟನ್ನೂ ವಶಪಡಿಸಿಕೊಳ್ಳುವ ಪರಿಸ್ಥಿತಿ ಇದೆ. ಆ ಲೆಕ್ಕದಲ್ಲಿ ನಮ್ಮ ಮೈಸೂರು ಅರಮನೆ ನಿರಾಳ. ಇಲ್ಲಿರುವಷ್ಟು ಹೇರಳ ಪ್ರಾಕೃತಿಕ ವೈವಿಧ್ಯ, ಬುಡಕಟ್ಟು ವೈವಿಧ್ಯ, ವೈಚಾರಿಕ ವೈವಿಧ್ಯ ಅಲ್ಲಿಲ್ಲ.
ಒಟ್ಟಾರೆ ಗುಜರಾತ್ ಅಭಿವೃದ್ಧಿಯಲ್ಲಿ ಮೋದಿ ಪಾಲು ಎಷ್ಟಿದೆಯೋ, ಗುಜರಾತಿಗಳ ಶ್ರಮದ ಪಾಲೂ ಅಷ್ಟೇ ಇದೆ. ಜಿಪುಣತನ ದೇಶ ಕಟ್ಟಿಯೇ ಕಟ್ಟುತ್ತದೆ. ಪೈಸೆ ಪೈಸೆ ಕೂಡಿಟ್ಟರೆ ಪ್ಯಾಲೇಸ್. ಅದು ಗುಜರಾತ್ ಪಾಲಿಸಿ. ಮೋದಿ ಮಾದರಿ. ಆದರೆ, ಮೋದಿ ಅಂದುಕೊಂಡಂತೆ ಇಡೀ ದೇಶ ಗುಜರಾತಿಗಳ ಥರ ಇಲ್ಲ. ಹೆಣಕ್ಕೂ ಹಣ ಚೆಲ್ಲುವ ನಮ್ಮ ಮನಃಸ್ಥಿತಿಯನ್ನು ಬೇರು ಮಟ್ಟದಲ್ಲೇ ಬದಲಿಸುವ ಸವಾಲು ಮೋದಿಗಿದೆ. ಏನೇ ಅಂದರೂ ನಮ್ಮ ರಿಪೇರಿ ಸ್ವಲ್ಪ ಕಷ್ಟವೇ. ಟಿ


ನೋ ಕ್ರೈಂ ರಿಪೋರ್ಟರ್
ಗುಜರಾತ್ ಕ್ರೈಮುಗಳಿಲ್ಲದ ರಾಜ್ಯವೂ ಹೌದು. ಅಲ್ಲಿನ ಅತಿಹೆಚ್ಚು ಪ್ರಸಾರವುಳ್ಳ ಪತ್ರಿಕೆ 'ಗುಜರಾತಿ ಸಮಾಚಾರ'ದ ವರದಿಗಾರ್ತಿ ಹೇಳಿದಂತೆ ಅವರ ಪತ್ರಿಕೆಗೆ 'ಕ್ರೈಮ್ ರಿಪೋರ್ಟರ್‌' ಅನ್ನೋ ವಿಶೇಷ ಹುದ್ದೆಯೇ ಇಲ್ಲವಂತೆ. ಒಮ್ಮೆ ಬೆಂಗಳೂರಿಗೆ ಬಂದಿದ್ದ ಆಕೆಗೆ ಮೆಜೆಸ್ಟಿಕ್‌ನಲ್ಲಿ ಸಾಲಾಗಿ ನಿಂತ ವೇಶ್ಯೆಯರನ್ನು ಕಂಡು ಮುಜುಗರವಾಯಿತಂತೆ. 'ಗಾಂಧಿನಗರದಲ್ಲಿ ಹಾಗೆ ದಾರಿ ತಪ್ಪಿದ ಒಬ್ಬಳೇ ಒಬ್ಬಳನ್ನು ತೋರಿಸಿ' ಎಂದಳು. ನಮ್ಮ ಮಾತು ಕಟ್ಟಿತ್ತು. ಅಲ್ಲಿ ಅಪರಾಧ ಕಡಿಮೆಯಾಗಲು ಕಾರಣ ಮದ್ಯ ನಿಷೇಧವೂ ಇರಬಹುದು. ನಮ್ಮಂತೆ ಅಲ್ಲಿನ ಸರ್ಕಾರ ಸಾರಾಯಿ ಮಾರಿ ಆದಾಯ ಹೆಚ್ಚಿಸಿಕೊಳ್ಳುವುದಿಲ್ಲ. ಅಪ್ಪಿತಪ್ಪಿ ಯಾರ ಬಳಿಯಾದರೂ ವೈನ್ ಬಾಟಲಿ ಕಂಡರೆ ಎಫ್‌ಐಆರ್ ಬೀಳುತ್ತದೆ. ಕನಿಷ್ಠ 5 ಸಾವಿರ ರು. ದಂಡ. ಅಪರೂಪಕ್ಕೆ ಅಲ್ಲೇನಾದರೂ ಕಳ್ಳಭಟ್ಟಿ ಸೇವಿಸಿ, ವ್ಯಕ್ತಿ ಸತ್ತರೆ ಕುಟುಂಬದ ಮೇಲೆಯೇ ಪ್ರಕರಣ ದಾಖಲಾಗುತ್ತದೆ. ನಮ್ಮಲ್ಲಿ 2 ಲಕ್ಷ ರು. ಪರಿಹಾರ ಸಿಗುತ್ತದೆ.

- ಕೀರ್ತಿ ಕೋಲ್ಗಾರ್
kolgarkeerthi@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com