ದ್ವೇಷವಿಲ್ಲ ದೈನ್ಯವಿಲ್ಲ

ನರೇಂದ್ರ ಮೋದಿಯವರಲ್ಲಿ ಕಾಣಬಹುದಾದ ಒಂದು ಒಳ್ಳೆಯ ಗುಣವೆಂದರೆ ಭಿನ್ನಮತೀಯರ ವಿರುದ್ಧ ಅವರೆಂದೂ...
ದ್ವೇಷವಿಲ್ಲ ದೈನ್ಯವಿಲ್ಲ
Updated on: 

ನರೇಂದ್ರ ಮೋದಿಯವರಲ್ಲಿ ಕಾಣಬಹುದಾದ ಒಂದು ಒಳ್ಳೆಯ ಗುಣವೆಂದರೆ ಭಿನ್ನಮತೀಯರ ವಿರುದ್ಧ ಅವರೆಂದೂ ಸಾರ್ವಜನಿಕವಾಗಿ ತಮ್ಮ ಅಸಮಾಧಾನ, ಕೋಪ ವ್ಯಕ್ತಪಡಿಸಿದವರಲ್ಲ. ಏನೇ ಬಂದರೂ ಸ್ವೀಕರಿಸುತ್ತಿದ್ದರು. '1995ರಲ್ಲಿ ಪಕ್ಷದೊಳಗೆ ಸಮಸ್ಯೆಯಿತ್ತು. ಯಾರೂ ನನ್ನನ್ನು ರಾಜೀನಾಮೆ ನೀಡುವಂತೆ ಕೇಳಿಲ್ಲ. ಆದರೆ ನನ್ನಿಂದ ಸಮಸ್ಯೆ ಸೃಷ್ಟಿಯಾಗಿದೆ ಎನ್ನುವದಾದರೆ ನಾನು ರಾಜಿನಾಮೆ ನೀಡುತ್ತೇನೆ ಎಂಬುದಾಗಿ ಹೇಳಿದ್ದೆ' ಎಂದು 2003ರಲ್ಲಿ ನಡೆದ ಸಂದರ್ಶನವೊಂದರಲ್ಲಿ ತಮ್ಮ ರಾಜೀನಾಮೆಯ ಬಗ್ಗೆ ಮೋದಿ ವಿವರಿಸಿದ್ದಾರೆ. ಹಾಗಾದರೆ ತಮ್ಮ ರಾಜೀನಾಮೆಗೆ ಕಾರಣರಾದ ಶಂಕರ್ ಸಿನ್ಹ ವಾಘೇಲಾ ಅವರ ಬಗ್ಗೆ ಮೋದಿ ಕುಪಿತರಾಗಿದ್ದರೆ? ಅವರೇ ಹೇಳುವಂತೆ ಮೋದಿಯವರಲ್ಲಿ ಕಿಂಚಿತ್ತೂ ಬೇಸರವಿರಲಿಲ್ಲ. 'ಅಂದಿನಿಂದ ಇದುವರೆಗೂ ವಾಘೇಲಾ ವಿರುದ್ಧ ಒಂದೇ ಒಂದು ಮಾತನ್ನೂ ಆಡದ ವ್ಯಕ್ತಿ ನಾನು. ವಾಘೇಲಾ ಕಾಂಗ್ರೆಸ್ ಸೇರಿ ಬಿಜೆಪಿ ವಿರುದ್ಧ ಹೋರಾಟಕ್ಕಿಳಿದಾಗಲೂ ಅವರ ವಿರುದ್ಧ ನಾನು ಮಾತನಾಡಲಿಲ್ಲ' ಎನ್ನುತ್ತಾರೆ ಮೋದಿ.
ನವನಿರ್ಮಾಣ ಚಳವಳಿಯ ಕಾಲದಿಂದಲೂ ಮೋದಿಯವರಿಗೆ ಚಿಮಣ್‌ಭಾಯಿ ಪಟೇಲ್ ಅವರ ಪರಿಚಯವಿತ್ತು. ಆ ಕಾಲದಲ್ಲಿ ಚಿಮಣ್‌ಭಾಯಿ ಬಗ್ಗೆ ಪ್ರಧಾನಿ ಇಂದಿರಾ ಗಾಂಧಿಯವರಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. 13 ವರ್ಷಗಳ ಕಾಲ ಕಾಂಗ್ರೆಸ್‌ನಿಂದ ದೂರವಿಟ್ಟಿದ್ದರು. ಈ ಎಲ್ಲ ಕಾಲಾವಧಿಯಲ್ಲೂ ನರೇಂದ್ರ ಮೋದಿ, ಚಿಮಣ್‌ಭಾಯಿ ಜತೆ ಸಂಪರ್ಕ ಇಟ್ಟುಕೊಂಡಿದ್ದರು. ತುರ್ತುಪರಿಸ್ಥಿತಿಯ ವೇಳೆಯಲ್ಲೂ ಆಪ್ತ ಸಂಪರ್ಕದಲ್ಲಿದ್ದರು. ಚಿಮಣ್‌ಭಾಯಿಯವರು ಎಂದೂ ಮೋದಿಗೆ ಮೋಸ ಮಾಡಲಿಲ್ಲ. ಆ ಕಾಲದಲ್ಲಿ ಮೋದಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದರು. ತುರ್ತುಪರಿಸ್ಥಿತಿಯ ನಂತರ ಘೋಷಣೆಯಾದ ಸಾರ್ವತ್ರಿಕ ಚುನಾವಣೆ ವೇಳೆ ಸೀಟು ಹಂಚಿಕೆ ವಿಚಾರ ಬಂದಾಗ ಚಿಮಣ್‌ಭಾಯಿ ಜತೆ ಮೋದಿ ತುಂಬಾ ದೃಢವಾಗಿ ವರ್ತಿಸಿದ್ದರು. ಒಂದು ವೇಳೆ ನಿಮಗೆ 14 ಕ್ಷೇತ್ರಗಳು ಬೇಕೆಂದಾದರೆ ಇಟ್ಟುಕೊಳ್ಳಿ. ಬಿಜೆಪಿಗೆ 12 ಸ್ಥಾನಗಳೇ ಸಾಕು ಎಂದಿದ್ದರು. ಮೋದಿಯವರಿಗೆ ಜನರ ನಾಡಿಮಿಡಿತ ಅರ್ಥವಾಗಿತ್ತು. 'ಚುನಾವಣೆಯ ನಂತರ ಬಿಜೆಪಿಗೆ ಮೊದಲ ಸ್ಥಾನ ಹಾಗೂ ಕಾಂಗ್ರೆಸ್‌ಗೆ ಎರಡನೇ ಸ್ಥಾನ ಲಭ್ಯವಾಗುತ್ತದೆ. ನೀವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ' ಎಂದು ಚಿಮಣ್‌ಭಾಯಿಗೆ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಫಲಿತಾಂಶ ಹೊರಬಿದ್ದಾಗ ಮೋದಿ ಹೇಳಿದ್ದ ಮಾತು ಸರಿಯಾಗಿತ್ತು. ಬಿಜೆಪಿ ತಾನು ಸ್ಪರ್ಧಿಸಿದ್ದ ಎಲ್ಲ 12 ಸ್ಥಾನಗಳಲ್ಲೂ ಜಯಗಳಿಸಿ ಮೊದಲ ಸ್ಥಾನ ಪಡೆದುಕೊಂಡಿತ್ತು.
ಕೇಶುಬಾಯಿ ಪಟೇಲ್ ಅವರ ವಿಷಯ ಬಂದಾಗ 'ಅವರೊಬ್ಬ ಅತ್ಯಂತ ಪ್ರಬುದ್ಧ ನಾಯಕ' ಎನ್ನುತ್ತಿದ್ದರು ಮೋದಿ. 'ಇಂದು ಗುಜರಾತ್ ಬಿಜೆಪಿ ಈ ಸ್ಥಾನಕ್ಕೆ ಏರಿದ್ದರೆ ಅದಕ್ಕೆ ಕೇಶುಭಾಯಿಯವರೇ ಕಾರಣ. ಅವರೊಬ್ಬ ಸಮಚಿತ್ತವುಳ್ಳ ವ್ಯಕ್ತಿ.
    ಅವರು ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ವ್ಯಕ್ತಿ. ಕೇಶುಭಾಯಿ ಅವರಲ್ಲಿರುವ ದೌರ್ಬಲ್ಯವೆಂದರೆ ಅವರ ಆರೋಗ್ಯ ಮತ್ತು ಶಿಕ್ಷಣ. ಆದರೆ ಐದನೇ ತರಗತಿಯವರೆಗೂ ಮಾತ್ರ ಓದಿದ್ದಾರೆಂಬ ಕಾರಣಕ್ಕೆ ಕೇಶುಭಾಯಿಯವರನ್ನು ನಾನು ಟೀಕಿಸಲಾರೆ. ಏಕೆಂದರೆ ಅವರು ದೂರದೃಷ್ಟಿ ಹೊಂದಿರುವ ವ್ಯಕ್ತಿ' ಎಂದು ಸಂದರ್ಶನವೊಂದರಲ್ಲಿ ಮೋದಿ ಹೇಳಿದ್ದರು. ಮೋದಿಯವರಿಗೆ ಕೇಶುಭಾಯಿಯವರೇ ಪ್ರೇರಣೆಯಾಗಿದ್ದರು. ಮಾರ್ಗದರ್ಶಕ ಕೂಡ ಅವರೇ. ಒಮ್ಮೆ ಮೋದಿ ಹಾಸಿಗೆ ಹಿಡಿದು ಆಸ್ಪತ್ರೆ ಸೇರಿದಾಗ 24 ಗಂಟೆಗಳೂ ಮೋದಿ ಜತೆಗಿದ್ದರು ಕೇಶುಭಾಯಿ. 'ಅವರು ಪಿತೃಸಮಾನ. ಅವರ ಬಗ್ಗೆ ನನ್ನಲ್ಲಿ ಅಗಾಧ ಗೌರವವಿದೆ. ಪಕ್ಷಕ್ಕಾಗಿ 50 ವರ್ಷಗಳ  ಕಾಲ ದುಡಿದ ವ್ಯಕ್ತಿ ಅವರು. ಅದು ಕಡಿಮೆ ಸಮಯವೇನಲ್ಲ!' ಎನ್ನುತ್ತಾರೆ ಮೋದಿ.
 ಒಬ್ಬ ಕಟ್ಟಾ ಹಾಗೂ ಶಿಸ್ತುಬದ್ಧ ಬಿಜೆಪಿ ಕಾರ್ಯಕರ್ತರಾದ ಮೋದಿ ತಾಳ್ಮೆಯ ಸಾಕಾರ ಮೂರ್ತಿ. ವಾಘೇಲಾ ಅವರ ವರ್ತನೆ ಬಗ್ಗೆ ಕೇಳಿದಾಗ 'ಪಕ್ಷದೊಳಗೆ ನಾವು ಯಾರನ್ನೂ ಅನುಮಾನಿಸುವುದಿಲ್ಲ. ಸಂಘಟನೆಯೊಳಗೆ ನಾವು ಕೆಲವು ತಪ್ಪುಗಳನ್ನು ಎಸಗಿರಬಹುದು. ಆದರೆ ನಾಳೆ ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ' ಎಂದು ಹೇಳಿದ್ದರು. ತಮ್ಮ ವಿಷಯದಲ್ಲಿ ಕಟುವಾಗಿ ನಡೆದುಕೊಳ್ಳುವ ಮಾಧ್ಯಮಗಳನ್ನೂ ಅವರು ಟೀಕಿಸುವುದಿಲ್ಲ. 'ನಾನು ಮುಸ್ಲಿಂ ವಿರೋಧಿ ಎಂಬ ಭಾವನೆಯಿದೆ. ಆದರೆ ನನಗೆ ಬೆದರಿಕೆ ಪತ್ರ ಬರೆದಿದ್ದ ಮುಸ್ಲಿಂ ಹುಡುಗನನ್ನು ನಾನು ಕ್ಷಮಿಸಿದ್ದೇನೆ. ಹಾಗಂತ ಒಂದು ಪ್ರಕರಣದಿಂದ ಒಬ್ಬ ವ್ಯಕ್ತಿಯನ್ನು ಅಳೆಯಲು ಸಾಧ್ಯವಿಲ್ಲ. ಹಲವು ದಿಕ್ಕು, ಮಜಲುಗಳಿಂದ ಒಬ್ಬ ವ್ಯಕ್ತಿಯನ್ನು ನೋಡಬೇಕಾಗುತ್ತದೆ. ಅವರ ನಡತೆಯನ್ನು ಗಮನಿಸಬೇಕಾಗುತ್ತದೆ. ಅನಂತರವಷ್ಟೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯ. ಪತ್ರಿಕೆಗಳ ನಿಲುವು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಇಂದು ಒಬ್ಬ ವ್ಯಕ್ತಿಯನ್ನು ಪತ್ರಿಕೆಗಳು ಹೀರೊ ಎಂಬಂತೆ ಪ್ರತಿಬಿಂಬಿಸಿದರೆ, ಮರುದಿನ ಆತನನ್ನೇ ಪಾತಾಳಕ್ಕೆ ತಳ್ಳಿಬಿಡುತ್ತವೆ. ಕೆಟ್ಟ ವ್ಯಕ್ತಿಯೆಂದು ತೀರ್ಪು ಕೊಟ್ಟುಬಿಡುತ್ತಾರೆ. ಆದರೆ ಅಂತಹ ವರದಿಗಳನ್ನು ನಾನು ಲೆಕ್ಕಕ್ಕೆ ತೆಗೆದುಕೊಳ್ಳಲಾಗದು.'
 ಮುಸ್ಲಿಮರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೀರಾ?
 ಈ ಪ್ರಶ್ನೆಗೆ ಮೋದಿ ಇನ್ನೂ ಸ್ಪಷ್ಟವಾಗಿ ಉತ್ತರಿಸಿದ್ರು. 'ಹೌದು, ಖಂಡಿತ ಹೌದು. ನಾನು ಮುಸ್ಲಿಮರೊಂದಿಗೆ ಮುಖಾಮುಖಿ ಸಂಪರ್ಕ ಹೊಂದಿದ್ದೇನೆ. ಇಸ್ಲಾಂನಲ್ಲಿನ ತತ್ವಗಳ ಬಗ್ಗೆ ಓದಿಕೊಂಡಿದ್ದೇನೆ. ನೀವು ನನ್ನನ್ನು ಉಲ್ಲೇಖಿಸಿ ಹೇಳಬಹುದು. ಅಮೇರಿಕ 500 ಅಲ್‌ಖೈದಾ ಭಯೋತ್ಪಾದಕರನ್ನು ಬಂಧಿಸಿದೆ. ಅವರಲ್ಲಿ ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳ ಮುಸ್ಲಿಮರಿದ್ದಾರೆ. ಆದರೆ ಒಬ್ಬನೇ ಒಬ್ಬ ಭಾರತೀಯ ಮುಸ್ಲಿಮನೂ ಇಲ್ಲ. ಹಿಂದೂ ಜೀವನ ಪದ್ಧತಿಯ ಪ್ರಭಾವ ಭಾರತೀಯ ಮುಸ್ಲಿಮರ ಮೇಲೂ ಆಗಿದೆ.

ಹಾಗಾಗಿ ಅಪ್ಪ-ಅಮ್ಮಂದಿರು ತಮ್ಮ ಮಕ್ಕಳ ಅಡ್ಡದಾರಿ ಹಿಡಿಯದಂತೆ ತಡೆಯುತ್ತಾರೆ' ಎಂದು ಹೇಳುತ್ತಾರೆ ಮೋದಿ. 'ಮುಸ್ಲಿಮರು ಈ ದೇಶದಲ್ಲಿ ಎರಡನೇ ಅತಿ ದೊಡ್ಡ ಸಮುದಾಯ. ಕೆಲವು ಕಡೆ ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಅನುಪಾತ 80:20. 60:40 ಅಥವಾ 50:50 ಇದ್ದರೂ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ' ಎನ್ನುವ ಅವರನ್ನು ಹೇಗೆ ತಾನೇ ಮುಸ್ಲಿಂ ವಿರೋಧಿ ಎಂದು ದೂರುತ್ತೀರಿ?
ನರೇಂದ್ರ ಮೋದಿ ಎಂದೂ ಮುಸ್ಲಿಂ ಭಯೋತ್ಪಾದಕರಿಗೆ ಹೆದರಿ ಬದುಕಿದವರಲ್ಲ. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಜಮ್ಮು- ಕಾಶ್ಮೀರದ ಛಾಟಿಸಿಂಗ್‌ಪುರದಲ್ಲಿ 36 ಸಿಖ್ಖರನ್ನು ಹತ್ಯೆಗೈಯಲಾಯಿತು. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಜಮ್ಮು- ಕಾಶ್ಮೀರದ ಜವಾಬ್ದಾರಿ ಹೊಂದಿದ್ದರು. ಹಾಗಾಗಿ ದುರ್ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಮೋದಿ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಂದಾದರು. ಅವರು ಛಾಟಿಸಿಂಗ್‌ಪುರಕ್ಕೆ ತೆರಳಿರುವುದು ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರಿಗೆ ತಿಳಿದು ಬಂದು ನನಗೆ ಕರೆ ಮಾಡಿ 'ನೀವು ಛಾಟಿಸಿಂಗ್‌ಪುರಕ್ಕೆ ಹೋಗಿದ್ದಾದರೂ ಹೇಗೆ?' ಎಂದು ಪ್ರಶ್ನಿಸಿದರು. ನಾನು ರಸ್ತೆ ಮೂಲಕ ಎಂದೆ. 'ಒಂದಲ್ಲಾ ಒಂದು ದಿನ ನೀವು ನನ್ನನ್ನು ಸಮಸ್ಯೆಗೀಡುಮಾಡುತ್ತೀರಿ. ಭಯೋತ್ಪಾದಕರು ನೆಲಬಾಂಬ್ ಇಟ್ಟಿರುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ' ಎಂದ ಫಾರೂಕ್ ಅಬ್ದುಲ್ಲಾ, ವಾಪಸ್ ಬರುವಾಗ ಹೆಲಿಕಾಪ್ಟರ್ ಮೂಲಕ ಬನ್ನಿ ಎಂದರು. ಅಷ್ಟೇ ಅಲ್ಲ, ಆಡ್ವಾಣಿಯವರಿಗೆ ಕರೆ ಮಾಡಿ, ನನ್ನ ವಿರುದ್ಧ ದೂರು ನೀಡಿದರು! ಮೋದಿ ಯಾವ ಸಮಯದಲ್ಲೂ ಎಲ್ಲಿಗೆ ಬೇಕಾದರೂ ಭದ್ರತೆಯ ಪರಿವೆಯೇ ಇಲ್ಲದೆ ಹೋಗುತ್ತಾರೆ ಎಂದು ದೂರಿದರು. ಕೂಡಲೇ ಮೋದಿಗೆ ಕರೆ ಮಾಡಿದ ಆಡ್ವಾಣಿಯವರು, ಎಲ್ಲಿದ್ದೀರಿ ಎಂದು ಪ್ರಶ್ನಿಸಿದರು. ಈಗಾಗಲೇ ಛಾಟಿಸಿಂಗ್‌ಪುರವನ್ನು ತಲುಪಿದ್ದೇವೆ. ಮೃತರ ಅಂತ್ಯಕ್ರಿಯೆಯ ನಂತರ ಹಿಂದಿರುಗುತ್ತೇನೆ ಎಂದು ಹೇಳಿದಾಗ, 'ಹೆಲಿಕಾಪ್ಟರ್ ಮೂಲಕ ಹಿಂದಿರುಗಿ ಬನ್ನಿ' ಎಂದು ಆಡ್ವಾಣಿಯವರು ಸಲಹೆ ನೀಡಿದರು.
ಕಾಶ್ಮೀರದ ಮುಸ್ಲಿಮರ ಮೇಲೆ ಒಳ್ಳೆಯ ಭಾವನೆಯಿದ್ದ ಕಾರಣ ಮೋದಿ ಹೀಗೆ ನಡೆದುಕೊಳ್ಳುತ್ತಿದ್ದರೋ ಅಥವಾ ಕರ್ತವ್ಯ ಪಾಲನೆಯ ವಿಷಯ ಬಂದಾಗ ತಮ್ಮ ಜೀವನದ ಬಗ್ಗೆಯೇ ಅಸಡ್ಡೆ ತೋರುತ್ತಿದ್ದರೋ ಎಂಬ ಅನುಮಾನಗಳುಂಟಾಗುತ್ತವೆ. ನರೇಂದ್ರ ಮೋದಿಯವರೇ ಹೇಳುವಂತೆ ಅವರು ಜಮ್ಮು- ಕಾಶ್ಮೀರದಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದರು. ಎಚ್ಚರದಿಂದಿರಿ, ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಜನ ಹೇಳುತ್ತಿದ್ದರು. ಆದರೆ ನನ್ನ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆ. ಜೀವ ಉಳಿಯುತ್ತೋ, ಹೋಗುತ್ತೋ ನನಗೆ ಯಾವ ಬೇಸರವೂ ಇಲ್ಲ ಎನ್ನುತ್ತಿದ್ದರು ಮೋದಿ. ಕರ್ತವ್ಯ ಪಾಲನೆಯ ವಿಷಯ ಬಂದಾಗ ಅವರು ಯಾರಿಗೂ ಬೆರಳು ತೋರಲು ಅವಕಾಶ ನೀಡುತ್ತಿರಲಿಲ್ಲ. ಹರಿಯಾಣ, ಹಿಮಾಚಲ ಪ್ರದೇಶದ ಉಸ್ತುವಾರಿ ವಹಿಸಿದ್ದಾಗ ಪಂಜಾಬ್ ಮೇಲೆಯೂ ನಿಗಾ ಇಟ್ಟಿದ್ದರು. ಚಂಡೀಗಢದ ನಗರಸಭೆ ಚುನಾವಣೆ ಘೋಷಣೆಯಾಗಿತ್ತು. ಅದರಲ್ಲಿ 20 ಸ್ಥಾನಗಳಿದ್ದವು. ಮೋದಿಯವರ ಪೂರ್ವ ತಯಾರಿ ಹಾಗೂ ಜಾಣ್ಮೆಯ ಫಲವಾಗಿ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತು. ಮೋದಿಯವರನ್ನು ಭೇಟಿಯಾದ ಚಂಡೀಗಢದ ಸಂಸದ ಪವನ್‌ಕುಮಾರ್, 'ನೀವು ಪವಾಡವನ್ನೇ ಮಾಡಿದ್ದೀರಿ' ಎಂದು ಹೇಳಿದ್ದರು. ಈ ಘಟನೆಗೂ ಮೊದಲು ಚಂಡೀಘಡದಲ್ಲಿ ಬಿಜೆಪಿ ಸಣ್ಣ ನೆಲೆಯನ್ನೂ ಹೊಂದಿರಲಿಲ್ಲ.
ಕರ್ತವ್ಯ ಪಾಲನೆಯ ವ್ಯಸನ ಮೋದಿಯವರನ್ನು ಎಷ್ಟರಮಟ್ಟಿಗೆ ಕಾಡುತ್ತಿತ್ತೆಂದರೆ ಅಸಹಜವಾದ ಕೆಲಸಗಳಿಗೆ ಮುಂದಾಗುತ್ತಿದ್ದರು. ಯುದ್ಧ ಪ್ರಾರಂಭವಾದಾಗ ಕಾರ್ಗಿಲ್‌ಗೆ ತೆರಳಿದ್ದರು. ಅಷ್ಟಕ್ಕೂ ಜಮ್ಮು- ಕಾಶ್ಮೀರದ ಉಸ್ತುವಾರಿಯಲ್ಲಿದ್ದ ಮೋದಿಯವರ ವ್ಯಾಪ್ತಿಯಲ್ಲೇ ಕಾರ್ಗಿಲ್ ಬರುತ್ತಿತ್ತು. ಅದು ಮೋದಿಯವರ ಬದ್ಧತೆ ಮತ್ತು ಸಮಗ್ರತೆಯನ್ನು ತೋರಿಸುತ್ತದೆ. ಆದರೆ ಅವರೆಂದೂ ಸ್ವಾರ್ಥಿಯಾಗಿರಲಿಲ್ಲ. ಹಿಮಾಚಲ ಪ್ರದೇಶದ ಆಗಿನ ಮುಖ್ಯಮಂತ್ರಿಯಾಗಿದ್ದ ಪ್ರೇಮ್‌ಕುಮಾರ್ ಧುಮಲ್ ಅವರನ್ನು ಸೈನಿಕರಿಗೆ ಉಡುಗೊರೆಗಳನ್ನು ವಿತರಿಸುವ ಸಲುವಾಗಿ ಕಾರ್ಗಿಲ್‌ಗೆ ಆಹ್ವಾನಿಸಿದ್ದರು. ಧುಮಲ್ ಜತೆಯಲ್ಲಿ ಹಿಮಾಚಲ ಪ್ರದೇಶ ವಿಧಾನ ಸಭೆಯ ಸ್ಪೀಕರ್ ಕೂಡ ಆಗಮಿಸಿದ್ದರು. ಆಶ್ಚರ್ಯವೆಂದರೆ ಕಾರ್ಗಿಲ್‌ನಲ್ಲಿದ್ದ ಪ್ರತಿ ಮೂವರು ಸೈನಿಕರಲ್ಲಿ ಒಬ್ಬ ಹಿಮಾಚಲದವನಾಗಿದ್ದ. ಒಂದೇ ಕುಟುಂಬದ ಇಬ್ಬರು, ಮೂವರು ಸೇನೆಯಲ್ಲಿದ್ದ ಉದಾಹರಣೆಗಳಿದ್ದವು. ತಮ್ಮ ರಾಜ್ಯದ ಮುಖ್ಯಮಂತ್ರಿಯನ್ನು ಕಂಡು ಅವರ ಉಲ್ಲಾಸಕ್ಕೆ ಪಾರವೇ ಇರಲಿಲ್ಲ. ಇತ್ತ ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗಲೇ ಮೋದಿ ವಿಶ್ವದ ಅತ್ಯಂತ ಎತ್ತರದ ಸ್ಥಳಗಳಲ್ಲಿ ಒಂದಾದ ಲೇಹ್ ಹಾಗೂ 14 ಸಾವಿರ ಅಡಿ ಎತ್ತರದಲ್ಲಿರುವ ಮಾನಸ ಸರೋವರಕ್ಕೂ ಭೇಟಿ ನೀಡಿದ್ದರು. ಅಷ್ಟೇ ಅಲ್ಲ, 24 ಸಾವಿರ ಅಡಿ ಎತ್ತರ ಹೊಂದಿರುವ ಶಿವಲಿಂಗ ಆಕಾರದ ಕೈಲಾಸ ಪರ್ವತಕ್ಕೆ ಪ್ರದಕ್ಷಿಣೆ ಹಾಕಿ ಬಂದಿದ್ದರು.
ಅವರ ಜೀವನತತ್ವ ಬಹಳ ಸರಳವಾದುದು.
ಒಬ್ಬ ನಾಯಕ ಪ್ರೇರಣೆ ನೀಡಬಹುದು, ಹುರಿದುಂಬಿಸಬಹುದು, ಪ್ರಭಾವ ಬೀರಬಹುದು. ಆದರೆ ತಳಮಟ್ಟದಲ್ಲಿ ಇರುವ ಸಂಘಟನಾತ್ಮಕ ಕಾರ್ಯದಿಂದ ಮಾತ್ರ ಜಯ ಪ್ರಾಪ್ತಿಯಾಗಲು ಸಾಧ್ಯ ಎನ್ನುತ್ತಿದ್ದರು ಮೋದಿ. ದಿಲ್ಲಿಗೆ ವಾಪಸ್ ಆದ ನರೇಂದ್ರ ಮೋದಿಯವರಿಗೆ ಎನ್‌ಡಿಎ ಸರಕಾರ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಎಲ್ಲ ಬಿಜೆಪಿ ರಾಜ್ಯ ಸರಕಾರಗಳ ಮುಖ್ಯಮಂತ್ರಿಗಳನ್ನು  ಆಹ್ವಾನಿಸುವ ಹಾಗೂ ಯೋಗಕ್ಷೇವು ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ರಾಜಕೀಯ ವಲಯದಲ್ಲಿ ಮೋದಿಯವರ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗತೊಡಗಿತು. ವಿದೇಶಿ ಅಧಿಕಾರಿಗಳು, ರಾಜತಾಂತ್ರಿಕರು ಮೋದಿಯವರನ್ನು ಭೇಟಿಯಾಗಲು ಉತ್ಸಾಹ ತೋರುತ್ತಿದ್ದರು. ಏಕೆ ಗೊತ್ತೇ? ಬಿಜೆಪಿ ಮತ್ತು ಆರೆಸ್ಸೆಸ್ ನಡುವಿನ ಸಂಬಂಧ ಹೇಗಿದೆ? ಹೇಗೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ?  ಯಾವ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ? ಎಂಬುದನ್ನು ತಿಳಿದುಕೊಳ್ಳುವ ಉದ್ದೇಶ ಅವರದಾಗಿತ್ತು. ಕಾಂಗ್ರೆಸ್ಸಿಗಾದರೆ ಈ ವಿಚಾರಗಳು ತಿಳಿದಿದ್ದವು. ಅಧಿಕಾರ ನಡೆಸಿದ ಅನುಭವ ಅದಕ್ಕಿತ್ತು. ಆದರೆ ಬಿಜೆಪಿಗೆ ಅದು ಹೊಸ ವಿಚಾರ.
'ಒಮ್ಮೆ ಎಲ್ಲ ಮುಸ್ಲಿಂ ಹಾಗೂ ಅರಬ್ ರಾಷ್ಟ್ರಗಳ ಪ್ರತಿನಿಧಿಗಳನ್ನು ಪಕ್ಷದ ಕಚೇರಿಗೆ ಆಹ್ವಾನಿಸಿದ್ದೆವು. ಅವರಲ್ಲಿ ಸುಮಾರು 25ರಿಂದ 30 ಜನ ಆಗಮಿಸಿದ್ದರು. ಅದೊಂದು ಒಳ್ಳೆಯ ಸಂದರ್ಭ. ಒಟ್ಟಿಗೆ ಭೋಜನವನ್ನೂ ಮಾಡಿದರು. ಇಂಗ್ಲಿಷ್‌ನಲ್ಲಿ ಮಾತನಾಡಿದರು. ಇರಾಕಿ ಪ್ರತಿನಿಧಿಗಳಂತೂ ನನ್ನನ್ನು ಇರಾಕ್‌ಗೆ ಆಹ್ವಾನಿಸಲು ಉತ್ಸುಕರಾಗಿದ್ದರು' ಎಂದು ನೆನಪು ಮಾಡಿಕೊಳ್ಳುತ್ತಾರೆ ಮೋದಿ.


- ಪ್ರತಾಪ್‌ಸಿಂಹ
ನೂತನ ಸಂಸದ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com