ಇಜ್ಜಿಲು ಬೊಂಬೆ

ತಣ್ಣೀರಿನ ಹನಿ ಬಿದ್ದು ಮುತ್ತು ಪೋಣಿಸಿದಂತೆ ಒಂದಕ್ಕೊಂದು ಅಂಟಿದ ಮರಳಗುಡ್ಡೆಯ ಮೇಲೆ ಮಬ್ಬಾದ...
ಇಜ್ಜಿಲು ಬೊಂಬೆ
Updated on: 

ತಣ್ಣೀರಿನ ಹನಿ ಬಿದ್ದು ಮುತ್ತು ಪೋಣಿಸಿದಂತೆ ಒಂದಕ್ಕೊಂದು ಅಂಟಿದ ಮರಳಗುಡ್ಡೆಯ ಮೇಲೆ ಮಬ್ಬಾದ,
ಕೊಳೆಯಿಂದ ಮೈದಳೆದ ಗಣಪನ ಚಿತ್ತಾರದಂತೆ ಸೆಳೆಯುತ್ತಿರುವ ಮಬ್ಬು ರೇಶಿಮೆಲಂಗ ತೊಟ್ಟ ಪುಟ್ಟಪೋರಿ. ಮೂರು ವರ್ಷವಿರಬಹುದಾ ಅವಳಿಗೆ! ಯಾರ ಅಮ್ಮ ಅಪ್ಪನ ಆಸೆಯ ಕಂಗಳು ಆಯ್ದ ರೇಶಿಮೆಲಂಗ ಹರಿಯಿತು ಎಂತಲೋ, ಹಳತು ಎನ್ನುವ ಹಣೆಪಟ್ಟಿಯ ಶಾಪಕ್ಕೆ ಈ ಪೋರಿಗೆ ವರವಾಗಿ ದಕ್ಕಿತ್ತು.
ಆ ಮರಳ ಗುಡ್ಡೆಯ ಈಚೆಬದಿಯಲ್ಲಿ ಹನ್ನೊಂದು ತಿಂಗಳ ಕಂದ ಆಕಾಶ ದಿಟ್ಟಿಸುತ್ತಿತ್ತು. ಮೋಡದ ಮರೆಯಿಂದಸೂರ್ಯ ಗಿರಗಿಟ್ಲೆಯಂತೆ ಕಂಡಿರಬೇಕು. ತುಟಿಯ ತುಂಬ ನಗುವಿನ ಬೆಳಕು.
ಆಚೆಬದಿಯಲ್ಲಿ ಪೋರಿಗಿಂತ ಒಂದು ವಸಂತ ಹೆಚ್ಚು ನೋಡಿದ ಪುಟ್ಟ ಪೋರ. ಅಣ್ಣನಿರಬೇಕು, ಗುಪ್ಪೆಮರಳು ಗುಡ್ಡೆ ಮೇಲಿಂದ ಉರುಳಿ ಬಿದ್ದು ಮೈಗಂಟಿದ ಮರಳಿನ ಮಜಾ ಅನುಭವಿಸುತ್ತಾ, ಯಾವ ಕವಿಯ ಕಣ್ಣಲ್ಲಿ ಕಥೆಯಾಗುತ್ತಿದ್ದನು! ಇದ್ಯಾವುದರ ಪರಿವೆಯೂ ಇಲ್ಲದ ಪೋರಿ ಒಮ್ಮೆ ದೊಪ್ಪೆಂದು ಮರಳ ಮೇಲೆ ಕೂರುವುದು, ಸುತ್ತಮುತ್ತ ತಿರುಗಿ, 'ಹ್ಹ ಹ್ಹ ಹ್ಹ...' ನಗೆಗಡಲಲ್ಲಿ ತೇಲುವುದು. ಮತ್ತೆ ದಿಢೀರ್ ಎಂದು ಮೇಲೆದ್ದು ಅತ್ತಿತ್ತ ತಿರುಗಿ ಮತ್ತದೇ ನಗುವಿನ ಜೆರಾಕ್ಸ್!
ಆ ಮರಳು ಬಿದ್ದ ರಸ್ತೆಯಲ್ಲಿ ರಾತ್ರಿಯ ಮಳೆಯ ರುದ್ರನರ್ತನಕ್ಕೆ ಸಾಕ್ಷಿಯಾಗಿದ್ದ ಮುರಿದ ರೆಂಬೆಕೊಂಬೆಗಳು. ಯಾರದೋ ಮನೆಯ ಕಾಫಿ ಋಣ ತೀರಿಸಿ ಅನಾಥವಾಗಿ ಬಿದ್ದಿದ್ದ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಬ್ರ್ಯಾಂಡೆಡ್ ಹೀಲ್ ತೊಟ್ಟು ಗಡಿಯಾರವನ್ನು ದಿಟ್ಟಿಸುತ್ತಾ ಓಡುತ್ತಿದ್ದ ವ್ಯಾನಿಟಿಬ್ಯಾಗ್ ಬೆಡಗಿ. ಇಡೀ ಬದುಕನ್ನು ಸೈಕಲ್ ಮೇಲೆ ಕಳೆದು 'ದುಸ್ಸು ದುಸ್ಸು...' ಎಂದು ಏದುಸಿರುಬಿಡುತ್ತಾ ಬಂದು, ಕೊತ್ತಂಬರಿ ಮೂಟೆಯನ್ನು ನೆಲಕ್ಕಿರಿಸಿದ. ಆ ಸೊಪ್ಪು ಮಾರುವವನ ಸಾರ್ಥಕತೆ ಗುಂಯ್‌ಗುಡುತ್ತಿತ್ತು, ಅವನ ಸೈಕಲ್ ಸ್ಟ್ಯಾಂಡ್ ಶಬ್ದದಲ್ಲಿ.
'ರೊಂಯ್...' ಎಂದು ಘೀಳಿಡುತ್ತಾ ಬಂದಿತು ಅಪಾಚಿ ಬೈಕು. 'ಮಚ್ಚಾ, ಎಂಸಿ ಮೇಷ್ಟ್ರು ಬಂದಿ...' ಅಂತರ್ಗತವಾಗಿದ್ದ
ಅಪೂರ್ಣ ಪದ ಆದರೆ, ಭಾವಸಂಪೂರ್ಣ. ಸುತ್ತಲಾ ಯಾರಿಗೂ ಪೋರಪೋರಿಯ ಸಂತಸ ಕಾಣುವ ಕಂಗಳಿಲ್ಲ, ಇಂಪಿಗೆ ಧ್ವನಿಯಾಗೋ ಧಾವಂತವಿಲ್ಲ. ಅವರೆಲ್ಲ ಶಿಲೆಯಾದವರು, ಸಮಯದ ವರದಿಂದ ಶಾಪ ಮುಕ್ತರಾದವರು. ಭಾವನೆಗಳಿಗೆ ಎಳ್ಳುನೀರು ಬಿಟ್ಟವರು.
ಕುತ್ತಿಗೆಯಿಂದ ಇಳಿಯುತ್ತಿರುವ ಹನಿನೀರು, ತೋಳುಗಳಲ್ಲಿ ರವಿಕೆಯನ್ನು ಆತುಕೊಂಡಿರೋ ಶ್ರಮದ ಬೆವರು. ಸಿಮೆಂಟಿನ ಬಾಣಲೆಯನ್ನು ತಲೆ ಮೇಲೆ ಹೊತ್ತಿದ್ದ ಎರಡು ಕೈಗಳು ಕಾಯಕವೇ ಕೈಲಾಸವೆನ್ನುವ ಸುಪ್ರಭಾತ ಹಾಡುತ್ತಿತ್ತು. 'ಅವ್ವ, ಅವ್ವೋ... ಇಲ್ಲಿ, ಇಲ್ಲಿ...' ಎನ್ನುತ್ತಾ ಪುಟ್ಟ ಪೋರಿ ದೊಪ್ಪನೆ ಮರಳ ಗುಡ್ಡೆ ಮೇಲೆ ಬಿದ್ದು ಮುಖವನ್ನು ಮೇಲೆತ್ತಿ, 'ಹ್ಹಿ...ಹ್ಹಿ...ಹ್ಹಿ...' ಎಂದು ನಗುತ್ತಿರೇ ಅಮ್ಮನ ಶ್ರಮ ಅವಳ ನಗುವಿನಲ್ಲಿ ಕರಗುತ್ತಿತ್ತು. ಬೆಳಗಿನ ಧ್ಯಾನದ ಸಂಪೂರ್ಣಭಾವ ಆ ತಾಯಿಗೆ ದಕ್ಕಿತ್ತು.
ಮೋಟುಬೀಡಿಗೆ ಕಡ್ಡಿ ತಾಗಿಸಿ ಬೆಚ್ಚನೆಯ ಮೋಡಕ್ಕೆ ಸೆಡ್ಡು ಹೊಡೆದಿದ್ದ ಅಪ್ಪನ ಬೀಡಿ ಹೊಗೆಯಲ್ಲಿ ಪೋರಿಯ ನಗುವು ಬೆರೆತು ಅಪ್ಪನಿಗೆ ದಿನಪೂರ್ತಿ ಮುಗಿಯದ ಹೊಸ 'ಧಂ' ಬಂದಿತ್ತು. ಬೆಳಗಾಗೆದ್ದು 'ಯಾರ್ಯಾರ ನೆನೆಯಲಿ' ಎಂದು ಪಕ್ಕದ ಮನೆಯ ವಸುಧಮ್ಮನ ಕಾಫಿ ಡಿಕಾಕ್ಷನ್ ರಾಯರ ಎಚ್ಚರಗೊಳಿಸುತ್ತಿತ್ತು. 'ಅಲ್ಲಲೇ ವಸುಧಾ, ಇವರು ಮನೆ ಕಟ್ಟಿ ಮುಗಿಸೋಕೆ ಇನ್ನೊಂದು ವಾರವಂತೆ. ನಂತರ ಗೃಹಪ್ರವೇಶವಂತೆ. ಮಾರಾಯ ಲೋನ್ ಎಷ್ಟು ಎತ್ತಿದಾನೋ? ನಾಲ್ಕು ಫ್ಲೋರ್‌ಗೂ ಹದಿನೈದು ಸಾವ್ರ ಬಿಗಿದ ಅಂದ್ರೆ, ಹತ್ತು ವರ್ಷದಲ್ಲಿ ಕೋಟ್ಯಂತರ ರುಪಾಯಿ ಲಾಭ ಹೊಡೆದ್ನಲ್ಲೇ ಮತ್ತೆ' ಎನ್ನುತ್ತಾ ಬಚ್ಚಲಿಗೆ ಬಂದವರು ಹಂಡೆಯಿಂದ ತೋಡಿ, ತಣ್ಣೀರಲ್ಲಿ ರಾಜಿ ಮಾಡಿಕೊಂಡಿದ್ದ ಸುಡು ಸುಡು ಎರಡು ಚೆಂಬು ನೀರಲ್ಲಿ ಬದುಕಿನ ಆಯಾಸ ಕಳೆದುಕೊಳ್ಳುತ್ತಿದ್ದ ರಾಯರು ವಸುಧಮ್ಮನಿಗೆ ಬೆಳಗೆದ್ದು ಯಾರ್ಯಾರ ನೆನೆಯಬೇಕೆಂದು ತಿಳಿಸಿದ್ರು.
ಮೋಟುಬೀಡಿಗೆ ಮುಕ್ತಿ ನೀಡಿದ್ದ ಅಪ್ಪ ಪೋರಿಯ ಏಳು ಬೀಳಿನ ಆಟಕ್ಕೆ ಆಯಾಸದ ಲೇಪ ಹಚ್ಚಿ, ತನ್ನ ಸ್ವತ್ತು ಇವ
ಎನ್ನುವ ಗರ್ವದಲ್ಲೇ ಮಗನನ್ನು ಆ ಪೋರಿಯನ್ನು ಕ್ಯಾಂಟೀನ್‌ಗೆ ಎಳೆದೊಯ್ಯುತ್ತಿದ್ದಾನೆ.
'ಅಪ್ಪ, ನಿನ್ನೆ ಆವಯ್ಯಾ ಅದೇ ಕೈನಾಗೆ ಬುಕ್ಸ್, ಬಿಳಿಕೂದಲು, ಈ ಕೈಗೆ ಅನ್ನುತ್ತಾ ಬಲಗೈ ತೋರಿಸುತ್ತಾ ಅದಕ್ಕೆ ಅದೇನು ಕಟ್ಕೊಂಡು ಪದೇಪದೆ ಅದನ್ನ ನೋಡುತ್ತಾ ಕಣ್ಣಿಗೆ ಗಾಜು ಹಾಕ್ಕೊಂಡಿದ್ನಲ್ಲಾ ಆವಯ್ಯಾ, ದ್ವಾಸೆ ತಿಂತಿದ್ನಲ್ಲಾ, ಆಲೂಗಡ್ಡೆ ಮತ್ತೆ ಚಟ್ನಿ ಆವಯ್ಯನ ಬಾಯಿಗೆ ಎಣ್ಣೆ ಮೆತ್ಕಂಡಿತ್ತಲ್ಲ ಅಂಥದ್ದನ್ನೇ ನಂಗೂ ಕೊಡ್ಸು' ತೊದಲುತ್ತಾ ಮಬ್ಬುಗಟ್ಟಿದ್ದ ಹಳದಿ ರೇಷ್ಮೆ ಲಂಗ ಮೇಲೆಳೆದುಕೊಂಡು ಪುಟ್ಟಪುಟ್ಟ ಹೆಜ್ಜೆ ಇಡುತ್ತಾ, ಪೋರಿ ಅಪ್ಪನ ಉತ್ತರಕ್ಕಾಗಿ ಬೇಡಿಕೆಯ ನಗುವಿನಲ್ಲಿ ಇಣುಕುತ್ತಿದ್ದಳು.
'ಹ್ಞೂಂ, ನಂಗೂ ಅದೇಯಾ ಬೇಕು ಕೊಡ್ಸೂ' ಅಂತ ಮಗನು ಕೇಳುತ್ತಿದ್ದ. 'ಆತುಆತು ಕೊಡ್ಸೋಣ' ಅಂತೇಳಿ ಮೋಟುಬೀಡಿಯಲ್ಲಿ ಬದುಕಿನ ಅಷ್ಟು ಸುಖವ ತನ್ನದಾಗಿಸಿಕೊಂಡಿದ್ದ ಅಪ್ಪ. ಇಬ್ಬರಿಗೂ ಮಸಾಲೆದೋಸೆ ಮುಂದಿರಿಸಿದ.
ಪೋರ ಪೋರಿ ಎಲ್ಲರನ್ನೂ ದಿಟ್ಟಿಸುತ್ತಾ ಮಸಾಲೆದೋಸೆಯನ್ನು ಬಾಯಿಗಿಡುತ್ತಿದ್ದರು. ಪೋರಿಯ ಮೂತಿಯಂತೂ ಎಣ್ಣೆಮಯ. ಅಪ್ಪ ಕುಡಿಯುತ್ತಿದ್ದ ಕಾಫಿಯನ್ನು ಬೈಟು ಮಾಡಿ ಪೋರಪೋರಿಗೆ ಕೊಟ್ಟಿದ್ದ. 'ಸೊರಕ್ ಸೊರಕ್‌' ಎಂದು ಹೀರುತ್ತಿದ್ದ ಪೋರ ಪೋರಿ ಲೋಟದೊಳಗೆ ಬಾಯಿಟ್ಟು ಒಬ್ಬರ ಮೋರೆ ಒಬ್ಬರು ನೋಡಿ ನಗುವಿಗೆ ಜೊತೆಯಾಗುತ್ತಿದ್ದರು.
ದೋಸೆ ತಿಂದ ಮೇಲೆ ಅಪ್ಪ ಪೋರಿ ಪೋರನ ಕೈ ಹಿಡಿದು ದರದರನೆ ನಡೆದುಬರುವಾಗ ಪೋರಿಯ ಕಾಲ್ಗಳು ಫಕ್ಕನೆ ನಿಧಾನವಾದವು. ಪೋರನ ಕಾಲ್ಗಳು ಸೋಮಾರಿತನ ತೋರಿದವು. ಯಾವುದೋ ಅಗೋಚರ ಸಂತಸವ ಕಂಡಂತೆ ಪೋರಪೋರಿ ಮುಖ ಮುಖ ನೋಡಿ ನಗುತ್ತಿದ್ದರು.
ಅಪ್ಪ 'ಬರ್ರನೆ ಬರ್ರಲೇ' ಎಂದೆಳೆಯುತ್ತಿದ್ದ. ಇದ್ಯಾವುದರ ಅರಿವೆ ಇರದ ಪೋರಪೋರಿ ಅದೆಂಥದೋ ಅದ್ಭುತವ ಕಂಡಂತೆ! ವಿಶ್ವದ ಸಂತೋಷವೆಲ್ಲ ಮೈಕೊಡವಿ ಬಿದ್ದಂತೆ! ತಮ್ಮ ಬದುಕಲ್ಲೇ ಕಂಡಿರದಂತೆ ಹಿಂದಿರುಗಿ ನೋಡುತ್ತಲೇ ಒಬ್ಬರೊಬ್ಬರು ಮುಖ ಮುಖ ನೋಡುತ್ತ, ನಗುತ್ತಾ ನಡೆದಿದ್ದರು.
ಇದ್ಯಾವುದರ ಪರಿವೆ ಇರದ ಅಪ್ಪ ದರದರ ಮಕ್ಕಳ ಎಳೆದು ತಂದು ಮರಳಗುಡ್ಡೆ ಮೇಲೆ ಕೂರಿಸಿದ. ಮತ್ತದೇ ನಗು, ಹಿಂದೆ ತಿರುಗಿ ಪೋರಪೋರಿ ಕಿಸಕಿಸ ನಗು.
ಹೊತ್ತು ನೆತ್ತಿಗೇರಿತ್ತು. ಭಾನು ಮೈನೆರೆದು ನವ ತಾರುಣ್ಯ ಪಡೆದಿತ್ತು. ಬೆಳದಿಂಗಳು ರಾತ್ರಿಗೆ ಸೆರಗಾಗಿತ್ತು. ಪೋರಿಯ ಅವ್ವ ರಾಗಿಮುದ್ದೆ ಬಡಿಸಿ ಗೊಣಗಾಡುತ್ತಿದ್ದಳು. 'ನಾಳೆಯಿಂದ ಕೂಲಿಗೆ ಬ್ಯಾರೆಕಡೆ ಹೋಗ್ಬೇಕಾ? ಮೇಸ್ತ್ರಿ ಹೇಳಕ ಬಂದಿದ್ನಲ್ಲ ಏನಾತು? ಅಲ್ಲಿ ಐವತ್ತು ರುಪಾಯಿ ಜಾಸ್ತಿ ಕೊಡ್ತಾರಂತ. ಹೆಂಗೂ ಇಲ್ಲಿ ಮುಗೀತದ, ನಾಳೆ ಹೊಂಡ್ರೀ ಮತ್ತೆ' ಈ ಮಾತುಗಳ ನಡುವೆ ಪೋರಪೋರಿ ನಿದ್ದೆಗೆ ಜಾರಿದ್ದರು.
ನನನ
ಬೆಳಗ್ಗೆದ್ದಾಗ ಯಾವುದೋ ಗುದ್ದಲಿ ಪೂಜೆಯ ಅಂಗಳದಲ್ಲಿ ಬಾಳೆಹಣ್ಣು ತಿನ್ನುತ್ತಿದ್ದರು ಪೋರಪೋರಿ. ಏಳುದಿನಗಳಲ್ಲಿ ಹೊಸಮನೆಗೆ ಇಟ್ಟಿಗೆ, ಸಿಮೆಂಟು ಹಚ್ಚುವ ಕಾರ್ಯ ಸರಿದಿದ್ದೇ ತಿಳೀಲಿಲ್ಲ. 'ನಾಳೆ ಸಿಹಊಿಟ, ಹಳೇಮನೆ ತಾವ ಹೋಗೋಣ ಅಂತಿದ್ಳು ಅವ್ವ'.
ಪೋರಪೋರಿ ಇಬ್ಬರಿಗೂ ಲಾಡು, ಪುಳಿಯೊಗರೆ ರುಚಿಯ ನೆನಪು ಬಡಿದು ನಿದ್ದೆ ಹತ್ತಲೇ ಇಲ್ಲ. ತಾವು ಆಳಾಗಿ ದುಡಿದ ಮನೆ ಬೆಳಗಲಿ ಎಂದರಸಿ ಹೊಟ್ಟೆ ತುಂಬಾ ಉಂಡು ಅವ್ವ, ಅಪ್ಪ ಹೊರಡಲನುವಾದರು. ಪೋರಪೋರಿ, 'ಅವ್ವ ನಾವೆಲ್ಲರೂ ಇಲ್ಲಿಂದ ಹೋಗ್ಬೇಕಾ? ಈ ಮನೆ ಕಟ್ಟಿದ್ದು ನೀನು ಮತ್ತು ಅಪ್ಪ ಅಲ್ಲವಾ? ನಾವಿಲ್ಲೇ ಇರುವ' ಎಂದೇಳಿ ಮುಗ್ಧವಾಗಿ ಅಳತೊಡಗಿದರು. ವಾಸ್ತವದ ಅರಿವಿರದ ಮಕ್ಕಳ ಮಾತಿಗೆ ಅಪ್ಪಅವ್ವ ವೀಳ್ಯದೆಲೆ, ಸೀರೆಕುಂಕುಮವನ್ನು ಜೋಡಿಸಿಕೊಂಡು ಗೇಟಿಂದ ಆಚೆ ಬಂದಿದ್ದರು. ಟೆರೇಸಿನ ಮೇಲೆ ಆಡುತ್ತಿದ್ದ ಗೃಹಪ್ರವೇಶದ ಮಕ್ಕಳ, "come on catch, hey you go that side.. ಹ್ಹ ಹ್ಹ ಹ್ಹ!' ನಗುವಿನಲ್ಲಿ ಪೋರಪೋರಿ ಅಳು ಬಹುದೂರ ಸಾಗಿತ್ತು.
ಅಳುವಿನ ಮಡಿಲು ಸೇರಿದ್ದ ಪೋರಪೋರಿಗೆ ಅದ್ಯಾವ ನಗೆದೇವತೆ ಪ್ರತ್ಯಕ್ಷವಾದಳೋ? ಸಿಂಡ್ರೆಲಾಗೆ ಪ್ರತ್ಯಕ್ಷವಾದ ದೇವತೆ ಇವರಿಗೂ ಪ್ರತ್ಯಕ್ಷವಾದಳೇನೋ? ಪೋರಪೋರಿ ಕಾಲುಗಳು ಮತ್ತೆ ನಿಧಾನವಾದವು. ಕಂಬನಿ ಸುರಿದು ಕೆಳಗೆ ಜಾರಿದ್ದ ತುಟಿಗಳು ಮತ್ತೆ ಬಿರಿದುಕೊಂಡಿದ್ದವು. ಬಾಯಿ ತುಂಬಾ ನಗೆಯ ಬೆಳದಿಂಗಳು, ಕಂಗಳ ತುಂಬಾ ಬತ್ತದ ಸೂರ್ಯನ ಪ್ರತಿಫಲನಗಳು.
ಪೋರಪೋರಿ ಮತ್ತೆ ಮುಖಮುಖ ನೋಡಿ ನಗುತ್ತಿದ್ದರು. ಅಪ್ಪ ಅವ್ವ ಬಂಧುಗಳು ಎಲೆಅಡಕೆ ಜಗಿಯುತ್ತ ಕೂಲಿ ವಿಷಯದಲ್ಲಿ ಮಗ್ನರಾಗಿದ್ದರು. ಅಂದು ಕಂಡ ಆ ಅಗೋಚರ ಸಂತಸವನ್ನು ಪೋರ ಪೋರಿ ಇಂದೂ ಹಿಂದಿರುಗಿ ನೋಡಿ ಮುಸಿಮುಸಿ ನಗುತ್ತಿದ್ದರು.
ಅದು ಕರಗದ ಬೆಳದಿಂಗಳು, ಸಾವೇ ಕಾಣದ ಶಾಶ್ವತ ಸೂರ್ಯನ ಬೆಳಕು! ನಿತ್ಯ ಜೀವಂತದ ಚಿಗುರು. ಸದಾ ಉಸಿರಿನ ಚಿರಸ್ಥಾಯಿ ಮಳೆಹನಿಗಳು. ಅದು ಪ್ರಕೃತಿಯೇ ಮೈದಳೆದ, ಬದುಕು ಹೆಣೆದಿದ್ದ ಸುಂದರವಾದ ಸಂತಸದ ನಗೆ ತೊಟ್ಟಿಲು. ಅದರೊಳಗೆ ಸುಖದ ನಿದ್ದೆಯ ಅನುಭವಿಸುತ್ತಿದ್ದವರು ಪೋರಪೋರಿ! ಆ ಅಗೋಚರ ಬದುಕಿನ ಸಂತಸವನ್ನು ಮನದುಂಬಿಕೊಳ್ಳುತ್ತ ರಸ್ತೆ ತಿರುವಿನಲ್ಲಿ ಕಡೆಗೊಮ್ಮೆ ಪೋರಪೋರಿ ಹಿಂದಿರುಗಿ ಮುಸಿಮುಸಿ ನಕ್ಕರು. ಪೋರಿಯ ಪುಟ್ಟ ಜಡೆಯಲ್ಲಿ ನೀಲಿಬಣ್ಣದ ಟೇಪು ಗಾಳಿಗೆ ಹಾರುತ್ತಿತ್ತು, ಪುಟ್ಟಿಯ ನಗುವಿನ ದ್ಯೋತಕವಾಗಿ ಹಾರುತ್ತಾ ಹಂಗೆ ನಿಧಾನವಾಗಿ ಮರೆಯಾಗಿತ್ತು.
ಇತ್ತ ಬಟ್ಟೆ ಅಂಗಡಿಯ ಮುಂದೆ ಸಾಲಾಗಿ ನಿಲ್ಲಿಸಿದ್ದ ಪೋರಪೋರಿಯ ನಗುವಿಗೆ ಕಾರಣವಾಗಿದ್ದ ಜೀವಂತ ಚಿಲುಮೆಗಳಾದ ಮ್ಯಾನಿಕ್ವೀನ್ ಬೊಂಬೆಗಳು ಪುಟ್ಟಪುಟ್ಟಿ ನಗುವಿಗೆ ಪ್ರತಿಯಾಗಿ ನಗುಮುಖದಿಂದ ಬೀಳ್ಕೊಟ್ಟಿದ್ದವು. ಜೀವವಿದ್ದ ಮನುಷ್ಯ ಶಿಲೆಗಳು ಪೋರಪೋರಿಯನ್ನು ಮರೆತಿದ್ದರು. ಬಟ್ಟೆ ಅಂಗಡಿಯ ಮುಂದೆ ನಿಂತಿದ್ದ ಜೀವವಿಲ್ಲದಮ್ಯಾನಿಕ್ವೀನ್ ಬೊಂಬೆಗಳು ಪೋರಪೋರಿಯ ನಗುವಿಗೆ ಜೀವಂತ ಚಿಲುಮೆಗಳಾಗಿದ್ದವು!

 -ಚೈತ್ರಾ ಎನ್.
chaithratv9@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com