

ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಎಂಬ ವ್ಯಕ್ತಿಯನ್ನು ಉತ್ಕಂಟಿತರಾಗಿ ಹೊಗಳಿಬಿಡಬಹುದು. ಅದಕ್ಕವರು ಅರ್ಹರೂ ಹೌದು. ಅದಿಲ್ಲದಿದ್ದರೆ, ಸುಳ್ಳೆಂದು ಗೊತ್ತಿದ್ದೂ ಬೆರಳೆಣಿಕೆಯ ಮತ್ತೊಂದು ವರ್ಗದೊಂದಿಗೆ ನಿಂತು ಅವರನ್ನು ಟೀಕಿಸಬಹುದು. ಬಹು ಜನಪ್ರಿಯ ವ್ಯಕ್ತಿಯನ್ನು ನಿಂದಿಸುವುದೂ ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವುದಕ್ಕೆ ಇರುವ ಮಾರ್ಗ.
ಆದರೆ ಬಹಳ ಕಷ್ಟದ ಕೆಲಸ ಎಂದರೆ ನರೇಂದ್ರ ಮೋದಿ ಎಂಬುವವರು ಹೀಗೆಯೇ ಎಂದು ಖಚಿತ ರೂಪರೇಖೆಯೊಂದನ್ನು ಎಳೆಯುವುದು. ಏಕೆಂದರೆ ಅವರು ತಮ್ಮ ಹಾದಿಯುದ್ದಕ್ಕೂ ಕಟು ಟೀಕಾಕಾರರನ್ನು ಸುಳ್ಳಾಗಿಸುತ್ತ ಬಂದಿದ್ದು ಮಾತ್ರವಲ್ಲ, ಕಟ್ಟರ್ ಪ್ರಶಂಸಕರಿಗೂ 'ಅರೇ, ನಾವು ಮೋದಿಯವರನ್ನು ತುಂಬ ತಿಳಿದುಕೊಂಡಿದ್ದೇವೆ ಅಂದುಕೊಂಡಿದ್ದವು. ಆದರೆ ನಮಗೆ ಹೊಳೆಯದ ಇನ್ನೊಂದು ಆಯಾಮವನ್ನು ಅವರು ತೋರಿಸಿದರಲ್ಲ' ಎಂಬ ಬೆರಗನ್ನು ಉಂಟು ಮಾಡಿರುವ ವ್ಯಕ್ತಿ. ಹೀಗಾಗಿ ನರೇಂದ್ರ ಮೋದಿ ಒಬ್ಬ ವ್ಯಕ್ತಿ ಅಂದುಕೊಂದಷ್ಟೂ ಅವರು ನಮ್ಮ ನಿಲುಕಿನಿಂದ ದೂರವಾಗುತ್ತ ಸಾಗುತ್ತಾರೆ. ಈ ಹಿಂದೆ ಕೆಲವು ಬರಹಗಾರರರು ವರ್ಣಿಸಿದಂತೆ ನರೇಂದ್ರ ಮೋದಿ ಎಂಬುದೊಂದು ಐಡಿಯಾ, ಕಾಲಕ್ಕೆ ಅನಿವಾರ್ಯವಾಗಿರುವ ಆಲೋಚನೆ. ಹಂಪಿಗೆ ಒದಗಿದ ಕೃಷ್ಣದೇವರಾಯನಂತೆ, ಮೌರ್ಯ ಸಾಮ್ರಾಜ್ಯದ ಚಂದ್ರಗುಪ್ತನಂತೆ. ಕೆಲವೇ ಶತಮಾನಗಳ ಹಿಂದೆ ಒಂದಿಷ್ಟು ಶ್ರೀಮಂತರು ಹೋಗಿ ಕಟ್ಟಿದ ಅಮೆರಿಕದಂಥ ರಾಷ್ಟ್ರಗಳ ಹೋಲಿಕೆ ಬಿಟ್ಟುಬಿಡೋಣ. ಆದರೆ ಭಾರತ, ಚೀನಾದಂಥ ರಾಷ್ಟ್ರಗಳು ನಾಗರಿಕತೆಯ ಉಗಮವನ್ನು ಕಂಡಂಥ ಪ್ರಾಚೀನ ನೆಲಗಳು. ಹಾಗೆಂದೇ ಈ ನೆಲಗಳಲ್ಲಿ ಇನ್ನಿಲ್ಲದ ಹತಾಶೆ ಕಾಣಿಸಿಕೊಂಡಾಗಲೆಲ್ಲ ಯಾರೋ ಒಬ್ಬ ಗಟ್ಟಿ ನಾಯಕ ಎದ್ದುಬರುತ್ತಾನೆ. ಅದು ವ್ಯಕ್ತಿಯ ಪ್ರಶ್ನೆ ಅಲ್ಲ, ಕಾಲಸನ್ನಿಹಿತ ವಿಚಾರದ ಸಂಗತಿ. ಅದನ್ನು ತಡೆಯಲಾಗದು.
ನರೇಂದ್ರ ಮೋದಿ ಕೇವಲ ವ್ಯಕ್ತಿ ಅಂದುಕೊಂಡರೆ ಅವರು ಇಲ್ಲಿಯವರೆಗೆ ಹೇಗೆ ಉಳಿದುಕೊಂಡರು ಎಂಬುದೇ ಸೋಜಿಗವಾಗಿಬಿಡುತ್ತದೆ. ಏಕೆಂದರೆ ಈ ವ್ಯಕ್ತಿ ಎದುರಿಸಿದಷ್ಟು ಟೀಕೆ- ದ್ವೇಷಗಳ ಅಲೆಯನ್ನು ಎದುರಿಸಿದ ಇನ್ನೊಬ್ಬರನ್ನು ಉದಾಹರಿಸುವುದು ಕಷ್ಟ. ನರೇಂದ್ರ ಮೋದಿ ಎಲ್ಲವನ್ನೂ ಸುಳ್ಳಾಗಿಸುತ್ತ ಬಂದರು. ಅದುವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ 2001ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗುತ್ತಾರೆ. ಆಗ ಅವರೇನೂ ಅಷ್ಟು ಪ್ರಸಿದ್ಧರಲ್ಲವಾದ್ದರಿಂದ ಮಾಧ್ಯಮದಲ್ಲಿ ಈಗಿನಂತೆ ಚರ್ಚೆಗಳಾಗಲಿಲ್ಲ. ಆದರೆ ಅವರನ್ನು ಆ ಜವಾಬ್ದಾರಿಯ ಮೇಲೆ ಕಳುಹಿಸಿದವರಿಗೂ ಈ ವ್ಯಕ್ತಿ ಏನೆಲ್ಲ ಮ್ಯಾಜಿಕ್ ಮಾಡಿಬಿಡಬಹುದು ಎಂಬ ನಿರೀಕ್ಷೆಗಳಿದ್ದಿರಲಿಕ್ಕಿಲ್ಲ. ತಮ್ಮದೇ ರಾಜಕೀಯ ಗುಂಪೊಂದನ್ನು ನಿರ್ಮಿಸಿಕೊಳ್ಳುವ ಪೊಲಿಟಿಕಲ್ ಕಾಂಟ್ಯಾಕ್ಟ್‌ಗಳ್ಯಾವವೂ ಇರದಿದ್ದ ಸಂದರ್ಭದಲ್ಲಿ, ಬಣಜಗಳಗಳು ತಾರಕಕ್ಕೆ ಏರಿದ್ದಾಗ, ಮೋದಿ ಮುಖ್ಯಮಂತ್ರಿಯಾಗಿ ತಳವೂರಿದ್ದಲ್ಲದೇ ನಂತರದ ಎಲ್ಲ ಚುನಾವಣೆಗಳಲ್ಲಿ ನಿರಂತರ ಜನಮತ ಪಡೆದಿದ್ದನ್ನು ಬೆರಗಿನಲ್ಲಲ್ಲದೇ ತುಂಬ ತಾರ್ಕಿಕವಾಗಿ ನೋಡುವುದು ಕಷ್ಟ. 2002ರ ಗೋಧ್ರೋತ್ತರ ಗಲಭೆ ನಂತರವಂತೂ ಇಡೀ ಜಾಗತಿಕ ಮಾಧ್ಯಮ, ಬೌದ್ಧಿಕ ವರ್ಗ ಅವರನ್ನು ಬಹಳ ಯೋಜಿತವಾಗಿ ಸೈತಾನನಂತೆ, ರಾಕ್ಷಸನಂತೆ ಬಿಂಬಿಸಿತು. ಎಷ್ಟೇ ಧೈರ್ಯದ ವ್ಯಕ್ತಿಯೂ ಸಾಕಿನ್ನು ತನಗೆ ರಾಜಕೀಯದ ಸಹವಾಸ ಎಂದು ಯೋಚಿಸುವಂತೆ ಮಾಡಬಲ್ಲಂಥ ನಿರಂತರ ನಿಂದನಾ ಪರ್ವವೇ ನರೇಂದ್ರ ಮೋದಿಯವರಿಗೆ ಎದುರಾಯಿತು. ಆಗಲೂ ಮೋದಿ ಗಟ್ಟಿಯಾದರು ಎಂಬುದಷ್ಟೇ ಅಲ್ಲ, ನಂತರದಲ್ಲಿ ಅವರು ತಮ್ಮ ವರ್ಚಸ್ಸನ್ನು ಹದಗೊಳಿಸಿದ ರೀತಿ ನಂಬಲಾಗದ ವಿಸ್ಮಯವೇ. ಗೋಧ್ರೋತ್ತರ ಗಲಭೆಯ ಚರ್ಚೆಯಲ್ಲಿ ಟೀಕೆಗಳು ಎದುರಾದಷ್ಟೇ ದೊಡ್ಡ ಜನವರ್ಗವೊಂದು ಮೋದಿಯವರನ್ನು ಬೆಂಬಲಿಸಿತೆಂಬುದೂ ನಿಜ. ಅದೇ ಬೆಂಬಲದಲ್ಲಿ ತೇಲಾಡುತ್ತಿದ್ದರೆ ಅವರು ಯಾವುದೋ ಕಟ್ಟರ್‌ಪಂಥೀಯ ನಾಯಕನಾಗಿ ಉಳಿದುಕೊಳ್ಳುತ್ತಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ತಾವು ಎಲ್ಲರಿಗೂ ಸಲ್ಲಬೇಕೆಂದು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದರೂ ಅಲ್ಲಿಯೂ ಸಲ್ಲದ, ಇಲ್ಲಿಯೂ ಸಲ್ಲದ ಎಡಬಿಡಂಗಿಗಳಾಗುತ್ತಿದ್ದರು.
ಇವೆಲ್ಲವನ್ನು ಮೀರಿದ ಅಭಿವೃದ್ಧಿ ರಾಜಕಾರಣವೆಂಬ ಹೊಸವ್ಯಾಖ್ಯೆಯನ್ನು ಅನ್ವೇಷಿಸಿಕೊಂಡ ಪರಿ ಅನನ್ಯ. ಬ್ರಾಹ್ಮಣ, ಮೇಲ್ವರ್ಗ, ಒಬಿಸಿ, ಪರಿಶಿಷ್ಟರು, ಮುಸ್ಲಿಂ, ಕ್ರೈಸ್ತ ಇತರೆಲ್ಲ ಧಾರ್ಮಿಕ ಪಂಗಡಗಳ ಜನರು, ಅದರಲ್ಲೂ ಯುವ ಸಮೂಹ ಮೋದಿಯವರಿಗೆ ಒಟ್ಟಾಗಿ ಮತ ಹಾಕಿದ್ದರಲ್ಲಿ ಭಾರತವನ್ನು ವಿಶ್ವದ ಬಲಾಢ್ಯ ಆರ್ಥಿಕಶಕ್ತಿಯನ್ನಾಗಿ ಮಾಡಲಿದ್ದಾರೆ, ತಮಗೆಲ್ಲ ಕೆಲಸ ಕೊಡಲಿದ್ದಾರೆ ಎಂಬ ಆಕಾಂಕ್ಷೆ ನಿಚ್ಚಳವಾಗಿದೆ.
ಈಗಲೂ ಟೀಕಾಕಾರರು ಹೇಳುತ್ತಿದ್ದಾರೆ- ಉದ್ಯೋಗ, ಬೆಲೆ ಇಳಿಕೆ, ಭದ್ರತೆ ಅಂತ ಮೋದಿ ಏನೆಲ್ಲ ಕನಸು ತೋರಿಸಿಬಿಟ್ಟಿದ್ದಾರೆ, ಅದನ್ನೆಲ್ಲ ಸಾಧಿಸುವುದು ಸುಲಭವಲ್ಲ ಅಂತ. ಮೋದಿಯವರನ್ನು ಮೆಚ್ಚಿಕೊಳ್ಳುವವರಲ್ಲೂ ಅವರು ವಾಜಪೇಯಿಯವರಂತೆ ಎಲ್ಲರನ್ನೂ ತೂಗಿಸಿಕೊಂಡು ಹೋಗಲಾರರೇನೋ ಅಂತೆಲ್ಲ ಅನುಮಾನಗಳಿದ್ದವು. ಟೀಕಾಕಾರರಂತೂ ಈಗಲೂ ಅವರಿಗೆ ಭಾರತವನ್ನು ಒಟ್ಟಾಗಿ ಮುನ್ನಡೆಸುವ ಶಕ್ತಿ ಇಲ್ಲ ಎಂದೇ ಬಡಬಡಿಸುತ್ತಿದ್ದಾರೆ. ಅಚ್ಚರಿಯಾಗುತ್ತಿರುವುದು ಮೋದಿ ಇವೆಲ್ಲವನ್ನೂ ಸುಳ್ಳಾಗಿಸುವ ಸೂಚನೆಯನ್ನು ಪ್ರಾರಂಭದಲ್ಲೇ ಕೊಟ್ಟಿರುವುದು. ತಮಗೆ ಮೈತ್ರಿಗಳು ಸಿಗುವುದಿಲ್ಲ ಎಂಬುದನ್ನು ಚುನಾವಣಾಪೂರ್ವದಲ್ಲೇ ಸುಳ್ಳುಮಾಡಿದ ಮೋದಿ, ಈಗ ಮೈತ್ರಿಯ ಅವಶ್ಯವೇ ಇಲ್ಲದ ಬಲ ಬಿಜೆಪಿಗೆ ಬಂದಿದ್ದರೂ 'ರಾಜಧರ್ಮ'ದಂತೆ ಎಲ್ಲರಿಗೂ ಪ್ರಾತಿನಿಧ್ಯ ನೀಡುವುದಕ್ಕೆ ಬದ್ಧರಾಗಿದ್ದಾರೆ. ಉದ್ದೇಶವೊಂದನ್ನು ಈಡೇರಿಸಿಕೊಳ್ಳುವುದಕ್ಕೆ ಮೋದಿ ಥೇಟು ಸರ್ವಾಧಿಕಾರಿಯಂತೆ ಹೆಜ್ಜೆಹಾಕುತ್ತಾರೆ. ಉದ್ದೇಶ ಈಡೇರಿದ ಮರುಗಳಿಗೆಯಲ್ಲೇ ವಿರೋಧಿಗಳಲ್ಲೊಂದು ಸ್ನೇಹಭಾವ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದೊಡನೆ ಮೊದಲು ಬಾಯಿಗೆ ಸಿಹಿ ಹಾಕಿ ಆಶೀರ್ವಾದ ಪಡೆದಿದ್ದು ತಮ್ಮ ರಾಜಕೀಯ ವೈರಿ ಕೇಶುಭಾಯ್ ಪಟೇಲರಲ್ಲಿ. ಇದುವರೆಗೆ ಯಾವುದೇ ನೇತಾರನಾದರೂ ನಾನು 'ಕಾಂಗ್ರೆಸ್ ಮುಕ್ತ ಭಾರತ' ಮಾಡಲಿದ್ದೇನೆ ಎಂಬ ಪರಮ ಆಕ್ರಮಣಕಾರಿ ಧೋರಣೆಯಲ್ಲಿ ಸೆಣೆಸಿದ್ದು ನೋಡಿದ್ದೀರಾ? ವಿರೋಧಿಗಳಲ್ಲಿ ಹಾಗಿರಲಿ, ಇವರನ್ನು ಅನುಮೋದಿಸಿದ್ದ ಸಾಮಾನ್ಯ ಜನರಲ್ಲೇ ಮೋದಿ ಅತಿಯಾಗಿ ಏರಿಹೋಗುತ್ತಿರುವರೇನೋ, ಎಲ್ಲ ಪಕ್ಷಗಳಲ್ಲೂ ಒಳ್ಳೆಯವರು-ಕೆಟ್ಟವರು ಇದ್ದಾರೆ ಎಂದೆಲ್ಲ ಅನ್ನಿಸಿತ್ತು. ಇಷ್ಟೆಲ್ಲ ಕಟುವಾಗಿದ್ದರೆ ಮುಂದೆ ಆಡಳಿತ ನಡೆಸುವಾಗ ಯಾರ ಮಾತೂ ಕೇಳದಿದ್ದರೆ ಗತಿ ಏನು ಎಂಬ ಆತಂಕಗಳು ಎದ್ದಿರಲೇ ಇಲ್ಲ ಎನ್ನುವುದು ಬೇಡ. ಗೆದ್ದ ಮರುಕ್ಷಣದಲ್ಲೇ ಆ ಆತಂಕಗಳನ್ನೆಲ್ಲ ಹುಸಿಯಾಗಿಸಿಬಿಟ್ಟರು ಮೋದಿ. ಈ ಪ್ರಮಾಣದ ಬಹುಮತ ಸಿಕ್ಕಿರುವಾಗಲೂ ಮೊನ್ನೆ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ತೋರಿದ ವಿನಮ್ರ ವರ್ತನೆ ಆಡ್ವಾಣಿಯಂಥವರನ್ನೂ ಕುಬ್ಜರನ್ನಾಗಿಸಿ ಮೋದಿಯವರನ್ನು 'ಮುತ್ಸದ್ಧಿ'ಗಳ ಸಾಲಿನಲ್ಲಿ ಕೂರಿಸಿಬಿಟ್ಟಿತು. ಕಾಂಗ್ರೆಸ್‌ಮುಕ್ತ ಭಾರತ ಎಂದು ಗರ್ಜಿಸಿದ್ದವರೇ, ಹಿಂದಿನ ಸರ್ಕಾರಗಳು ಒಳ್ಳೆಯ ಕೆಲಸ ಮಾಡಿಯೇ ಇಲ್ಲ ಎಂದು ನಾನು ಹೇಳಲಾರೆ ಅಂತ ಘನತೆ ಮೆರೆದರು. ಗುಜರಾತ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ತೆರವು ಮಾಡಿ ಬರುವ ಸಂದರ್ಭದಲ್ಲೂ ಅಲ್ಲಿನ ಪ್ರತಿಪಕ್ಷ ಕಾಂಗ್ರೆಸ್ ಅನ್ನು 'ಸತಿಪಕ್ಷ' ಎಂದೇ ಸಂಬೋಧಿಸುತ್ತ, ಅವರ ಸಹಕಾರ ನೆನೆಯುವ ದೊಡ್ಡ ಗುಣ ತೋರಿದರು.
ವ್ಯಕ್ತಿಯನ್ನು ಹೆಚ್ಚು-ಕಡಿಮೆ ಹೀಗೆಯೇ ಎಂದೆಳೆಯಬಹುದು. ಆದರೆ ವಿಚಾರಗಳು ಕಾಲದ ಯಾನದಲ್ಲಿ ಗಟ್ಟಿಯಾಗುತ್ತ, ಪಕ್ವವಾಗುತ್ತ ಸಾಗುತ್ತವೆ. ಕಾಂಗ್ರೆಸ್ ಮುಕ್ತ ಭಾರತ ಎಂಬುದರ ಅರ್ಥ ಈಗ ನಿಚ್ಚಳವಾಗುತ್ತಿದೆ. ಕಾಂಗ್ರೆಸ್ ಎಂಬ ಪ್ರಾತಿನಿಧಿಕ ವಿಚಾರವೊಂದು ಅಂತ್ಯವಾಗುತ್ತಿದೆ. ಆ ಜಾಗದಲ್ಲಿ ಭಾರತೀಯತೆ ಹಬ್ಬುತ್ತಿದೆ. ಭಾರತೀಯತೆ ಎಂಬುದು ಅಮೂರ್ತ ವಿಚಾರ ಎಂದಾದರೆ ಅದರ ವ್ಯಕ್ತಿರೂಪಕ್ಕಾಗಿ ನರೇಂದ್ರ ಮೋದಿಯವರನ್ನು ನೋಡಬಹುದು. ನರೇಂದ್ರ ಎಂಬುದು ಕಾಲಕೂಡಿ ಅವತರಿಸಿದಂಥ ಒಂದು ವಿಚಾರ.ಟಿ
- ಚೈತನ್ಯ ಹೆಗಡೆ
cchegde@gmail.com