ನಿಮ್ಮನ್ನು 'ಮರೆಯಲಾದೀತೇ'?

ದಿನಾಂಕ: 25-05-2014 ಪ್ರೀತಿಯ ತಾತಾ... ಹೇಗಿದ್ದೀರಿ? ನೀವು ನಿರ್ಗಮಿಸಿ ಇಂದಿಗೆ ಹತ್ತಿರ ಹತ್ತಿರ ಒಂದೂವರೆ ವರ್ಷವಾಯ್ತು...
ನಿಮ್ಮನ್ನು 'ಮರೆಯಲಾದೀತೇ'?
Updated on: 

ದಿನಾಂಕ: 25-05-2014
ಪ್ರೀತಿಯ ತಾತಾ... ಹೇಗಿದ್ದೀರಿ?
ನೀವು ನಿರ್ಗಮಿಸಿ ಇಂದಿಗೆ ಹತ್ತಿರ ಹತ್ತಿರ ಒಂದೂವರೆ ವರ್ಷವಾಯ್ತು. ಇದ್ದಿದ್ದರೆ ಮೇ 22ಕ್ಕೆ ನಿಮಗೆ ನೂರು ವರ್ಷ. ಶತಾಯುಷಿ ನಮ್ಮಜ್ಜ ಎಂದು ಸಂಭ್ರಮಿಸಬಹುದಿತ್ತು. ಆ ಸಂಭ್ರಮದ ಸೌಭಾಗ್ಯ ನಮಗಿಲ್ಲ.
ನೀವು ನಿರ್ಗಮಿಸಿದ ಮುಂಜಾನೆ ನಾನು ಹೈದರಾಬಾದಿನಲ್ಲಿದ್ದೆ. ನನ್ನ ಸಂಬಂಧಿಯೊಬ್ಬರು ಫೋನ್ ಮಾಡಿ ವಿಷಯ ತಿಳಿಸಿದಾಗ ನನಗೆ ಪ್ರತಿಕ್ರಿಯಿಸಲು ಆಗಲಿಲ್ಲ. ಯಾವುದೋ ರೈಲು ಹಿಡಿದು ಬೆಂಗಳೂರಿಗೆ ಬಂದು, ಬೆಳಗೆರೆ ತಲುಪಿದಾಗ ರಾತ್ರಿ ಎಂಟು ಗಂಟೆ. ಬೆಳಗೆರೆಯ ಮನೆಯ ವರಾಂಡದಲ್ಲಿ ಗಾಜಿನ ಪೆಟ್ಟಿಗೆಯಲ್ಲಿ ನೀವು ಶಾಂತ-ಪ್ರಸನ್ನವದನರಾಗಿ ನಿದ್ರಿಸುತ್ತಿದ್ದಿರಿ. ಅಲ್ಲೇ ನಿಂತಿದ್ದ ದಾವಣಗೆರೆಯ ಶ್ರೀಪಾದ ಪೂಜಾರರನ್ನು ವಿಚಾರಿಸಿದೆ, ಏನಿಲ್ಲ, ತಾವೇ ಇಚ್ಛಿಸಿದಂತೆ ಯಮಧರ್ಮರಾಯನನ್ನು ಆಹ್ವಾನಿಸಿ, ಸಾಕಿನ್ನು ಕರೆದುಕೊಂಡು ಹೊರಡು ಎನ್ನುವಂತೆ ನಿರ್ಗಮಿಸಿದರು. ಅವರ ಇಚ್ಛೆಯಂತೆ ಯಾವುದೇ ಕ್ರಿಯೆ-ವಿಧಿ-ವಿಧಾನಗಳನ್ನು ನಡೆಸದೆ ಬೆಂಕಿಗೆ ದೇಹ ಹಾಕಿಬಿಟ್ಟರೆ ಅಲ್ಲಿಗೆ ಮುಗಿಯುತ್ತದೆ ಎಂದರು.
ಪೂಜಾರರೊಂದಿಗಿದ್ದ ನಿವೃತ್ತ ಪೊಲೀಸ್ ಮಹಾನಿರೀಕ್ಷಕರಾದ ರಾಮಕೃಷ್ಣ ಸಾಹೇಬರಿಗೆ ನಿಮ್ಮ ಶಾಂತ ನಿದ್ರೆಗೆ ಭಂಗ ಮಾಡಬೇಕು ಅನ್ನಿಸಿರಬೇಕು. ನನ್ನನ್ನು ಕುರಿತು ಭಜನೆಯವರು ಯಾರಾದರೂ ಸಿಗುತ್ತಾರಾ ನೋಡು ಎಂದರು. ಬೆಳಗೆರೆಯ ಪಕ್ಕದ ಎಳವರಹಟ್ಟಿಗೆ ಹೋಗಿ ವಿಚಾರಿಸಿದೆ. ಭಜನೆಯವರೇನೋ ಇದ್ದರು. ಆದರೆ ಅವರೆಲ್ಲ ಆ ಹೊತ್ತಿಗೆ...!!! ನೀವು ಬದುಕಿದ್ದ ಕಾಲಕ್ಕೆ ಬೀಡಿ ಸೇದಿ ತೋಟದ ಒಳಗಡೆ ಬರಲು ಅಂಜುತ್ತಿದ್ದವರಿಂದ ಆ ಸ್ಥಿತಿಯಲ್ಲಿ ಭಜನೆ ಮಾಡಿಸಲು ನನಗೆ ಸರಿ ಕಾಣಲಿಲ್ಲ. ಅಷ್ಟರಲ್ಲಿ ಯಾರೋ ಊರಿನವರೇ ಸೇರಿ ಸಭ್ಯ, ವಾಲಾಡದ ಒಂದಷ್ಟು ಜನರನ್ನು ಸೇರಿಸಿ ತೋಟಕ್ಕೆ ಬಂದರು. ಇಡೀ ರಾತ್ರಿ ತಾರಕ ಸ್ವರದಲ್ಲಿ ಅವರು ಹಾಡಿದ ಪದಗಳು ಸಹ ನಿಮ್ಮ ನಿದ್ರೆಗೆ ಭಂಗ ತರಲಿಲ್ಲ. ಮಾರನೇ ದಿನ ನಿಮ್ಮ ಇಚ್ಛೆಯಂತೆ ದೇಹವನ್ನು ಬೆಂಕಿಗೆ ಹಾಕಲು ಸಿದ್ಧತೆ ಮಾಡತೊಡಗಿದಾಗ ಯಾರೋ ಪುಣ್ಯಾತ್ಮರು ನಿಮ್ಮ ದೇಹ ಸಂಸ್ಕಾರ, ವಿಧಿ, ಕ್ರಿಯೆ ಎಂದೆಲ್ಲ ಬೊಬ್ಬೆಯಿಟ್ಟರು. ಶ್ರೀಪಾದ ಪೂಜಾರರಿಗೆ ನಿಮ್ಮ ಕೊನೆಯ ಮಾತು ನಡೆಸುವ ಜವಾಬ್ದಾರಿ ಇದ್ದುದರಿಂದ ಸಿಟ್ಟಾಗಿ ಕೂಗಾಡಿದರು. ಜನಿವಾರವನ್ನು ಎಂದೂ ಧರಿಸದ, ಪ್ರಜ್ಞಾಪೂರ್ವಕವಾಗಿ ಬ್ರಾಹ್ಮಣರ ವಿರೋಧಿಸಿ, ಎಂದೂ ದೇವರು, ಪೂಜೆ, ಪುನಸ್ಕಾರ ನಂಬದ ನಿಮಗೆ ಅವರೆಲ್ಲರೂ ಕೊನೆಯ ದಿನ ಜನಿವಾರ ಹಾಕಲು ಯತ್ನಿಸಿದ್ದು ನನಗೂ ಬೇಸರ ತರಿಸಿ, ನಾನು, ಶ್ರೀಪಾದ ಪೂಜಾರ, ಅವರ ಮಗ ಜಗದೀಶ ಮತ್ತೊಬ್ಬರ್ಯಾರೋ ನಿಮ್ಮ ದೇಹ ಹೊತ್ತು ನಡೆದೇ ಬಿಟ್ಟೆವು. ನೀವು ವಾಸವಿದ್ದ ಗುಡಿಸಲಿನ ಜಾಗ, ನೀವು ಧ್ಯಾನಿಸಿದ, ಜೀವಿಸಿದ ಗುಡಿಸಲ ಜಾಗದಲ್ಲಿ ಸೌದೆಯನ್ನು ಪೇರಿಸಿಬಿಟ್ಟಿದ್ದರು. ಅಲ್ಲಿ ಅಗ್ನಿ ತೆರೆತೆರೆಯಾಗಿ ಮೇಲೆದ್ದಾಗ ನಾನು ಅಲ್ಲಿರಲಾರದೆ ದೂರ ಬಂದಿದ್ದೆ. ಈಗ ಅಲ್ಲೊಂದು ಪುಟ್ಟ ಕುಟೀರ ಮಾಡಿದ್ದಾರೆ. ಕುಟೀರದಲ್ಲಿ ನಾಲ್ಕು ಚೌಕಟ್ಟಿನೊಳಗಿನ ನಿಮ್ಮ ಪಟ ಮಂದಸ್ಮಿತವಾಗಿದೆ.
ಮೊನ್ನೆ ಅಲ್ಲಿಗೆ ಹೋಗಿದ್ದೆ. ಕುಟೀರದ ಅನತಿ ದೂರದಲ್ಲಿ ನಾನು ಬೆಳಗೆರೆಯಲ್ಲಿ ಓದುತ್ತಿದ್ದ ಕಾಲಕ್ಕೆ ದೊಡ್ಡ ಹಲಸಿನ ಮರವೊಂದಿತ್ತು. ಈಗ ಆ ಮರ ಅಲ್ಲಿಲ್ಲ. ಸಮೃದ್ಧ ಹಸಿರು, ನೆರಳು, ಹಣ್ಣುಗಳಿಂದ ತುಂಬಿದ ಆ ಮರದ ಬಳಿ ನನ್ನ ನಿಲ್ಲಿಸಿಕೊಂಡು, 'ಈ ಮರವನ್ನು ನೋಡು, ಇವತ್ತಿನ ಕಾಲಮಾನಕ್ಕೆ ಭೂಮಿಯಲ್ಲಿ ಬೆಳೆಯುವ ಎಲ್ಲ ಫಸಲಿಗೂ ನಾವು ವಿಷ ಬೆರೆಸಿದ್ದೇವೆ. ಆದರೆ ಹಲಸು ಫಲ ನೀಡಲಿಲ್ಲ ಎಂದು ನಾವು ರಾಸಾಯನಿಕ ಗೊಬ್ಬರ ಹಾಕುವುದಿಲ್ಲ. ಔಷಧಿ ಸಿಂಪಡಿಸುವುದಿಲ್ಲ, ಕಾಲಕಾಲಕ್ಕೆ ನೀರೊಂದು ದೊರಕಿದರೆ ರೋಗಮುಕ್ತವಾಗಿ, ಸಾವಯವ ಫಸಲನ್ನು ಈ ಮರ ನೀಡುತ್ತದೆ' ಇತ್ಯಾದಿ ವಿವರಣೆ ನೀಡಿದ್ದು ನೆನಪಾಯಿತು.
ಕಾಕತಾಳೀಯವೆಂದರೆ, ನಿಮ್ಮ ಪ್ರಭಾವದಿಂದ ನನ್ನ ತೋಟದಲ್ಲಿ ಈಗ್ಗೆ ಆರು ವರ್ಷಗಳ ಹಿಂದೆ ನೆಟ್ಟ ಹಲಸಿನ ಗಿಡ ಈ ಸಲ ಸಮೃದ್ಧ ಹದಿನಾರು ಹಣ್ಣುಗಳನ್ನು ನೀಡಿದೆ. ಅದೇ ದಿನ ಅದೇ ಮರದ ಅಡಿಯಲ್ಲಿ ಪಂಪ ಮಹಾಕವಿಯು ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ತಂಪಾದ ಗಾಳಿ ಬೀಸಿದರೆ, ಒಳ್ಳೆಯ ನುಡಿಗಳನ್ನು ಕೇಳಿದರೆ, ಅರಳಿದ ಮಲ್ಲಿಗೆ ಹೂ ನೋಡಿದರೆ, ಸೊಗಸಾದ ಕಾವ್ಯ ಕಿವಿಗೆ ಬಿದ್ದರೆ, ಇತ್ಯಾದಿಯಾಗಿ ಹೇಳುತ್ತಾ ಆರಂಕುಶ ಇಟ್ಟೊಡೆ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎನ್ನುತ್ತಾನೆ. ಅಂದರೆ ಯಾರಾದರೂ ನನ್ನ ಎದೆಗೆ ಬಾಣವನ್ನು ಇಟ್ಟರೂ ನನಗೆ ಈ ಬನವಾಸಿ ದೇಶ ನೆನಪಾಗುತ್ತದೆ ಅನ್ನುತ್ತಾನೆ. ಆದರೆ ಅದನ್ನು ಅಂಕುಶ ಎಂದುಅರ್ಥೈಸಬಾರದು. ಅಂಕುಸ ಎಂದು ಓದಿಕೊಳ್ಳಬೇಕು (ಆರು-ಹಲಸು, ಅಂಕುಸ-ಮೊಗ್ಗು). ಹಲಸು ಮೊಗ್ಗಾದಾಗ ನನ್ನ ಮನಸು ಬನವಾಸಿ ದೇಶವನ್ನು ನೆನೆಯುತ್ತದೆ ಎಂದು ಕವಿ ಅರ್ಥೈಸಿದ್ದಾನೆ. ಹಾಗೂ ಅಂಕುಶ ಎಂದು ಅರ್ಥೈಸಿದರೂ ಕಾವ್ಯದ ರಸ ಭಂಗವಾಗುವುದಿಲ್ಲ. ಇದು ಪಂಪ ಕವಿಯ ಕಾವ್ಯದ ತಾಕತ್ತು ಇತ್ಯಾದಿಯಾಗಿ ನೀವು ವಿವರಿಸಿ ನಾವು ನಿಂತಿದ್ದ ಜಾಗದಲ್ಲಿ ಒಂದು ಹಲಸಿನ ಮರ ಎಷ್ಟೊಂದು ಮಾತಿಗೆ ಆಹಾರವಾಗಿದ್ದು ನನಗೆ ಇಂದಿಗೂ ಸೋಜಿಗವೇ.
ನಿಮಗೆ ಹಳೆಗನ್ನಡ ಕಾವ್ಯದ ಬಗ್ಗೆ, ಪಂಪ, ರನ್ನ, ಕುಮಾರವ್ಯಾಸ ಕಾವ್ಯಗಳ ಬಗ್ಗೆ ಇದ್ದ ಪ್ರೌಢಿಮೆ ಹಿಂದಿನ ಮರ್ಮದ ಬಗೆಗೆ ಕೇಳಿದರೆ ನೀವು ಸಿದ್ದಯ್ಯ ಎಂಬ ಲೋಯರ್ ಸೆಕೆಂಡರಿ ಓದಿದ ಅಪ್ಪಟ ಕನ್ನಡದ ಮೇಷ್ಟ್ರು ಕಡೆ ಕೈ ತೋರಿಸುತ್ತಿದ್ದಿರಿ. ವೀಸಿ, ದೇವುಡು, ಡಿವಿಜಿ, ಮಾಸ್ತಿ ಮುಂತಾದವರೊಂದಿಗಿನ ಒಡನಾಟದ ಬಗ್ಗೆ ಮಾತನಾಡುತ್ತಿದ್ದಿರಿ.
ನಿಮಗಿದ್ದ ಕನ್ನಡದ ಬಗೆಗಿನ ಕಾಳಜಿ, ಹಳ್ಳಿ ಮಕ್ಕಳ ವಿದ್ಯಾಭ್ಯಾಸದ ಕುರಿತ ಜವಾಬ್ದಾರಿಯೇ ಬೆಳಗೆರೆ ಶಾಲೆಯ ಹುಟ್ಟಿಗೆ ಕಾರಣ ಎಂಬುದು ನನ್ನ ನಂಬಿಕೆ. ಆ ಶಾಲೆಯಲ್ಲಿ ಜಾತಿಯಿಲ್ಲ, ಡೊನೇಷನ್ ಇಲ್ಲ, ಹಾಸ್ಟೆಲ್‌ನಲ್ಲಿ ಉಚಿತ ಊಟ ಇದೆಲ್ಲ ಸಾಧ್ಯವಾದದ್ದು ನಿಮ್ಮ ಸಾಮಾಜಿಕ ಜವಾಬ್ದಾರಿಯಿಂದಲೇ. ವಿಪರ್ಯಾಸವೆಂದರೆ ಸುಪ್ರೀಂ ಕೋರ್ಟ್ ಕನ್ನಡದಲ್ಲಿ ಓದುವ ಮಕ್ಕಳ ಹಕ್ಕು ಪೋಷಕರ ನಿರ್ಧಾರಕ್ಕೆ ಸಂಬಂಧಿಸಿದ್ದು ಎಂಬುದಾಗಿ ತೀರ್ಪು ನೀಡಿದೆ. ಇಂಗ್ಲಿಷ್ ಕಲಿಕಾ ಮಾಧ್ಯಮ ಎಂಬ ಚಿನ್ನದ ಮೊಟ್ಟೆ ಹಾಕುವ ಶಾಲೆಯ ಮಾಲೀಕರು ಇಂಥ ತೀರ್ಪಿನ ಹಿಂದಿದ್ದಾರೆ ಎಂದರೆ ನಿಮಗೆ ಅರ್ಥವಾಗುವುದು ಕಷ್ಟವೇ. ಏಕೆಂದರೆ ಸರ್ಕಾರದಿಂದ ನಯಾಪೈಸೆ ಪಡೆಯದೆ, ಪೋಷಕರಿಂದ ರೊಕ್ಕ ಪಡೆಯದೆ ನಿಸ್ವಾರ್ಥ ಸೇವೆ ಮಾಡಿದ ನಿಮಗೆ ಬಂಡವಾಳದಾರರ ಶಾಲೆಯ ಮರ್ಮ ತಿಳಿಯುವುದಿಲ್ಲ.
ನಿಮಗೆ ಈ ಪತ್ರ ಬರೆಯುತ್ತಿರುವ ಕಾಲಕ್ಕೆ ಈ ದೇಶದ ರಾಜಕೀಯದಲ್ಲಿ ಸುನಾಮಿ ಎದ್ದಿದೆ. ನೀವು ಒಪ್ಪುವ, ಸರ್ವಕಾಲಕ್ಕೂ ಸಲ್ಲುವ ರಾಜಕಾರಣಿ ಎಂದರೆ ಅದು ಗಾಂಧೀಜಿ. ಆಂಗ್ಲ ದೊರೆ ಜಾರ್ಜ್‌ಗೆ ಸ್ವಾಗತ ಗೀತೆಯೆಂದು ರಚಿತವಾದ ಗೀತೆಯನ್ನು ನಮ್ಮ ನಾಯಕರು ರಾಷ್ಟ್ರಗೀತೆಯಾಗಿ ಸ್ವೀಕರಿಸಿದ್ದರ ಬಗ್ಗೆ ನಿಮಗೆ ಸಿಟ್ಟಿತ್ತು. ಗಾಂಧೀಜಿಯವರ ಸ್ವರಾಜ್ಯ ಕಲ್ಪನೆ ಸ್ವಾತಂತ್ರ್ಯ ಭಾರತದ ಮೂಲದಲ್ಲಿ ದಾರಿ ತಪ್ಪಿತು ಎಂಬುದು ನಿಮ್ಮ ಅನಿಸಿಕೆ. ಆಗೆಲ್ಲ ನೀವು ಮೂಲಭೂತವಾದಿ ಎಂಬಂತೆ ಕಾಣಿಸುತ್ತಿದ್ದಿರಿ. ಅದೇ ಸಮಯಕ್ಕೆ ಅಂಗ್ಲರ ಶಿಸ್ತು, ಸಮಯಪ್ರಜ್ಞೆ, ಅವರ ಪ್ರಾಮಾಣಿಕತೆ ಬಗ್ಗೆ ಮೆಚ್ಚಿ ಮಾತನಾಡುತ್ತಿದ್ದಿರಿ. ಜಾನಪದ ವಿದ್ವಾಂಸ ಎಸ್.ಕೆ. ಕರೀಂ ಖಾನ್, ದೇವನೂರಿನ ಹಯಾತ್‌ಸಾಬ್, ನಲ್ಲುಡಿ ನಿಘಂಟಿನ ಅಲ್ಲಿಸಾಬ್ರನ್ನ ನೀವು ಅಪ್ಪಿಕೊಂಡಾಗ ಜಾತಿ-ಭಾಷೆ, ಧರ್ಮಗಳನ್ನು ಮೀರಿದ ಮಾನವತಾವಾದಿ ಆಗಿ ಕಾಣಿಸುತ್ತಿದ್ದಿರಿ. ಸ್ವಾತಂತ್ರ್ಯ ಭಾರತದಲ್ಲಿ ರಾಜಕೀಯ ನಾಯಕರು ಮತ ಬಂಡವಾಳ ಮಾಡಿಕೊಳ್ಳಲು ಮಾಡಿದ ಎಲ್ಲ ಅವಗಡಗಳನ್ನು ವಿರೋಧಿಸುತ್ತಿದ್ದ ನೀವು ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನ ಪರಿಹಾರ ರೂಪದಲ್ಲಿ ತೋರಿಸುತ್ತಿದ್ದಿರಿ. ಅಂತೂ ಈಗ ಬದಲಾವಣೆಯ ಗಾಳಿ ಬೀಸಿದೆ. ವಂಶಪಾರಂಪರ್ಯ ಆಡಳಿತಕ್ಕೆ ಸೋಲಾಗಿ, ಅಖಂಡ ಭಾರತ ದೇಶದ-ಸ್ವರಾಜ್ಯ ಕಲ್ಲನೆಯನ್ನು ಪ್ರತಿಪಾದಿಸುವ ರಾಜಕೀಯ ಪಕ್ಷ ಚುನಾವಣೆಯಲ್ಲಿ ಬಹುಮತ ಪಡೆದು ದಿಲ್ಲಿಯ ಅಧಿಕಾರ ಗದ್ದುಗೆ ಹಿಡಿದಿದೆ. ನೇತಾರ ವಾರಾಣಸಿಯಲ್ಲಿ ಗಂಗವ್ವನಿಗೆ ಆರತಿ ಪೂಜೆ ಮಾಡಿ, ಮಲಿನಗೊಂಡಿರುವ ಗಂಗೆಯನ್ನೂ- ಭರತ ಭೂಮಿಯನ್ನು ಸ್ವಚ್ಛಗೊಳಿಸುವ ಮಾತನಾಡಿದ್ದಾರೆ. ಜನರು ಅವರ ಮೇಲೆ ತೋರಿಸಿರುವ ನಂಬಿಕೆಯನ್ನು ಅಭಿವೃದ್ಧಿಯೊಂದಿಗೆ ಹಿಂದಿರುಗಿಸುವ ಮಾತನಾಡಿದ್ದಾರೆ. ಸತ್ಯಾಸತ್ಯವನ್ನು ಕಾಲವೇ ನಿರ್ಧರಿಸುತ್ತದೆ.  ಮತ್ತೇನು ಬರೆಯಲಿ ಅಜ್ಜ? ಇದೆಲ್ಲ ನೀವು ಪ್ರಸ್ತಾಪಿಸುತ್ತಿದ್ದ ವಿಷಯಗಳು ಎಂಬ ಕಾರಣಕ್ಕೆ ಬರೆಯಬೇಕಾಯಿತು. ಬೆಳಗೆರೆ ಸುತ್ತಮುತ್ತಲಿನ ಊರುಗಳ ಬಗ್ಗೆ ಒಂದೆರೆಡು ಸಾಲು ಗೀಚಿ ಈ ಪತ್ರ ಮುಗಿಸುತ್ತೇನೆ.
ಈ ಸಲ ಮುಂಗಾರು ಇನ್ನೂ ಪ್ರಾರಂಭವಾಗಿಲ್ಲ. ಮುಂದಿನ ತಿಂಗಳು ಐದನೇ ತಾರೀಖಿಗೆ ಮುಂಗಾರು ಕರ್ನಾಟಕವನ್ನು ಪ್ರವೇಶ ಮಾಡುತ್ತದೆ ಎಂಬುದಾಗಿ ಹವಾಮಾನ ಇಲಾಖೆಯವರು ಮುನ್ಸೂಚನೆ ನೀಡಿದ್ದಾರೆ. ಈ ವರ್ಷ ಮಳೆ ಸಾಧಾರಣ ಅಥವಾ ಬರಗಾಲವಾದರೂ ಆಶ್ಚರ್ಯವಿಲ್ಲ ಎಂಬುದಾಗಿ ಮುನ್ಸೂಚನೆಗಳು ಬಂದಿವೆ. ಈ ಸಾಲಿನಲ್ಲಿ ಬೆಳಗೆರೆಯ ಕೆರೆಗೆ ನೀರು ಬಂದಿಲ್ಲ. ನಿಮ್ಮ ಪ್ರೀತಿಯ ವೇದಾವತಿ ನದಿಯಲ್ಲಿ ನೀರಿಲ್ಲ. ಮರಳೂ ಇಲ್ಲ. ನಿತ್ಯ ಮರಳು ಹೊತ್ತ ಹತ್ತಾರು ಲಾರಿಗಳು ವೇದಾವತಿಯ ಒಡಲು ಬರಿದು ಮಾಡಿ ಬೆಂಗಳೂರಿಗೆ ಸಾಗುತ್ತವೆ. ಮರಳಿನ ಜಾಗದಲ್ಲಿ ಹುಲುಸಾಗಿ ಬಳ್ಳಾರಿ ಜಾಲಿ ಬೆಳೆದಿದೆ. ಇದೆಲ್ಲ ಬರೆಯಲು ನನ್ನಲ್ಲಿ ಕಾರಣಗಳಿವೆ. ಈ ದೇಶದ ಪ್ರಧಾನಿ ಬೋಫೋರ್ಸ್ ಹಗರಣದಲ್ಲಿ ಭಾಗಿಯಾದಾಗ, ಬೆಳಗೆರೆ ಸುತ್ತಮುತ್ತಲಿನ ಊರುಗಳಿಗೆ ಮಳೆಯಾಗದೆ ರೈತರು ಕಂಗೆಟ್ಟಾಗ ನೀವು ಕಣ್ಣೀರಾಗುತ್ತಿದ್ದುದನ್ನು ನೋಡಿದ್ದೇನೆ. ನಿಮ್ಮ ಕಾಳಜಿ- ಆಸಕ್ತಿ ವಿಷಯಗಳ ಹೊರತಾಗಿ ನಿಮಗೆ ಮತ್ತೇನನ್ನು ಬರೆಯಲಿ?
ಪ್ರೀತಿಯ ಅಜ್ಜ,
ನೀವು ಎಳೆವಯಸ್ಸಿನಲ್ಲಿ ಹೆಂಡತಿ ಮಕ್ಕಳನ್ನು ಕಳೆದುಕೊಂಡು ಪುನಾ ಮದುವೆ ಆಗಲಿಲ್ಲ ಎಂದರೆ, ಮದುವೆಯ ಒತ್ತಾಯ ಬಂದಾಗ ಹಲ್ಲು ಕೀಳಿಸಿಕೊಂಡು ಒತ್ತಾಯವನ್ನು ಹತ್ತಿಕ್ಕಿದಿರಿ ಎಂದಿರ, 80ನೇ ವಯಸ್ಸಿನವರೆಗೂ ನಿಮ್ಮ ಬಟ್ಟೆ ನೀವೇ ತೊಳೆದುಕೊಳ್ಳುತ್ತಿದ್ದಿರಿ, ಅದೇ ವಯಸ್ಸಿನಲ್ಲಿ ತೋಟಕ್ಕೆ ನೀರು ಹಾಯಿಸುತ್ತಿದ್ದಿರಿ, ಊರೂರು ಅಲೆದು ಸಾಹಿತ್ಯ- ಸಂಸ್ಕೃತಿ ಎಂದು ತಿರುಗಾಡುತ್ತಿದ್ದಿರಿ ಎಂದು ಮುಂದೊಂದು ದಿನ ನನ್ನ ಮಗನಿಗೆ ವಿವರಿಸಿದರೆ ಅವನು ನಂಬುವ ಸ್ಥಿತಿಯಲ್ಲಿ ಇರುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ನೀವೆಂದರೆ ನನ್ನ ಪಾಲಿಗೆ ಒಬ್ಬ ತಪಸ್ವಿ. ಸಾಧಕ, ಅವಧೂತ. ಸರ್ವರನ್ನು ಪ್ರೀತಿಸಿದವನು. ತನ್ನ ಪರಧಿಗೆ ಬಂದವರಿಗೆ ಕಲಿಸಿದವನು ಮತ್ತು ಬೆಳೆಸಿದವನು. ನನ್ನ ಅಜ್ಜನ ಅನುಪಸ್ಥಿತಿ ನನ್ನನ್ನು ಅನಾಥನನ್ನಾಗಿಸಿದೆ.
ಇತಿ ನಮಸ್ಕಾರಗಳು...


-  ನಾಗರಾಜು ಹೊನ್ನೂರು
nagarajhonnur@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com