ಮೋದಿ ಮುಂದಿನ ಹಾದಿ

ನರೇಂದ್ರ ದಾಮೋದರ ದಾಸ್ ಮೋದಿ, ನಾಳೆಯೇ ಪ್ರಧಾನಿ. ಹತ್ತು ವರ್ಷಗಳ ನಿಶ್ಚಲತೆಯನ್ನು ಹಳ್ಳಕ್ಕೆ ತಳ್ಳಿ...
ಮೋದಿ ಮುಂದಿನ ಹಾದಿ
Updated on: 

ನರೇಂದ್ರ ದಾಮೋದರ ದಾಸ್ ಮೋದಿ, ನಾಳೆಯೇ ಪ್ರಧಾನಿ. ಹತ್ತು ವರ್ಷಗಳ ನಿಶ್ಚಲತೆಯನ್ನು ಹಳ್ಳಕ್ಕೆ ತಳ್ಳಿ, ಹೊಸ ಬದಲಾವಣೆ ತರುತ್ತಾರೆಂಬ ಚರ್ಚೆ ದೇಶ ದಾಟಿ ವಿಶ್ವದ ತುದಿ ಮುಟ್ಟಿದೆ. ಅದರಲ್ಲೂ ಆರ್ಥಿಕ ವಿಚಾರಗಳ ಬಗ್ಗೆ ಹಲವು ನಿರೀಕ್ಷೆಗಳಿವೆ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ನೀತಿ ಗ್ರಹಣ (ಪಾಲಿಸಿ ಪೆರಾಲಿಸಿಸ್) ಬಗ್ಗೆ ದೇಶದ ಮತ್ತು ವಿಶ್ವದ ಪತ್ರಿಕೆಗಳು, ಜನರು ಹಿಗ್ಗಾಮುಗ್ಗಾ ಝಾಡಿಸಿದ್ದು ಇತಿಹಾಸ. ಅದನ್ನು ಸರಿಪಡಿಸುವುದು ಒಂದು ಸವಾಲು.
ಸದ್ಯ ಜಗತ್ತಿನ ಹಣಕಾಸು ಮತ್ತು ಆರ್ಥಿಕ ವ್ಯವಹಾರಕ್ಕೆ ಅಮೆರಿಕವೇ ಕೇಂದ್ರ ಸ್ಥಾನ. ಅಮೆರಿಕದಲ್ಲಿ ಕೊಂಚ ಏರುಪೇರಾದರೆ ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಷೇರು ಪೇಟೆ ಸೂಚ್ಯಂಕ ಬಿದ್ದು ಹೋಗುತ್ತದೆ. ಸರ್ಕಾರಗಳಿಗೆ ದಿಕ್ಕುತೋಚದಂತಾಗುತ್ತದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾರ್ಕ್ ರಾಷ್ಟ್ರಗಳನ್ನೊಳಗೊಂಡ ಮತ್ತು ಇತರ ದೇಶಗಳನ್ನೊಳಗೊಂಡ ರಾಷ್ಟ್ರಗಳನ್ನು ಒಗ್ಗೂಡಿಸಿ ಮತ್ತೊಂದು ಪ್ರಬಲ ಆರ್ಥಿಕ ರಾಷ್ಟ್ರಗಳ ಒಕ್ಕೂಟ ರಚಿಸುವ ಇರಾದೆಯಲ್ಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ಅದರ ಅಗತ್ಯವಿದೆ ಕೂಡ. ಇಲ್ಲಿ ನಾವು ಗಮನಿಸಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರವೇನೆಂದರೆ, ಐರೋಪ್ಯ ರಾಷ್ಟ್ರಗಳು ಅಮೆರಿಕದ ಡಾಲರ್ ಎದುರಾಗಿ 'ಯೂರೋ' ಕರೆನ್ಸಿಯನ್ನು ಜಾರಿಗೊಳಿಸಿದರು. ವಿಶ್ವ ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ಅಮೆರಿಕದ ಪಾರಮ್ಯ ತಡೆಗಟ್ಟಲು ಐರೋಪ್ಯ ಒಕ್ಕೂಟಗಳು 1992 ನೆದರ್ಲೆಂಡ್‌ನ ಮಾಸ್ಟ್ರಿಸ್ಟ್‌ನಲ್ಲಿ ಸಭೆ ಸೇರಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದರ ಫಲವಾಗಿಯೇ ಯೂರೋ ಕರೆನ್ಸಿ ಜೀವ ಪಡೆಯಿತು. ಡಾಲರ್ ಪಾರಮ್ಯ ತಡೆಯಲು ಈ ಕರೆನ್ಸಿ ರೂಪಿತಗೊಂಡರೂ, ಅದಕ್ಕೆ ಪ್ರತಿರೋಧ ಒಡ್ಡುವ ರೀತಿಯಲ್ಲಿ ಅದು ಪ್ರಭಾವಶಾಲಿಯಾಗಲಿಲ್ಲ. ಅದನ್ನು ತಡೆಯಲು ಅಡ್ಡ ದಾರಿ ಮೂಲಕ ಹಲವು ಕಳ್ಳ ಕ್ರಮಗಳನ್ನು ಕೈಗೊಂಡಿತು. ಹೀಗಾಗಿ, ದಕ್ಷಿಣ ಏಷ್ಯಾ ಮತ್ತು ಇತರ ರಾಷ್ಟ್ರಗಳ ಜತೆಗೂಡಿ ರಚಿಸುವ ಆರ್ಥಿಕ ರಾಷ್ಟ್ರಗಳ ಮೈತ್ರಿಕೂಟ ಇದ್ದರೂ ಇಲ್ಲದಂತಾಗಕೂಡದು. ಆ ನಿಟ್ಟಿನಲ್ಲೂ ಗರಿಷ್ಠ ಮಟ್ಟದ ಜಾಗರೂಕರಾಗಿರಬೇಕಾಗಿದೆ. ಈ ನಿಟ್ಟಿನಲ್ಲಿಯೇ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ನಾಯಕರು ಮತ್ತು ಇತರ ಸರ್ಕಾರಿ ಮುಖಂಡರಿಗೆ ಆಹ್ವಾನ ನೀಡಿದ್ದಾರೆ.

ಭಾರತ ಮತ್ತು ಚೀನಾ
ದಕ್ಷಿಣ ಏಷ್ಯಾದಲ್ಲಿ ನಮ್ಮ ದೇಶ ಮತ್ತು ಚೀನಾ ಪ್ರಬಲ ಆರ್ಥಿಕ ಶಕ್ತಿಗಳು. ಶರವೇಗದಲ್ಲಿ ಬೆಳೆಯುತ್ತಿರುವ ಚೀನಾದ ಆರ್ಥಿಕ ವ್ಯವಸ್ಥೆ ಅಮೆರಿಕಕ್ಕೂ ತಲೆನೋವು. ಅಮೆರಿಕದ ಮಾರುಕಟ್ಟೆಗೆ ಚೀನಾ ನಿರ್ಮಿತ ಸಾವಿರಾರು ವಸ್ತುಗಳು (ಮೊಬೈಲ್, ವಿವಿಧ ಮಾದರಿಯ ಕ್ಯಾಮೆರಾ, ಕೈಗಡಿಯಾರ ಇತ್ಯಾದಿ) ಲಗ್ಗೆ ಹಾಕಿವೆ. ಜತೆಗೆ ಅದು ಕೈಗೊಳ್ಳುತ್ತಿರುವ ಹೊಸ ಆವಿಷ್ಕಾರಗಳೂ ಅಮೆರಿಕಕ್ಕೆ ಸವಾಲು ಹಾಕಿದೆ. ಹೀಗಾಗಿ ಚೀನಾವನ್ನು ಮಟ್ಟ ಹಾಕಲು ಅಮೆರಿಕ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎನ್ನುವುದು ಬಹಿರಂಗ ಸತ್ಯ. ಈ ಹಿನ್ನೆಲೆಯಲ್ಲಿ ಶತ್ರುವಿನ ಶತ್ರು ನಮಗೆ ಮಿತ್ರ ಎಂಬ ನಾಣ್ಣುಡಿಯಂತೆ ಅಮೆರಿಕದ ಆರ್ಥಿಕ ಕ್ಷೇತ್ರದ ವೈರಿ ಜತೆ ಮಿತ್ರತ್ವದ ಮಾತನಾಡಿದ್ದಾರೆ ಮೋದಿ. ಈ ಸೂತ್ರ ನಿಜಕ್ಕೂ ಜಾರಿಗೆ ಬಂದರೆ ಐರೋಪ್ಯ ಒಕ್ಕೂಟಗಳ ಆರ್ಥಿಕ ಶಕ್ತಿಗಿಂತ ಬಲಿಷ್ಠವಾಗಿರುವ ಒಕ್ಕೂಟ ಜಾರಿಗೆ ಬರುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ದೇಶಿಯವಾಗಿ...

ದೇಶಿಯವಾಗಿಯಂತೂ ಹಲವು ವಿಚಾರಗಳು ಹೊಸ ಸರ್ಕಾರವನ್ನು ಕಾಯುತ್ತಿವೆ. ತೈಲೋತ್ಪನ್ನಗಳ ಮೇಲಿನ ಸಬ್ಸಿಡಿ ಹಿಂತೆಗೆತ, ಸರಳ ಕೈಗಾರಿಕಾ ನೀತಿ, ಹೊಸ ಕೈಗಾರಿಕೆಗಳಿಗೆ ಅನುಮತಿ ನೀಡುವಲ್ಲಿ ವಿಳಂಬ, ಅನಗತ್ಯ ವಿಳಂಬ... ಹೀಗೆ ಹಲವು ವಿಚಾರಗಳು ಹೊಸ ಸರ್ಕಾರದ ಶೀಘ್ರ ನಿರ್ಧಾರಕ್ಕಾಗಿ ಕಾಯುತ್ತಿದೆ.

20 ಲಕ್ಷ ಕೋಟಿ ಯೋಜನೆಗಳು ಬಾಕಿ
ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಕೊನೆಯ ಎರಡು ವರ್ಷಗಳಲ್ಲಿ ವಿಶೇಷವಾಗಿ ಪ್ರಮುಖ ನಿರ್ಧಾರ ಕೈಗೊಳ್ಳುವ ಬಗ್ಗೆ ತೀರಾ ವಿಳಂಬವಾಗಿ ಹೋದ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳು ಹಿಡಿಶಾಪ ಹಾಕುತ್ತಿದ್ದರು. ಹೊಸ ಪ್ರಧಾನಿ ಕಚೇರಿಯಲ್ಲಿ 20 ಲಕ್ಷ ಕೋಟಿ ರು. ಮೌಲ್ಯದ ಯೋಜನೆಗಳು ಅಂದರೆ 431 ಬಹು ವಿಧದ ಕೈಗಾರಿಕೆಗಳು, ಮೂಲಸೌಕರ್ಯ ಯೋಜನೆಗಳು ಅನುಮತಿಗಾಗಿ ಕಾಯುತ್ತಿವೆ. ಅವುಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡುವ ಅನಿವಾರ್ಯತೆ ಮೋದಿಗಿದೆ.

ಬೆಳವಣಿಗೆ ಕುಸಿತ

ಈ ಒಂದೂವರೆ ವರ್ಷದಿಂದ ವಿಶೇಷವಾಗಿ ಆರ್ಥಿಕ ಬೆಳವಣಿಗೆ ಕುಸಿತವಾಗಿದೆ. ಹೀಗಾಗಿ, ಯಾವುದೇ ಕ್ಷೇತ್ರದಲ್ಲಿ ಚೇತೋಹಾರಿ ಬೆಳವಣಿಗೆಗಳು ಕಾಣಿಸುತ್ತಿಲ್ಲ. ಅದಕ್ಕೆ ಪೂರಕವಾಗಿ ಪ್ರಮುಖ ಕಂಪನಿಯಲ್ಲಿ ಉಪಾಧ್ಯಕ್ಷರಾಗಿರುವ ಮಿತ್ರರೊಬ್ಬರ ಮಾತನ್ನು ಉಲ್ಲೇಖಿಸಲು ಬಯಸುತ್ತೇನೆ. ಕೆಲವೊಂದು ಕಂಪನಿಗಳಲ್ಲಿ ಪರಿಸ್ಥಿತಿ ಎಷ್ಟು ಕೆಟ್ಟು ಹೋಗಿದೆ ಎಂದರೆ ಉತ್ಪನ್ನಗಳ ರಫ್ತು ವಹಿವಾಟಿಗೆ ಮಾಡಿಕೊಂಡ ಒಪ್ಪಂದ ನವೀಕರಿಸಲೂ ಹಿಂಜರಿಕೆಯಾಗಿತ್ತು. ಅದಕ್ಕಾಗಿ ಅವರು ವಿದೇಶದ ಕಂಪನಿಯ ಜತೆ ಹಲವು ಸಲ ಪತ್ರ ವ್ಯವಹಾರ ಮಾತ್ರವಲ್ಲ, ಆ ದೇಶಕ್ಕೂ ಹೋಗಿ ಅಲ್ಲಿನ ಸಂಸ್ಥೆಯ ಪ್ರತಿನಿಧಿಗಳ ಜತೆ ಖುದ್ದಾಗಿ ಚರ್ಚಿಸಿದ ಬಳಿಕ ವಹಿವಾಟು ಸರಾಗವಾಯಿತು ಎಂದಿದ್ದರು.
ಅಂದರೆ ಇಲ್ಲಿ ವಿಚಾರ ಸ್ಪಷ್ಟ. ಹಣಕಾಸು ಕ್ಷೇತ್ರದಲ್ಲಿ ತೀರಾ ವಹಿವಾಟು ಕುಸಿತವಾಗಿದೆ ಎಂಬ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ವಿವರಿಸಲು ಇದೊಂದು ಉದಾಹರಣೆ ಸಾಕು. ಮೋದಿ ನೇತೃತ್ವದ ಸರ್ಕಾರ ಬರುತ್ತದೆ ಎಂದು ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸುತ್ತಿದ್ದಂತೆ ಷೇರು ಪೇಟೆ ನಭಕ್ಕೆ ನಗೆದಿತ್ತು. ಜತೆಗೆ ತೀರಾ ಕುಸಿದಿರುವ ಆರ್ಥಿಕ ಬೆಳವಣಿಗೆ 2015-2016ನೇ ಹಣಕಾಸು ವರ್ಷದಲ್ಲಿ ಶೇ.6.5-ಶೇ.7ರ ಪ್ರಮಾಣದಲ್ಲಿ ಅಭಿವೃದ್ಧಿಯಾಗಬಹುದು ಎಂಬ ನಿರೀಕ್ಷೆ ಉದ್ದಿಮೆದಾರರದ್ದು. 2012-13 ಮತ್ತು 2013-14ನೇ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ.5ಕ್ಕೆ ಕುಸಿದಿತ್ತು.

ಕುಸಿದಿದೆ ಬಂಡವಾಳ ಹೂಡಿಕೆ

ಉದಾರೀಕರಣ ಎಂಬ ವಿಚಾರ ನಮ್ಮ ಹಣಕಾಸು ಕ್ಷೇತ್ರಕ್ಕೆ ಲಗ್ಗೆ ಹಾಕಿದ್ದು 1991ರಲ್ಲಿ. ಅಲ್ಲಿಂದೀಚೆಗೆ ಬಹುಕೋಟಿ ಉದ್ದಿಮೆಗಳಿಗೆ ಖಾಸಗಿಯವರೇ ಕೋಟಿ ಕೋಟಿ ರು. ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಸದ್ಯ ಅದು ಕುಸಿದು ಹೋಗಿದೆ. ಇದರಿಂದಾಗಿಯೇ ಕೈಗಾರಿಕಾ ಉತ್ಪಾದನೆ ಕುಸಿತ, ಹಣಕಾಸು ಕ್ಷೇತ್ರದ ಬೆಳವಣಿಗೆಯಲ್ಲಿ ನಿಧಾನಗತಿ ಕಂಡುಬಂದಿದೆ. ಹೂಡಿಕೆ ಕ್ಷೇತ್ರದಲ್ಲಿ ನಿರಾಶಾದಾಯಕ ಪರಿಸ್ಥಿತಿಯನ್ನು ನಿವಾರಿಸಿ, ಸರಾಗವಾಗಿ ಮತ್ತು ದೇಶದ ಹಿತಾಸಕ್ತಿಗೆ ಮಾರಕವಾಗದಂಥ ಬಂಡವಾಳ ಹರಿದು ಬರುವಂತೆ ಮಾಡುವುದು ಮೋದಿಯವರಿಗೆ ಸವಾಲಾಗಿದೆ.

ಹಳ್ಳ ಹಿಡಿದಿದೆ ಮೂಲಸೌಕರ್ಯ
ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಸ್ತೆಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿತ್ತು. ಆದರೆ ಯುಪಿಎ 1ರ ಅವಧಿಯಲ್ಲಿ ಅದು ಸರಾಗವಾಗಿ ಮುಂದುವರಿದಿತ್ತು. ಎರಡನೇ ಅವಧಿಗೆ ಬಂದಾಗ ಆ ಯೋಜನೆಗಳಿಗೆಲ್ಲ ಗ್ರಹಣ ಹಿಡಿದವು. ಅದಕ್ಕಾಗಿ ಕೆಲವೊಂದು ಕಾನೂನುಗಳಲ್ಲೂ ಬದಲಾವಣೆ ಮಾಡುವ ಅನಿವಾರ್ಯತೆ ಹೊಸ ಸರ್ಕಾರಕ್ಕಿದೆ. ಮೂಲಸೌಕರ್ಯ ಯೋಜನೆಗಳು ವಿಶೇಷವಾಗಿ ರಸ್ತೆ ಮತ್ತು ಹೆದ್ದಾರಿ ನಿರ್ಮಾಣದಲ್ಲಿ ನಿಗದಿತ ಗುರಿ ಹಾಕಿಕೊಳ್ಳಬೇಕಾಗಿದೆ. ಈ ಕ್ಷೇತ್ರದಲ್ಲಿ ಯುಪಿಎ ಒಂದು ಮತ್ತು ಎರಡರ ಅವಧಿಯಲ್ಲಿ ನಿಗದಿತ ಗುರಿ ಸಾಧನೆಯಾಗಿಯೇ ಇಲ್ಲ. ಹಿಂದಿನ ಸರ್ಕಾರ ನಿತ್ಯ 21 ಕಿಮೀ ದೂರ ರಸ್ತೆ ನಿರ್ಮಾಣ ಗುರಿ ಹಾಕಿಕೊಂಡಿದ್ದರೂ, ಕ್ರಮಿಸಿದ ಗುರಿ ಮಾತ್ರ ಕೇವಲ 6.5 ಕಿಮೀ! ಹೀಗಾಗಿ ಮೋದಿ ಸರ್ಕಾರಕ್ಕೆ ಪ್ರತಿ ದಿನ 25 ಕಿ.ಮೀ ದೂರ ರಸ್ತೆ ನಿರ್ಮಿಸುವ ಗುರಿ ಹಾಕಿಕೊಳ್ಳುವುದು ಅನಿವಾರ್ಯ.

ಉದ್ಯೋಗ ಸೃಷ್ಟಿ
ವಿವಿಧ ಶಿಕ್ಷಣ ಸಂಸ್ಥೆಗಳಿಂದ ಪ್ರತಿವರ್ಷ ಕೋಟ್ಯಂತರ ಪದವೀಧರರು ಹೊರ ಬರುತ್ತಾರೆ. ಆದರೆ ಅವರಿಗೆ ಸಂಬಂಧಿಸಿದಂತೆ ಕೆಲಸಗಳಿಲ್ಲ. ಅದನ್ನು ಸೃಷ್ಟಿಸುವ ಕೆಲಸ ಆಗಬೇಕಿದೆ. ಜತೆಗೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಬೇಕಿದೆ.
ಸುಲಭವಿದೆ...
ಇದನ್ನೆಲ್ಲ ಅನುಷ್ಠಾನಗೊಳಿಸಲು ಮೋದಿ ಸರ್ಕಾರಕ್ಕೆ ಮಿತ್ರ ಪಕ್ಷಗಳ ಬಳಿ ಅನುಮತಿ ತೆಗೆದುಕೊಳ್ಳಲೇಬೇಕೆಂದಿಲ್ಲ. ಬಿಜೆಪಿಗೇ ಬಹುಮತ ಇದೆ. ಹೀಗಾಗಿ ಅವರು ಎನ್‌ಡಿಎ ಮಿತ್ರ ಪಕ್ಷಗಳಿಗೂ ಮೆಚ್ಚುಗೆಯಾಗುವಂಥ ನಿರ್ಧಾರ ಕೈಗೊಳ್ಳುವರೆಂಬ ಆಶಯ ಎಲ್ಲರದ್ದು. ಕೊನೆಯಲ್ಲಿ ಇಷ್ಟೆಲ್ಲ ಅಜೆಂಡಾಗಳನ್ನು ಪೂರೈಸಲು ಮೋದಿ ಸರ್ಕಾರಕ್ಕೆ ಕನಿಷ್ಠ ವರ್ಷವಾದರೂ ಬೇಕು.

ಸಾರ್ಕ್ ರಾಷ್ಟ್ರಗಳು

  ಭಾರತ
 ಬಾಂಗ್ಲಾದೇಶ
  ಭೂತಾನ್
  ಪಾಕಿಸ್ತಾನ
  ನೇಪಾಳ
 ಮಾಲ್ಡೀವ್ಸ್

ಕೆಲ ಕಾನೂನು ಬದಲು
    2015ರ ಏ.1ರಿಂದ ಡಿಟಿಸಿ ಮತ್ತು ಜಿಎಸ್‌ಟಿ ಜಾರಿಗೆ ಆದ್ಯತೆ
    ಕೆಲವೊಂದು ಯೋಜನೆಗಳಿಗೆ ಸಂಬಂಧಿಸಿದಂತೆ ಅನ್ವಯವಾಗುವ ಪೂರ್ವಾನ್ವಯ ತೆರಿಗೆ (ರೆಟ್ರೋಸ್ಪೆಕ್ಟಿವ್ ಟ್ಯಾಕ್ಸ್) ಕಾನೂನುಗಳ ಜಾರಿ.
  ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳಲು ಅನುಕೂಲವಾಗುವಂತೆ ಹಾಲಿ ಇರುವ ಭೂಸ್ವಾಧೀನ ಕಾಯ್ದೆಯಲ್ಲಿ ಬದಲು. ಈ ಮೂಲಕ ಕೈಗಾರಿಕೆಗಳಿಗೆ ಸುಲಭ, ಹೆಚ್ಚು ವೆಚ್ಚವಾಗದಂತೆ ಕ್ರಮ.

ಏನೇನು ಮಾಡಬಹುದು?
    ಯೋಜನೆಗಳ ಪೂರ್ತಿಗೆ ಕಾಲಮಿತಿ ಹಾಕಿಕೊಳ್ಳುವ ಸೂಚನೆ.
    ರಸ್ತೆ ಮತ್ತು ಹೆದ್ದಾರಿ ಯೋಜನೆಗಳ ಪೂರ್ತಿಗೆ ನಿತ್ಯ 25 ಕಿ.ಮೀ. ರಸ್ತೆ ಕಾಮಗಾರಿ ಮುಕ್ತಾಯಕ್ಕೆ ಗುರಿ ನಿಗದಿ.
    ಕೇವಲ ಸಂಬಳ ನೀಡಿಕೆ ಬದಲು ಮೌಲ್ಯಯುತ ಆಸ್ತಿ ಸೃಷ್ಟಿಸುವ ಹಿನ್ನೆಲೆಯಲ್ಲಿ ಎಂಜಿ ನರೇಗದಲ್ಲಿ ಬದಲಾವಣೆ.
   ಹಣದುಬ್ಬರ ನಿಯಂತ್ರಣಕ್ಕೆ ಆಹಾರ ವಸ್ತುಗಳ ಆಮದು ಮೇಲೆ ವಿಧಿಸಲಾಗಿರುವ ಕೆಲ ಸುಂಕ ಹಿಂಪಡೆಯುವ ಸಾಧ್ಯತೆ.
    ಇ-ಕಾಮರ್ಸ್ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ.
    ಯೋಜನಾ ಆಯೋಗದ ಹಾಲಿ ವ್ಯವಸ್ಥೆಯಲ್ಲಿ ಬದಲು.

ತೆರಿಗೆ ಸುಧಾರಣೆ
ನೇರ ತೆರಿಗೆ ಸಂಹಿತೆ (ಡಿಟಿಸಿ), ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲು ಯುಪಿಎ ಸರ್ಕಾರ ಯತ್ನಿಸಿದ್ದರೂ ಕಾನೂನು ತೊಡಕು ಮತ್ತು ಬದ್ಧತೆ ಕೊರತೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಕೈಗಾರಿಕೆಗಳನ್ನು ಸ್ಥಾಪಿಸಲು ಭೂಸ್ವಾಧೀನವಾಗಬೇಕಾಗಿದೆ. ಆದರೆ ಹಲವು ಕಾನೂನು ತೊಡಕುಗಳು ಅಡ್ಡಿಯಾಗಿವೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅಪೇಕ್ಷೆಯಂತೆ ಯುಪಿಎ ಸರ್ಕಾರ ಕೊನೆಯ ಅವಧಿಯಲ್ಲಿ ಭೂಸ್ವಾಧೀನ ಮಸೂದೆ ಜಾರಿಗೊಳಿಸಲು ಮುಂದಾದರೂ ಯಶಕಂಡಿಲ್ಲ.

 ಸದಾಶಿವ ಕೆ.
khandige29@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com