ಅಂಬಾಸಿಢರ್!

ಕೆಲವರಿಗೆ ಪ್ರಾಣಿ-ಪಕ್ಷಿಗಳನ್ನು ಕಂಡರೆ ಭಯ. ಆದರೆ ನನಗೆ ಕೆಲವು ವಾಹನಗಳನ್ನು ಕಂಡರೆ ಭಯ. ಅದರಲ್ಲಿ...
ಅಂಬಾಸಿಢರ್!
Updated on: 

ಇನ್ನೊಂದು ಮುಖ

ಕೆಲವರಿಗೆ ಪ್ರಾಣಿ-ಪಕ್ಷಿಗಳನ್ನು ಕಂಡರೆ ಭಯ. ಆದರೆ ನನಗೆ ಕೆಲವು ವಾಹನಗಳನ್ನು ಕಂಡರೆ ಭಯ. ಅದರಲ್ಲಿ ಹಳದಿ ಬಣ್ಣದ ಅಶೋಕ್ ಲೇಲ್ಯಾಂಡ್ ಲಾರಿ ಕನಸಿನಲ್ಲೂ ನನ್ನನ್ನು ಅಟ್ಟಿಸಿಕೊಂಡು ಬರುತ್ತದೆ. ಅದನ್ನು ಬಿಟ್ಟರೆ ನನಗೆ ಆಗದ ಮತ್ತೊಂದು ವಾಹನ ಎಂದರೆ ಅಂಬಾಸಿಡರ್ ಕಾರ್. ಅದು ಏಕೋ ಗೊತ್ತಿಲ್ಲ... ನನಗೆ ಆ ಕಾರನ್ನು ನೋಡಿದಾಗಲೆಲ್ಲ ದಾರಿ ಮಧ್ಯೆ ಕುಳಿತುಕೊಂಡ ದೊಡ್ಡ ಹೊಟ್ಟೆಯ ದನದಂತೆ ಕಾಣುತಿತ್ತು.
ಸಚಿವರ ಅಂಬಾಸಿಡರ್ ಕಾರುಗಳು ಕೆಂಪು ದೀಪ ಹಚ್ಚಿ ಸದ್ದು ಮಾಡುತ್ತಾ ಓಡಾಡುತ್ತಿದ್ದುದು ನೋಡಿದಾಗಲೆಲ್ಲ ನನಗೆ ನಗು ಬರುತ್ತಿತ್ತು. ಕಾಂಟೆಸ್ಸಾ, ಬೆಂಜ್‌ನಂತಹ ಕಾರುಗಳನ್ನು ಬಿಟ್ಟು ಪೀಪಾಯಿ ತರಹ ಇರುವ ಈ ಕಾರನ್ನು ಓಡಿಸುತ್ತಾರಲ್ಲ ನಮ್ಮ ಮಂತ್ರಿಗಳು ಎಂದು ಯೋಚಿಸುತ್ತಿದ್ದೆ.
ನನ್ನ ತಂದೆಗೆ ಕಾರೆಂದರೆ ಬಹಳ ಪ್ರೀತಿ. ಹಾಗಾಗಿ ಮಾರುಕಟ್ಟೆಗೆ ಹೊಸ ಕಾರು ಬರುತ್ತಿದ್ದಂತೆ ಹಳೇ ಕಾರನ್ನು ಮಾರಿ ಹೊಸ ಕಾರನ್ನು ಕೊಂಡುಕೊಳ್ಳುತ್ತಿದ್ದರು. ಜಿಪ್ಸಿ, ಝೆನ್, ಮ್ಯಾಟಿಝ್, ಕಾಂಟೆಸ್ಸಾ ಮುಂತಾದ ಕಾರುಗಳು ನಮ್ಮ ಮನೆ ಷೆಡ್‌ನಲ್ಲಿ ಆಶ್ರಯ ಪಡೆದಿದ್ದವು. ಆದರೆ ಅದೊಂದು ಬಾರಿ ಕಪ್ಪು ಬಣ್ಣದ ಅಂಬಾಸಿಡರ್ ಕಾರನ್ನು ತಂದೆ ಮನೆಗೆ ತಂದಾಗ ಯಾರೋ ಗೆಳೆಯರ ಕಾರಿರಬೇಕು ಎಂದುಕೊಂಡೆ. ಆದರೆ ನಮ್ಮ ಹಳೇ ಕಾರು ಕಾಣಿಸದೇ ಇದ್ದಾಗ ಭಯವಾಯಿತು. ಇದೇ ನಮ್ಮ ಹೊಸ ಕಾರು ಎಂದಾಗ ನಾನು ಜೋರಾಗಿ ಅತ್ತು ಗಲಾಟೆ ಮಾಡಿದೆ. ನಮ್ಮ ನಾಯಿಗೂ ಆ ಕಾರು ಕಂಡರೆ ಇಷ್ಟವಿರಲಿಲ್ಲ. ಕಾರಿನ ಹಿಂದೆ ನಿಂತು ಬೊಗಳಿ ಬೊಗಳಿ ನನ್ನ ತಂದೆಯ ನಿದ್ದೆ ಹಾಳು ಮಾಡುತ್ತಿತ್ತು. ನಮ್ಮಿಬ್ಬರ ಕಿರಿಕಿರಿ ತಾಳಲಾರದೆ ಆ ಕಾರನ್ನು ಸದ್ಯ ಮಾರಿ ಬೇರೆ ಕಾರು ಖರೀದಿಸಿದರು.
ಅಬ್ಬಾ! ಎಂದು ನಿಟ್ಟುಸಿರು ಬಿಟ್ಟರೆ ಶಾಲೆಯ ಹೊರಗೆ ಅದೇ ಬಣ್ಣದ ಅಂಬಾಸಿಡರ್ ಕಾರು ನಿಂತಿತ್ತು! ಶಾಲೆ ಮುಗಿದ ಬಳಿಕ ಹಿಂದಿನ ಗೇಟಿನಿಂದ ಓಡಿ ಹೋಗುತ್ತಿದ್ದೆ. ನನ್ನ ಬೆಸ್ಟ್ ಫ್ರೆಂಡ್ ಕೂಡಾ ಬರುತ್ತಿದ್ದುದು ಒಂದು ಅಂಬಾಸಿಡರ್ ಕಾರಿನಲ್ಲಿ. ಅವರ ಕಾರು ಒಮ್ಮೆ ಅಪಘಾತಕ್ಕೀಡಾಯಿತು. ಅದು ಆ ಅಂಬಾಸಿಡರ್ ಕಾರಿನದ್ದೇ ಕಿತಾಪತಿ ಎಂದು ನನಗೆ ಗೊತ್ತಿತ್ತು. ಹೈಸ್ಕೂಲಿಗೆ ಬಂದ ಮೇಲೆ ಒಂದು ಸಲ ನನ್ನ ಕಣ್ಣ ಮುಂದೆಯೇ ಅಂಬಾಸಿಡರ್ ಕಾರೊಂದು ನಾನು ಬಿಸ್ಕತ್ ಹಾಕುತ್ತಿದ್ದ ನಾಯಿ ಮೇಲೆ ಹರಿದು ಹೋಗಿ ಆ ಪಾಪದ ಪ್ರಾಣಿಯನ್ನು ಬಲಿ ತೆಗೆದುಕೊಂಡಿತು. ಆಗ ಆ ಕಾರಿನ ಬಗೆಗಿನ ಭಯ ಇನ್ನೂ ಹೆಚ್ಚಿತು.
ಟ್ಯಾಕ್ಸಿಯಲ್ಲಿ ಒಮ್ಮೆ ಊರಿಂದ ಹೊರಕ್ಕೆ ಹೋಗಬೇಕಿತ್ತು. ಆಗ ಮತ್ತದೇ ಅಂಬಾಸಿಡರ್ ಕಾರ್ ಪ್ರತ್ಯಕ್ಷವಾಯಿತು. ಅದರ ಬಾಗಿಲಿನ ಕೈ ಬಳಸಲು ಒದ್ದಾಡುತ್ತಿದ್ದೆ. ಉಳಿದ ಕಾರಿನ ಬಾಗಿಲಿನ ಕೈ ಎಷ್ಟು ಸುಲಭದಲ್ಲಿ ತಿರುಗಿಸಬಹುದಿತ್ತು! ಆದರೆ ಆ ಅಂಬಾಸಿಡರ್ ಕಾರಿನ ಬಾಗಿಲನ್ನು ಬೇರೆಯವರೇ ತೆರೆಯಬೇಕಿತ್ತು ನನಗಾಗಿ.
ಇದೀಗ ಅಂಬಾಸಿಡರ್ ಕಾರಿನ ತಯಾರಿ ನಿಂತಿದೆ ಎಂದಾಗ ಸಾಮಾಜಿಕ ಜಾಲತಾಣಗಳಲ್ಲೆಡೆ ಸಂತಾಪ ಮತ್ತು ಬೇಸರದ ಸಂದೇಶಗಳೇ ಹರಿದಾಡುತ್ತಿವೆ. ಎಲ್ಲರೂ ಅಂಬಾಸಿಡಾರ್ ಫೀಲಿಯಾಕ್! ನಾನೊಬ್ಬಳೇ ಅಂಬಾಸಿಡರ್‌ಗೆ ಟಾಟಾ ಹೇಳುವಲ್ಲಿ ಉತ್ಸುಕಳಾಗಿರುವುದು ಎಂದು ಕಾಣುತ್ತಿದೆ. ಗುಡ್‌ಬೈ ಅಂಬಾಸಿಡರ್. <


ಅಂಕಿ ನೋಟ

33,000
ಕೋಲ್ಕತ್ತಾದಲ್ಲಿರುವ  ಅಂಬಾಸಿಡರ್ ಟ್ಯಾಕ್ಸಿ
(2013)

2,200
ಮಾರ್ಚ್ 2014ರ ಅಂತ್ಯಕ್ಕೆ ಮಾರಾಟವಾದ
ಕಾರುಗಳು

24,000
1980ರಲ್ಲಿ ಮಾರಾಟವಾದ ಕಾರುಗಳು

6,000
ಕಾರುಗಳನ್ನು 2000ನೇ ಇಸವಿಯಲ್ಲಿ ಮಾರಾಟ
ಮಾಡಲಾಗಿತ್ತು.

2,500
ಉತ್ತರಪಾರ ಘಟಕದಲ್ಲಿ ಈಗ ಇರುವ
ಕಾರ್ಮಿಕರು.


-ಅದಿತಿಮಾನಸ ಟಿ. ಎಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com