ಗೊಂಬೆಯಾಟವಯ್ಯಾ

ಎರಡು ವರ್ಷಗಳ ಹಿಂದೆ ನನ್ನನ್ನು ಇಬ್ಬರು ಭೇಟಿ ಮಾಡಿ, ತಾವು ಗೊಂಬೆ ಕಲೆ ಬಗ್ಗೆ ಮಾಹಿತಿ ಸಂಗ್ರಹ, ಅಧ್ಯಯನ...
ಗೊಂಬೆಯಾಟವಯ್ಯಾ
Updated on: 

ಎರಡು ವರ್ಷಗಳ ಹಿಂದೆ ನನ್ನನ್ನು ಇಬ್ಬರು ಭೇಟಿ ಮಾಡಿ, ತಾವು ಗೊಂಬೆ ಕಲೆ ಬಗ್ಗೆ ಮಾಹಿತಿ ಸಂಗ್ರಹ, ಅಧ್ಯಯನ ಮಾಡುತ್ತಿರುವುದಾಗಿಯೂ, ತಮ್ಮ ದೇಶದಲ್ಲಿ ಗೊಂಬೆಗಳದೇ ಒಂದು ಮ್ಯೂಸಿಯಂ ಮಾಡಲಾಗಿದ್ದು, ಅಲ್ಲಿ ಜಗತ್ತಿನ ಎಲ್ಲ ಮಾದರಿ ಗೊಂಬೆಗಳನ್ನು ಸಂಗ್ರಹಿಸಿಟ್ಟಿರುವುದಾಗಿಯೂ ಹೇಳಿದರು.
ಗೊಂಬೆ ಕಲೆ, ಕಲಾವಿದರನ್ನು ಕುರಿತು ಸುಮಾರು 25 ವರ್ಷಗಳಿಂದ ವ್ಯಾಪಕ ಕ್ಷೇತ್ರ ಕಾರ್ಯ ಮಾಡಿ, ಪುಸ್ತಕಗಳನ್ನು ಬರೆದು, ಆ ಕಲೆ, ಕಲಾವಿದರ ಉಳಿವಿನ ಬಗೆಗೂ ಸಹಜ ಕಾಳಜಿ ಇಟ್ಟುಕೊಂಡ ನನಗೆ, ನಮ್ಮಲ್ಲಿಲ್ಲದ ಒಂದು ವಿಶೇಷ ಮಾನ್ಯತೆ, ಅವಕಾಶ ವಿದೇಶದಲ್ಲಿರುವುದು ಕೇಳಿ ರೋಮಾಂಚನವಾಯಿತು. ಅಂಥಾ ಜಾಗದಲ್ಲಿ ಕರ್ನಾಟಕದ ಮಾದರಿಗಳೂ ಸೇರುವುದು ತಪ್ಪೇನೂ ಅಲ್ಲ ಎಂದು, ಒಬ್ಬ ಅಧ್ಯಯನಕಾರನಾಗಿ ಸಹಜವಾಗಿಯೇ ಭಾವಿಸಿದೆ. ಅಂತೆಯೇ, ಅವರಿಗೆ ಅಚ್ಚಟ್ನಳ್ಳಿಯ- ಇಡಿ ದಕ್ಷಿಣ ಭಾರತದಲ್ಲಿಯೇ ಬೇರಲ್ಲೂ ಉಳಿದಿರದ, ಬಹು ಅಪರೂಪದ ಮಾದರಿಯ- ಗೊಂಬೆಯಾಟ ತೋರಿಸಿದಾಗ, ಜಗತ್ತಿನಲ್ಲೇ ಈ ಬಗೆಯವನ್ನು ಬೇರೆಲ್ಲೂ ನೋಡಿಲ್ಲ ಎಂದು ಅವರು ಉದ್ಗರಿಸಿದರು.
ಅವರು ಮತ್ತೆ ಬಂದಾಗ ಚಿಂತಾಮಣಿ ಬಳಿಯ ಗ್ರಾಮವೊಂದರಲ್ಲಿ ರಾತ್ರಿ ವೇಳೆ ನಡೆದ ಆಳೆತ್ತರದ ಚಿತ್ತಾರ ಗೊಂಬೆಯಾಟ ನೋಡಲು ಕರೆದೊಯ್ದೆ. ಸಹಜವಾದ ಗ್ರಾಮೀಣ ಪರಿಸರದ ಆ ಪ್ರದರ್ಶನ ನನಗೂ ಉಪಯೋಗವಾಯಿತು.    ಆದರೆ, ಮುಂದೆ ಒಂದೆರಡು ಕಡೆ ಹೋದಾಗ, ಅವರು ಗೊಂಬೆಗಳ ಫೋಟೋ ಅಷ್ಟೇ ತೆಗೆದುಕೊಳ್ಳದೆ, ತೀರಾ ಹಳೆಯ ಗೊಂಬೆಗಳನ್ನು ಪಡೆಯಲೂ ಕಾತರಿಸುತ್ತಿರುವುದು ಗಮನಕ್ಕೆ ಬಂತು. ಕುಡರ್ ಗ್ರಾಮದಲ್ಲಿ ನನ್ನ ಸೂಚನೆಯನ್ನೂ ಮೀರಿ, ಕಣ್ತಪ್ಪಿಸಿ, ಕಲಾವಿದರೇ ಕೆಲವು ಗೊಂಬೆಗಳನ್ನು ಅವರಿಗೆ ಮಾರಾಟ ಮಾಡಿದ್ದು ಬಳಿಕ ತಿಳಿಯಿತು. ಅವು ಹಳೆ ಮಾದರಿಯ ಚಿತ್ತಾರ ಗೊಂಬೆಗಳು.
ಇಡಿ ಒಂದು ಸನ್ನಿವೇಶವನ್ನೋ, ಪಾತ್ರವನ್ನೋ ಬಹು ನಾಜೂಕಾಗಿ ಚಿತ್ರಿಸುವ ಅವು ಒಂದು ಅದ್ಭುತವಾದ ಪೇಂಟಿಂಗ್‌ನ ಅನುಭವ ನೀಡುತ್ತವೆ. ಇಂಥಾ, ರಕ್ಷಕರಿಲ್ಲದ ಗೊಂಬೆಗಳನ್ನು ನಾವು ರಕ್ಷಣೆ ಮಾಡುತ್ತೇವೆಂದೂ, ನಿಮ್ಮ ಫೋಟೋ ದೊಡ್ಡದಾಗಿ ಹಾಕುತ್ತೇವೆಂದೂ ವಿದೇಶಿಯರು ಹೇಳಿದಾಗ ತಮ್ಮ ಗೊಂಬೆ ಮೆಚ್ಚಿ ಅಷ್ಟು ದೂರದಿಂದ ಬಂದಿದ್ದಾರೆ ಎಂದು ಪರವಶರಾಗಿ ಗೊಂಬೆ ಕೊಡುವವರ ಸಂಖ್ಯೆಯೂ ಕಡಿಮೆಯೇನಲ್ಲ. ಗೊಂಬೆ ಕೊಡಬೇಡಿ- ಎಂಬ ನನ್ನ ಒಳ ಮಾತನ್ನು, ನಮಗೆ ಸಿಗುವ ಅಷ್ಟಿಷ್ಟು ಅವಕಾಶವನ್ನು ಇವರು ತಪ್ಪಿಸುತ್ತಿದ್ದಾರೆ ಎಂದೇ ಭಾವಿಸುವ ಕಲಾವಿದರೂ ನಮ್ಮಲ್ಲಿದ್ದಾರೆ.
ಈ ನಡುವೆ ನನಗೆ ಮೊಬೈಲ್‌ನಲ್ಲಿ ಆಕ್ರೋಶದ ಧ್ವನಿಯ ಆರೋಪದ ಕರೆಯೊಂದು ಬಂತು. ನಾವು ಅವರನ್ನು ಮೊದಲು ಭೇಟಿ ಮಾಡದ್ದು ಅವರಿಗೆ ಸಿಟ್ಟು ಬರಿಸಿದಂತಿತ್ತು. ವಿದೇಶಿಯರ ಭೇಟಿಯನ್ನು ತಮಗೆ ತಪ್ಪಿಸುತ್ತಿದ್ದಾರೆಂದೂ, ತಮಗೆ ಸಿಗಬೇಕಾದ ವಿದೇಶ ಪ್ರವಾಸದ ಅವಕಾಶ ಬೇರೆಯವರಿಗೆ ಹೋದೀತು ಎಂದೂ ಅವರು ತಪ್ಪು ತಿಳಿದಿರಬಹುದೆಂದು ನಾನು ತಕ್ಷಣ ಭಾವಿಸಿದೆ. ಆದರೆ, ಅವರ ಆಕ್ರೋಶದ ನುಡಿ ಕೇಳಿದ ಈ ವಿದೇಶಿಯರು, ಸಿಡುಕಿ, ಸರ್ಕಾರದ ಕಾರ್ಯಕ್ರಮದ ಮೇಲೆ ತಮ್ಮ ದೇಶಕ್ಕೆ ಭೇಟಿ ನೀಡಿದ್ದ ದೆಹಲಿಯ ಸಚಿವರೊಬ್ಬರು ಉಚಿತವಾಗಿ ನೀಡಲು ತಂದಿದ್ದ ಟನ್‌ಗಟ್ಟಲೆ ಆಲ್ಫೋನ್ಸ್ ಮಾವಿನ ಹಣ್ಣನ್ನು ಹಣಕ್ಕೆ ಮಾರಿಕೊಡಲು ತಮಗೆ ಸಾಧ್ಯವೇ ಎಂದು ಗುಟ್ಟಾಗಿ ಕೇಳಿದ್ದರಿಂದ ಹಿಡಿದು, ಕಲಾ ಪ್ರದರ್ಶನ, ಪ್ರವಾಸ ಇತ್ಯಾದಿ ಕಾರಣಕ್ಕೆ ಬರುವ ಎಷ್ಟೊಂದು ಕಲಾವಿದರು ಇಲ್ಲಿ ತಮ್ಮ ಗೊಂಬೆಗಳನ್ನು ಮಾರಾಟ ಮಾಡಿ ಹೋಗುತ್ತಿದ್ದಾರೆ, ಹಿಂದಿನ ಕೆಲ ವಿದೇಶಿ ಅಧ್ಯಯನಕಾರರು ತಂದಿದ್ದ ಹಲವಾರು ಗೊಂಬೆಗಳು ಇಂದು ಅನಾಥವಾಗಿ ಬಿದ್ದು ಹಾಳಾಗಿವೆ.


ಆದರೆ ತಾವು ಇವನ್ನೆಲ್ಲಾ ವ್ಯವಸ್ಥಿತವಾಗಿ ಕಾಯ್ದಿರಿಸಿ ಸಂರಕ್ಷಣೆ ಮಾಡುವ ಮಹೋನ್ನತ
ಉದ್ದೇಶದಿಂದ ಹೀಗೆ ದೇಶದೇಶ ತಿರುಗುತ್ತಿದ್ದೇವೆ. ಇದಕ್ಕೂ ಇವರು ಅಡ್ಡಿ ಮಾಡುತ್ತಿದ್ದಾರೆ... ಇತ್ಯಾದಿಯಾಗಿ ಹಲವು ಸಂಗತಿಗಳನ್ನು ಬಿಚ್ಚಿಟ್ಟರು.
ಕೆಲವು ಕಲಾವಿದರು ಪೆಟ್ಟಿಗೆ ಪೆಟ್ಟಿಗೆ ತುಂಬಿದ ಗೊಂಬೆಗಳನ್ನು ತಾವಾಗಿ ಕೊಟ್ಟಿದ್ದಾರೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ತಮ್ಮ ಕೆಲಸದ ಬಗ್ಗೆ ಪ್ರಚಾರ ದೊರೆತಿದೆ. ತಮ್ಮ ದೇಶದ ಸರ್ಕಾರ ಸಹ ಈಚೆಗೆ ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಿದೆ ಇತ್ಯಾದಿಯಾಗಿಯೂ ಅವರು ಹಾದಿ ಮಧ್ಯೆ ನನಗೆ ಹೇಳಿದ್ದರು. ಅತ್ಯಂತ ಕಟ್ಟುನಿಟ್ಟಿನ ತಪಾಸಣೆ ಇದ್ದ ಒಂದು ದೇಶದಿಂದ ಎರಡು ಪೆಟ್ಟಿಗೆಗಳ ತುಂಬ ಗೊಂಬೆಗಳನ್ನು ತಾವು ಉಪಾಯದಿಂದ ಸ್ಮಗ್ಲಿಂಗ್ ಮಾಡಿ ತಂದಿದ್ದಾಗಿ ಆತ ಹೇಳಿಕೊಂಡಿದ್ದೂ ಆಯಿತು.
ಸ್ಮಗ್ಲಿಂಗ್ ಎಂಬ ಪದವನ್ನು ಆತ ಉದ್ದೇಶಾತ್ಮಾಕ ಹೇಳಿದನೋ ಅಕಸ್ಮಾತ್ ಬಳಸಿದನೋ ಗೊತ್ತಿಲ್ಲ. ಅಲ್ಲಿಯೇ ಹಾಗಾದರೆ, ಇನ್ನು ನಿಮ್ಮ ದೇಶದ್ದು ಯಾವ ಲೆಕ್ಕ ಎಂಬ ಇಂಗಿತವೂ ಆತನದ್ದಿರಬಹುದು. ಏನೇ ಆದರೂ ಆತನ ಕಡೆಯವರು ಹೀಗೆ ಪುಕ್ಕಟೆಯಾಗಿ ಅತ್ಯಂತ ನಿಕೃಷ್ಠ ಬೆಲೆಗೆ ಅವನ್ನು ಒಯ್ಯುವುದು ನನಗೆ ಸರಿ ಎನಿಸಲಿಲ್ಲ. ಅಂತೆಯೇ, ನನ್ನ ಇನ್ನೊಂದು ಕೆಲಸದ ನೆಪ ಮಾಡಿ ನಾನು ಅವರಿಂದ ಕಳಚಿಕೊಂಡೆ. ಹೊರಡುವ ಮೊದಲು ನನ್ನ ದೇಸೀ ಪ್ರಜ್ಞೆಯ ಮೂಲಕ ಆತನಿಗೆ ನಾನು ಸ್ಪಷ್ಟವಾಗಿ ಹೇಳಿದ್ದು ಇದು- 'ನೀವು ಒಳ್ಳೆ ಮ್ಯೂಸಿಯಂ ಮಾಡಿ ಸಂರಕ್ಷಣೆ ಮಾಡುತ್ತಿರುವುದು ಪ್ರಶಂಸನೀಯವೇ. ಆದರೂ, ಎಲ್ಲ ಅಮೂಲ್ಯ ಗೊಂಬೆಗಳನ್ನು ಹೀಗೆ ಒಯ್ಯುವುದು ಸರಿಯಲ್ಲ. ಕಲಾವಿದರು ಸ್ವತಃ ಕೊಡಬಹುದಾದ ಗೊಂಬೆಗಳನ್ನು ಉಚಿತವಾಗಿ ನೀಡಿ ಎಂದು ಒತ್ತಾಯಿಸಬೇಡಿ. ಒಳ್ಳೆಯ ಮೌಲ್ಯ ನೀಡಿ. ಆ ಹಣದಿಂದ ಅವರು ಬೇರೆ ಗೊಂಬೆಗಳನ್ನು ಮಾಡಿಸಿಕೊಳ್ಳಲಿ. ಅಥವಾ ನೀವೇ ಹೊಸ ಗೊಂಬೆ ಮಾಡಿಸಿಕೊಟ್ಟು ಅವರ ಹಾಳಾದ ಗೊಂಬೆ ಪಡೆಯಿರಿ. ಹಂಪಿಯ ಹಗಲು ವೇಷದ ಯುವ ಕಲಾವಿದನನ್ನು ವಿದೇಶೀ ಕಲಾವಿದರೊಬ್ಬರು ದತ್ತು ಪಡೆದು ಆ ಕಲೆ, ಕಲಾವಿದ ಎರಡಕ್ಕೂ ಆಸರೆಯಾದಂತೆ ನೀವೂ ಒಬ್ಬ ಅರ್ಹ ಚಿತ್ತಾರಗೊಂಬೆ ಕಲಾವಿದನ ಪೋಷಣೆ ಮಾಡಿ, ಇಲ್ಲಿನ ಕಲೆ ಬೆಳೆಸಿರಿ. ಇಲ್ಲಿಯೇ ಒಂದು ಮ್ಯೂಸಿಯಂ ಮಾಡಿ, ಇಲ್ಲಿನ ಕಲಾಸಂಪತ್ತು ಇಲ್ಲಿಯೇ ಉಳಿವಂತೆ ಮಾಡಿ. ಆ ಮೂಲಕ, ನಮ್ಮ ಗೊಂಬೆಗಳನ್ನು ನೋಡಲು ನಾವು ನಿಮ್ಮ ದೇಶಕ್ಕೆ ಬರಬೇಕಾದ ವಿಪರ್ಯಾಸವನ್ನು ತಪ್ಪಿಸಿ...'
ನಾನು ಹೇಳಿದ್ದನ್ನೆಲ್ಲಾ ಕೇಳಿದ ಮೇಲೆ, 'ನೀವು ಹೇಳುವುದೆಲ್ಲಾ ಸರಿ. ಆದರೆ....' ಎಂದ ಆ ವಿದೇಶಿ.
ಮಾರನೇ ದಿನ ನನಗೆ ಗೊತ್ತಿದ್ದವರೆಲ್ಲರಿಗೂ ಕರೆ ಮಾಡಿ ಈ ಪರಿಸ್ಥಿಯ ಬಗ್ಗೆ ಪ್ರಸ್ತಾಪಿಸಿದೆ. ಗೊಂಬೆಗಳು ಬೇರೆ ಬೇರೆ ಮೂಲದಲ್ಲಿ ವಿದೇಶಗಳಿಗೆ ಹೋಗುತ್ತಿರುವುದನ್ನು ಈ ಕ್ಷೇತ್ರದ ನಿಕಟ ಸಂಪರ್ಕವಿರುವ ಅವರು ಕೆಲವರು ಒಪ್ಪಿಕೊಂಡರು. ಕಲಾವಿದರ ಸಂಕಷ್ಟ ಪರಿಸ್ಥಿತಿ, ಮುಗ್ಧತೆ, ಅವಕಾಶ ಪಡೆವ ಆಕರ್ಷಣೆಯಲ್ಲಿ ಅವರು ಹೀಗೆ ಗೊಂಬೆ ಕಳೆದುಕೊಳ್ಳುತ್ತಿರುವುದನ್ನು ಅವರೂ ಹೇಳಿದರು. ತಾವು ಕೇಳಿದರೆ ಇಲ್ಲ ಎಂದು ನಿರಾಕರಿಸುವ ಸಂಬಂಧಿಗಳು ಹೊರಗಿನವರಿಗೆ ಹೇಗೆ ಮರುಳಾಗಿ ಕೊಟ್ಟುಬಿಡುತ್ತಾರೆಂದೂ ಅಲವತ್ತುಕೊಂಡರು.
ಒಳಹೊರಗನ್ನೆಲ್ಲಾ ಜಾಲಾಡಿದ ಮೇಲೆ, ವಿದೇಶಿಯರು ಗೊಂಬೆಗಳನ್ನು ಒಯ್ಯಲೇಬಾರದೆಂದು ಸರ್ಕಾರ ಬಿಗಿ ಕಾನೂನು ಮಾಡುವವರೆಗೆ ಅವು ಸಾಗುತ್ತಲೇ ಇರುತ್ತವೆ. ಅಂದಂದಿನ ಕಷ್ಟದ ಪರಿಹಾರಕ್ಕೆ ಕಲಾವಿದರು ಯಾರ ಕಿವಿ ಮಾತೂ ಕೇಳದೆ ಮುಂದಾಗುತ್ತಿರುತ್ತಾರೆ. ಈ ಎಲ್ಲಕ್ಕೆ ಪರಿಹಾರವಾಗಿ ನಾವೇ ಒಂದು ಗೊಂಬೆಗಳ ಮ್ಯೂಸಿಯಂ ಮಾಡುವುದು ಒಳ್ಳೆಯದೆನಿಸಿತು.
ಈ ಪ್ರಸ್ತಾಪಕ್ಕೆ ಮುಂದಾಗಿ ನಿಂತವರು ಗುಂಡೂರಾಜ್. ಕೃಷ್ಣಯ್ಯ, ರಾಮಚಂದ್ರಯ್ಯ ಅವರೂ ಸಮ್ಮತಿಸಿದರು. ನನ್ನ ಕೋರಿಕೆಯ ಮೇರೆಗೆ ಅವರೂ ಗೊತ್ತಿರುವವರಿಗೆಲ್ಲ ಕರೆ ಮಾಡಿ ಗೊಂಬೆಗಳನ್ನು ಹೊರಗಿನವರಿಗೆ ಕೊಡದಿರುವಂತೆ ಒತ್ತಾಯ ಮಾಡಲು ಮುಂದಾದರು. ಮೂರ್ನಾಳಿನ ಕಲಾವಿದರು ತಮ್ಮಲ್ಲಿನ ಹಳೆ ಗೊಂಬೆಗಳನ್ನು ನಮಗೆ ಕೊಡಲು ಒಪ್ಪಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೂ ಗೊಂಬೆಗಳ ಸಂರಕ್ಷಣೆಯ ಮಹತ್ವವನ್ನು ಗಮನಕ್ಕೆ ತಂದದ್ದಾಯಿತು.
ಇಂಥದ್ದೇನಾದರೂ ಸ್ಥಳೀಯವಾಗಿ ಮಾಡಬಹುದು. ಆದರೆ, ಹೊರ ದೇಶಕ್ಕೆ ಪಲಾಯನವಾಗುವ ಗೊಂಬೆಗಳ ವಿಚಾರ ಹೇಗೆ? ಅದು, ರಾಷ್ಟ್ರೀಯ ಮಟ್ಟದಲ್ಲಿ ಆಗಬೇಕಾದ ವ್ಯವಸ್ಥೆ. ಸುಮಾರು, 50 ವರ್ಷಗಳಿಗೂ ಹಿಂದಿನ ಎಲ್ಲ ಕಲಾತ್ಮಕ ವಸ್ತುಗಳ ಸಾಗಾಣಿಕೆಯನ್ನು ನಿರ್ಬಂಧಕ್ಕೆ ಒಳಪಡಿಸಬೇಕು. ಈಗಾಗಲೇ ಹೊರ ಹೋಗಿರುವ ಅಂಥಾ ಕೃತಿಗಳನ್ನು ಅಥವಾ ಅವುಗಳ ಪ್ರತಿಕೃತಿಗಳನ್ನಾದರೂ ಮರಳಿ ತರುವ ಪ್ರಯತ್ನ ಆಗಬೇಕು. ಎತ್ತುಗಳನ್ನು ಕೊಂಡವನೂ ತನ್ನ ಊರಿಗೆ ಸಾಗಿಸಲು ರಹದಾರಿ ಪತ್ರವನ್ನು ಇಟ್ಟುಕೊಳ್ಳುವ ಪದ್ಧತಿ ನಮ್ಮ ಹಳ್ಳಿಗಳಲ್ಲಿದೆ. ಮನೆ ಸಾಮಗ್ರಿ ಸಾಗಿಸುವ ಚಾಲಕನೂ ಒಂದು ದೃಢೀಕರಣ ಪತ್ರವನ್ನು ಚೆಕ್‌ಪೋಸ್ಟ್‌ನಲ್ಲಿ ತೋರಿಸಲು ಇಟ್ಟುಕೊಳ್ಳಬೇಕಾಗಿರುತ್ತದೆ. ಆದರೆ, ನಮ್ಮ ನಾಡಿನ ಇಂಥ ಮೌಲಿಕ ಕಲಾಕೃತಿಗಳು ಲಗೇಜ್ ಪೆಟ್ಟಿಗೆಯಲ್ಲಿ ಕೂತು ಸುಲಭವಾಗಿ ವಿದೇಶಕ್ಕೆ ಹಾರಿದರೂ ಅದನ್ನು ಕೇಳುವವರಿಲ್ಲ!
ವಿದೇಶದಲ್ಲಿನ ಸಂಪತ್ತನ್ನು ವಾಪಸು ತಂದೇ ತರುತ್ತೇವೆಂದು ಅತಿ ಹುಮ್ಮಸ್ಸಿನ ಮಾತಾಡುತ್ತಿರುವ ರಾಜಕಾರಣಿಗಳು ನಮ್ಮ ಅಮೂಲ್ಯ ಕಲಾ ಸಂಪತ್ತನ್ನು ಮುಖ್ಯವಾಗಿ ವಾಪಾಸು ತರಬೇಕಾದ ತುರ್ತು ಇದೆ ಎಂಬುದನ್ನು ಅದೇಕೆ ಮರೆತಿದ್ದಾರೆಯೋ! ತಿಳಿಸಿ ಹೇಳುವವರಾರು?ಟಿ

-ಡಾ. ಟಿ. ಗೋವಿಂದರಾಜು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com