ಧೌಮ್ಯ ಋಷಿಗಳ ಶಿಷ್ಯರಲ್ಲಿ ಅರುಣಿ ಎಂಬ ಶಿಷ್ಯನಿದ್ದ. ಜೋರಾಗಿ ಮಳೆ ಬರುತ್ತಿತ್ತು. ಹೊಳೆಯಿಂದ ನೀರು ಗದ್ದೆಗೆ ನುಗ್ಗದಂತೆ ತಡೆಯಿರಿ ಎಂದು ತನ್ನೆಲ್ಲಾ ಶಿಷ್ಯಂದಿರಿಗೆ ಧೌಮ್ಯ ಆಜ್ಞಾಪಿಸಿದರು. ಆದರೆ ಮಳೆ ರಭಸವಾಗಿ ಸುರಿಯುತ್ತಿತ್ತು. ಎಷ್ಟೇ ಪ್ರಯತ್ನಿಸಿದರು ಕಟ್ಟೆ ಒಡೆಯುವುದನ್ನು ತಪ್ಪಿಸಲು ಸಾಧ್ಯಾವಾಗುತ್ತಿರಲಿಲ್ಲ. ಆಗಲೇ ಕತ್ತಲೆ ಆವರಿಸಿತ್ತು. ಇನ್ನು ತಮ್ಮಿಂದಾಗದು ಎಂದು ನಿರ್ಧರಿಸಿದ ಶಿಷ್ಯರು ಕೈಚೆಲ್ಲಿ ಹಿಂದುರಿಗಿದರು. ತುಂಬಾ ದಣಿದಿದ್ದರಿಂದ ಆಯಾಸಗೊಂಡಿದ್ದ ಎಲ್ಲರಿಗೂ ನಿದ್ರೆ ಆವರಿಸಿತ್ತು. ಬೆಳಗೆದ್ದು ನೋಡಿದಾಗ ಅರುಣಿ ಕಾಣುತ್ತಿರಲಿಲ್ಲ. ಗುರುಗಳ ಬಳಿಯೂ ಇರಲಿಲ್ಲ. ಎಲ್ಲರೂ ಗದ್ದೆ ಬಳಿ ಬಂದಾಗ ನದಿಯ ನೀರು ಗದ್ದೆಗೆ ನುಗ್ಗಿರಲೇ ಇಲ್ಲ. ಒಡೆದಿದ್ದ ಜಾಗದಲ್ಲಿ ನೀರು ಗದ್ದೆಗೆ ಹೋಗದಂತೆ ನಿಲ್ಲಿಸಲು ಸ್ವತಃ ಅರುಣಿಯೇ ಕಟ್ಟೆಗೆ ಅಡ್ಡವಾಗಿ ಮಲಗಿದ್ದನು. ರಾತ್ರಿ ಇಡೀ ಚಳಿ ಮಳೆಯಲ್ಲಿ, ಊಟವನ್ನೂ ಮಾಡದೇ ಮಲಗಿದ್ದ ಅರುಣಿಯನ್ನು ನೋಡಿ ಎಲ್ಲರಿಗೂ ಪ್ರೀತಿ ಮೂಡಿತು. ಎಲ್ಲರೂ ಅರುಣಿಯ ಬಳಿಗೆ ಹೋಗಿ ಅವನನ್ನು ಎಬ್ಬಿಸಿದರು. ಗುರುಗಳು ಅರುಣಿಯ ಬಳಿಗೆ ಹೋಗಿ ಪ್ರೀತಿಯಿಂದ ಅವನ ತಲೆ ಸವರಿದರು. ಇದನ್ನು ನೋಡಿ ಎಲ್ಲ ಶಿಷ್ಯರ ಕಣ್ಣುಗಳಲ್ಲಿ ನೀರು ಬಂತು.