ನೈಮಿಷಾರಣ್ಯ

ಒಂದು ದಿನ ನೈಮಿಷಾರಣ್ಯದಲ್ಲಿ ಸೂತ ಮಹರ್ಷಿಗಳು ಶೌನಕಾದಿ ಋಷಿಗಳಿಗೆ ಸತ್ಯನಾರಾಯಣ ...
ನೈಮಿಷಾರಣ್ಯ
Updated on: 

ಒಂದು ದಿನ ನೈಮಿಷಾರಣ್ಯದಲ್ಲಿ ಸೂತ ಮಹರ್ಷಿಗಳು ಶೌನಕಾದಿ ಋಷಿಗಳಿಗೆ ಸತ್ಯನಾರಾಯಣ ವೃತಕಥೆಯನ್ನು ಹೇಳಿದರು ಎಂಬ ಪ್ರಸ್ತಾಪ ಸತ್ಯನಾರಾಯಣ ಕತೆಯಲ್ಲಿ ಬರುತ್ತದೆ. ಪದ್ಮಪುರಾಣ, ಸ್ಕಂದಪುರಾಣ, ವಾಮನಪುರಾಣ, ಶಿವಪುರಾಣ, ಮಹಾಭಾರತ, ರಾಮಾಯಣ ಹೀಗೆ ಎಲ್ಲ ಪ್ರಮುಖ ಧರ್ಮಗ್ರಂಥಗಳಲ್ಲೂ ನೈಮಿಷಾರಣ್ಯದ ಉಲ್ಲೇಖವಿದೆ.
ನೈಮಿಷಾರಣ್ಯವೆಂದರೆ ಹಿಂದೆ ಇದ್ದು ಈಗ ಇಲ್ಲದಿರುವ ಒಂದು ಕಾಲ್ಪನಿಕ ಸ್ಥಳವಾಗಿರಬಹುದು ಎಂದು
ನಾನು ಭಾವಿಸಿದ್ದೆ. ಆದರೆ ಉತ್ತರಭಾರತದ ಪ್ರವಾಸ ಕೈಗೊಂಡಾಗ ನೈಮಿಷಾರಣ್ಯವನ್ನು ನೋಡುವ ಸುಯೋಗ ಒದಗಿ ಬಂತು.
ನೈಮಿಷಾರಣ್ಯ ಈಗ ಹಿಂದಿನಷ್ಟು ದಟ್ಟ ಅರಣ್ಯವಾಗಿರದಿದ್ದರೂ ಆ ಹೆಸರಿನ ಕಾಡಂತೂ ಇದೆ. ಅದರಲ್ಲಿ
ಅದೇ ಹೆಸರಿನ ಪುಟ್ಟ ಪಟ್ಟಣವೂ ಇದೆ. ಪಕ್ಕದಲ್ಲಿಯೇ ಗೋಮತಿ ನದಿ ಹರಿಯುತ್ತದೆ.
ನೈಮಿಷಾರಣ್ಯದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಅರಣ್ಯದ ಮಧ್ಯದಲ್ಲಿಯೇ ರಸ್ತೆ ನಿರ್ಮಿಸಿದ್ದಾರೆ. ಇಲ್ಲಿಯ ದೇವಸ್ಥಾನಗಳೆಲ್ಲ ಎತ್ತರದ ಸ್ಥಾನಗಳಲ್ಲಿವೆ.
ಇಲ್ಲಿನ ಹನುಮಾನಗುಡಿಯಲ್ಲಿ ರಾಮಲಕ್ಷಣರನ್ನು ಭುಜದ ಮೇಲೆ ಕೂಡಿಸಿಕೊಂಡ ಏಕಶಿಲೆಯಲ್ಲಿ ಕೆತ್ತಿದ ಬೃಹತ್ತಾದ ಹನುಮಂತನ ವಿಗ್ರಹವಿದೆ. ಒಂದು ಬೆಟ್ಟದ ಮೇಲೆ ವ್ಯಾಸಪೀಠ, ಶುಕಮುನಿಗಳು ಪರೀಕ್ಷಿತರಾಜನಿಗೆ ಭಾಗವತದ ಕತೆಯನ್ನು ಹೇಳಿದ ಸ್ಥಳ, ಸೂತಮಹರ್ಷಿಗಳು ಶೌನಕಾದಿ ಋಷಿಗಳಿಗೆ ಮೊದಲು ಸತ್ಯನಾರಾಯಣ ವೃತಕತೆಯನ್ನು ಹೇಳಿದ ಸ್ಥಳ ಮುಂತಾದವುಗಳಿವೆ.
ಚಕ್ರತೀರ್ಥ
ನೈಮಿಷಾರಣ್ಯದಲ್ಲಿರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಕ್ರತೀರ್ಥವೂ ಒಂದು. ಪ್ರತಿದಿನ ವಿಶ್ವದಲ್ಲಿರುವ ಎಲ್ಲ ತೀರ್ಥಗಳು ಇಲ್ಲಿ ಬರುವುವೆಂಬ ಪ್ರತೀತಿ ಇದೆ. ಚಕ್ರತೀರ್ಥದ ಪೂರ್ವಭಾಗದಲ್ಲಿ ಶೃಂಗಿ ಋಷಿಯ ಸಮಾಧಿ ಇದೆ. ಈ ಋಷಿಯೇ ಸಂತಾನ ಪಡೆಯಲು ದಶರಥ ಮಹಾರಾಜನಿಗೆ ಪುತ್ರಕಾಮೇಷ್ಟಿ ಯಾಗ ಮಾಡಿಸಿದ್ದು. ಚಕ್ರತೀರ್ಥದ ನೈರುತ್ಯ ಭಾಗದಲ್ಲಿ ಪಾಂಡವೋಂಕಾ ಕಿಲಾ ಇದೆ. ಇದು ಪಾಂಡವರು ಅಜ್ಞಾತವಾಸದಲ್ಲಿದ್ದಾಗ ವಾಸವಾಗಿದ್ದ ವಿರಾಟ ರಾಜನ ಕೋಟೆಯಾಗಿತ್ತಂತೆ. ಅಕ್ಬರನು ಬರೆದ 'ಐನೆ ಅಕ್ಬರಿ'ಯಲ್ಲೂ ಈ ಕೋಟೆ ಹಾಗೂ ನೈಮಿಷಾರಣ್ಯದ ಉಲ್ಲೇಖವಿದೆ.
ಲಲಿತಾದೇವಿ ಮಂದಿರ
ಭಾರತದ 52 ಶಕ್ತಿಪೀಠಗಳಲ್ಲಿ ಒಂದಾದ ಶ್ರೀ ಲಲಿತಾದೇವಿ ಮಂದಿರ, ಸೀತಾದೇವಿಯು ಭೂಮಿಯಲ್ಲಿ ಐಕ್ಯಳಾದ ಸ್ಥಳ ಇಲ್ಲಿದೆ.  ನೈಮಿಷಾರಣ್ಯವನ್ನು ಕೇಂದ್ರಬಿಂದುವನ್ನಾಗಿಟ್ಟು 168 ಮೈಲಿಗಳ ಪರಧಿಯಲ್ಲಿ ವೃತ್ತಾಕಾರವಾಗಿ ಸಂಚರಿಸಿದಾಗ ಉತ್ತರ ಭಾರತದ ಎಲ್ಲ ಪವಿತ್ರ ಕ್ಷೇತ್ರಗಳು ಲಭಿಸುತ್ತವೆ. ಇದನ್ನು ಚೌರಾಸಿ ಕೋಸಕಿ ಪರಿಕ್ರಮಾ ಎಂದು ಕರೆಯುತ್ತಾರೆ.ಟಿ

- ಮುರಳೀಧರ ಕುಲಕರ್ಣಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com