

ನಾನು ಸೆಕೆಂಡ್‌ಹ್ಯಾಂಡ್ ಪುಸ್ತಕಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ಗೊತ್ತಾದದ್ದು- ಅದೊಂದು ಮುದಿ ಜಂಟಲ್‌ಮನ್‌ಗಳು ಧೂಳು ತುಂಬಿದ ಕಪಾಟುಗಳ ನಡುವೆ ಬೇಕಾದ ಕೃತಿಗಾಗಿ ಅನಂತಕಾಲ ತಡಕಾಡುವ ಸ್ವರ್ಗ. ಆದರೆ ನಿಜಕ್ಕೂ ಪುಸ್ತಕಪ್ರಿಯ ವ್ಯಕ್ತಿಗಳ ಸಂಖ್ಯೆ ಕಡಿಮೆ.
ನಮ್ಮ ಅಂಗಡಿಯಲ್ಲಿ ಕುತೂಹಲಕಾರಿ ಕೃತಿಗಳ ಸಂಗ್ರಹವೇ ಇತ್ತು. ಆದರೆ ಒಳ್ಳೆಯ ಪುಸ್ತಕವನ್ನು ಕಳಪೆಯದರಿಂದ ಪ್ರತ್ಯೇಕಿಸಬಲ್ಲವರು ನಮ್ಮ ಗಿರಾಕಿಗಳಲ್ಲಿ ಹತ್ತು ಶೇಕಡ ಇದ್ದರೋ ಇಲ್ಲವೋ.
ಸಾಹಿತ್ಯಪ್ರಿಯರ ನಡುವೆ, ಮೊದಲ ಮುದ್ರಣದ ಅಪರೂಪದ ಪುಸ್ತಕಗಳನ್ನು ಹುಡುಕುವವರಿದ್ದರು. ಸಾಮಾನ್ಯವಾಗಿದ್ದವರೆಂದರೆ ಅಗ್ಗದ ಪಠ್ಯಪುಸ್ತಕಗಳಿಗಾಗಿ ಎಡತಾಕುವ ವಿದ್ಯಾರ್ಥಿಗಳು. ಇನ್ನು ತಮ್ಮ ಮೈದುನರಿಗೆ ಬರ್ತ್‌ಡೇ ಗಿಫ್ಟ್ ಕೊಡಲೆಂದು ಏನಾದರೊಂದು ಹುಡುಕುತ್ತ ಬರುವ ಹೆಂಗಸರು ಬಲೇ ಸಾಮಾನ್ಯವಾಗಿದ್ದರು.
ಬೇರೆ ಕಡೆ ತಲೆಹರಟೆ ವ್ಯಕ್ತಿಗಳೆನ್ನಿಸಿಕೊಳ್ಳಬಲ್ಲಂತಹ ಆಸಾಮಿಗಳು, ಇಲ್ಲಿ ಮಾತ್ರ ವಿಶೇಷ ಅವಕಾಶಗಳನ್ನು ಪಡೆಯುತ್ತಿದ್ದವರಾಗಿದ್ದರು. ಉದಾಹರಣೆಗೆ, 'ಅಯೋಗ್ಯ ವ್ಯಕ್ತಿ'ಗಾಗಿ ಪುಸ್ತಕ ಹುಡುಕುತ್ತಿದ್ದ ಲೇಡಿ (ಇದು ಸಾಮಾನ್ಯವೇ ಬಿಡಿ). ಇನ್ನೊಬ್ಬಾಕೆ, ತಾನು 1897ರಲ್ಲಿ ಓದಿದ್ದ ಯಾವುದೋ 'ಶ್ರೇಷ್ಠ' ಪುಸ್ತಕವನ್ನು ಹುಡುಕುವವಳು. ದುರದೃಷ್ಟವಶಾತ್, ಅವಳಿಗೆ ಅದರ ಹೆಸರು, ಅದನ್ನು ಬರೆದವರ್ಯಾರು, ಅದು ಯಾವುದರ ಬಗೆಗೆ ಬರೆದಿದ್ದ ಪುಸ್ತಕ- ಏನೊಂದೂ ಗೊತ್ತಿರಲಿಲ್ಲ. ಅವಳಿಗೆ ಗೊತ್ತಿದ್ದದ್ದೆಂದರೆ- ಆ ಪುಸ್ತಕಕ್ಕೆ ಕೆಂಪು ಬೈಂಡ್ ಇತ್ತೆಂಬುದು ಮಾತ್ರವೇ!
ಇವಲ್ಲದೆ, ಸೆಕೆಂಡ್‌ಹ್ಯಾಂಡ್ ಪುಸ್ತಕದಂಗಡಿಗಳನ್ನು ಕಾಡುವ ಎರಡು ಬಗೆಯ ಕೀಟಗಳಿವೆ. ಒಂದು- ಪ್ರತಿದಿನ, ಒಮ್ಮೊಮ್ಮೆ ದಿನಕ್ಕೆರಡು ಬಾರಿ ಬಂದು ತಮ್ಮ ಅಯೋಗ್ಯ ಪುಸ್ತಕಗಳನ್ನು ನಮಗೆ ದಾಟಿಸಲು ಬಯಸುವ, ಹಳೇ ನಾತ ಹೊಡೆಯುವ ವ್ಯಕ್ತಿಗಳು. ಇನ್ನೊಂದು- ತುಂಬಾ ಪುಸ್ತಕಗಳಿಗೆ ಆರ್ಡರ್ ಮಾಡುವ, ಆದರೆ ಕನಿಷ್ಠ ಕಾಸು ಕೊಡಲೂ ಹಿಂದುಮುಂದು ನೋಡುವ ವ್ಯಕ್ತಿಗಳು. ನಮ್ಮಲ್ಲಿ ಸಾಲ ಕೊಡುವುದಿಲ್ಲ, ಆದರೆ ನಂತರ ಒಯ್ಯುತ್ತೇನೆಂದು ಹೇಳಿ ಒಟ್ಟು ಮಾಡಿಡುವ ಕೃತಿಗಳನ್ನು ಬೇರೆಯಾಗಿಡುತ್ತೇವೆ. ಆದರೆ ಹೀಗೆ ಆರ್ಡರ್ ಮಾಡಿದವರಲ್ಲಿ ಬರುವವರು ಅರ್ಧಾಂಶವೂ ಇಲ್ಲ. ಇದು ಮೊದಲು ನನಗೆ ಸೋಜಿಗವೆನಿಸಿತ್ತು. ಆದ್ಯಾಕೆ ಹೀಗೆ ಮಾಡುತ್ತಾರೆ? ಇವರು ಬರುವುದೇ ಅತ್ಯಂತ ಅಪರೂಪದ, ಬೆಲೆಬಾಳುವ ಹೊತ್ತಿಗೆಗಳನ್ನು ಆರ್ಡರ್ ಮಾಡಲು. ಮತ್ತೆ ಮತ್ತೆ ಅವನ್ನು ತೆಗೆದಿಡಲು ಹೊಳುವ ಅವರು, ಹೋದವರೇ ಮತ್ತೆಂದೂ ಬಾರದೆ ಅದೃಶ್ಯರಾಗುತ್ತಾರೆ. ಅಂಥವರಲ್ಲಿ ಹೆಚ್ಚಿನವರು ಯಾರೂ ತಪ್ಪು ಭಾವಿಸಲಾಗದಂತಹ ಗೀಳುರೋಗಿಗಳು. ತಮ್ಮ ಬಗ್ಗೆ ಎಂಥ ಕಾಲ್ಪನಿಕ ಕಥೆಗಳನ್ನು ಹೇಳುತ್ತಾರೆಂದರೆ, ನಯಾಪೈಸೆಯಿಲ್ಲದೆ ತಾವು ಮಹಾಮಹಾ ಸೌಲಭ್ಯಗಳನ್ನು ಪಡೆದ ಬಗ್ಗೆ. ಅವುಗಳಲ್ಲಿ ಕೆಲವನ್ನಾದರೂ ಅವರೇ ನಂಬಿರುತ್ತಾರೆಂಬುದು ಖಚಿತ. ಲಂಡನ್‌ನಂತಹ ನಗರದಲ್ಲಿ ಇಂಥವರೇ ಎಂದು ದೃಢಪಡಿಸಲಾಗದ ಅರೆಮರುಳರು ಸಾಕಷ್ಟು ಸಂಖ್ಯೆಯಲ್ಲಿ ಬೀದಿ ತಿರುಗುತ್ತಿರುತ್ತಾರೆ. ಅಂಥವರು ಪುಸ್ತಕದಂಗಡಿ ನುಗ್ಗುವ ಸಾಧ್ಯತೆ ಅಧಿಕ. ಯಾಕೆಂದರೆ ಅದು ನೀವು ಯಾವುದೇ ಕಾಸು ಕೊಡದೆ ಸಾಕಷ್ಟು ಸಮಯ ಕಳೆಯಬಹುದಾದ ಕೆಲವೇ ಜಾಗಗಳಲ್ಲೊಂದು. ಇವರ ಬಂಡವಾಳ ಕೊನೆಗೇ ಗೊತ್ತಾಗುವುದು. ಸಾಮಾನ್ಯವಾಗಿ, ಇವರು ತೆಗೆದಿಟ್ಟು ಪುಸ್ತಕಗಳನ್ನು ಇವರು ಹೋದ ಕೂಡಲೇ ವಾಪಸು ರಾಶಿಗೆ ಸೇರಿಸಿಬಿಡುತ್ತೇವೆ. ಇವರೆಂದೂ ಕಾಸು ಕೊಡದೆ ಪುಸ್ತಕ ಒಯ್ಯಲು ಯತ್ನಿಸಿದ್ದಿಲ್ಲ. ಬಹುಶಃ, ಆರ್ಡರ್ ಮಾಡಿಡುವುದರಿಂದಲೇ ತಾವು ಅದಕ್ಕೆ ನಿಜವಾಗಿಯೂ ಹಣ ಕೊಟ್ಟು ಖರೀದಿಸಿದೆವು ಎಂಬ ಭ್ರಮೆಯನ್ನು ಅವರು ಹೊಂದುತ್ತಾರೆಂದು ಕಾಣುತ್ತದೆ.
ನಾವು ಜ್ಯೋತಿಷ್ಯ ಪುಸ್ತಕಗಳಲ್ಲಿ ಸಾಕಷ್ಟು ವ್ಯಾಪಾರ ಮಾಡುತ್ತಿದ್ದೆವು. ಒಮ್ಮೆ ಇವನ್ನು ಒಯ್ದವರು ಮರಳಿ ಬಂದಾಗ, ಕಳೆದ ಬಾರಿಯ ಪುಸ್ತಕ ತಮ್ಮ ವಿಚಾರದಲ್ಲಿ ತುಂಬಾ ನಿಜವಾಯಿತೆಂದು ಹೇಳಿಕೊಳ್ಳುತ್ತಿದ್ದರು. 'ನೀವು ವಿರುದ್ಧ ಲಿಂಗಿಗಳನ್ನು ತುಂಬಾ ಆಕರ್ಷಿಸುವವರು' ಅಥವಾ 'ಒಳ್ಳೆಯತನವೇ ನಿಮ್ಮ ದೌರ್ಬಲ್ಯ' ಎಂದು ಹೇಳುವ ಭವಿಷ್ಯಗಳು ಎಲ್ಲರ ಪಾಲಿಗೂ 'ನಿಜ'ವೇ ಆಗಿರುತ್ತವೆ. ಇನ್ನು ಮಕ್ಕಳ ಪುಸ್ತಕಗಳು ಸಾಕಷ್ಟು ವ್ಯಾಪಾರವಾಗುತ್ತಿದ್ದವು. ಕ್ರಿಸ್‌ಮಸ್ ಸಂದರ್ಭದ ಹತ್ತು ದಿನಗಳು ನಿಜಕ್ಕೂ ಭಯಂಕರ. ಆಗ ಗ್ರೀಟಿಂಗ್ ಕಾರ್ಡ್‌ಗಳು, ಕ್ಯಾಲೆಂಡರ್‌ಗಳ ಭರಾಟೆ. ಸುಸ್ತಾಗುತ್ತಿದ್ದರೂ, ಸಾಕಷ್ಟು ಕಮಾಯಿ ಆಗುತ್ತಿತ್ತು. ಜನರ ಧಾರ್ಮಿಕತೆ ಆ ಸಂದರ್ಭದಲ್ಲಿ ಭಯಂಕರ ಹೆಚ್ಚಾಗುತ್ತದೆಂದು ಹೇಳುವುದು ನನ್ನ ಸಿನಿಕತೆಯೇ ಇರಬಹುದು.
ನಮ್ಮ ಇನ್ನೊಂದು ಪ್ರಮುಖ ಆದಾಯ ಮೂಲ- ಲೈಬ್ರರಿ. ಐನೂರು ಅಥವಾ ಆರುನೂರು ಕೃತಿಗಳಿದ್ದ 'ಡಿಪಾಸಿಟ್ ಇಲ್ಲದ, ಎರಡು ಪೆನ್ನಿ ಬಾಡಿಗೆಯ' ಗ್ರಂಥಾಲಯ. ಪುಸ್ತಕಕಳ್ಳರಿಗೆ ಈ ಲೈಬ್ರರಿ ಅಂದ್ರೆ ಅದೆಷ್ಟು ಅಕ್ಕರೆ! ಇದು ಜಗತ್ತಿನಲ್ಲೇ ಬಹಳ ಸುಲಭದ ಕಳ್ಳತನ. ಒಂದು ಲೈಬ್ರರಿಯಿಂದ ಎರಡು ಪೆನ್ನಿಗೆ ಹೊತ್ತಿಗೆಯೊಂದನ್ನು ತರುವುದು, ಅದರ ಲೇಬಲ್ ಕಿತ್ತುಹಾಕಿ ಇನ್ನೊಂದು ಅಂಗಡಿಗೆ ಹತ್ತು ಪೆನ್ನಿಗೆ ಮಾರುವುದು. ಆದರೆ ಡಿಪಾಸಿಟ್ ಕೇಳಿ ಗಿರಾಕಿಗಳನ್ನು ಹೆದರಿಸಿ ಓಡಿಸುವುದಕ್ಕಿಂತಲೂ, ಹೀಗೆ ಒಂದಷ್ಟು ಕೃತಿಗಳನ್ನು ಕಳೆದುಕೊಳ್ಳುವುದೇ ವಾಸಿ ಎಂದು ಅಂಗಡಿಯವರಿಗೆ ಗೊತ್ತು.
ನಮ್ಮ ಅಂಗಡಿ ಲಂಡನ್ನಿನ ಹೃದಯಭಾಗದಲ್ಲಿತ್ತು. ಹೀಗಾಗಿ ಅಲ್ಲಿಗೆ ಜಮೀನ್ದಾರರಿಂದ ಬಸ್ ಕಂಡಕ್ಟರ್‌ವರೆಗೆ ಎಲ್ಲ ತರಹದವರೂ ಬರುತ್ತಿದ್ದರು. ಆದರೆ ನಮ್ಮಲ್ಲಿ ಹೆಚ್ಚಾಗಿ ಖರ್ಚಾಗುತ್ತಿದ್ದ ಲೇಖಕರು ಯಾರು ಗೊತ್ತೆ? ಹೆಮಿಂಗ್ವೆ? ವುಡ್‌ಹೌಸ್? ಖಂಡಿತ ಅಲ್ಲ. ಎಥೆಲ್ ಎ.ಡೆಲ್, ವಾರ್ವಿಕ್ ಡೀಪಿಂಗ್, ಜೆಫ್ರಿ ಫಾರ್ನಲ್. ಇವು ಮಹಿಳೆಯರು ಮಾತ್ರ ಓದುವಂಥವು. ಮಹಿಳೆಯರಿಂದಾಗಿಯೇ ಇಂಗ್ಲಿಷ್ ಕಾದಂಬರಿ ಬದುಕಿಕೊಂಡಿದೆ ಎಂಬುದು ಸುಳ್ಳಲ್ಲ. ಆದರೆ ಪುರುಷರು ಕಾದಂಬರಿ ಓದುವುದಿಲ್ಲ ಎಂಬುದು ಸುಳ್ಳು. ಅವರು ಓದುವುದು ತುಸುಮಟ್ಟಿಗೆ ಗೌರವ ಗಳಿಸಿಕೊಂಡ ಕೃತಿಗಳನ್ನು ಅಥವಾ ಪತ್ತೇದಾರಿಗಳನ್ನು. ಪತ್ತೇದಾರಿ ಓದುವ ಕೆಲವರ ಸ್ಪೀಡಂತೂ ಭಯಂಕರ. ನನಗೆ ಗೊತ್ತಿದ್ದ ಒಬ್ಬನಂತೂ ವಾರಕ್ಕೆ ಐದಾರು ಪತ್ತೇದಾರಿ ಒಯ್ಯುತ್ತಿದ್ದ, ಜತೆಗೆ ಇತರ ಲೈಬ್ರರಿಗಳಿಂದಲೂ. ಆಶ್ಚರ್ಯ ಎಂದರೆ, ಒಮ್ಮೆ ಓದಿದ್ದನ್ನು ಪುನಃ ಒಯ್ಯುತ್ತಿರಲಿಲ್ಲ. ಬಹುಶಃ, ನಾನು ಲೆಕ್ಕ ಹಾಕಿದಂತೆ, ಒಂದು ವರ್ಷದಲ್ಲಿ ಅರ್ಧ ಎಕರೆಗಾಗುವಷ್ಟು ಪುಟಗಳ ಓದಿನ ಇಂಥ ಕಸದ ರಾಶಿಯೇ ಅವನ ತಲೆಯಲ್ಲಿದ್ದಿರಬೇಕು. ಅವನು ಪುಸ್ತಕದ ಹೆಸರು, ಲೇಖಕನ ಹೆಸರು ಯಾವುದನ್ನೂ ಗಮನಿಸುತ್ತಿರಲಿಲ್ಲ. ಪುಸ್ತಕವನ್ನು ನೋಡಿದ ಕೂಡಲೆ, ತಾನು ಇದನ್ನು ಮೊದಲೇ ತಿಂದಿದ್ದೇನೆಂದು ಹೇಳಿಬಿಡುತ್ತಿದ್ದ.
ಲೈಬ್ರರಿಯಲ್ಲಿ ನಿಮಗೆ ಜನರ ನಿಜವಾದ ಅಭಿರುಚಿಗಳು ಗೊತ್ತಾಗುತ್ತವೆ, ನಟನೆಯದ್ದಲ್ಲ. 'ಕ್ಲಾಸಿಕಲ್' ಕಾದಂಬರಿಕಾರರತ್ತ ಜನ ತಿರುಗುವುದಿಲ್ಲ. ಸಾಮಾನ್ಯ ಲೈಬ್ರರಿಗಳಲ್ಲಿ ಡಿಕನ್ಸ್, ಜೇನ್ ಆಸ್ಟೆನ್‌ರನ್ನು ಇಡುವುದು ವ್ಯರ್ಥ. ಯಾರೂ ಅವನ್ನು ಒಯ್ಯುವುದಿಲ್ಲ. 'ಅಯ್ಯೋ, ಅದು ಹಳೇದು' ಅಂತ ನಾಚಿಕೊಳ್ಳುತ್ತಾರೆ. ಶೇಕ್ಸ್‌ಪಿಯರ್‌ನನ್ನು ಮಾರುವಂತೆಯೇ ಡಿಕನ್ಸ್‌ನನ್ನೂ ಮಾರುವುದು ಸುಲಭ. ಡಿಕನ್ಸ್ ಅನ್ನು 'ಓದಬೇಕು' ಅಂದುಕೊಳ್ಳುವವರ ಸಂಖ್ಯೆಯೇ ಯಾವತ್ತೂ ಹೆಚ್ಚು, ಬೈಬಲ್‌ನಂತೆ. ಅವು ಸೆಕೆಂಡ್ ಹ್ಯಾಂಡ್‌ಗಳಲ್ಲೇ ಜಾಸ್ತಿ ಇರುವುದು.
ನಾನೊಬ್ಬ ಪುಸ್ತಕ ಮಾರಾಟಗಾರನಾಗುತ್ತಿದ್ದೆನೆ? ನನ್ನ ಆ ಕೆಲಸದ ದಿನಗಳ ಬಗ್ಗೆ ಗೌರವವಿಟ್ಟುಕೊಂಡೇ ಹೇಳುವುದಾದರೆ, ಇಲ್ಲ. ಒಳ್ಳೆಯ ಬಂಡವಾಳ ಮತ್ತು ಆರಂಭಗಳಿದ್ದರೆ ಒಬ್ಬ ಮನುಷ್ಯ ಪುಸ್ತಕದಂಗಡಿ ಇಟ್ಟುಕೊಂಡು ಬದುಕಬಲ್ಲ. ಅದು ಕಲಿಯಲು ದುರ್ಗಮವಾದ ವಿದ್ಯೆಯೇನೂ ಅಲ್ಲ- ಆತ ಅಪರೂಪದ ಪುಸ್ತಕಗಳ ತಂಟೆಗೆ ಹೋಗದೆ ಇದ್ದರೆ. ಪುಸ್ತಕದೊಳಗೇನಿದೆ ಎಂದು ಗೊತ್ತಿದ್ದರೆ ಮತ್ತೂ ಒಳ್ಳೆಯದೇ, ಆ ದಂಧೆಯಲ್ಲಿರುವ ಬಹುತೇಕರಿಗೆ ಅದೇ ಇಲ್ಲ. ಮತ್ತು ಇದೊಂದು ಮಾನವೀಯ ವ್ಯಾಪಾರ ಕೂಡ- ಒಂದು ಹಂತದಿಂದಾಚೆಗೆ ಅದನ್ನು ಕೊಳಕುಗೊಳಿಸಲು ಸಾಧ್ಯವಿಲ್ಲ. ದೊಡ್ಡ ಮಾಲ್‌ಗಳು ಕೂಡ ಸಣ್ಣ ಅಂಗಡಿಗಳನ್ನು ನಾಶಗೊಳಿಸಲಾರವು. ಆದರೆ ಇಲ್ಲಿ ಕೆಲಸದ ಅವಧಿ ಸುದೀರ್ಘ. ನನ್ನ ಯಜಮಾನ ವಾರಕ್ಕೆ 70 ಗಂಟೆ ದುಡಿಯುತ್ತಿದ್ದ. ಅಂಗಡಿಯ ವಾತಾವರಣವಂತೂ ಅನಾರೋಗ್ಯಕರ. ಚಳಿಗಾಲದಲ್ಲಿ ಅತಿ ಶೀತ. ಪುಸ್ತಕಗಳು ಲೋಕದಲ್ಲಿ ಬೇರ್ಯಾವುದೇ ವಸ್ತುವಿಗಿಂತ ಅಧಿಕ ಪ್ರಮಾಣದಲ್ಲಿ ಧೂಳನ್ನು ಹುಟ್ಟುಹಾಕುತ್ತವೆ. ಮತ್ತು ಪುಸ್ತಕಗಳ ನಡುವೆಯೇ ಎಲ್ಲ ಕೀಟಗಳೂ ಸಾಯಲಿಚ್ಛಿಸುವುದು
- ಜಾರ್ಜ್ ಆರ್ವೆಲ್
ಅನುವಾದ: ಹರೀಶ್ ಕೇರ