ಮಹಾನಗರತ್ತ

ಮಾತುಗಳಲ್ಲಿಯೇ ಮೌನವಾಗಿರಬೇಕು ಎಂದು ಅಮ್ಮ ಕೊಂಚ ಆತಂಕದ ಧ್ವನಿಯಲ್ಲಿ ಹೇಳುವಷ್ಟರಲ್ಲಿ ನಾನು ..
ಮಹಾನಗರತ್ತ
Updated on: 

ಮಾತುಗಳಲ್ಲಿಯೇ ಮೌನವಾಗಿರಬೇಕು ಎಂದು ಅಮ್ಮ ಕೊಂಚ ಆತಂಕದ ಧ್ವನಿಯಲ್ಲಿ ಹೇಳುವಷ್ಟರಲ್ಲಿ ನಾನು ನನ್ನ ಲಗೇಜ ಸಂಪೂರ್ಣ ಪ್ಯಾಕ್ ಮಾಡಿಯಾಗಿತ್ತು. ಮೊದಲ ಸಲ ಬೆಂಗಳೂರಿಗೆ ನೌಕರಿಗೋಸ್ಕರ ಹೊರಟಿದ್ದೀಯಾ. ಮಹಾನಗರಗಳಲ್ಲಿನ ಆಕರ್ಷಣೆಗಳು, ಭರವಸೆಗಳು, ಕನಸುಗಳನ್ನು, ದೂರದ ಊರಿನಿಂದ ಊಹಿಸಿಕೊಂಡು ಸಂಭ್ರಮಿಸುವುದು ತುಂಬಾ ಚಂದ. ಆದರೆ ವಾಸ್ತವವೇ ಬೇರೆ ಇರುತ್ತದೆ. ನೀನು ತುಂಬಾ ಹುಷಾರಾಗಿರಬೇಕು ಎಂದು ಅಮ್ಮನ ಹಿತವಚನಗಳು ಜಾರಿಯಲ್ಲಿ ಇರುವಾಗಲೇ ನಾನು ಹೊರಡುವ ಬಸ್ಸಿನ ಸಮಯವಾಗಿತ್ತು.
ರಾತ್ರಿ ಸರಿಯಾಗಿ 9.30ಕ್ಕೆ ನನ್ನ ಪುಟ್ಟ ಪಟ್ಟಣದಿಂದ ಹೊರಡುವ ಬಸ್ಸಿನಲ್ಲಿ ಹತ್ತಿ ನನ್ನ ಸೀಟಿನಲ್ಲಿ ಮಲಗಿದರೆ ನಾಳೆ ಮುಂಜಾನೆ 6-30ಕ್ಕೆ ಮಹಾನಗರದ ತೆಕ್ಕೆಯಲ್ಲಿ ಮುಂಜಾನೆಯ ಸೂರ್ಯೋದಯದ ದರ್ಶನ. ಗುರಿ, ಸಾಧನೆ, ಕನಸು, ಆಸೆಗಳನ್ನು ಈಡೇರಿಸಿಕೊಳ್ಳಲು ಇರುವ ಬೃಹತ್ ಮೈದಾನದಂತಿರುವ ಮಹಾನಗರ. ಇಂದು ನನ್ನ ಹಾಗೆ ಸಾವಿರಾರು ಆಸೆ ಕನಸು ಕಟ್ಟಿಕೊಂಡು ಬೆಂಗಳೂರಿಗೆ ನಾಳೆ ಬಂದಿಳಿಯುವರು ಎಷ್ಟು ಜನವೋ? ಎಂದುಕೊಂಡು ಮನಸ್ಸಿನಲ್ಲಿ ಕೊಂಚ ಕುತೂಹಲದಿಂದ ಮತ್ತು ಧುಮ್ಮಿಕ್ಕುವ ಉತ್ಸಾಹ ಚೈತನ್ಯದೊಂದಿಗೆ ಅಮ್ಮನ ಕಾಲಿಗೆ ನಮಸ್ಕರಿಸಿದೆ. ನಿನ್ನ ಆಶೀರ್ವಾದವೊಂದಿದ್ದರೆ ನನಗೆ ಏನು ಆಗಲ್ಲ. ಭಯ ಪಡಬೇಡ. ದಿನಾಲು ನಿನಗೆ ಪೋನ ಮಾಡುತ್ತಿರುತ್ತೇನೆ ಎಂದು ಹೇಳಿ ಅಮ್ಮನನ್ನು ತಬ್ಬಿಕೊಂಡು ಅವಳ ಹಣೆಗೆ ಒಂದು ಮುತ್ತನಿಟ್ಟು ಹೋಗಲು ತಯಾರಾದೆ.
ಅಷ್ಟರಲ್ಲಿ ನಾನು ಹೊರಡುವ ಬಸ್ಸು ಬಂದು ನಿಲ್ದಾಣದಲ್ಲಿ ನಿಂತಿತ್ತು. ನಾನು ಮೊದಲ ಸಲ ಬೆಂಗಳೂರಿಗೆ ಹೋಗುವ ಈ ಸಂಭ್ರಮ, ಉತ್ಸಾಹದ ನಡುವೆ ಮನಸ್ಸಿನಲ್ಲಿ ಮೂಡಿದ ಮೊದಲ ಸಣ್ಣನೆಯ ಹೆದರಿಕೆ ಭಯ ಪ್ರಾರಂಭವಾಗಿದ್ದು ಬೆಂಗಳೂರಿನಲ್ಲಲ್ಲ. ಬದಲಿಗೆ ನಾನು ಹೊರಡಲು ಸಿದ್ದವಾಗಿ ನಿಂತಿದ್ದ ನನ್ನ ಬಸ್ಸಿನ ಹಿಂದೆಯೆ ಸಾಲಾಗಿ ನಿಂತು ಅನೇಕ ಪ್ರಯಾಣಿಕರನ್ನು ಬೆಂಗಳೂರಿಗೆ ಕರೆದೊಯ್ಯಲು ಸಿದ್ದವಾಗಿ ನಿಂತಿದ್ದ ಬಸ್ಸುಗಳ ಲೈನು. ನಿಜವಾಗಿಯೂ ಬೆಂಗಳೂರಿನ ಬಗೆಗೆ ಯೋಚನೆಗಳ ಲಹರಿ ಪ್ರಾರಂಭವಾಗಿದ್ದೆ ಆವಾಗ. ನಾನು ನನ್ನ ಬಸ್ ಹತ್ತಿ ಕನ್‌ಫರ್ಮ್ ಆಗಿದ್ದ ನನ್ನ ವಿಂಡೋ ಸೀಟಿನಲ್ಲಿ ಕುಳಿತು ಹೊರಗೆ ಇಣುಕಿ ನೋಡಿದಾಗ ಅದೇ ಬೆಂಗಳೂರಿಗೆ ಹೊರಡುವ ಬಸ್ಸುಗಳ ಲೈನು. ಎಲ್ಲಾ ಬಸ್ಸಿನಲ್ಲೂ ಹತ್ತಲು ತಯಾರಾಗಿರುವ ಪ್ರಯಾಣಿಕರು. ಅವರ ಲಗ್ಗೇಜಗಳು. ನನ್ನ ಹಾಗೆ ಕನಸು ಕಟ್ಟಿಕೊಂಡು ಹೊರಡಲು ತಯಾರಾಗಿರುವ ತರುಣ-ತರುಣಿಯರು. ಈಗಾಗಲೇ ಮಹಾನಗರದಲ್ಲಿ ಸೆಟಲ್ ಆಗಿರುವ ತಮ್ಮ ಮಕ್ಕಳನ್ನು ನೋಡಲು ಹೊರಟಿರುವ ತಂದೆ-ತಾಯಿಗಳು.
ಹೀಗೆಯೇ ಮಹಾನಗರಿ ಎಲ್ಲರನ್ನು ತನ್ನತ್ತ ಸೆಳೆಯುತ್ತಾ ನಿಂತಿದ್ದಳು. ಹೀಗೆಯೇ ನಾನು ನನ್ನ ಪ್ರಯಾಣವನ್ನು ನನ್ನ ಪುಟ್ಟ ಪಟ್ಟಣದಿಂದ ಆರಂಭಿಸಿದೆ. ಸೀಟಿನಲ್ಲಿರುವ ಪುಶ್‌ಬ್ಯಾಕ್ ಸೀಟಿನ ಬಟನನ್ನು ಒತ್ತಿ ಸೀಟನ್ನು ಹಿಂದಕ್ಕೆ ಎಳೆದು ಬೆಂಗಳೂರಿನ ಬೆರಗುಗಳು, ಆತಂಕಗಳು, ಅವಕಾಶಗಳು, ಗೆಲುವು, ಸೋಲು, ಹತಾಶೆ, ನಿರಾಶೆ, ಸೋಲುತ್ತಾ- ಗೆಲ್ಲುತ್ತಿದ್ದೇನೆಂದು ಭಾವಿಸುವುದು, ಗೆಲ್ಲುತ್ತಾ-ಸೋಲು ಒಪ್ಪಿಕೊಳ್ಳುವುದು, ಹತಾಶೆ, ನಿರಾಶೆ ಮತ್ತು ಇದೆಲ್ಲದರ ನಡುವೆ ಸದಾ ಬತ್ತದ ಉತ್ಸಾಹ ಚೈತನ್ಯ ಜೀವನೋತ್ಸಾಹದೊಂದಿಗೆ ನಮ್ಮನ್ನು ಪೊರೆಯುತ್ತಾ ಸಾಧನೆಗೆ ಅವಕಾಶಗಳನ್ನು ತೆರೆದುಕೊಡುವ ಬೆಂಗಳೂರು ಎಂಬ ಮಹಾನಗರಿಯ ಬಗ್ಗೆ ಯೋಚಿಸಿತ್ತಾ ಕುಳಿತವಳಿಗೆ ನಿದ್ದೆ ಬಂದಿದ್ದೇ ಗೊತ್ತಾಗಲಿಲ್ಲ.
ಮರುದಿನ ಬೆಳಿಗ್ಗೆ 6-30 ಘಂಟೆಗೆ ಯಶವಂತಪುರ ಯಶವಂತಪುರ ಎಂದು ಬಸ್ಸಿನ ಕ್ಲೀನರ್ ಕೂಗುತ್ತಾ ಪ್ರಯಾಣಿಕರನ್ನು ಎಚ್ಚರಿಸುತ್ತಿರುವಾಗಲೇ ನನಗೆ ಎಚ್ಚರ. ನಾನು ಕುಳಿತಿದ್ದ ವಿಂಡೊ ಸೀಟಿನ ಕರ್ಟನ್ ಸರಿಸಿ ಹೊರಗೆ ಇಣುಕಿ ನೋಡಿದೆ. ದಟ್ಟನೆ ಮಂಜಿನ ನಡುವೆ ಆಗ ತಾನೆ ತೆರೆದುಕೊಳ್ಳುತ್ತಿರುವ ಈ ಮಹಾನಗರಿ. ಗಗನಚುಂಬಿ ಕಟ್ಟಡಗಳು, ಪಕ್ಕದಲ್ಲಿಯೇ ಕಾಣುವ ಸ್ಲಂಗಳು, ಫೈವ್‌ಸ್ಟಾರ್ ಹೋಟೆಲಿನ ಮುಂದೆಯೇ ತಳ್ಳು ಗಾಡಿಯಲ್ಲಿ ಚಹಾ ಮಾರುತ್ತಿರುವವರು, ಪುಟ್‌ಪಾತ್ ಮೇಲೆ ಕಿವಿಗೆ ಹೆಡ್‌ಸೆಟ್ ಹಾಕಿಕೊಂಡು ಜಾಗಿಂಗ್ ಹೊರಟಿರುವರು, ವಿಶಾಲವಾದ ರೋಡಿನಲ್ಲಿ ಡ್ರೈವಿಂಗ್ ಕಲಿಯುತ್ತಿರುವವರು, ಹೀಗೆಯೇ ನೋಡಿದಲ್ಲೆಲ್ಲ ಬೆರಗು.
ನನ್ನ ಬಸ್ಸು ಕೊನೆಯ ಸ್ಟಾಪ್ ಹತ್ತಿರ ಬಂದು ನಿಂತಿತು. ಆನಂದರಾವ್ ಸರ್ಕಲ್ ಕೊನೆಯ ಸ್ಟಾಪ್ ಎಂದು ಕ್ಲಿನರ್ ಕೂಗಿದಾಗ ನಾನು ಬಸ್ಸಿನಿಂದ ಇಳಿದು ಬಸ್ಸಿನ ಡಿಕ್ಕಿಯಲ್ಲಿರುವ ನನ್ನ ಬ್ಯಾಗ್ ತೆಗೆದುಕೊಂಡು ನನ್ನನ್ನು ಪಿಕ್‌ಅಪ್ ಮಾಡಲು ಬರುತ್ತೇನೆಂದು ಹೇಳಿದ ನನ್ನ ಫ್ರೆಂಡಿಗೆ ಹುಡುಕತೊಡಗಿದೆ. ಬಹುಶಃ ಇನ್ನೂ ಮುಂಜಾನೆಯ ಸವಿನಿದ್ದೆಯಲ್ಲಿ ಅವನು ಮಲಗಿರಬಹುದೆಂದು ಭಾವಿಸಿ ಅವನಿಗೆ ಒಂದು ಫೋನ್ ಮಾಡಿ ಅವನ ದಾರಿ ಕಾಯುತ್ತಾ ನಿಂತಿದ್ದೇನೆ. ಬೆಂಗಳೂರು ಎಂಬ ಬೆರಗುಗಳು, ಕನಸುಗಳು, ನನ್ನ ಆತಂಕಗಳು, ಸವಾಲುಗಳು ಸಂಭ್ರಮಗಳು ಒಟ್ಟೊಟ್ಟಿಗೆ ಪ್ರಾರಂಭವಾಗಿವೆ. ನಿನ್ನೆ ರಾತ್ರಿ ನಾ ಹೊರಡುವಾಗ ಅಮ್ಮ ಹೇಳಿದ ಮಾತುಗಳಲ್ಲಿಯೇ ಮೌನವಾಗಿರಬೇಕು ಎಂಬ ವಾಕ್ಯ ಈಗ ಮೆಲ್ಲಗೆ ಅರ್ಥವಾಗತೊಡಗಿದೆ.


- ಹೇಮಾ ಸುಧೀರ ಪಿಡ್ಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com