

ಕಾಲಿಂಗ್ ಬೆಲ್ ಶಬ್ಧ ಕೇಳಿ ಎಂಟು ಗಂಟೆಯ ಸೀರಿಯಲ್ ನೋಡುತ್ತಿದ್ದ ಅನಘಾ ಎದ್ದು ಕಿಡಕಿಯಿಂದ ನೋಡಿದಳು. ಕೈಲಿ ಬ್ಯಾಗ್ ಹಿಡಿದು ಕೊಂಡು ಒಬ್ಬ ಆಜಾನುಬಾಹು ನಿಂತಿರುವುದು ವರಾಂಡಾದ ಮಂದ ಬೆಳಕಲ್ಲಿ ಕಂಡಿತು.
ಅರೆ, ರಮಣನ ಫ್ರೆಂಡೇ ಇರಬೇಕು. ಬಾಗಿಲು ತೆಗೆದು ಮುಗುಳ್ನಗೆಯಿಂದ 'ಬನ್ನಿ' ಎಂದಳು. ಆತ ಕಿಟ್ ಬ್ಯಾಗ್ ಹಿಡಿದು ಒಳಬಂದ. 'ನೀವು ಬರುತ್ತೀರಿ ಅಂತ ಕಾದಿದ್ದರು. ಎಮರ್ಜೆನ್ಸೀ ಕಾಲ್ ಬಂತು. ಪವರ್ ಹೌಸ್‌ಗೆ ಇದೇ ಈಗ ಹೋದರು...' ಎಂದಳು.
'ಮಂಡ್ಯ ಹತ್ತಿರ ರೋಡ್ ಬ್ಲಾಕ್ ಆಗಿತ್ತು. ರಮಣ ಬರೋದು?'
'ಎಮರ್ಜೆನ್ಸಿ ಶಿಫ್ಟ್ ಡ್ಯೂಟಿ. ಅಂದರೆ ಬೆಳಿಗ್ಗೇನೇ ಬರೋದು' ಎಂದಳು. 'ಸ್ವಲ್ಪ ಹೊತ್ತು ರೆಸ್ಟ್ ತಗಳ್ಳಿ, ಕಾಫಿ ಕೊಡುತೀನಿ. ಅದೇ ಗೆಸ್ಟ್ ರೂಂ' ಎನ್ನುತ್ತ ಕುಡಿಯಲು ನೀರಿನ ಬಾಟಲ್ ತಂದು ಮೇಜಿನ ಮೇಲಿಟ್ಟಳು.
ಅವಳನ್ನು ನೋಡಿದ್ದು ಇವನು ಇದೇ ಮೊದಲು. 'ನಿಮ್ಮ ಫ್ರೆಂಡ್ ಬಂದಿದ್ದಾರೆ' ಎಂದು ಗಂಡಗೆ ಫೋನ್ ಮಾಡಿದಳು. ಸ್ನೇಹಿತರು ಫೋನಲ್ಲೇ ಸ್ವಲ್ಪ ಹೊತ್ತು ಹರಟೆ ಹೊಡೆದರು. ಇವನಂತೂ ಗಹಗಹಿಸಿ ನಗುತ್ತಿದ್ದ. ಇವನ ನಗುವ ಪರಿ ಕಂಡು ಇವಳಿಗೂ ನಗು ಬಂದಿತ್ತು.
ಇಬ್ಬರೂ ಊಟಕ್ಕೆ ಕುಳಿತರು. ಮಾತಾಡಲು ಅವನಿಗೆ ಮುಜುಗರ. ಇವಳೇ ಮೌನ ಮುರಿದಳು. 'ಯಾವಾಗ ಬೆಂಗಳೂರು ಬಿಟ್ಟದ್ದು? ಮನೆ ಎಲ್ಲಿ?' ಎಂದು ಲೋಕಾಭಿರಾಮವಾಗಿ ವಿಚಾರಿಸಿದಳು.
ಬರುಬರುತ್ತಾ ಅವನೂ ಮೈಚಳಿ ಬಿಟ್ಟ: ಬೆಂಗಳೂರು, ಮೈಸೂರು, ಹವಾಗುಣ, ಕೆಲಸ ರಾಜಕೀಯ ಸಿನಿಮಾ ಹೀಗೆ ಮಾತು ಸಾಗಿತ್ತು. ಮಾತುದ್ದಕ್ಕೂ ತನ್ನನ್ನೇ ದಿಟ್ಟಿಸುತ್ತಿರುವಂತೆ ಕಂಡಿತು. ಸಂಕೋಚ ಎನ್ನಿಸಿದರೂ ಅವನ ನೋಟದಲ್ಲಿನ ಮೆಚ್ಚಿಗೆ ಹಿತವೆನ್ನಿಸಿತ್ತು ಮಾತಾಡುತ್ತಾ ಆಡುತ್ತಾ ಇಡೀ ದೇಹದ ಮೇಲೆ ಅವನು ತನಗೆ ತಿಳಿಯಲಿ ಎನ್ನುವಂತೆ ಕಣ್ಣಾಡಿಸುತ್ತಿದ್ದದನ್ನು ಓರೆನೋಟದಿಂದ ಗಮನಿಸಿ ಕಚಗುಳಿ ಇಟ್ಟಂತೆ ಪುಳಕಗೊಂಡಳು. ಗಂಡಿನ ಇಂತಹ ನೋಟ ಯಾವ ಹೆಣ್ಣಿಗೂ ಹೊಸದಲ್ಲ. ಇಷ್ಟವೂ ಕೂಡ ಮಿತಿಯೊಳಗಿದ್ದರೆ. ತಮ್ಮ ಚಂದಕ್ಕೆ ಅದು ಒಂದು ಜೋ ಮೊಹರ್ ಎಂದು ಹೆಮ್ಮೆ.
ಈಗ? ಮನೆಯಲ್ಲಿ ಇಬ್ಬರೇ. ಅದೂ ಮೊದಲ ಒಬ್ಬರನ್ನೊಬ್ಬರು ನೋಡುತ್ತಿರೋದು. ಆದರೂ ಅವನ ಆ ನೋಟದಲ್ಲಿ ಅಷ್ಟು ಸದರವೇ? ಮಾತು ಕಡಮಿ ಮಾಡಿದಳು. ಆದರೆ ಅವನ ಉತ್ಸಾಹ ಇಮ್ಮಡಿಸಿತ್ತು.
ಜೋಕ್ ಮಾಡುತ್ತಾ ತನ್ನನ್ನು ನೇರವಾಗಿ ನೋಡುತ್ತಿರುವುದು ಅವಳನ್ನು ಅಸ್ವಸ್ಥಗೊಳಿಸಿತ್ತು. ತಾನೂ ಜೊತೆಯಲ್ಲಿ ಊಟಕ್ಕೆ ಕೂಡಬಾರದಿತ್ತು. ಗಂಡ ಇಲ್ಲ ಸಂಕೋಚವಾಗದಿರಲಿ ಎಂದು ಕೊಂಡಿದ್ದೇ ತಪ್ಪಾಯಿತೇನೋ ಮತ್ತು ಗಂಡನ ಗೆಳೆಯ ಅನೇಕ ವರ್ಷಗಳಂತೆ, ಬೇಟಿಗಾಗಿಯೇ ಬಂದಿದ್ದಾನೆ ಎಂದು ಸಲಗೆಯಿಂದ ಮಾತಾಡಿಸಿದ್ದು ಸರಿಯಾಗಲಿಲ್ಲ. ದೆಹಲಿ ಕಲ್ಕತ್ತ ಎಂದು ತಿರುಗಾಡೋನು. ಹೆಂಡತಿ ಒಂದು ಕಡೆ ಇವನೊಂದು ಕಡೆ. ಏನು ಸಂಸ್ಕಾರವೋ ಏನು ಸಂಸಾರವೋ ಎಂದು ಭಯವೂ ಆಯ್ತು.
'ರಮಣ ಈಗ ಹೇಗೆ?' ಎಂದು ತಮಾಷೆಯಿಂದ ವಿಚಾರಿಸಿದ. 'ಅಂದರೆ?' ಎಂದು ನೋಡಿದಳು. 'ಇರಲಿ ಬಿಡಿ ಅವನ ಎದುರೇ ಹೇಳುತ್ತೇನೆ' ಎಂದು ಸಸ್ಪೆನ್ಸ್ ಸೃಷ್ಟಿಸಿ ಮನಸ್ಸನ್ನು ಅಲುಗಿಸಿದ. ತಮ್ಮ ಅವನ ಕಾಲೇಜು ದಿನಗಳನ್ನು ಅನಾವಶ್ಯಕ ನೆನಪಿಸಿಕೊಂಡ.
ತನ್ನ ಉಸಿರಾಟದ ಲಯತಪ್ಪಿದಂತಾಯಿತು. ಅತಿ ಖಾಸಗಿ ಆಪ್ತ ಬಯಕೆಗಳನ್ನು ವ್ಯಕ್ತ ಪಡಿಸಲು ಸೌಜನ್ಯ ಅಡ್ಡಬರುತ್ತಿದ್ದರೂ ತನ್ನ ಕಣ್ಣೇ ಮನದ ಇಂಗಿತ ಅವಳಿಗೆ ತಿಳಿಸಿದೆಯೆಂದು ಅವಳು ತನ್ನ ಉಸಿರಾಟದ ಏರಿಳಿತದಿಂದಲೇ ಬಯಕೆ ಗ್ರಹಿಸಿದ್ದೇನೆಂದು ತಿಳಿಸುತ್ತಿದ್ದಾಳೆಂದು ಅವನು ಸಂಭ್ರಮಗೊಂಡಂತಿದೆ ಎಂದು ಊಹಿಸಿ ಅಳುಕಿದಳು.
ಊಟ ಮುಗಿದು ತನ್ನ ರೂಮನ್ನು ಸೇರುವ ಮೊದಲು ತನ್ನತ್ತ ನೋಟ ಬೀರಿ ಅವನು 'ಗುಡ್ ನೈಟ್' ಎಂದಾಗ ಹಾ ಎಂದು ಬೆಚ್ಚಿದಳು. ಆ ನೋಟ ತನ್ನ ಮೈಯನ್ನು ಅಪ್ತವಾಗಿ ನೇವರಿಸಿದಂತಾಗಿ ಸಣ್ಣಗೆ ಕಂಪಿಸಿದಳು. ಅವನ ಧ್ವನಿ ಮಾದಕವಾಗಿದ್ದಂತೆ ಎನ್ನಿಸಿತು.
ಅವನು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಾಗಲೇ ನೆಮ್ಮದಿ. ವಿಚಿತ್ರ ಭಾವ ಮನಸ್ಸು ತುಂಬಿಕೊಂಡವು. ಮತ್ತೆ ಅವನ ಆರಡಿ ನೀಳ ಕಾಯ ನಗು ಮುಖ ತನ್ನನ್ನೇ ನೋಡಿ ಕಣ್ಣೋಟದಲ್ಲೇ ಕರೆಯುತ್ತಿರುವಂತೆ ಕಂಡಿತು. ಹನಿ ಹನಿ ಬೆವತಳು.
ಅವಸರ ಅವಸರವಾಗಿ ಪಾತ್ರ ಎತ್ತಿಟ್ಟು ಕ್ಲೀನ್ ಮಾಡಿ ಹಾಲಿನ ದೀಪ ಆರಿಸಿ ಬೇಗ ರೂಮು ಸೇರಿದಳು. ಹಾಸಿಗೆ ಮೇಲೆ ಒರಗಿ ಕಣ್ಣು ಮುಚ್ಚಿದರೆ, ಮತ್ತೆ ಅದೇ ಅವನ ನೋಟ ಹಿಂಬಾಲಿಸಿತ್ತು. ಅಬ್ಬ ಏನು ಧೈರ್ಯ! ತನ್ನನ್ನು ಏನೆಂದು ತಿಳಿದಿದ್ದಾನೆ? ಅವನೊಂದು ಕತ್ತೆ. ದೀಪ ಆರಿಸಿದಳು ಕತ್ತಲು ಆವರಿಸಿತ್ತು. ಆ ಕತ್ತಲಲ್ಲೂ ಏನೋ ಸುಳಿದಂತಾಗಿ ನೋಡಿದರೆ ಅವನದೇ ನೆರಳು. ಅರೆ! ಅವನು ಬಂದನೇ?
ದೀಪ ಹಾಕಬೇಕೆಂದು ಏಳಲು ಹೋದರೆ ಹತ್ತಿರವೆ ಬಂದೇ ಬಿಟ್ಟ. ಸಣ್ಣಗೆ ನಡುಗಿದಳು. ತಾನೇಕೆ ಅಷ್ಟು ಹೆದರಿದ್ದೇನೆ? ಭ್ರಮೆ. ಕೊಸರಿಕೊಳ್ಳಲು ಶತಪ್ರಯತ್ನ ಮಾಡಿದಳು... ಹಿಡಿತದಿಂದ ಕೊಸರಿಕೊಳ್ಳಲು ಆಗುವುದಿಲ್ಲ. ಅಸಹಾಯಕಳಾಗಿ ಕತ್ತಲಲ್ಲಿ ಕರಗಿಹೋಗುತ್ತಿದ್ದೇನೆ.
ಕೂಗಿಕೊಳ್ಳಬೇಕು. ಜನ ಸೇರುತ್ತಾರೆ. ಮಾನ ಮರ್ಯಾದೆ? ತಕ್ಷಣ ಎದ್ದು ದೀಪ ಹಾಕಿದಳು. ಅದೇ ನನ್ನ ಕೊಠಡಿ. ಗಂಡ ಮಾತ್ರ ಇಲ್ಲ ಶಿಪ್ಟ್‌ಗೆ ಹೋಗಿದ್ದಾನೆ. ಗೆಸ್ಟ್ ರೂಮಲ್ಲಿ ಅವನು.
'ಅಂದು' ನೆನಪಾಯಿತು. ಕೆಲಸವಿದೆ ಎಂದು ಅವನು ಬೆಂಗಳೂರಲ್ಲೇ ಉಳಿಯಬೇಕಾಗಿ ಬಂದ ರಾತ್ರಿ. 'ಎಲ್ಲ ಬಾಗಿಲು ಭದ್ರವಾಗಿ ಹಾಕಿಕೋ. ಶಬ್ದವಾದರೆ ಬಾಗಿಲು ತೆಗೆಯ ಬೇಡ. ಒಬ್ಬಳಿಗೆ ಇರೋಕೆ ಹೆದರಿಕೆ ಆದರೆ ಸೋಮಪ್ಪಗೆ ಹೇಳು ಬಂದು ವರಾಂಡಾದಲ್ಲಿ ಮಲಗುತ್ತಾನೆ'. ಆ ಮುದಿ ಸೋಮಪ್ಪನೇ ಆಗಬೇಕೆ ನನ್ನ ಕಾಯಲು? ನಾನು ಒಬ್ಬಳೇ ಇದ್ದರೆ ಬಾಗಿಲು ತೆಗೆದು ಮಲಗಿ ಬಿಡುತ್ತಿದ್ದೆನಾ? ಅದೂ ಹೆಂಡತಿ ತನ್ನಂತೆ ಸುಂದರಿ ಆದರಂತೂ ಸಂಶಯದ ಹುತ್ತ ಆಗುತ್ತಾರೆ.
ಚಿಂತೆಯ ಲಹರಿ ಬದಲಾಯಿತು. ಗಂಡನಿಗೆ ಈ ಗೆಳೆಯನ ಕಲ್ಯಾಣಗುಣಗಳು ಗೊತ್ತಿರಲಿಲ್ಲವೇ? ಅಕ್ಕಸಾಲಿ ಅಕ್ಕನ ಬಂಗಾರವನ್ನೂ ಕದಿಯದೆ ಇರಲಾರ. ಮೈಯಲ್ಲ ಜಲ ಜಲ ನೀರಾಡಿತು. ಅರವತ್ತು ದಾಟಿದ ಜಡ್ಜ್ ನೆನಪಾದ. ಮುಪ್ಪಿನ ಗವರ್ನರ್ ನೆನಪಾದ. ಆ ಮುದಿವಯಸ್ಸಿನಲ್ಲೇ ನಿಯಂತ್ರಿಸಿಕೊಳ್ಳಲಾಗಲಿಲ್ಲ. ಈಗ ಇವನು. ಆರಡಿ ಉಕ್ಕಿನ ದೇಹ.
'ಕಾಮಾತುರಾಣಾಂ ನ ಲಜ್ಜ ನ ಭಯಂ'. ಈಗ ಅವನು ಬಂದರೆ? ಥರ ಥರ ನಡುಗಿದಳು.
ಏನು ತೋಚಿತೋ. ದಿಡಗ್ಗನೆ ಎದ್ದವಳೇ ಗೆಸ್ಟ್ ರೂಮತ್ತ ನಡೆದು ಅದರ ಬೋಲ್ಟ್ ಹಾಕಿ ಬಂದು ಬಿಟ್ಟಳು. ಈಗ ಧೈರ್ಯ ಬಂದಿತ್ತು. 'ಅಬ್ಬ ಇನ್ನು ಭಯವಿಲ್ಲ. ಅವನು ಏನೇ ತಿಳಿದುಕೊಳ್ಳಲಿ. ಮ್ಯಾನರ್ಸ್ ಬಗ್ಗೆ ಯೋಚಿಸಲು ಇದು ಸಮಯವಲ್ಲ' ಮಲಗಿದಳು. ಮೈಯಲ್ಲ ಕಿವಿಯಾಗಿ, ಚಿಲಕ ಅಳ್ಳಾಡುವ ಶಬ್ಧ, ಬಾಗಿಲು ಕಿರ್ ಎಂಬ ಶಬ್ಧ... ಉಸಿರು ಬಿಗಿ ಹಿಡಿದು ಕಿವಿಗೊಟ್ಟಳು.
ಏನೋ ಶಬ್ಧ. ಹೌದೋ ಅಲ್ಲವೋ ಎನ್ನುವಂತೆ. ಎದೆ ಬಡಿತ ಹದ ತಪ್ಪಿತು. 'ಸಧ್ಯ ಬೋಲ್ಟ್ ಮಾಡಿದ್ದೇನೆ'. ಅವನಿಗೆ ನನ್ನ ಮನಸ್ಸು ಅರ್ಥವಾಗಿದೆ. ಕೂಗಿ ಬಾಗಿಲು ತೆಗೆ ಎಂದು ಹೇಳುವ ಧೈರ್ಯವಿಲ್ಲ ಪುಕ್ಕಲ.
ಎದ್ದಳು... ರೂಮು ಬಾಗಿಲು ತೆಗೆದು ಬೆಕ್ಕಿನ ಹೆಜ್ಜೆ ಇಡುತ್ತಾ ಗೆಸ್ಟ್ ರೂಮತ್ತ ನಡೆದಳು. ರೂಮಲ್ಲಿ ಲೈಟ್, ಬಾಗಿಲ ಕಿಂಡಿಯಲ್ಲಿ ಕಾಣಿಸಿತು. ಅವನು ಮಲಗಿಲ್ಲ. ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾನೆ. ಬೋಲ್ಟ್ ಹಾಕಿರುವುದರಿಂದ ಅಸಹಾಯಕನಾಗಿ ಬುಸುಗುಟ್ಟುತ್ತಾ ಮಲಗಿದ್ದಾನೆ.
'ಬೋನಿನ ಸಿಂಹ. ಅಲ್ಲ ಇಲಿ' ನಗು ಬಂತು.
'ಹಸಿದ ನೋಟ ಬೀರಿ ಕೆರಳಿಸಿದ್ದೇನೆ. ಈಗ ಗಂಡ ಇಲ್ಲ. ಬೆಳಗಿನ ವರೆಗೆ ಬರುವುದೂ ಇಲ್ಲ. ನಿಶ್ಚಿಂತೆ. ಇನ್ನಾರಿಗೆ ತಿಳಿಯುತ್ತದೆ? ಓಡೋಡಿ ಬರುತ್ತಾಳೆ' ಎಂದು ತಿಳಿದಿರಬೇಕು.
ನೋಡು ನೋಡುತ್ತಿದ್ದಂತೆ ರೂಮಿನ ಲೈಟೂ ಆರಿತ್ತು. ಅಂದರೆ ಮಲಗಿದ. 'ಅಬ್ಬ ಪಾರಾದೆ' ಹಿಂತಿರುಗಿ ಬಂದಳು. ನಿದ್ದೆ ಬರುತ್ತಲಿಲ್ಲ. ಯುದ್ಧದಲ್ಲಿ ಗೆದ್ದ ಸಂಭ್ರಮ. ಶತ್ರುವಿನ ರಕ್ತ ಸಿಕ್ತ ಆರಡಿ ದೇಹ ಕಣ್ಣಿಗೆ ಕಟ್ಟಿತ್ತು. ಪಾಪ ಏನು ಕಲ್ಪಿಸಕೊಂಡಿದ್ದನೋ? ಆದದ್ದು ಮತ್ತೇನೋ!
ಇದ್ದಕ್ಕಿದ್ದಂತೆ ಮನಸ್ಸು ಚುರ್ ಎಂದಿತು. ಬರಬರುತ್ತಾ ಅವನ ಮೇಲಿನ ಅಸಹ್ಯ ಭಯ ಕೋಪ ಎಲ್ಲ ಮಾಯವಾಗಿ ಅವನ ತಲ್ಲಣ ಮನಸ್ಸನ್ನು ತುಂಬಿತು. ಪಾಪ. ಹೋಗಿ ಬೋಲ್ಟ್ ತೆಗೆಯಲೇ? ಹಾ! ಏನರ್ಥ?
ದಿಡಗ್ಗನೆ ಎದ್ದು ಕುಳಿತಳು. ಎದೆಬಡಿತ ಜೋರಾಗಿತ್ತು. ಮನಸ್ಸಿನಿಂದ ಆ ಎಲ್ಲ ಯೋಜನೆಗಳನ್ನು ಗುಡಿಸಿ ಹಾಕಲು ಯತ್ನಿಸಿ ಮುಸುಕೆಳೆದುಕೊಂಡಳು. ಅವನೊಬ್ಬ ಅತಿಥಿ, ಇಲ್ಲದ ಸಂಶಯ ತಾಳಬಾರದಿತ್ತು. ರೂಮಿನ ಬೋಲ್ಟ್ ಹಾಕಬಾರದಿತ್ತು, ಅವಮಾನಿಸಬಾರದಿತ್ತು. ಬಾಗಿಲು ತೆಗೆಯಲು ಎಷ್ಟು ಒದ್ದಾಡಿದನೋ ಈಗ ತಾನೇ ಬಾಗಿಲು ತೆಗೆದು ಒಂದು ಸಪ್ರೈಜ್ ಕೊಟ್ಟರೆ.
ಎದ್ದೇ ಬಿಟ್ಟಳು.
ಆದರೂ ಹೆಜ್ಜೆಯಲ್ಲಿ ನಡುಕ. ನಡುಗುವ ಕೈಯಿಂದಲೇ ಬೋಲ್ಟ್ ತೆಗೆದು ಹಿಂತಿರುಗಿ ತನ್ನ ರೂಮಿನ ಬೋಲ್ಟ್ ಹಾಕಿಕೊಂಡು ಮಲಗಿದಳು. ನಿದ್ದೆ ಸುಳಿಯಲಿಲ್ಲ. ತನ್ನ ರೂಂ ಬೋಲ್ಟ್ ತೆಗೆದು ಹಿಂತಿರುಗಿ ತನ್ನ ರೂಮಿನ ಬೋಲ್ಟ್ ಹಾಕಿಕೊಂಡು ಮಲಗಿದಳು.
ನಿದ್ದೆ ಸುಳಿಯಲಿಲ್ಲ. ತನ್ನ ರೂಂ ಬೋಲ್ಟ್ ಹಾಕಬಾರದಿತ್ತು. ಇದನ್ನೂ ತೆಗೆಯಲೇ? ಬೇಡ. ಅವನೇ ಬಾಗಿಲು ತಟ್ಟಲಿ. ಅವನಿಗೆ ಧೈರ್ಯ ಬಂದೀತೇ? ಊಹೂ. ಈಗಲೇ ತೆಗೆದು ತಾನು ಗಾಢ ನಿದ್ದೆಯಲ್ಲಿ ಇದ್ದೇನೆ ಎನ್ನುವಂತೆ ಮಲಗಿ ಬಿಡಬೇಕು.
ನಾಳೆ ಗಂಡ ಬರುತ್ತಲೇ ಹೇಗೆ ಮುಖ ತೋರಿಸುವುದು? ಸುಳಿವು ಸಿಕ್ಕರೆ? ತಾನು ಹೇಳುವುದಿಲ್ಲ. ಆರಡಿಯೂ ಹೇಳುವುದಿಲ್ಲ. ಇದೆಲ್ಲ ಒಂದು ಕೆಟ್ಟ ಕನಸು ಎಂದು ಸಹಿಸಿ ಸುಮ್ನಿದ್ದರೆ? ಇಂದಲ್ಲ ನಾಳೆ ಅವನಿಗೆ ತಿಳಿದರೆ?
ನನನ
ಮಾರನೇ ದಿನ ಅವನು ಅವಳು ಮತ್ತು ಫ್ರೆಂಡ್ ಮೂವರೂ ಹಾಲಲ್ಲಿ ಬೆಳಗಿನ ಕಾಫಿ ಕುಡಿಯುತ್ತಾ ಕುಳಿತಿದ್ದಾಗ ಗಂಡ 'ರಾತ್ರಿ ಎಂಥಾ ಕೆಲಸ ಮಾಡಿದಿ ಗೊತ್ತಾ? ರೂಂ ಬೋಲ್ಟ್ ಹಾಕಿದ್ದೆಯಂತೆ. ರಾತ್ರಿ ದಾಹ ಆಗಿ ಬಾಗಿಲು ತೆಗೆಯಲು ಹೋದರೆ ಬೋಲ್ಟ್ ಹಾಕಿದೆ. ನೀರಿಲ್ಲದೆ ಒದ್ದಾಡಿದನಂತೆ'.
ಹೆಂಡತಿ 'ಸಾರಿ, ಗೆಸ್ಟ್ ಬಂದಿದ್ದು ಮರೆತು ಎಂದಿನಂತೆ ಗೆಸ್ಟ್ ರೂಂ ಬೋಲ್ಟ್ ಹಾಕಿಬಿಟ್ಟೆ. ಆದರೆ ಆಮೇಲೆ ನೆನಪಾಗಿ ಬೋಲ್ಟ್ ತೆಗೆದಿದ್ದೆ' ಎಂದಳು ಗಂಡನ ಫ್ರೆಂಡ್ ಮುಖದತ್ತ ಓರೆ ನೋಟ ಬೀರಿ. 'ಪಾಪ ಅವನಿಗೆ ಅದು ಹೇಗೆ ಗೊತ್ತಾಗಬೇಕು?' ಎಂದ ಗಂಡ.
-ಸತ್ಯಬೋಧ