ಬಿಸಿಸಿಐ ಬಳಿ ಭಿಕ್ಷೆ ಬೇಡುವ ಅಗತ್ಯವಿಲ್ಲ: ಶೋಯೆಬ್ ಅಖ್ತರ್

ಇಸ್ಲಾಮಾಬಾದ್: ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಉತ್ತಮಗೊಳಿಸುವುದಕ್ಕಾಗಿ ಬಿಸಿಸಿಐ ಬಳಿ ಪಿಸಿಬಿ ಭಿಕ್ಷೆ ಬೇಡುವ ಅಗತ್ಯವಿಲ್ಲ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶೋಯೆಬ್ ಅಖ್ತರ್, ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಸಿಸಿಐ ಭಾರತ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದು, ಇದೇ ಕಾರಣಕ್ಕಾಗಿ ಚಾಂಪಿಯನ್ಸ್ ಲೀಗ್ ಟಿ-20 ಸರಣಿಯಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದ್ದ ಪಾಕಿಸ್ತಾನದ ಫೈಸಲಾಬಾದ್ ತಂಡಕ್ಕೆ ವೀಸಾ ನಿರಾಕರಿಸಿದೆ ಎಂದು ಹೇಳಿದ್ದಾರೆ.
'ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಧಾರ ನನಗೇನು ಅಚ್ಚರಿ ಉಂಟುಮಾಡಿಲ್ಲ. ಏಕೆಂದರೆ ಬಿಸಿಸಿಐನ ಈ ನಿಲುವನ್ನು ನಾನು ನಿರೀಕ್ಷಿಸಿದ್ದೆ. ಬಿಸಿಸಿಐ ಭಾರತ ಸರ್ಕಾರದ ನಿರ್ದೇಶನದಂತೆ ಪಾಕಿಸ್ತಾನ ತಂಡಕ್ಕೆ ವೀಸಾ ನಿರಾಕರಿಸಿದೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಬಿಸಿಸಿಐ ಬಳಿ ಭಿಕ್ಷೆ ಬೇಡುವ ಅಗತ್ಯವಿಲ್ಲ. ನಾವು ಉಭಯ ದೇಶಗಳ ಸರ್ಕಾರಗಳ ನಡುವಿನ ದ್ವಿಪಕ್ಷೀಯ ಮಾತುಕತೆ ಪುನಾರಂಭಗೊಳ್ಳುವ ಕುರಿತು ಮುಂದುವರೆಯಬೇಕೇ ಹೊರತು, ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿಯ ಬೆಂಬಲದ ನಿರೀಕ್ಷೆಯಲ್ಲಿರುವುದು ಸರಿಯಲ್ಲ'.
'ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಮುಂದುವರೆಸುವುದಕ್ಕಾಗಿ ಮತ್ತು ಭಾರತದಲ್ಲಿ ನಡೆಯುವ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟಿ-20 ಸರಣಿಗಳಲ್ಲಿ ಪಾಕಿಸ್ತಾನದ ಆಟಗಾರರನ್ನು ಸೇರಿಸಿಕೊಳ್ಳುವಂತೆ ಬಿಸಿಸಿಐ ಬಳಿ ಪದೇ ಪದೇ ಭಿಕ್ಷೆ ಬೇಡುವ ಅಗತ್ಯವಿಲ್ಲ. ಚಾಂಪಿಯನ್ಸ್ ಲೀಗ್ ಸರಣಿಯಿಂದ ನಾವು ಕಳೆದು ಕೊಳ್ಳುವುದಾದರೂ ಏನು? ಒಂದಷ್ಟು ಹಣವನ್ನು ಮಾತ್ರ. ಇದರಿಂದ ಪಾಕಿಸ್ತಾನಕ್ಕಾಗುವ ನಷ್ಟವೇನು ಇಲ್ಲ. ನಮ್ಮದೇ ರಾಷ್ಟ್ರೀಯ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಅಗತ್ಯವಿದ್ದು, ಪಿಸಿಬಿ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.
'ಪಾಕಿಸ್ತಾನದಲ್ಲಿಯೇ ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅನ್ನು ಬಲಪಡಿಸಬೇಕಿದ್ದು, ನಮ್ಮ ಕ್ರಿಕೆಟ್ ಬಲಗೊಂಡರೆ ನಾವು ಮತ್ತೊಬ್ಬರ ಕಾಲು ಹಿಡಿಯುವುದರ ಬದಲು ವಿಶ್ವವೇ ನಮ್ಮತ್ತ ಕಣ್ಣು ಹಾಯಿಸುತ್ತದೆ. ಹೀಗಾಗಿ ನಾವು ಬಿಸಿಸಿಐ ಕುರಿತು ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು. ನಮಗೆ ನಮ್ಮದೇ ಆದ ಆತ್ಮಗೌರವವಿದ್ದು, ಅದನ್ನು ಪ್ರದರ್ಶಿಸಬೇಕು' ಎಂದು ಅಖ್ತರ್ ಹೇಳಿದ್ದಾರೆ.
ಧೋನಿಯನ್ನು ಶ್ಲಾಘಿಸಿದ ರಾವಲ್ಪಿಂಡಿ ಎಕ್ಸ್ಪ್ರೆಸ್
ಬಿಸಿಸಿಐ ವಿರುದ್ಧ ಪರೋಕ್ಷ ಕೆಂಡಕಾರುತ್ತಲೇ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಅಖ್ತರ್ ಕೊಂಡಾಡಿದ್ದಾರೆ. ಅಲ್ಲದೆ ಧೋನಿ ಅವರನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರಿಗೆ ಹೋಲಿಕೆ ಮಾಡಿದ್ದಾರೆ.
'ಪಾಕಿಸ್ತಾನ ಕ್ರಿಕೆಟ್ ತಂಡಲ್ಲಿ ಪ್ರಸ್ತುತ ಸಮಸ್ಯೆಗಳಿರುವುದು ನಿಜ. ಇದೀಗ ನಮ್ಮ ತಂಡಕ್ಕೆ ಇಮ್ರಾನ್ ಖಾನ್ರಂತಹ ದಿಟ್ಟ ನಾಯಕರಿಲ್ಲ. ತಂಡಕ್ಕೆ ಸ್ಪೂರ್ತಿ ನೀಡಬಲ್ಲ ಆಟಗಾರರ ಕೊರತೆ ಕೂಡ ನಮ್ಮನ್ನು ಕಾಡುತ್ತಿದೆ. ಆದರೆ ಭಾರತೀಯ ಕ್ರಿಕೆಟ್ ಪ್ರಸ್ತುತ ರಾರಾಜಿಸುತ್ತಿದೆ ಎಂದರೆ ಅದಕ್ಕೆ ಕಾರಣ ಐಪಿಎಲ್ ಅಥವಾ ಬಿಸಿಸಿಐ ಅಲ್ಲ. ಕೇವಲ ಮಹೇಂದ್ರ ಸಿಂಗ್ ಧೋನಿ ಮಾತ್ರ. ಧೋನಿಗೆ ಇಮ್ರಾನ್ ಖಾನ್ರಲ್ಲಿದ್ದ ಎಲ್ಲ ನಾಯಕತ್ವ ಗುಣಗಳಿದ್ದು, ತಂಡಕ್ಕೆ ಅವರು ಸ್ಪೂರ್ತಿಯಾಗಿ ನಿಲ್ಲಬಲ್ಲರು. ಧೋನಿ ತಮ್ಮ ವಿಶಿಷ್ಟ ನಡೆಗಳ ಮೂಲಕ ಭಾರತ ಕ್ರಿಕೆಟ್ ಚಿತ್ರಣವನ್ನೇ ಬದಲಿಸಿದ್ದಾರೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಒಟ್ಟಾರೆ ಶೋಯೆಬ್ ಅಖ್ತರ್ ಅವರ ಸಂದರ್ಶನವನ್ನು ಗಮನಿಸಿದರೆ, ಪಾಕಿಸ್ತಾನ ಕ್ರಿಕೆಟ್ ತಂಡ ಫೈಸಲಾಬಾದ್ ವೋಲ್ವ್ಸ್ ತಂಡಕ್ಕೆ ವೀಸಾ ನಿರಾಕರಿಸಿದ್ದರ ವಿರುದ್ಧ ತಮ್ಮ ಮನದಾಳದ ಆಕ್ರೋಶವನ್ನು ಅವರು ಹೊರಹಾಕಿದ್ದು, ಕ್ರಿಕೆಟ್ ಬಗ್ಗೆ ತಮಗಿರುವ ಕಾಳಜಿಯನ್ನು ತೋರ್ಪಡಿಸಿದ್ದಾರೆ. ಅಂತೆಯೇ ಧೋನಿ ಕುರಿತು ಅವರು ಹೊಂದಿರುವ ಭಾವನೆಗಳನ್ನು ಅವರು ಹೊರಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


