ಹೆಚ್ಚುವರಿ ಇಲ್ಲ ಬಿಡಿ
ಜನಸಾಮಾನ್ಯರ ಪಾಲಿಗೆ ಹೊರೆ ಬಿದ್ದರೂ ಕಾಣದಂತಿರಬೇಕು, ಹಣಕಾಸು ಸಮಸ್ಯೆ ಎದುರಿಸುತ್ತಿರುವ ರೇಲ್ವೆ ಇಲಾಖೆಯನ್ನೂ ಲಾಭದ ಹಳಿಗೆ ತರಬೇಕು ಎನ್ನುವ ಗುರಿಯಿಟ್ಟುಕೊಂಡು ಬುದ್ಧಿವಂತಿಕೆಯ ಬಜೆಟ್ ಮಂಡಿಸಿದ್ದಾರೆ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್.
ಪ್ರಯಾಣ ದರ ಏರಿಕೆ ಇಲ್ಲ ಎನ್ನುತ್ತಲೇ ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಪೂರಕ ಶುಲ್ಕವನ್ನು 5ರಿಂದ 25ರ ವರೆಗೆ ಏರಿಸಿದ್ದಾರೆ. ಈ ಮೂಲಕ ಸುತ್ತುಬಳಸಿ ಪ್ರಯಾಣ ದರ ಹೆಚ್ಚಿಸಿ ರೇಲ್ವೆಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸುವ ಪ್ರಯತ್ನವನ್ನು ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಮಾಡಿದ್ದಾರೆ.
ಸುರಕ್ಷತೆಗೆ ಆದ್ಯತೆ: ಮಂಗಳವಾರ ಲೋಕಸಭೆಯಲ್ಲಿ ಮಂಡನೆಯಾದ 2013- 14ನೇ ಸಾಲಿನ 63,363 ಕೋಟಿ ಬಜೆಟ್‌ನಲ್ಲಿ ಆಧುನಿಕ ಸುರಕ್ಷತೆ ಮತ್ತು ಸುಖಕರ ಪ್ರಯಾಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. 106 ಹೊಸ ರೈಲುಗಳು, 500 ಕಿ.ಮೀ. ಹೊಸ ಮಾರ್ಗಗಳು, 750 ಕಿ.ಮೀ.ನಷ್ಟು ಮಾರ್ಗ ಡಬ್ಲಿಂಗ್ ಮತ್ತು 450 ಕಿ.ಮೀ. ಮಾರ್ಗದಲ್ಲಿ ಗೇಜ್ ಪರಿವರ್ತನೆ, ಇ- ಟಿಕೆಟಿಂಗ್, ಎಸ್‌ಎಂಎಸ್ ಮಾಹಿತಿಯಂಥ ಸೌಲಭ್ಯಗಳ ವಿಸ್ತರಣೆಗಳ ಘೋಷಣೆಗಳಿವೆ.
ಕ್ಯಾಟರಿಂಗ್, ಆಧುನಿಕ ಕೋಚ್‌ಗಳನ್ನು ಪರಿಚಯಿಸುವ ಮೂಲಕ 100 ವರ್ಷಗಳಷ್ಟು ಇತಿಹಾಸ ಹೊಂದಿರುವ ರೇಲ್ವೆಗೆ ಆಧುನಿಕ ಸ್ಪರ್ಶ ನೀಡುವ ಪ್ರಯತ್ನವಿದೆ. ಸುರಕ್ಷತೆಯ ಜತೆಗೆ ರೇಲ್ವೆ ನಿಲ್ದಾಣಗಳ ಶುಚಿತ್ವಕ್ಕೂ ಮಹತ್ವ ನೀಡಲಾಗಿದೆ.
ಜನಪ್ರಿಯ ಬಜೆಟ್: ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಯುಪಿಎ ಸರ್ಕಾರದ ಈ ಕೊನೆಯ ರೇಲ್ವೆ ಬಜೆಟ್‌ನಲ್ಲಿ ಹೊರೆಯೆನಿಸದ ಘೋಷಣೆಗಳನ್ನಷ್ಟೇ ಸೇರಿಸಲಾಗಿದೆ.
ದರ ಏರಿಕೆಯ ಪರಿಣಾಮವನ್ನು ಚೆನ್ನಾಗಿಯೇ ಅರಿತಿರುವ ಬನ್ಸಲ್, ಕಳೆದ ಜನವರಿಯಲ್ಲಷ್ಟೇ ದರ ಹೆಚ್ಚಿಸಲಾಗಿದೆ. ಹಾಗಾಗಿ ಮತ್ತೊಮ್ಮೆ ಜನಸಾಮಾನ್ಯರ ಮೇಲೆ ಹೊರೆ ಹೊರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ಹೈಸ್ಪೀಡ್ ಡೀಸೆಲ್‌ದರ ನಿಯಂತ್ರಣ ಮುಕ್ತಗೊಂಡದ್ದರಿಂದ ರೇಲ್ವೆ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ ಎನ್ನುವ ಅರಿವು ಅವರಿಗೂ ಇದೆ. ಹಾಗಾಗಿ ಈ ಸಮಸ್ಯೆ ನಿವಾರಣೆಗೆ ಹೊಸ ವ್ಯವಸ್ಥೆಯೊಂದರ ಅನುಷ್ಠಾನದ ಅಗತ್ಯ ಇದೆ ಎಂದು ತಮ್ಮ 80 ನಿಮಿಷದಷ್ಟು ದೀರ್ಘ ಬಜೆಟ್ ಭಾಷಣದಲ್ಲಿ ಬನ್ಸಲ್ ಪ್ರಕಟಿಸಿದ್ದಾರೆ.
ಮುಂದಿನ ದರ ಪರಿಷ್ಕರಣೆ ವೇಳೆ ಇಂಧನ ವೆಚ್ಚ ಹೊಂದಾಣಿಕೆ ದರ(ಎಫ್‌ಎಸಿ)ವನ್ನೂ ಪರಿಗಣಿಸುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇಂಥದ್ದೊಂದು ಪ್ರಸ್ತಾಪವನ್ನು ಹಿಂದಿನ ರೇಲ್ವೆ ಸಚಿವ ದಿನೇಶ್ ತ್ರಿವೇದಿ ಅವರೂ ಪ್ರಸ್ತಾಪಿಸಿದ್ದರು. ಈ ವ್ಯವಸ್ಥೆ ಜಾರಿಯಿಂದ ಸದ್ಯಕ್ಕಲ್ಲದಿದ್ದರೂ ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಪ್ರಯಾಣ ಹಾಗೂ ಸರಕು ಸಾಗಣೆ ದರದಲ್ಲಿ ಶೇ.5ರಿಂದ 6ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಇದೇ ವೇಳೆ, ಕುಂಭಮೇಳದ ವೇಳೆ ಅಲಹಾಬಾದ್‌ನಲ್ಲಿ ನಡೆದ ಕಾಲ್ತುಳಿತದ ಘಟನೆಯನ್ನು ಪ್ರಸ್ತಾಪಿಸಿದ ಅವರು, ಇಂಥ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮಕೈಗೊಳ್ಳಲಿದೆ. 10,797 ಮಾನವ ರಹಿತ ಲೆವೆಲ್ ಕ್ರಾಸಿಂಗ್ ಅದನ್ನು ಬದಲಾಯಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇವರು ಹಿಂಗಂದ್ರು
ಸಚಿವರು ಅತ್ಯಂತ ಜವಾಬ್ದಾರಿಯುತ, ಕಾರ್ಯಸಾಧ್ಯ ಅನುಷ್ಠಾನಗೊಳಿಸಬಲ್ಲ ಬಜೆಟ್ ಮಂಡಿಸಿದ್ದಾರೆ. ರೇಲ್ವೆಯಲ್ಲಿನ ಸಂಪನ್ಮೂಲದ ಮಿತಿಯೊಳಗೆ ಸೌಲಭ್ಯ ಒದಗಿಸುವ ಮೂಲಕ ಅಸಾಧಾರಣ ಕಾರ್ಯ ಮಾಡಿದ್ದಾರೆ.
- ಚಿದಂಬರಂ, ಹಣಕಾಸು ಸಚಿವ
ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ ಪ್ರಯಾಣಿಕರ ಸುರಕ್ಷತೆಯ ಗುರಿ ಹೊಂದಿದೆ. ಪ್ರಯೋಜನಕಾರಿ ಬಜೆಟ್ ಮಂಡಿಸಿರುವ ಸಚಿವ ಬನ್ಸಲ್ ಕಾರ್ಯ ನಿಜಕ್ಕೂ ಶ್ಲಾಘನೀಯ.
- ಕಪಿಲ್ ಸಿಬಲ್, ಸಚಿವ
ಕೇಂದ್ರ ಸಚಿವ ಪವನಕುಮಾರ್ ಬನ್ಸಾಲ್ ದೂರದೃಷ್ಟಿ ಇಲ್ಲದ ದೇಶ ಮತ್ತು ರೇಲ್ವೆ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಮಂಡಿಸಿದ್ದಾರೆ. ಇದು ಜನ ಸಾಮಾನ್ಯರ ಮೇಲಿನ ಹೊರೆ ಹೆಚ್ಚಿಸಲಿದೆ.
- ಅನಂತಕುಮಾರ್, ಸಂಸದ
ಬನ್ಸಲ್ ಮಂಡಿಸಿದ ರೇಲ್ವೆ ಬಜೆಟ್‌ನಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಲಾಭವಾಗಿಲ್ಲ. ಹಿಂಬಾಗಿಲಿನ ಮೂಲಕ ದರವನ್ನು ಹೆಚ್ಚಿಸಲಾಗಿದೆ. ಇದೊಂದು ನಿರಾಶಾದಾಯಕ ಬಜೆಟ್.
- ಮಾಯಾವತಿ, ಬಿಎಸ್ಪಿ ನಾಯಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

