ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ನವದೆಹಲಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಸುದ್ದಿಗೋಷ್ಠಿ ವೇಳೆ ಯುವಕನೊಬ್ಬ ಕೇಜ್ರಿವಾಲ್ ಮೇಲೆ ಶಾಯಿ ಎರಚಿದ ಘಟನೆ ನಡೆಯಿತು. ಯುವಕನ ಹೆಸರು ನಚಿಕೇತ. ಈತ ಮಹಾರಾಷ್ಟ್ರದವನಾಗಿದ್ದು ಬಿಜೆಪಿ ಬೆಂಬಲಿಗ ಎಂದು ಹೇಳಿಕೊಂಡಿದ್ದಾನೆ. ಗಾಂಧಿವಾದಿ ಅಣ್ಣಾ ಹಜಾರೆ ಹೆಸರನ್ನು ಕೇಜ್ರಿವಾಲ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಈ ಕೃತ್ಯವೆಸಗಿದೆ ಎಂದು ನಚಿಕೇತ ಹೇಳಿಕೊಂಡಿದ್ದಾನೆ. ಆದರೆ, ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು, ನಚಿಕೇತಾ ಬಿಜೆಪಿ ಕಾರ್ಯಕರ್ತನಲ್ಲ ಎಂದಿದ್ದಾರೆ. ಹಜಾರೆ ಅವರು ಭಾನುವಾರ ರಾತ್ರಿ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು. ಲೋಕಪಾಲ ಹೋರಾಟಕ್ಕಾಗಿ ಸಂಗ್ರಹಿಸಿದ್ದ ಹಣವನ್ನು ಎಎಪಿ ದೆಹಲಿ ಚುನಾವಣೆಗೆಂದು ವ್ಯಯಿಸುತ್ತಿದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಲೆಂದು ಕೇಜ್ರಿವಾಲ್ ಸುದ್ದಿಗೋಷ್ಠಿ ಕರೆದಿದ್ದರು. ಜತೆಗೆ, ಲೋಕಪಾಲ ಆಂದೋಲನದ ಹಣದಲ್ಲಿ ಒಂದು ಪೈಸೆಯನ್ನೂ ಚುನಾವಣೆಗೆ ಬಳಸಿಲ್ಲ ಎಂಬ ಸ್ಪಷ್ಟನೆ ನೀಡಿದ್ದರು.