

ರಾಂಚಿ: ಜಾರ್ಖಂಡ್‌ನಲ್ಲಿ 4ನೇ ಹಂತದ ಚುನಾವಣೆ ನಾಳೆ ನಡೆಯಲಿದ್ದು, ಹಲವರು ಹಾಲಿ ಮಾಜಿ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ.
ಜಾರ್ಖಂಡ್ ವಿಧಾನಸಭೆಗೆ 5 ಹಂತದಲ್ಲಿ ಚುನಾವಣೆ ನಡೆಯಲಿದ್ದು, ನಾಳೆ ನಡೆಯಲಿರುವ 4ನೇ ಹಂತದಲ್ಲಿ 15 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
16 ಮಹಿಳೆಯರೂ ಸೇರಿದಂತೆ 217 ಅಭ್ಯರ್ಥಿಗಳು ಕಣದಲ್ಲಿದ್ದು, 43,48,709 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನಾಳೆ ನಡೆಯಲಿರುವ ಮತದಾನ ಸಂದರ್ಭದಲ್ಲಿ ಮಾವೋ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮಾವೋ ಉಗ್ರರ ಉಪಟಳವಿರುವ ಜಾರ್ಖಂಡ್‌ನಲ್ಲಿ ಮೂರು ಹಂತದ ಚುನಾವಣೆಗಳು ಶಾಂತಿಯುತವಾಗಿ ನಡೆದಿವೆ. ಆದರೆ 4 ಮತ್ತು 5ನೇ ಹಂತದಲ್ಲಿ ಕೆಂಪು ಉಗ್ರರು ತಮ್ಮ ಬಾಲ ಬಿಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.