

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಅವರ ಆಸ್ತಿಯನ್ನು ಹರಾಜು ಹಾಕುವಂತೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ರಜನಿಕಾಂತ್ ಅವರ ಕೊಚ್ಚಾಡೈಯಾನ್ ಚಿತ್ರ ನಿರ್ಮಾಣಕ್ಕಾಗಿ ಎಕ್ಸಿಮ್ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡದ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿದೆ.
ರಜನಿಕಾಂತ್ ಅವರ ಮಗಳಾದ ಸೌಂದರ್ಯ ರಜನಿಕಾಂತ್ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ಆ್ಯನಿಮೇಟೆಡ್ ಚಿತ್ರ ಕೊಚ್ಚಾಡೈಯಾನ್ ಗಾಗಿ ರಜನಿ ಅವರ ಪತ್ನಿ ಲತಾ ಅವರು ಎಕ್ಸಿಮ್ ಬ್ಯಾಂಕಿನಿಂದ ಸುಮಾರು 22 ಕೋಟಿ ರುಪಾಯಿಗಳನ್ನು ಸಾಲ ಪಡೆದಿದ್ದರು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ಮಕಾಡೆ ಮಲಗಿತ್ತು. ಚಿತ್ರದಿಂದಾಗಿ ರಜನಿಕಾಂತ್ ಅವರ ನಿರ್ಮಾಣ ಸಂಸ್ಥೆ ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗೆ ಸಾಕಷ್ಟು ನಷ್ಟವಾಗಿತ್ತು. ಸಾಲ ಪಡೆದ ಬಳಿಕ ಲತಾ ಅವರು ಕನಿಷ್ಟ ಬಡ್ಡಿಯನ್ನೂ ನೀಡಿಲ್ಲ. ಹೀಗಾಗಿ ಇದೀಗ ಆ ಸಾಲವನ್ನು ಬಡ್ಡಿ ಸಹಿತ ಮರು ಪಾವತಿ ಮಾಡಬೇಕು ಎಂದು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಪೆರಂಬದೂರಿನಲ್ಲಿರುವ ರಜನಿಕಾಂತ್ ಅವರ 2.13 ಎಕರೆ ಜಾಗವನ್ನು ಹರಾಜು ಮಾಡಲು ಎಕ್ಸಿಮ್ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.