

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗಾಗಿ ಪ್ರತ್ಯೇಕ ಟೌನ್‌ಶಿಪ್ ನಿರ್ಮಾಣದ ವಿರುದ್ಧ ಜೆಕೆಎಲ್‌ಎಫ್ ಶುಕ್ರವಾರ ಪ್ರತಿಭಟನೆ ನಡೆಸಿತು.
ಜೆಕೆಎಲ್‌ಎಫ್ ಕಾರ್ಯಕರ್ತರು ಉದ್ದೇಶಿತ ಪಂಡಿತ ಟೌನ್‌ಶಿಪ್ ವಿರುದ್ಧ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವಂತೆ ಪೊಲೀಸರು ಕರೆ ನೀಡಿದ್ದರೂ ಕೆಲವು ಯುವಕರು ಪೊಲೀಸರ ಮೇಲೆ ಕಲ್ಲು ತೂರಿದರು. ಇದರಿಂದ ಕೆಲ ಕಾಲ ಉದ್ವೀಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಜೆಕೆಎಲ್‌ಎಫ್ ಮತ್ತು ಹುರಿಯತ್ ಕಾನ್ಫೆರೆನ್ಸ್ ಸೇರಿದಂತೆ ಕೆಲವು ಪ್ರತ್ಯೇಕವಾದಿಗಳು ಪ್ರತಿಭಟನೆ ಕರೆ ನೀಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಕಾಶ್ಮೀರಿ ಪಂಡಿತರಿಗಾಗಿ ಪ್ರತ್ಯೇಕ ಟೌನ್‌ಶಿಪ್ ನಿರ್ಮಿಸುವ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.