

ಶ್ರೀನಗರ: ಪಾಕಿಸ್ತಾನದ ಬಾವುಟ ಹಾರಿಸಿದ ಪ್ರಕರಣಕ್ಕೆಸಂಬಂಧಿಸಿದಂತೆ ಪ್ರತ್ಯೇಕತಾವಾದಿ ಮಸರತ್ ಅಲಂ ಬಂಧನ ವಿರೋಧಿಸಿ ಜಮ್ಮ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಕೈಗೊಂಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಪ್ರತ್ಯೇಕತಾವಾದಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಪೊಲೀಸರು ಸೇರಿದಂತೆ ಕನಿಷ್ಠ 14 ಜನರು ಗಾಯಗೊಂಡಿದ್ದಾರೆ.
ಟ್ರಾಲ್ ಪಟ್ಟಣದಲ್ಲಿ ಭಯೋತ್ಪಾದಕ ನಿಗ್ರಹ ದಳ ನಡೆಸಿದ ದಾಳಿಯಲ್ಲಿ ಇತ್ತೀಚೆಗೆ ದಕ್ಷಿಣ ಕಾಶ್ಮೀರದ ಯುವಕ ಹತ್ಯೆಗೀಡಾದ ಪ್ರಕರಣ ವಿರೋಧಿಸಿ ಪ್ರತ್ಯೇಕವಾದಿ ನಾಯಕ ಮಿರ್ವಾಜ್ ಉಮರ್ ಫಾರೂಕ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ.
ಪ್ರತಿಭಟನಾಕಾರರು ಕಲ್ಲು ತೂರಾಟಕ್ಕೆ ಮುಂದಾದ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಗೆ ಮುಂದಾಗಿದ್ದಾರೆ. ಬಳಿಕ ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಲು ಯತ್ನಿಸಿದರು.
ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಗಿಲಾನಿ ಹಾಗೂ ಮಸರತ್ ಅಲಂ ಅವರನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನಾಕಾರರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಅಲ್ಲದೇ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.