

ನವದೆಹಲಿ: ಭೂಕಂಪ ಪೀಡಿತ ನೇಪಾಳದಲ್ಲಿ ನೂರಾರು ಕನ್ನಡಿಗರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ತುರ್ತು ರಕ್ಷಣೆಗಾಗಿ ಬೆಂಗಳೂರಿನಿಂದ ಹೋಗಿದ್ದ ಇಬ್ಬರು ಹಿರಿಯ ಅಧಿಕಾರಿಗಳ ತಂಡ ಮರಳಿ ಬೆಂಗಳೂರಿಗೆ ಬರಲಿದೆ.
ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಇಬ್ಬರು ಅಧಿಕಾರಿಗಳ ನೇತೃತ್ವದ ತಂಡ ಕನ್ನಡಿಗರ ರಕ್ಷಣೆ ಮಾಡಲೆಂದು ಸರ್ಕಾರ ನೇಮಿಸಿತ್ತು. ಸರ್ಕಾರದ ಆದೇಶದಂತೆ ಇಂದು ಇಂಡಿಗೋ ವಿಮಾನದ ಮೂಲಕ ನೇಪಾಳಕ್ಕೆ ಹೋದ ಅಧಿಕಾರಿಗಳ ತಂಡಕ್ಕೆ ಅಲ್ಲಿನ ಸರ್ಕಾರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಅನುಮತಿ ನೀಡಿಲ್ಲ.
ನೇಪಾಳದಲ್ಲಿ ಈಗಾಗಲೇ ಮರಣಮೃದಂಗ ಬಾರಿಸಿರುವ ಭೂಕಂಪ ಇಂದೂ ಸಹ ಮುಂದುವರೆದ ಹಿನ್ನೆಲೆಯಲ್ಲಿ ಅಲ್ಲಿನ ಎಟಿಸಿ ಅಧಿಕಾರಿಗಳು ವಿಮಾನ ಲ್ಯಾಂಡಿಂಗ್ ಅನುಮತಿ ನೀಡಿಲ್ಲ ಎಂದು ಹೇಳಲಾಗುತ್ತಿದ್ದು, ಬೆಂಗಳೂರಿನಿಂದ ಹೋದ ಅಧಿಕಾರಿಗಳು ಮತ್ತೆ ಹಿಂದಿರುಗಿ ಬರುವಂತಾಗಿದೆ.