

ನವದೆಹಲಿ: ವೇತನ ಸಹಿತ ಪ್ರಸೂತಿ ರಜೆ ಅವಧಿಯನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.
ಪ್ರಸ್ತುತ 12 ವಾರಗಳ ರಜೆ ನೀಡಲಾಗುತ್ತಿದ್ದು ಇದನ್ನು 24 ವಾರಗಳಿಗೆ ವಿಸ್ತರಣೆ ಮಾಡಲು 1961 ರ ಪ್ರಸೂತಿ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ ನಡೆಸಿದೆ.
ಪ್ರಸೂತಿ ರಜೆಯನ್ನು ವಿಸ್ತರಿಸುವ ಪ್ರಸ್ತಾವನೆಯ ಕುರಿತು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಲಿಖಿತ ಉತ್ತರದ ಮೂಲಕ ಸಂಸತ್ ಗೆ ತಿಳಿಸಿದ್ದಾರೆ. ಈವರೆಗೆ ಸೆಕ್ಷನ್ 5 (3) ಪ್ರಕಾರ ಉದ್ಯೋಗದಲ್ಲಿರುವ ಮಹಿಳೆ 12 ವಾರಗಳವರೆಗೆ ಪ್ರಸೂತಿ ರಜೆ ಪಡೆಯಬಹುದಾಗಿದೆ. ಇದರಲ್ಲಿ 6 ವಾರಗಳು ಪ್ರಸೂತಿಗೂ ಮುನ್ನ ನೀಡುವ ರಜೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬೋನಸ್ ನ್ನು ದ್ವಿಗುಣಗೊಳಿಸುವ ಹಾಗೂ ಕೆಲಸವನ್ನು ಬದಲಾವಣೆ ಮಾಡಿದಾಗ ಬೋನಸ್ ನ್ನು ವರ್ಗಾವಣೆ ಮಾಡುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.