ಬಯಲಾದ ಇಂದ್ರಾಣಿಯ ಬಾಲ್ಯದ ಭಯಾನಕ ಹಿಂಸೆ

ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಬಂಧಿತ ಇಂದ್ರಾಣಿ ಮುಖರ್ಜಿಯ ಮದುವೆ ಮತ್ತು ಸಂಬಂಧಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇತ್ತೀಚಿನ ಹೊಸ ವಿವರಗಳು ಆಕೆಯ ಬಾಲ್ಯ ಕೂಡ ತೀರಾ..
ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಮತ್ತು ಕೊಲೆಯಾದ ಶೀನಾ ಬೋರಾ (ಸಂಗ್ರಹ ಚಿತ್ರ)
ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಮತ್ತು ಕೊಲೆಯಾದ ಶೀನಾ ಬೋರಾ (ಸಂಗ್ರಹ ಚಿತ್ರ)
Updated on: 

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಬಂಧಿತ ಇಂದ್ರಾಣಿ ಮುಖರ್ಜಿಯ ಮದುವೆ ಮತ್ತು ಸಂಬಂಧಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇತ್ತೀಚಿನ ಹೊಸ ವಿವರಗಳು ಆಕೆಯ ಬಾಲ್ಯ ಕೂಡ ತೀರಾ ಸಂಕೀರ್ಣ ಮತ್ತು ಅಮಾನವೀಯ ಘಟನೆಗಳಿಂದ ತುಂಬಿತ್ತು ಎಂಬ ಸಂಗತಿಯನ್ನು ಹೊರಹಾಕಿವೆ.

ಕೊಲೆಯಾಗಿರುವ ಶೀನಾ ತನ್ನ ಸಹೋದರಿ ಎಂದು ಸುತ್ತಮುತ್ತಲಿನವರನ್ನು ನಂಬಿಸಿದ್ದ ಇಂದ್ರಾಣಿ ಬಂಧನವಾಗುತ್ತಿದ್ದಂತೆ ಆಕೆ ತನ್ನ ಮಗಳು ಎಂಬ ಸತ್ಯ ನುಡಿಯುವ ಮೂಲಕ ಅಚ್ಚರಿ  ಹುಟ್ಟಿಸಿದ್ದರು. ಅದಾದ ಬಳಿಕ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ, ಮತ್ತೊಬ್ಬ ಸಂಗಾತಿ ಸಿದ್ದಾರ್ಥ್ ದಾಸ್ ಜೊತೆಗಿನ ಸಂಬಂಧಗಳ ವಿವರಗಳು ಬೆಳಕಿಗೆ ಬಂದಿದ್ದವು. ಆದರೆ, ಇದೆಲ್ಲಕ್ಕಿಂತ ಭಯಾನಕವಾದ ಸಂಗತಿ ಇದೀಗ ಆಕೆಯ ಬಾಲ್ಯದ ದಿನಗಳಿಂದ ಹೊರಬಂದಿದೆ.

ಇಂದ್ರಾಣಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಮುಂಬೈ ಪೊಲೀಸರಿಗೆ ಆಕೆ ನೀಡುತ್ತಿರುವ ತನ್ನ ಬದುಕಿನ ಆಘಾತಕಾರಿ ಅನುಭವಗಳು ಬೆಚ್ಚಿಬೀಳಿಸುತ್ತಿದ್ದು, ಆಕೆಯ ಬಾಲ್ಯ ತೀರಾ ಭೀಕರ  ಎಂದು ಮುಂಬೈ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ ಎಂದು  ತಿಳಿದುಬಂದಿದೆ. ಇಂದ್ರಾಣಿಯ ಬಾಲ್ಯ ಸಹಜವಾಗಿರಲಿಲ್ಲ. ಬಾಲಕಿಯಿದ್ದಾಗಲೇ ಸ್ವತಃ ಆಕೆಯ ತಂದೆ ಉಪೇಂದ್ರ  ಬೋರಾನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಬಹುಶಃ ಆಕೆಯ ತಂದೆ ಉಪೇಂದ್ರ ಬೋರಾನೊಂದಿಗಿನ ದೈಹಿಕ ಸಂಪರ್ಕದಿಂದಲೇ ಶೀನಾ ಹುಟ್ಟಿರಬಹುದು ಎಂದು ಮುಂಬೈ  ಪೊಲೀಸ್ ಮೂಲಗಳು ಹೇಳಿವೆ.

ಇನ್ನೂ ಕೆಲವು ಮಾಹಿತಿ ಪ್ರಕಾರ, ಉಪೇಂದ್ರ ಕೂಡ ಇಂದ್ರಾಣಿಯ ನಿಜವಾದ ತಂದೆಯಾಗಿರಲಿಕ್ಕಿಲ್ಲ. ಆದರೆ, ಆಕೆಗೆ ತನ್ನ ತಾಯಿ ದುರ್ಗಾ ರಾಣಿಯೊಂದಿಗೆ ಆಪ್ತತೆ ಇತ್ತು. ಮಲತಂದೆಯ  ಲೈಂಗಿಕ ದೌರ್ಜನ್ಯದಿಂದ ಬೇಸತ್ತೇ ತಾನು ಮನೆಬಿಟ್ಟಿದ್ದಾಗಿ ಇಂದ್ರಾಣಿ ಅವರೇ ಕೆಲವರಲ್ಲಿ ಹೇಳಿಕೊಂಡಿದ್ದರು ಎಂದು ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾಗಿ ಖಾಸಗಿ ಸುದ್ದಿ ಸಂಸ್ಥೆ ವರದಿ  ಮಾಡಿದೆ. ಅಲ್ಲದೆ, ಶೀನಾಳ ಜನ್ಮದಾಖಲೆಗಳಲ್ಲಿ ಆಕೆಯ ತಂದೆ ತಾಯಿ ಎಂದು ಉಪೇಂದ್ರ ಹಾಗೂ ದುರ್ಗಾ ಹೆಸರು ನಮೂದಿಸಿರುವ ಹಿನ್ನೆಲೆಯಲ್ಲಿ ಇಂದ್ರಾಣಿಯವರ ದುರಂತ ಬಾಲ್ಯದ  ವಿವರಗಳು ತನಿಖೆಗೆ ಮಹತ್ವದ ಸುಳಿವು ನೀಡಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಒಟ್ಟಾರೆ, ವ್ಯಕ್ತಿಯೊಬ್ಬರ ಬಾಲ್ಯದ ಅಮಾನವೀಯ ಆಘಾತಗಳು ಇಡೀ ಬದುಕನ್ನು ಎಷ್ಟೆಲ್ಲಾ ಗೊಂದಲ, ದುರಂತಗಳಿಗೆ ನೂಕಬಹುದು ಎಂಬುದಕ್ಕೆ ಇಂದ್ರಾಣಿ ಪ್ರಕರಣ ಅತ್ಯಂತ ಮಾನವೀಯ  ನಿದರ್ಶನವಾದಂತಿದೆ. ಶುಕ್ರವಾರ ಇಂದ್ರಾಣಿಯ ಎರಡನೇ ಪತಿ ಖನ್ನಾನನ್ನು ಪೊಲೀಸ್ ವಶಕ್ಕೆ ವಹಿಸಲಾಗಿದ್ದು, ಇಂದ್ರಾಣಿ ಹಾಗೂ ಚಾಲಕ ರಾಯ್ ರೊಂದಿಗೆ ಜಂಟಿ ವಿಚಾರಣೆಗಾಗಿ ಖನ್ನಾ ನನ್ನು ನಿಗೂಢ ಸ್ಥಳಕ್ಕೆ ಕರೆದೊಯ್ದಿದ್ದರು. ಇಂದ್ರಾಣಿ ಹಾಲಿ ಪತಿ ಪೀಟರ್ ಮುಖರ್ಜಿಯನ್ನೂ ವಿಚಾರಣೆಗೊಳಪಡಿಸಿದರು. ಶೀನಾ ತನ್ನ ಸಹೋದರಿ ಎಂದು ಇಂದ್ರಾಣಿ ಹೇಳಿದ್ದರು ಎಂದಿದ್ದ  ಪೀಟರ್, ವಿಚಾರಣೆ ವೇಳೆ ವ್ಯತಿರಿಕ್ತ ಹೇಳಿಕೆ ನೀಡಿದ್ದು, ತನ್ನ ಮಗಳು ಎಂದು ಇಂದ್ರಾಣಿ ಹಿಂದೆಯೇ ತನಗೆ ಹೇಳಿದ್ದರು ಎಂದಿದ್ದಾರೆ.

ತಪ್ಪೊಪ್ಪಿಕೊಂಡ ಖನ್ನಾ
ಶೀನಾ ಕೊಲೆಯಲ್ಲಿ ತನ್ನ ಪಾತ್ರವಿರುವುದಾಗಿ ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಹೀಗೆಂದು ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ  ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಇಂದ್ರಾಣಿಯ ಮಗ, ಶೀನಾಳ ಸೋದರ ಮಿಖಾಯಿಲ್ ಶುಕ್ರವಾರ ಗುವಾಹಟಿಯಿಂದ ಮುಂಬೈಗೆ ಆಗಮಿಸಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com