

ನವದೆಹಲಿ: ಬಹು ಚರ್ಚಿತ ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಆರ್‌ಎಸ್‌ಎಸ್'ಗೆ ಶಿವಸೇನೆ ಗುರುವಾರ ಎಚ್ಚರಿಕೆ ನೀಡಿದೆ.
ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ರಾಮ ದೇಗುಲ ನಿರ್ಮಾಣ ಮಾಡಬೇಕೆಂಬ ಇಚ್ಛೆ ನಮಗೂ ಇದೆ. ಆದರೆ ಅದಕ್ಕೆ ಸಮಯ ಕೂಡಿ ಬರಬೇಕಿದೆ. ರಾಮ ದೇಗುಲ ಕುರಿತ ವಿಚಾರವನ್ನು ಉತ್ತರಪ್ರದೇಶದ ಚುನಾವಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ರಾಮ ದೇಗುಲ ವಿಚಾರವನ್ನು ರಾಜಕೀಯ ಮಾಡಬಾರದು. ವಿಚಾರವನ್ನು ರಾಜಕೀಯ ಮಾಡಿದರೆ ಜನರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
1990ರಲ್ಲಿ ಕರ್ ಸೇವಾ (ಯಾತ್ರಿಕರ ಮುಫತ್ತಾದ ಸೇವೆ ಹಾಗೂ ಕೆಲಸ)ದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಸಹೋದರರಾದ ರಾಮ್ ಕೊಠಾರಿ ಮತ್ತು ಶರದ್ ಕೊಠಾರಿ ಅವರಿಗೆ ಗೌರವ ಸಲ್ಲಿಸುವ ಸಲ್ಲಿಸುವುದಕ್ಕಾಗಿ ನಿನ್ನೆ ಕೋಲ್ಕತಾದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು, ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತಂತೆ ಮಾತನಾಡಿದ್ದರು.
ರಾಮ ದೇಗುಲ ನಾವು ಬದುಕಿದ್ದ ಅವಧಿಯಲ್ಲೇ ನಿರ್ಮಾಣವಾಗಬೇಕಿದೆ. ದೇಗುಲವನ್ನು ನೋಡಿ ಕಣ್ತುಂಬಿಕೊಳ್ಳಬೇಕು. ಆದರೆ, ದೇಗುಲ ಯಾವಾಗ ಮತ್ತು ಹೇಗೆ ನಿರ್ಮಾಣವಾಗುತ್ತದೆ ಎಂಬುದರ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ. ಆದರೆ ಈ ಬಗ್ಗೆ ನಾವು ಸದಾಕಾಲ ಎಚ್ಚರಿಕೆಯಿಂದ ಹಾಗೂ ತಯಾರಾಗಿರಬೇಕಿದೆ ಎಂದು ಹೇಳಿದ್ದರು.