

ಮಧ್ಯಪ್ರದೇಶ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸೆಲ್ಫೀ ಹುಚ್ಚು ಹೆಚ್ಚಾಗುತ್ತಿದ್ದು, ಸೆಲ್ಫೀ ಹುಚ್ಚಿನ ಪರಿಣಾಮ ಪ್ರತೀ ನಿತ್ಯ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಉದಾಹರಣೆಯಂತೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಘಟನೆಯೊಂದು ಭಾನುವಾರ ನಡೆದಿದೆ.
ಸೆಲ್ಫೀ ಹುಚ್ಚಿನಲ್ಲಿದ್ದ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿನ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ರೈಲಿನಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಂದೋರ್ ನ ಮಾಂಗಲಿಯಾ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
18 ವರ್ಷದ ಜಯೇಶ್ ಮೃತ ವಿದ್ಯಾರ್ಥಿ. ರೈಲ್ವೇ ಹಳಿ ಬಳಿಯಲ್ಲಿ ನಿಂತು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ರೈಲು ಇದ್ದಕ್ಕಿದ್ದಂತೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಯುವಕ ರೈಲಿನ ಹಳಿಗೆ ಬಿದ್ದಿದ್ದಾನೆ. ಈ ವೇಳೆ ಯುವಕ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.
ಮೃತ ಯುವಕ ಮಾಂಗಲಿಯಾ ಗ್ರಾಮದವನಾಗಿದ್ದು, ತನ್ನ ಇಬ್ಬರು ಸ್ನೇಹಿತರೊಂದಿಗೆ ಭಾನುವಾರ ಸಂಜೆ ರೈಲ್ವೇ ಹಳಿ ಹೋಗಿ ಚಲಿಸುತ್ತಿದ್ದ ಆವಂತಿಕಾ ಎಕ್ಸ್ ಪ್ರೆಸ್ ಬಳಿ ಹೋಗಿ ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ಈ ವೇಳೆ ರೈಲಿನ ಇಂಜಿನ್ ಭಾಗ ಆತನ ತಲೆಗೆ ಹೊಡೆದುಕೊಂಡು ಹೋಗಿದೆ.
ಸ್ಥಳದಲ್ಲಿ ಜಯೇಶ್ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರಾದರೂ ಅಷ್ಟರಲ್ಲಿ ಜಯೇಶ್ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.