

ಕರೀಮ್ ನಗರ(ತೆಲಂಗಾಣ): ಐಎಎಸ್ ಫೇಲ್ ಆಗಿದ್ದಕ್ಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಸಾಫ್ಟ್ ವೇರ್ ಇಂಜಿನೀಯರ್ ಪೋಷಕರು ಹಾಗೂ ನೆರೆ ಹೊರೆಯವರ ಮೇಲೆ ರಂಪಾಟ ನಡೆಸಿ ಪೊಲೀಸರ ಗುಂಡೇಟಿಗೆ ಬಲಿಯಾದ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ.
ಸಾಫ್ಟ್ ವೇರ್ ಇಂಜಿನಿಯರ್ ಬಲ್ವಿಂದರ್ ಸಿಂಗ್ ಎಂಬಾತ ತಲ್ವಾರ್ ನಿಂದ ಮನೆಯವರು, ನಾಗರಿಕರು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಸಿಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಬಲ್ವಿಂದರ್ ಸಿಂಗ್ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಬಲ್ವಿಂದರ್ ವಾರ್ಷಿಕ ಸಂಬಳ 18 ಲಕ್ಷ ರೂಪಾಯಿ ಆಗಿತ್ತು.
ಇಂದು ಬೆಳಗ್ಗೆ ಮನೆಯಲ್ಲಿ ಏಕಾಏಕಿ ತಲ್ವಾರ್ ಕೈಗೆತ್ತಿಕೊಂಡ ಬಲ್ವಿಂದರ್ ಸಿಂಗ್ ತಂದೆ ಅವತಾರ್ ಸಿಂಗ್, ತಾಯಿ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಮನೆಯಿಂದ ಕೆಳಗಿಳಿದು ಬಂದು ನಾಗರಿಕರ ಮೇಲೂ ದಾಳಿ ನಡೆಸಲು ಮುಂದಾಗಿದ್ದ. ಆಗ ನೆರೆಹೊರೆಯವರು ಆತನನ್ನು ತಡೆಯಲು ಯತ್ನಿಸಿದರೂ ಕೂಡಾ ತಲ್ವಾರ್ ನಿಂದ ಹಲ್ಲೆ ನಡೆಸಲು ಮುಂದಾಗುತ್ತಿದ್ದ.
ಪೊಲೀಸರಿಗೂ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದರು. ಆಗ ಕಾನ್ಸ್ ಟೇಬಲ್ ಗಳಾದ ಮಲ್ಲಯ್ಯ ಮತ್ತು ವಾಲಿ ಆತನನ್ನು ಹಿಡಿಯಲು ಯತ್ನಿಸಿದ್ದರು. ಆಗ ಸಿಂಗ್ ಅವರ ಮೇಲೂ ದಾಳಿ ಮಾಡಿದ್ದ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿದ ಸರ್ಕಲ್ ಇನ್ಸ್ ಪೆಕ್ಟರ್ ವಿಜಯ್ ಸಾರತಿ, ಪಿಸ್ತೂಲ್ ನಿಂದ ಶೂಟ್ ಮಾಡಿದ್ದರು.
ತದನಂತರ ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ಒಯ್ದಿದ್ದರು. ಆದರೆ ಗುಂಡೇಟು ಬಿದ್ದ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.