

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ವಕೀಲ (ಎಸ್‍ಪಿಪಿ) ಭವಾನಿ ಸಿಂಗ್ ಅವರ ಮುಂದುವರಿಕೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯಲ್ಲಿ ಸ್ಪಷ್ಟ ಮಾಹಿತಿಗಳಿಲ್ಲದ ಕಾರಣ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬುಧವಾರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎನ್. ಕುಮಾರ್ ಮತ್ತು ನ್ಯಾ.ಬಿ. ವೀರಪ್ಪ ಅವರಿದ್ದ ವಿಭಾಗೀಯ ಪೀಠ ಅರ್ಜಿದಾರರ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್‍ನ್ನು ತುಂಬಾ ಹಗುರವಾಗಿ ಪರಿಗಣಿಸಿದ್ದಾರೆ. ಇತ್ತೀಚಿಗೆ ಎಲ್ಲರೂ ನಮಗಿಂತ ಹೆಚ್ಚು ಕಾನೂನು ತಿಳಿದುಕೊಳ್ಳುವ ಮೂಲಕ ಕಾನೂನು ಪಂಡಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿಯಲ್ಲಿ ನಮೂದಿಸಿರುವ ಪ್ರತಿವಾದಿಗಳ ಮಾಹಿತಿ ನಿಖರವಾಗಿರದ ಕಾರಣ ಹೈಕೋರ್ಟ್ ಕಿಡಿ ಕಾರಿತು. ಅರ್ಜಿಯಲ್ಲಿ ಮೂರನೇ ಪ್ರತಿವಾದಿಯಾಗಿ `ಸ್ಟೇಟ್ ಬೈ ಸೂಪರಿಂಟೆಂಡೆಂಟ್ ಆಫ್ ಪೊಲೀಸ್' ಎಂದು ಉಲ್ಲೇಖಿಸಲಾಗಿತ್ತು. ಇದನ್ನು ಗಮನಿಸಿದ ಪೀಠ, `ಸ್ಟೇಟ್'ಎಂದರೆ `ತಮಿಳುನಾಡು' ಅಥವಾ `ಕರ್ನಾಟಕವೋ' ಎಂಬ ಸ್ಪಷ್ಟ ಮಾಹಿತಿಯಿಲ್ಲ. ಈ ರೀತಿ ಅಪೂರ್ಣ ಮಾಹಿತಿಯಿರುವ ಅರ್ಜಿ ವಿಚಾರಣೆ ನಡೆಸಿದರೆ ಮಾಧ್ಯಮದಲ್ಲಿ ಹೈಕೋರ್ಟ್ ತಪ್ಪಿತಸ್ಥವಾಗುತ್ತದೆ.
ಅರ್ಜಿಯಲ್ಲಿ ಪ್ರತಿವಾದಿ ಹೆಸರೇ ಒಂದು, ವಕಾಲತ್ತು ಸಲ್ಲಿಸುವವರೇ ಒಬ್ಬರು. ಕಾನೂನು ಪ್ರಕಾರ ಸರಿಯಾದ ರೀತಿಯಲ್ಲಿ ಅರ್ಜಿ ದಾಖಲಿಸಿದರೆ ವಿಚಾರಣೆ ನಡೆಸುತ್ತೇವೆ ಎಂದು ಅರ್ಜಿದಾರರ ಪರ ವಕೀಲರಿಗೆ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ ಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ಎಸ್‍ಪಿಪಿ ನೇಮಕ ಪ್ರಶ್ನಿಸಿ ಡಿಎಂಕೆ ನಾಯಕ
ಅನ್ಬಳಗನ್ ಮೇಲ್ಮನವಿ ಅರ್ಜಿ ದಾಖಲಿಸಿದ್ದಾರು.
ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಮಂಗಳವಾರ ಮುಖ್ಯ ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನ್ಯಾ.ಎನ್.ಕುಮಾರ್ ಅವರ ವಿಭಾಗೀಯ ಪೀಠ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿತು.
ಹೈಕೋರ್ಟ್‍ಗೆ ಸುಬ್ರಹ್ಮಣ್ಯನ್ ಸ್ವಾಮಿ ಹಾಜರ್
ಜಯಲಲಿತಾ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಿಮ್ಮನ್ನು ಯಾವ ಆಧಾರದಲ್ಲಿ ಪ್ರತಿವಾದಿಯನ್ನಾಗಿ ಮಾಡಬೇಕು? ಪ್ರತಿವಾದಿ ಮಾಡುವ ಕುರಿತು ನಿಮ್ಮ ಬಳಿ ಇರುವ ದಾಖಲೆಯೇನು? ಮೂಲ ದೂರುದಾರರು ಯಾರು? ಮೂಲ ದೂರುದಾರರು ತಾವೇ ಆಗಿದ್ದರೆ ಕ್ರಮಿನಲ್ ಸಂಖ್ಯೆಯೇನು? ಈ ರೀತಿ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುವ ಮೂಲಕ ಹೈಕೋರ್ಟ್ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರಿಗೆ ನೀರಿಳಿಸಿದೆ.
ಬುಧವಾರ ಬೆಳಿಗ್ಗೆ 10.30ಕ್ಕೆ ಜೆಡ್ ಭದ್ರತೆಯೊಂದಿಗೆ ಹೈಕೋರ್ಟ್‍ಗೆ ಆಗಮಿಸಿದ ಅವರು, ವಿಶೇಷ ನ್ಯಾಯಪೀಠದಲ್ಲಿ ತಮ್ಮನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡುವಂತೆ ಕೋರಿ ವಿಶೇಷ ನ್ಯಾಯಪೀಠದ ಎದುರು ವಾದ ಮಂಡಿಸಿದರು. ವಾದ ಆಲಿಸಿದ ನ್ಯಾ.ಸಿ.ಕುಮಾರಸ್ವಾಮಿ ಅವರ ಪೀಠ, ತೀರ್ಪನ್ನು ಕಾಯ್ದಿರಿಸಿದೆ. ಪ್ರಕರಣದಲ್ಲಿ ಮೂಲ ದೂರುದಾರ ನಾನಾಗಿದ್ದು ಅದರ ಆಧಾರದ ಮೇಲೆಯೇ ಈ ಪ್ರಕರಣದ ವಿಚಾರಣೆ ಆರಂಭವಾಗಿದೆ. ಹೀಗಾಗಿ ನನಗೆ ವಾದ ಮಂಡಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪ್ರಕರಣದಲ್ಲಿ ದೂರುದಾರರ ಹೆಸರು ವಿ.ಸಿ.ಪೆರುಮಾಳ್ ಎಂದಿದ್ದು, ನಿಮ್ಮ ಹೆಸರು ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಹೀಗಾಗಿ ನಿಮ್ಮನ್ನು ಯಾವ ಆಧಾರದ ಮೇಲೆ ಪರಿಗಣಿಸಬೇಕಿದೆ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಯಾಗಿ ತಾನು 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ವಾದ ಮಂಡಿಸಿದ್ದೇನೆ. ಅಲ್ಲದೇ ಸುಪ್ರೀಂ ಕೋರ್ಟ್ ನಲ್ಲಿ ಜಯಲಲಿತಾ ಅವರ ಜಾಮೀನಿಗೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಎಸ್‍ಪಿಪಿ ಹಾಜರಿರಲಿಲ್ಲ. ಪ್ರತಿವಾದಿಯಾಗಿ ನಾನೇ ವಾದ ಮಂಡಿಸಿದ್ದೇನೆ ಎಂದು ವಿವರಿಸಿದರು.
ಇವರನ್ನು ಪ್ರತಿವಾದಿ ಮಾಡುವ ಕುರಿತು ನಿಮ್ಮಲ್ಲಿ ಆಕ್ಷೇಪಣೆಗಳಿವೆಯೇ ಎಂದು ಇದೇ ವೇಳೆ ಪೀಠ ಎಸ್‍ಪಿಪಿ ಅವರನ್ನು ಪ್ರಶ್ನಿಸಿದಾಗ, ಪ್ರತಿವಾದಿಯಾಗಿ ವಾದ ಮಾಡಲು ಅವರಿಗೆ ಅವಕಾಶವಿಲ್ಲ. ಅವರು ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಬಹುದಷ್ಟೆ ಎಂದು ತಿಳಿಸಿದರು. ನಂತರ ವಾದ ಮಂಡಿಸಿದ ಜಯಲಲಿತಾ ಪರ ವಕೀಲ ಬಿ.ಕುಮಾರ್, ಕಾನೂನು ಪ್ರಕಾರ ಒಂದು ಪ್ರಕರಣಕ್ಕೆ ಇಬ್ಬರು ಎಸ್‍ಪಿಪಿಗಳನ್ನು ನೇಮಿಸಲು ಅವಕಾಶವಿಲ್ಲ. ಪ್ರಾಸಿಕ್ಯೂಷನ್ ಅನ್ನು ಎಸ್‍ಪಿಪಿ ಹೊರತು ಪಡಿಸಿ ಬೇರಾರಿಗೂ ಅವಕಾಶವಿಲ್ಲ. ಅಲ್ಲದೇ ಪ್ರಕರಣದ ದೂರುದಾರು ಪೆರುಮಾಳ್ ಎಂದಿದೆ. ಆದ್ದರಿಂದ ಇವರು ಸಲ್ಲಿಸಿರುವ ಮಧ್ಯಂತರ ಅರ್ಜಿ ಪರಿಗಣಿಸಬಾರದು ಎಂದು ವಾದಿಸಿದರು.