

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮುಖಂಡ ಶಾಹಿ ಇಮಾಮ್ ಬುಖಾರಿ ಅವರ ಬೆಂಬಲ ಆಮ್ ಆದ್ಮಿ ಪಕ್ಷಕ್ಕೆ ಬೇಕಿಲ್ಲ ಎಂದು ಆಪ್ ಮುಖಂಡ ಆಶುತೋಷ್ ಹೇಳಿದ್ದಾರೆ.
ದಿನ ಕಳೆದಂತೆ ದೆಹಲಿ ಚುನಾವಣಾ ಕಣ ರಂಗೇರುತ್ತಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪ್ರಮುಖ ಮುಸ್ಲಿಂ ಮುಖಂಡ ಮತ್ತು ಜಾಮಿಯಾ ಮಸೀದಿಯ ಮುಖ್ಯಸ್ಥರಾದ ಶಾಹಿ ಇಮಾಮ್ ಬುಖಾರಿ ಅವರು ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬಹಿರಂಗ ಬೆಂಬಲ ಘೋಷಣೆ ಮಾಡಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಫತ್ವಾ ಕೂಡ ಹೊರಡಿಸಿದ್ದಾರೆ.
ಆದರೆ ಬುಖಾರಿ ಅವರ ಬೆಂಬಲವನ್ನು ನಯವಾಗಿ ತಿರಸ್ಕರಿಸಿರುವ ಆಮ್ ಆದ್ಮಿ ಪಕ್ಷ, ಭಾರತ ದೇಶದ ಪ್ರಧಾನಿಯನ್ನು ಗೌರವಿಸದವರ ಬೆಂಬಲ ನಮಗೆ ಬೇಡ ಎಂದು ಹೇಳಿದೆ. 'ಶಾಹಿ ಇಮಾಮ್ ಬುಖಾರಿ ಅವರು ನಮಗೆ ಬೆಂಬಲ ನೀಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಆದರೆ ನಮಗೆ ನಿಮ್ಮ ಬೆಂಬಲ ಬೇಡ. ಈ ಹಿಂದೆ ತಮ್ಮ ಪುತ್ರನನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ವೇಳೆ ಭಾರತದ ಪ್ರಧಾನಿಗಳನ್ನು ಆಮಂತ್ರಿಸದೇ ಪಾಕಿಸ್ತಾನ ದೇಶದ ಪ್ರಧಾನಿಯನ್ನು ಆಮಂತ್ರಿಸಿದ್ದಿರಿ. ಇದು ನಮ್ಮ ದೇಶದ ಪ್ರಧಾನಿಗೆ ಮಾಡಿದ ಅಪಮಾನ. ಹೀಗಾಗಿ ದೇಶದ ಪ್ರಧಾನಿಯನ್ನೇ ಗೌರವಿಸದ ನಿಮ್ಮ ಬೆಂಬಲ ನಮಗೆ ಬೇಡ ಎಂದು ಆಪ್ ಮುಖಂಡ ಆಶುತೋಷ್ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲ ಘೋಷಣೆ ಮಾಡಿದ್ದ ಬುಖಾರಿ ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚಿನ ಸ್ಥಾನ ಗಳಿಸುವ ಕುರಿತು ವರದಿ ಪ್ರಕಟಿಸಿದ್ದವು. ದೆಹಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮುಂಜಾನೆಯಿಂದಲೇ ದೆಹಲಿ ಎಲ್ಲ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಲಿದೆ.