

ಕೊಲ್ಕತ್ತಾ: ಏರ್ ಇಂಡಿಯಾ ವಿಮಾನವೊಂದನ್ನು ಹೈಜಾಕ್ ಮಾಡುವುದಾಗಿ ಬೆದರಿಕೆ ಕರೆಮಾಡಿದ್ದ ವ್ಯಕ್ತಿಯೋರ್ವನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
1999ರಲ್ಲಿ ನಡೆದ ಐಸಿ 814 ಕಂಧಹಾರ ವಿಮಾನ ಅಪಹರಣ ಮಾದರಿಯಲ್ಲೇ ಏರ್ ಇಂಡಿಯಾ ವಿಮಾನವೊಂದನ್ನು ಅಪಹರಣ ಮಾಡುವುದಾಗಿ ನಿನ್ನೆಯಷ್ಟೇ ಏರ್ ಇಂಡಿಯಾ ಕಚೇರಿಗೆ ಅನಾಮಿಕ ಕರೆಬಂದಿತ್ತು. ಕರೆ ಬಂದ ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಎಲ್ಲಾ ವಿಮಾನ ನಿಲ್ದಾಣಗಳನ್ನು ತಪಾಸಣೆಗೊಳಪಡಿಸಿ, ಹೈ ಅಲರ್ಟ್ ಘೋಷಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿತ್ತು. ಕರೆ ಬಂದ ಸಂಖ್ಯೆಯನ್ನು ಆಧರಿಸಿ ತನಿಖೆ ಆರಂಭಿಸಿದ ವಿಶೇಷ ತಂಡವು ಬೆದರಿಕೆ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಫಲವಾಗಿದೆ. ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಉತ್ತರಪ್ರದೇಶ ಬಂಗಾವ್ ಪ್ರದೇಶದ ನಿವಾಸಿ ಪ್ರಸಂತ ಬಿಸ್ವಾಸ್ (35) ಎಂದು ಹೇಳಲಾಗುತ್ತಿದ್ದು, ವಿಚಾರಣೆ ನಡೆಸಲಾಗುತ್ತಿದ್ದಾರೆ.