ಬೇಡಿಯನ್ನು 'ಕೇಜ್ರಿ' ವಿರುದ್ಧ ಕಣಕ್ಕಿಳಿಸಿ: ಆಪ್ ಮುಖಂಡನ ಸವಾಲು

ಬಿಜೆಪಿ ಪಕ್ಷ ಕಿರಣ್ ಬೇಡಿ ಅವರನ್ನು ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರ ವಿರುದ್ಧ ಕಣಕ್ಕಿಳಿಸಲಿ ಎಂದು..
ಆಪ್ ಮುಖಂಡ ಕುಮಾರ್ ವಿಶ್ವಾಸ್ (ಸಂಗ್ರಹ ಚಿತ್ರ)
ಆಪ್ ಮುಖಂಡ ಕುಮಾರ್ ವಿಶ್ವಾಸ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಬಿಜೆಪಿ ಪಕ್ಷ ಕಿರಣ್ ಬೇಡಿ ಅವರನ್ನು ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರ ವಿರುದ್ಧ ಕಣಕ್ಕಿಳಿಸಲಿ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಹೇಳಿದ್ದಾರೆ.

ದೆಹಲಿ ಚುನಾವಣೆಯ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅವರು, ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆ ಅಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಬಿಜೆಪಿ ಕೂಡ ಇದೇ ಧೈರ್ಯವನ್ನು ಪ್ರದರ್ಶಿಸಲಿ. ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರನ್ನು ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಸಲಿ ಎಂದು ವಿಶ್ವಾಸ್ ಹೇಳಿದ್ದಾರೆ.

ದಶಕಗಳಷ್ಟು ಕಾಲ ದೆಹಲಿಯಲ್ಲಿ ರಾಜಕೀಯ ನಡೆಸುತ್ತಾ ಬಂದಿರುವ ಬಿಜೆಪಿ ಪಕ್ಷಕ್ಕೆ ಓರ್ವ ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿ ದೊರೆಯದೇ ಅಣ್ಣಾ ತಂಡದ ಸದಸ್ಯರನ್ನು ಕರೆತಂದಿದ್ದಾರೆ. ಇದರಿಂದ ಬಿಜೆಪಿ ಚುನಾವಣೆಗೂ ಮೊದಲೇ ತನ್ನ ಸೋಲನ್ನು ಒಪ್ಪಿಕೊಂಡಿದೆ ಎಂಬುದು ತಿಳಿಯುತ್ತದೆ. ಬಿಜೆಪಿ ಪಕ್ಷಕ್ಕೆ ಆಮ್ ಆದ್ಮಿ ಪಕ್ಷದ ಬಗ್ಗೆ ಭಯವಿದ್ದು, ಹೀಗಾಗಿಯೇ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು 'ಸುರಕ್ಷಿತ ಕ್ಷೇತ್ರ'ದಿಂದ ಕಣಕ್ಕಿಳಿಸಿದ್ದಾರೆ. ಇದು ಬಿಜೆಪಿ ಪಕ್ಷದ ಭೀತಿಯನ್ನು ಸೂಚಿಸುತ್ತದೆ. ಬಿಜೆಪಿಗೆ ನಿಜಕ್ಕೂ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದ್ದರೆ ಕನಿಷ್ಟ ಪಕ್ಷ ಬಿಜೆಪಿ ಪರವಾಗಿಲ್ಲದ ಕ್ಷೇತ್ರದಿಂದ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ ಎಂದು ವಿಶ್ವಾಸ್ ಸವಾಲು ಹಾಕಿದ್ದಾರೆ.

'ನಾವು ಪಕ್ಷವನ್ನು ಆರಂಭಿಸುವಾಗಲೇ ಹೇಳಿದ್ದೆವು. ನಾವು ರಾಜಕೀಯ ಮಾಡಲು ಬಂದಿಲ್ಲ. ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ಬಂದಿದ್ದೇವೆ. ನಮ್ಮ ಶ್ರಮ ಫಲಿಸಿದ್ದು, ಇದೀಗ ರಾಜಕೀಯದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ಸತತ 17 ವರ್ಷಗಳ ಶೋಧದ ಬಳಿಕವೂ ಬಿಜೆಪಿ ಪಕ್ಷಕ್ಕೆ ಓರ್ವ ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿ ದೊರೆಯಲಿಲ್ಲ. ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಸ್ಪರ್ಧೆಗಿಳಿಸಬಹುದಾದ ಓರ್ವ ಅಭ್ಯರ್ಥಿ ಇಲ್ಲದೇ ಬಿಜೆಪಿ ಅಣ್ಣಾ ತಂಡದ ಸದಸ್ಯರನ್ನು ಕರೆತಂದಿದೆ. ಕಿರಣ್ ಬೇಡಿ ಅವರನ್ನು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಇದು ನಮ್ಮ ಯಶಸ್ಸಿಗೆ ಸಾಕ್ಷಿ. 'ಅಣ್ಣಾ' ಹೋರಾಟದಿಂದಲೂ ನಾವು ಕಿರಣ್ ಬೇಡಿ ಅವರನ್ನು ನಮ್ಮ ಹಿರಿಯ ಸಹೋದರಿಯಂತೆ ಕಾಣುತ್ತೇವೆ. ಆದರೆ ಕಿರಣ್ ಬೇಡಿ ಅವರು ಎಂತಹ ಪರಿಸ್ಥಿತಿಯಲ್ಲಿದ್ದಾರೆ ಎಂದರೆ ಅವರು ಸ್ವತಃ ತಮ್ಮ ಸ್ಥಾನಕ್ಕೇ ಹೋರಾಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ' ಎಂದು ವಿಶ್ವಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com