

ನವದೆಹಲಿ: ಗಣರಾಜ್ಯೋತ್ಸವ ವಿಶೇಷ ಅತಿಥಿಯಾಗಿ ನವದೆಹಲಿಯಲ್ಲಿ ಬಂದಿಳಿದಾಗ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಸ್ನೇಹಿತರಂತೆ ನಡೆದುಕೊಂಡರು!
ಹೀಗೆಂದು ಅಮೆರಿಕದ ಪ್ರತಿಷ್ಠಿತ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಸಂಪಾದಕೀಯದಲ್ಲಿ ಹೊಗಳಲಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಸುಧಾರಣೆಯಾಗಬೇಕಾದರೆ ಎರಡೂ ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯ ಚೆನ್ನಾಗಿರಬೇಕು. ಈ ರೀತಿಯಾಗಿ ನೋಡುವುದಾದರೆ ಮೋದಿ ಮತ್ತು ಒಬಾಮ ನಡುವಿನ ಬಾಂಧವ್ಯ ನೈಜ ಮತ್ತು ಸ್ನೇಹಪರವಾಗಿದ್ದಂತೆ ಕಂಡಿದೆ. ಮೋದಿ ಅವರು ಸೆಪ್ಟೆಂಬರ್‍ನಲ್ಲಿ ವೈಟ್‍ಹೌಸ್‍ಗೆ ನೀಡಿದ ಭೇಟಿ ಎರಡೂ ನಾಯಕರ ನಡುವೆ ಉತ್ತಮ ಬೆಸುಗೆ ಬೆಸೆಯುವಲ್ಲಿ ಫಲಪ್ರದವಾಗಿದೆ.
ಒಬಾಮ ಭಾರತ ಭೇಟಿಯ ವೇಳೆ ಮುಖ್ಯವಾಗಿ ಚರ್ಚೆಯಾಗಿದ್ದು, ವ್ಯಾಪಾರ, ಇಂಧನ ಮತ್ತು ನಾಗರಿಕ ಅಣು ಸಹಕಾರ ಒಪ್ಪಂದದ ಕುರಿತು. ಆದರೆ, ಇಬ್ಬರೂ ನಾಯಕರು ಚರ್ಚೆಗೆ ಕೂತಾಗ ಮೊದಲ 45 ನಿಮಿಷ ಮಾತನಾಡಿದ್ದು ಕೇವಲ ಚೀನಾ ಕುರಿತು. ಚೀನಾ ವಿಚಾರದಲ್ಲಿ ಅನುಮಾನ ಮತ್ತು ವೈರತ್ವ ಇದ್ದರೂ ವಿದೇಶಾಂಗ ನೀತಿ ವಿಚಾರದಲ್ಲಿ ಮಾತ್ರ ಭಾರತ ಸ್ವತಂತ್ರ ನಿಲುವನ್ನೇ ಪಾಲಿಸಿಕೊಂಡು ಬಂದಿತ್ತು. ಚೀನಾದ ವಿರುದಟಛಿ ಏಷ್ಯಾದಲ್ಲಿ ಸಮಾನ ಮನಸ್ಕ ರಾಷ್ಟ್ರಗಳ ಒಕ್ಕೂಟವೊಂದನ್ನು ರಚಿಸಬೇಕೆನ್ನುವ ಅಮೆರಿಕದ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಆದರೆ, ಮೋದಿ ಈ ನಿಲುವಿನಿಂದ ದೂರ ಸರಿಯುತ್ತಿರುವಂತೆ ಕಾಣುತ್ತಿದೆ. ಮೋದಿ ಅವರು ಹೆಚ್ಚುತ್ತಿರುವ ಚೀನಾದ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯ ಕುರಿತು ತೀವ್ರ ಕಳವಳ ಹೊಂದಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮೆರಿಕದ ಜತೆಗೆ ಹೆಜ್ಜೆ ಇಡುವ ವಿಚಾರದಲ್ಲಿ ವಿಶ್ವಾಸ ಹೊಂದಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಘರ್ಷಣೆಗೆ ಅವಕಾಶ ಮಾಡಿಕೊಡುವ ಚೀನಾದ ವರ್ತನೆಯನ್ನು ಆಕ್ಷೇಪಿಸುವ ಜಂಟಿ ಹೇಳಿಕೆಗೆ ಒಬಾಮ ಜತೆಗೆ ಮೋದಿ ಸಹಿ ಹಾಕಿದ್ದಾರೆ.
ಜತೆಗೆ, ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನೊಳಗೊಂಡ ಭದ್ರತಾ ನೆಟ್‍ವರ್ಕ್ ಅನ್ನು ಸ್ಥಾಪಿಸುವ ಕುರಿತು ಸಲಹೆ ನೀಡಿದ್ದಾರೆ. ಏಷ್ಯಾ ಫೆಸಿಫಿಕ್ ಎಕನಾಮಿಕ್ ಕೊಆಪರೇಷನ್ ಫೋರಂನಲ್ಲಿ ಮುಖ್ಯ ಪಾತ್ರವಹಿಸುವ ಆಸಕ್ತಿಯನ್ನೂ ತೋರಿದ್ದಾರೆ.
ಆದರೆ, ಚೀನಾ ಮಾತ್ರ ಈ ಭೇಟಿಯಿಂದ ಖುಷಿಯಾದಂತಿಲ್ಲ. ಹಾಗಾಗಿಯೇ ಒಬಾಮ ಭೇಟಿಯನ್ನು `ತೋರಿಕೆಯ ಮರುಮೈತ್ರಿ' ಎಂದು ಟೀಕಿಸಿದೆ. ಹಾಗಾಗಿ ಚೀನಾವನ್ನು
ಪ್ರಚೋದಿಸದೆ ಏಷ್ಯಾದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದೇ ಸದ್ಯದ ಮಟ್ಟಿಗೆ ಮೋದಿ ಹಾಗೂ ಒಬಾಮ ಪಾಲಿಗೆ ಬುದಿಟಛಿವಂತಿಕೆ ಎಂದು ಸಲಹೆ ನೀಡಿದೆ
ಸಂಪಾದಕೀಯ.
ಇದರ ಜತೆಗೆ, ಆರ್ಥಿಕ ಬೆಳವಣಿಗೆಗೆ ಮೊದಲ ಆದ್ಯತೆ ನೀಡಿರುವ ಮೋದಿ ಅವರು ದೇಶೀಯ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದಾರೆ. ಆದರೆ, ಪ್ರಾದೇಶಿಕ ಶಸ್ತ್ರಾಸ್ತ್ರ ಪೈಪೋಟಿಗೆ ಚಾಲನೆ ನೀಡದೆ ಈ ಕನಸು ಹೇಗೆ ಈಡೇರಲು ಸಾಧ್ಯ ಎಂದೂ ಸಂಪಾದಕೀಯ ಪ್ರಶ್ನಿಸಿದೆ.