

ಊಫಾ (ರಷ್ಯ): ``ನಮ್ಮೆದುರಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕೆಂದರೆ ಎಲ್ಲ ದೇಶಗಳ ನಡುವೆಯೂ ಸಮ್ಮತಿ, ಸಹಭಾಗಿತ್ವ ಮತ್ತು ಸಹಕಾರ ಅತ್ಯಗತ್ಯ. ರಾಜಕೀಯ
ಭದ್ರತೆ ಮತ್ತು ಆರ್ಥಿಕ ಸವಾಲುಗಳಿರುವ ಜಗತ್ತಿನಲ್ಲಿ ಬ್ರಿಕ್ಸ್ ಎಂಬುದು ಭರವಸೆಯ ಸ್ತಂಭವಿದ್ದಂತೆ.'' ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಪರಿ.
ರಷ್ಯಾದ ಊಫಾದಲ್ಲಿ ಗುರುವಾರ ಬ್ರಿಕ್ಸ್ ಶೃಂಗವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬ್ರಿಕ್ಸ್ ರಾಷ್ಟ್ರಗಳ ಸಾಮರ್ಥ್ಯವನ್ನು ಒತ್ತಿಹೇಳುವುದರ ಜೊತೆಗೆ ಅಮೆರಿಕ,
ಚೀನಾದಂತಹ ರಾಷ್ಟ್ರಗಳಿಗೆ ಬುದ್ಧಿವಾದವನ್ನೂ ಹೇಳಿದ್ದಾರೆ. ``ಬ್ರಿಕ್ಸ್ ಎಂದರೆ ಕೇವಲ ಇದರಲ್ಲಿರುವ ದೇಶಗಳನ್ನಷ್ಟೇ ಪ್ರತಿನಿಧಿಸುವುದಲ್ಲ. ಇಡೀ ಜಗತ್ತಿನ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುವುದು. ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಇಡೀ ವಿಶ್ವವೇ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ. ವಿಶ್ವಸಂಸ್ಥೆಯ 2014ರ ನಂತರದ ಅಭಿವೃದ್ಧಿ ಅಜೆಂಡಾದಲ್ಲಿ ಬಡತನ ನಿರ್ಮೂಲನೆಯೂ ಒಂದಾಗಬೇಕು. ಬ್ರಿಕ್ಸ್ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆಯಾಗಬೇಕು. ಹೊಸ ಅಭಿವೃದ್ಧಿ ಬ್ಯಾಂಕ್‍ನ ಮೊದಲ ಪ್ರಮುಖ ಯೋಜನೆ ಸ್ವಚ್ಛ ಇಂಧನಕ್ಕೆ ಸಂಬಂಧಿಸಿದ್ದಾಗಿರಲಿ'' ಎಂದಿದ್ದಾರೆ ಮೋದಿ.
ಮುಂದಿನ ಶೃಂಗ ಭಾರತದಲ್ಲಿ: ಮುಂದಿನ ವರ್ಷದ ಬ್ರಿಕ್ಸ್ ಶೃಂಗ ಭಾರತದಲ್ಲಿ ನಡೆಯಲಿದ್ದು, ನಿಮ್ಮೆಲ್ಲರನ್ನೂ ನಾನು ಭಾರತಕ್ಕೆ ಸ್ವಾಗತಿಸುತ್ತೇನೆ ಎಂದಿದ್ದಾರೆ ಪ್ರಧಾನಿ. ಇದೇ ವೇಳೆ, ಯೋಗ ದಿನದ ಅಂತಾರಾಷ್ಟ್ರೀಯ ಯಶಸ್ಸಿಗೆ ಕಾರಣರಾದ ಬ್ರಿಕ್ಸ್ ನಾಯಕರಿಗೆ ಪ್ರಧಾನಿ ಮೋದಿ ಧನ್ಯವಾದವನ್ನೂ ಹೇಳಿದ್ದಾರೆ.
ಮೋದಿ-ಷರೀಫ್ ಭೇಟಿ ಇಂದು: ಶುಕ್ರವಾರ ಬೆಳಗ್ಗೆ ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಶರೀಫ್ ಭೇಟಿಯಾಗಲಿದ್ದಾರೆ. ಊಫಾದಲ್ಲಿ ಬೆಳಗ್ಗೆ 9.15ಕ್ಕೆ ಮಾತುಕತೆಗೆ ಸಮಯ ನಿಗದಿಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. ಈ ಇಬ್ಬರು ನಾಯಕರು ಭೇಟಿ ವೇಳೆ ಮಹತ್ವದ ದ್ವಿಪಕ್ಷೀಯ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ಗುರುವಾರ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.