ಬಹುಹಂತದ ಬಿಹಾರ ಫೈಟ್?

ಜನತಾ ಪರಿವಾರ ಮರುವಿಲೀನದ ನಂತರ ನಡೆಯುತ್ತಿರುವ ಮೊದಲ ಮಹಾಚುನಾವಣೆಯ ದಿನಾಂಕ ಪ್ರಕಟಣೆಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಜನತಾ ಪರಿವಾರ ಮರುವಿಲೀನದ ನಂತರ ನಡೆಯುತ್ತಿರುವ ಮೊದಲ ಮಹಾಚುನಾವಣೆಯ ದಿನಾಂಕ ಪ್ರಕಟಣೆಗೆ ಮುಹೂರ್ತ ಸನ್ನಿಹಿತವಾಗುತ್ತಿದೆ. ಬಿಹಾರದ ವಿಧಾನಸಭಾ ಚುನಾವಣೆ ಅಕ್ಟೋಬರ್ ದ್ವಿತೀಯಾರ್ಧ ಹಾಗೂ ನವಂಬರ್ ಪ್ರಥಮಾರ್ಧದ ನಡುವೆ ನಡೆಯುವುದು ಖಚಿತ ಎಂದು ಚುನಾವಣಾ ಆಯೋಗ ತಿಳಿಸಿದ್ದು, ಈ ಎರಡೂ ತಿಂಗಳಲ್ಲಿ ಹಬ್ಬಗಳ ಸರತಿಯೇ ಇರುವುದರಿಂದ ಬಹು ಹಂತದ ಚುನಾವಣೆ ಅನಿವಾರ್ಯ ಎಂಬ ಸುಳಿವು ನೀಡಿದೆ.

ಮುಖ್ಯ ಚುನಾವಣಾ ಆಯುಕ್ತ ನಸಿಮ್ ಜೈದಿ ಹಾಗೂ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜೋತಿ ಶೀಘ್ರದಲ್ಲಿಯೇ ಪಟನಾಗೆ ಭೇಟಿ ನೀಡಿ ಅಲ್ಲಿನ ಉನ್ನತ ಅ„ಕಾರಿಗಳು, ಪೊಲೀಸ್ ಇಲಾಖೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ಸೇರಿ ಆ ನಂತರ ಚುನಾವಣೆಯ ದಿನಾಂಕ ಪ್ರಕಟಿಸಲಿದ್ದಾರೆ.

ದಸರಾ, ದೀಪಾವಳಿ ಸೇರಿ ಹಲವು ಹಬ್ಬಗಳು ಅಕ್ಟೋಬರ್-ನವಂಬರ್‍ನಲ್ಲಿ ಇರುವುದರಿಂದ ಬಿಡಿಬಿಡಿಯಾಗಿ ಕೆಲ ದಿನಗಳನ್ನು ಚುನಾವಣೆಗೆ ನಿಗದಿಪಡಿಸುವ ಯೋಚನೆ ಹೊಂದಿದ್ದು, 4 ಅಥವಾ 5 ಹಂತಗಳಲ್ಲಿ ಚುನಾವಣೆ ನಡೆಸುವುದು ಅನಿವಾರ್ಯ ಎಂದಿದ್ದಾರೆ. 243 ಸದಸ್ಯಬಲದ ಬಿಹಾರ ವಿಧಾನಸಭೆಗೆ ನ.29 ಕೊನೆ ದಿನವಾಗಿದ್ದು, ಅದಕ್ಕೆ ಮುನ್ನ ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಜನತಾ ಪರಿವಾರ ಮತ್ತು ಬಿಜೆಪಿಗೆ ಈ ಚುನಾವಣೆ ಬಹಳ ಮುಖ್ಯವಾಗಿ ಪರಿಣಮಿಸಿದೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪೆಟ್ಟು ತಿಂದಿರುವ ಬಿಜೆಪಿ ಹೇಗಾದರೂ ಮಾಡಿ ಜೆಡಿಯು ಅನ್ನು ಸೋಲಿಸಿ ಅ„ಕಾರಕ್ಕೇರುವ ಗುರಿ ಹಾಕಿಕೊಂಡಿದೆ. ಹಗರಣಗಳಿಂದ ಸದ್ಯಕ್ಕೆ ಮುಜುಗರ ಎದುರಿಸುತ್ತಿರುವ ಬಿಜೆಪಿಯನ್ನು ಮಣಿಸಲು ಜೆಡಿಯು, ಕಾಂಗ್ರೆಸ್, ಆರ್‍ಜೆಡಿ ಮೈತ್ರಿಕೂಟ ರಚಿಸಿ ಸೆಣಸಲು ಮುಂದಾಗಿವೆ.

ಲೆಕ್ಕಪರಿಶೋಧಕರ ನೇಮಕ: ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳು, ಎರಡೆರಡು ಬಾರು ಕಾಣಿಸಿ ಕೊಂಡಿರುವ ಹೆಸರುಗಳು ಹಾಗೂ ಇತರೇ ದೋಷಗಳನ್ನು ನಿವಾರಿಸಲು ಚುನಾವಣಾ ಆಯೋಗ 4 ವಿಶೇಷ ಆಡಿಟರ್ ತಂಡಗಳನ್ನು ನೇಮಕ ಮಾಡಿತ್ತು. ಅವರ ಮೊದಲ ಕಾರ್ಯಾಚರಣೆ ಬಿಹಾರದಲ್ಲಿ ನಡೆಯಲಿದೆ. ಪ್ರತಿ ತಂಡದಲ್ಲಿ 6 ಅಧಿಕಾರಿಗಳಿದ್ದು, ಜು.31ರ ಮುನ್ನ ಪರಿಷ್ಕೃತ ಮತದಾರರ ಪಟ್ಟಿ ತಯಾರಾಗಲಿದೆ.

36 ಕ್ಷೇತ್ರಗಳಲ್ಲಿ ವಿವಿಪಿಎಟಿ ಬಳಕೆ: ಕನಿಷ್ಠ 36 ಕ್ಷೇತ್ರಗಳಲ್ಲಿ ವೋಟರ್ ವೆರಿಫೈಡ್ ಪೇಪರ್‍ಆಡಿಟ್ ಟ್ರಯಲ್ (ವಿವಿಪಿಎಟಿ) ಬಳಕೆಗೆ ಚುನಾವಣಾ ಆಯೋಗ ಉದ್ದೇಶಿಸಿದೆ. ಈ ಸಂಖ್ಯೆ ಹೆಚ್ಚಿಸುವ ಯೋಜನೆಯೂ ಆಯೋಗಕ್ಕಿದೆ. ಮತದಾನದಲ್ಲಿ ಅಕ್ರಮ ನಡೆದಲ್ಲಿಅಥವಾ ವಿವಾದಕ್ಕೊಳಗಾದಲ್ಲಿ ಈ ಪದ್ದತಿಯಿಂದ ಕಂಡುಹಿಡಿಯಬಹುದಾಗಿದೆ. ಇದು ಬ್ಯಾಲಟ್‍ಲೆಸ್ ಮತದಾನ ವ್ಯವಸ್ಥೆ ಆಗಿದ್ದು, ಮತದಾನ ಮಾಡಿದ ಕೂಡಲೆ ರಶೀದಿ ಮಾದರಿಯ ಒಂದು ಪ್ರಿಂಟ್ ಬಂದು ಅದು ಕೂಡ ಯಂತ್ರದಲ್ಲಿ ದಾಖಲೆಯಾಗಿ ಉಳಿದುಕೊಳ್ಳಲಿದೆ. ಹಾಗಾಗಿ ಮತದಾನದಲ್ಲಿ ಅಕ್ರಮ ಸಾಧ್ಯತೆ ಕಡಿಮೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com