

ಜಮ್ಮು: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಮನೆ ಮಾಡಿದ್ದು, ಕಥುವಾದಲ್ಲಿರುವ ಬಿಎಸ್ ಎಫ್ ಯೋಧರ ಕ್ಯಾಂಪ್ ಮೇಲೆ ಪಾಕಿಸ್ತಾನಿ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ.
ನಿನ್ನೆಯಷ್ಟೇ ಕದನ ವಿರಾಮ ಉಲ್ಲಂಘನೆ ಮಾಡಿ ಪೂಂಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ರಾಕೆಟ್ ಮತ್ತು ಗ್ರೆನೇಡ್ ದಾಳಿ ನಡೆಸಿದ್ದ ಪಾಕಿಸ್ತಾನಿ ಸೈನಿಕರು ಇಂದು ಮತ್ತೆ ತನ್ನ ದುರ್ಬುದ್ಧಿ ತೋರಿದ್ದಾರೆ. ಜಮ್ಮುವಿನ ಕಥುವಾದಲ್ಲಿರುವ ಗಡಿ ಭದ್ರತಾ ಪಡೆ (ಬಿಎಸ್ ಎಫ್)ಯ ಯೋಧರನ್ನು ಗುರಿಯಾಗಿಸಿಕೊಂಡು ತೀವ್ರ ಗುಂಡಿನ ದಾಳಿ ನಡೆಸಿದ್ದಾರೆ. ನಿನ್ನೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಗಾಯಗೊಂಡಿದ್ದ ಅದೇ ಹಿರಾ ನಗರ ಪೋಸ್ಟ್ ಮೇಲೆ ಪಾಕಿಸ್ತಾನಿ ಸೈನಿಕರು ಇಂದು ಮತ್ತೆ ಗುಂಡಿನ ದಾಳಿ ನಡೆಸಿದ್ದಾರೆ.
ಮಂಗಳವಾರ ಮುಂಜಾನೆ ಸುಮಾರು 12ಗಂಟೆಯ ಸುಮಾರಿನಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಪಾಕಿಸ್ತಾನಿ ಸೈನಿಕರು ಭಾರತೀಯ ಪೋಸ್ಟ್ ಗಳ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿರುವ ಬಿಎಸ್ ಎಫ್ ಯೋಧರು ಪ್ರತಿ ದಾಳಿ ನಡೆಸಿದ್ದಾರೆ.