

ನವದೆಹಲಿ: ತೀವ್ರ ವಿವಾದಕ್ಕೆ ಗುರಿಯಾಗಿದ್ದ ನೆಸ್ಲೆ ಕಂಪನಿಯ ಮ್ಯಾಗಿಯನ್ನು ವಿವಿಧ ರಾಜ್ಯಗಳು ನಿಷೇಧ ಹೇರಿದ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆಯಿಂದ ಮ್ಯಾಗಿ ಮಾರಾಟವನ್ನು ನೆಸ್ಲೆ ಕಂಪನಿ ವಾಪಸ್ ಪಡೆದಿದೆ.
ಇಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ನೆಸ್ಲೆ ಕಂಪನಿ ಗ್ರಾಹಕರ ನಂಬಿಕೆ ಹಾಗೂ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಹೀಗಾಗಿ ಭಾರತದಲ್ಲಿ ಮ್ಯಾಗಿ ಮಾರಾಟವನ್ನು ಹಿಂಪಡೆಯುವುದಾಗಿ ತಿಳಿಸಿದೆ.
ದುರದೃಷ್ಟದ ಸಂಗತಿ ಎಂದರೆ ಮ್ಯಾಗಿ ಉತ್ಪನ್ನದಲ್ಲಿ ಯಾವುದೇ ರೀತಿಯ ಅಪಾಯಕಾರಿ ಅಂಶಗಳಿಲ್ಲ. ಆದರೂ ಇತ್ತೀಚಿನ ಬೆಳವಣೆಗೆಗಳು ಗ್ರಾಹಕರಲ್ಲಿ ಗೊಂದಲ ಸೃಷ್ಟಿಸಿದೆ. ಈ ಕಾರಣಗಳಿಂದಾಗಿ ಭಾರತದಲ್ಲಿ ಮ್ಯಾಗಿ ಮಾರಾಟವನ್ನು ನಾವು ತಾತ್ಕಾಲಿಕವಾಗಿ ವಾಪಸ್ ಪಡೆಯುವುದಾಗಿ ತಿಳಿಸಿದೆ.
ಸದ್ಯಕ್ಕೆ ಮ್ಯಾಗಿ ಮತ್ತು ಇದೇ ತರಹದ ಯಾವುದೇ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಿಲ್ಲ ಎಂದು ನೆಸ್ಲೆ ಸಂಸ್ಥೆ ಸ್ಪಷ್ಟಪಡಿಸಿದ್ದು, ನಂಬಿಕೆಗೆ ಅರ್ಹವಾದಂತಹ ಮ್ಯಾಗಿ ನೂಡಲ್ಸ್ ಅತಿ ಶೀಘ್ರದಲ್ಲೇ ಮತ್ತೆ ಮಾರುಕಟ್ಟೆಗೆ ಬರಲಿದೆ. ಮ್ಯಾಗಿಯಲ್ಲಿ ಅಪಾಯಕಾರಿ ಸೀಸದ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ, ದೆಹಲಿ, ಉತ್ತರಾಖಂಡ್, ಗುಜರಾತ್, ಜಮ್ಮು ಕಾಶ್ಮೀರ ಹಾಗೂ ತಮಿಳುನಾಡಲ್ಲಿ ನಿಷೇಧ ಹೇರಲಾಗಿತ್ತು.