ಬಿಜೆಪಿಯಿಂದ ಅಪಾಯಕಾರಿ ಮೋಸಗಾರಿಕೆ ಆಟ: ಸೋನಿಯಾ ಗಾಂಧಿ

ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆ ಮಂಗಳವಾರ ನಡೆಯಿತು
ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆ ಮಂಗಳವಾರ ನಡೆಯಿತು
Updated on: 

ನವದೆಹಲಿ: ಇಂದು ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಿತು.

ಎಂದಿನಂತೆ ನರೇಂದ್ರ ಮೋದಿ ಸರ್ಕಾರದ ವಿರುದ್ದ ಇಂದು ಕೂಡ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಹಲವು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮತ್ತು ಕೆಲವು ನೀತಿಗಳನ್ನು ಎನ್ ಡಿಎ ಸರ್ಕಾರ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇಂದು ಅಧಿಕಾರ ಬಿಜೆಪಿಯಡಿ ಕೇಂದ್ರೀಕೃತವಾಗಿದೆ. ಒಂದು ಕಡೆ ಪ್ರಧಾನಿಯವರು ಉತ್ತಮ ಆಡಳಿತದ ಚ್ಯಾಂಪಿಯನ್  ಎಂದು ಬಿಂಬಿಸಲು ಹೊರಟಿದ್ದಾರೆ. ಇನ್ನೊಂದೆಡೆ ಅವರ ಸಹೋದ್ಯೋಗಿಗಳನ್ನು ಕೋಮುವಾದಿ ಹೇಳಿಕೆಗಳನ್ನು ನೀಡಲು ಬಿಡುತ್ತಾರೆ ಎಂದರು.
ಬಿಜೆಪಿಯು ಸಂಸತ್ತಿನ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತಿದೆ. ನಾಗರಿಕ ಸಮಾಜಕ್ಕೆ ಮತ್ತು ನ್ಯಾಯಾಂಗಕ್ಕೆ ಅದು ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿದರು.

ಆದರೆ ರಾಜ್ಯದ ಜನರ ಹಿತಕ್ಕಾಗಿ ಕಾಂಗ್ರೆಸ್ ನ  ಎಲ್ಲಾ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಜೊತೆ ಸೌಹಾರ್ದದಿಂದ ವರ್ತಿಸಿ ಕೆಲಸ ಮಾಡಬೇಕು ಎಂದು ಹೇಳಲು ಮರೆಯಲಿಲ್ಲ. ಮುಖ್ಯಮಂತ್ರಿಯಾಗಿ ನೀವು ರಾಜ್ಯದ ಜನತೆ ಹಿತ ಕಾಪಾಡಲು ಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡಬೇಕು. ಆದರೆ ಕಾಂಗ್ರೆಸ್ ನ ಸದಸ್ಯರಾಗಿ ಮೋದಿ ಸರ್ಕಾರ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದರೆ ಅದನ್ನು ಪ್ರತಿಭಟಿಸಬೇಕು ಎಂದು ಸಲಹೆ ನೀಡಿದರು.

ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು ಎಷ್ಟರ ಮಟ್ಟಿಗೆ ಈಡೇರಿವೆ ಎಂಬುದನ್ನು ಗಮನಿಸಿ ಅವುಗಳಿಗೆ ಕೇಂದ್ರ ಸರ್ಕಾರದ ಅಗತ್ಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿಯಬೇಕು. ಕೇಂದ್ರ ಸರ್ಕಾರ, ಹಿಂದಿನ ಯುಪಿಎ ತಂದಿದ್ದ ಯೋಜನೆಗಳನ್ನು ಹೇಗೆ ದುರ್ಬಲಗೊಳಿಸಿದೆ ಎಂಬುದನ್ನು ಅರಿತು ನಾವು ಎನ್ ಡಿಎ ಸರ್ಕಾರದ ಯೋಜನೆಗಳಿಗೆ ಹೇಗೆ ಸ್ಪಂದಿಸಬೇಕಾಗಿದೆ ಎಂಬುದನ್ನು ಸಹ ತಿಳಿದುಕೊಳ್ಳಬೇಕಾಗಿದೆ. ಮುಖ್ಯಮಂತ್ರಿಗಳಾಗಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ವಿಶೇಷ ಜವಾಬ್ದಾರಿ ನಿಮಗಿದೆ. ರಾಜ್ಯದಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ನಾಯಕಿ ಸೋನಿಯಾ ಗಾಂಧಿ ಸಲಹೆ ನೀಡಿದರು. ಸೌಹಾರ್ದತೆ ಮತ್ತು ಸಹಮತ ಉಂಟಾಗುವ ವಾತಾವರಣವನ್ನು ಕೇಂದ್ರ ಸರ್ಕಾರ ಸೃಷ್ಟಿಸಬೇಕು ಎಂದರು.

ಮನಮೋಹನ್ ಸಿಂಗ್ ಮಾತನಾಡಿ, ಯುಪಿಎ ಸರ್ಕಾರದ ಕೆಲಸ ಕಾರ್ಯಗಳು, ಸಾಧನೆಗಳನ್ನು ಜನತೆ ಮರೆಯುವಂತಾಗಬಾರದು. ಯುಪಿಎ ಸರ್ಕಾರದ ತಂದಿದ್ದ ಯೋಜನೆಗಳನ್ನು ಎನ್ ಡಿಎ ಸರ್ಕಾರ ತನ್ನದೆಂದು ಬಿಂಬಿಸಲು ಹೊರಟಿದೆ. ಯುಪಿಎ ಅವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆ 7.5ಕ್ಕೆ ತಲುಪಿತ್ತು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಕೇಂದ್ರ ಸರ್ಕಾರ ಮುಂದಿನ ವರ್ಷ  ಜಾರಿಗೆ ತರಲು ಉದ್ದೇಶಿಸಿರುವ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ)ಯನ್ನು ನಾವು ತರಲು ಸರ್ವ ಪ್ರಯತ್ನವನ್ನೂ ಮಾಡಿದ್ದೆವು. ಈಗ ಬಿಜೆಪಿ ಅದರ ಚ್ಯಾಂಪಿಯನ್ ಎನಿಸಲು ಹೊರಟಿದೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಈಗ ಇರುವ ಕಾನೂನು ಸಮರ್ಪಕವಾಗಿಲ್ಲ ಎಂದು ನನಗನ್ನಿಸುತ್ತದೆ ಎಂದರು. ಯೋಜನಾ ಆಯೋಗವನ್ನು ತರಾತುರಿಯಿಂದ ತೆಗೆದುಹಾಕಿರುವುದಕ್ಕೆ ಮನಮೋಹನ್ ಸಿಂಗ್ ಬೇಸರ ವ್ಯಕ್ತಪಡಿಸಿದರು.

2014ರ ಲೋಕಸಭೆ ಚುನಾವಣೆ ಮುಗಿದ ನಂತರ ನಡೆಯುತ್ತಿರುವ ಮೊದಲ ಕಾಂಗ್ರೆಸ್ ಸಭೆ ಇದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ನಂತರ ಅದನ್ನು ಪುನಃಶ್ಚೇತನಗೊಳಿಸಲು ಈ ಸಭೆ ನಡೆಯುತ್ತಿದ್ದು, ಇದರಲ್ಲಿ ಎನ್ ಡಿಎ ಸರ್ಕಾರದ ಪ್ರಮುಖ ವೈಫಲ್ಯಗಳನ್ನು ಕಾಂಗ್ರೆಸ್ ಜನತೆ ಮುಂದಿಡಲು ಪ್ರಯತ್ನಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com