

ಪಾಟ್ನಾ: ಎನ್.ಡಿ.ಎ ಮೈತ್ರಿಕೂಟವನ್ನು ಉಗ್ರ ಬಲಪಂಥೀಯ(ಫ್ಯಾಸಿಸ್ಟ್) ಒಕ್ಕೂಟ ಎಂದಿರುವ ಅರ.ಜೆ.ಡಿ ಮುಖಂಡ ಲಾಲು ಪ್ರಸಾದ್ ಯಾದವ್, ಬಿಹಾರದ ಜನತೆ ಫ್ಯಾಸಿಸ್ಟ್ ಗಳ ಒಕ್ಕೂಟಕ್ಕೆ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಫ್ಯಾಸಿಸ್ಟ್ ಗಳ ಮೈತ್ರಿಕೂಟ ಇನ್ನೂ ಅಧಿಕಾರದಿಂದ ದೂರ ಉಳಿದಿದ್ದು ಅದರ ನಾಯಕರ ನಿಜವಾದ ಬಣ್ಣ ಬೆಳಕಿಗೆ ಬರುತ್ತಿದೆ. ಎನ್.ಡಿ.ಎ ನಾಯಕರು ಅನ್ಯರ ವಿರುದ್ಧ ಜಂಗಲ್ ರಾಜ್ ಕುರಿತು ಆರೋಪ ಮಾಡುತ್ತಾರೆ ಆದರೆ ಅದೇ ಪಕ್ಷದ ನಾಯಕರು ಒಬ್ಬ ಮುಖ್ಯಮಂತ್ರಿಯ ಮೇಲೆ ಹಲ್ಲೆ ನಡೆಸುವ ಮಾತನಾಡುತ್ತಾರೆ ಎಂದು ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದಾರೆ.
ಜೆಡಿಯು ಶಾಸಕ ಅನಂತ್ ಸಿಂಗ್ ನನ್ನು ವಿನಾಕಾರಣ ಬಲಿಪಶುವನ್ನಾಗಿಸಿದರೆ ತಮ್ಮ ಬೆಂಬಲಿಗರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಎದೆ ಸೀಳುವುದಾಗಿ ರಾಷ್ಟ್ರೀಯ ಲೋಕ ಸಮತಾ ಪಕ್ಷದ ನಾಯಕ ಅರುಣ್ ಕುಮಾರ್ ಹೇಳಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿರುವ ಲಾಲು ಪ್ರಸಾದ್ ಯಾದವ್, ಒಬ್ಬ ಮುಖ್ಯಮಂತ್ರಿ ಮೇಲೆ ಹಲ್ಲೆ ನಡೆಸುವುದಾಗಿ ಹೇಳಿದ್ದರೂ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಲೋಕ ಸಮತಾ ಪಕ್ಷದ ನಾಯಕನ ಹೇಳಿಕೆಯನ್ನು ಖಂಡಿಸಿಲ್ಲ ಎಂದು ಲಾಲು ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಿನದ್ದು 1990 ರ ಬಿಹಾರವಲ್ಲ, ಬಡವರ್ಗದ ಜನತೆ ಒಗ್ಗೂಡಿದ್ದಾರೆ. ಫ್ಯಾಸಿಸ್ಟ್ ಒಕ್ಕೂತವಾಗಿರುವ ಎನ್.ಡಿ.ಎಗೆ ರಾಜ್ಯದ ಜನತೆ ಪಾಠ ಕಲಿಸಲಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಎಚ್ಚರಿಸಿದ್ದಾರೆ.