

ನವದೆಹಲಿ: ``ಸಾಮಾಜಿಕ ತಾಣಗಳಲ್ಲಿ ನನ್ನನ್ನು ಬಹಳಷ್ಟು ಅವಹೇಳನ ಮಾಡಿರುವ ಪ್ರಧಾನಿ ಮೋದಿ ಅವರ ಅಭಿಮಾನಿಗಳು, ನನ್ನ ಅಂಗವಿಕಲ ಮಗನನ್ನೂ ಬಿಡಲಿಲ್ಲ.'' ಹೀಗೆಂದು ಬೇಸರ ವ್ಯಕ್ತಪಡಿಸಿದ್ದು ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ.
``ಪ್ರಧಾನಿ ಮೋದಿ ಅವರನ್ನು ಟೀಕಿಸಲು ಶುರು ಮಾಡಿದಾಗಿನಿಂದಲೂ ಬಿಜೆಪಿ ಬೆಂಬಲಿಗರು ನನ್ನ ವಿರುದ್ಧ ಅತ್ಯಂತ ಕೆಟ್ಟದಾಗಿ ಕಮೆಂಟ್‍ಗಳನ್ನು ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ನನ್ನ ಪುತ್ರನನ್ನೂ ಅವಹೇಳನ ಮಾಡಿದ್ದಾರೆ'' ಎಂದ ಶೌರಿ, ``ಒಬ್ಬಾತನಂತೂ - ಇವನಿಗೆ (ಶೌರಿಯ) ಮಾನಸಿಕ ಅಸ್ವಸ್ಥ ಮಗನೊಬ್ಬನಿದ್ದಾನೆ. ಅವನಿಗೆ ಮತ್ತಷ್ಟು ಹುಚ್ಚು ಹಿಡಿಯಲಿದೆ' ಎಂದಿದ್ದಾನೆ.
ಅಚ್ಚರಿಯೆಂದರೆ, ಇಂತಹ ಮೂರ್ಖರನ್ನು ಸ್ವತಃ ಮೋದಿಯವರೇ ಸಾಮಾಜಿಕ ತಾಣದಲ್ಲಿ ಫಾಲೋ ಮಾಡುತ್ತಿದ್ದಾರೆ'' ಎಂದಿದ್ದಾರೆ. ಶೌರಿ ಮಾತುಗಳನ್ನು ಆಲಿಸಿದ ಬಿಜೆಪಿ ನಾಯಕ ವಿನಯ್ ಸಹಸ್ರ ಬುದ್ಧೆ, ``ಜಾಲ ತಾಣದಲ್ಲಿ ಇಂತಹ ಅವಹೇಳನ ನಡೆದಿದೆಯೆಂಬುದನ್ನು ಕೇಳಿ ತುಂಬಾ ನೋವಾಗುತ್ತಿದೆ. ಮೋದಿ ಅವರೇ ದ್ವೇಷಪೂರಿತ ಹೇಳಿಕೆಗಳನ್ನು ನೀಡದಂತೆ ಸೂಚಿಸಿದ್ದಾರೆ'' ಎಂದರು. ಇದೇ ವೇಳೆ, ಬಿಹಾರ ಫಲಿತಾಂಶದ ಬಗ್ಗೆ ಮಾತನಾಡಿದ ಶೌರಿ, ಇನ್ನು ಬಿಜೆಪಿಯೊಳಗೇ ನಾಯಕತ್ವದ ವಿರುದ್ಧ ಮೌನ ಅಸಹಕಾರ ಚಳವಳಿ ಹೆಚ್ಚಾಗಲಿದೆ. ಮೋದಿ ಕೇಂದ್ರಿತ ಪ್ರಚಾರವು ವಿಶ್ವಾಸಾರ್ಹತೆಯನ್ನು ಕಳೆದು ಕೊಂಡಿದೆ. ಜನರನ್ನು ವಿಭಜಿಸಿ ಮತ ಪಡೆಯುವಂತಹ ಬಿಜೆಪಿಯ ಹುನ್ನಾರಕ್ಕೆ ಬಿಹಾರದ ಜನತೆ ಸೊಪ್ಪು ಹಾಕಲಿಲ್ಲ ಎಂದಿದ್ದಾರೆ.