

ನವದೆಹಲಿ: ಮಕ್ಕಳ ದಿನಾಚರಣೆ ಇನ್ನು ಕೆಲವೇ ದಿನಗಳಲ್ಲಿ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಿಹಿ ಸುದ್ದಿ ನೀಡಲು ಮುಂದಾಗಿರುವ ಏರ್ ಇಂಡಿಯಾ ಇದೀಗ ಮಕ್ಕಳ ದಿನಾಚರಣೆ ನವೆಂಬರ್ 14 ರಂದು ಮಕ್ಕಳಿಗೆ ಉಚಿತ ಟಿಕೆಟ್ ಗಳ ಬಹುಮಾನ ನೀಡುವುದಾಗಿ ಬುಧವಾರ ಹೇಳಿಕೊಂಡಿದೆ.
ಮಕ್ಕಳ ದಿನಾಚರಣೆಯನ್ನು ವಿಶೇಷ ದಿನವಾಗಿ ಆಚರಿಸಲು ನಿರ್ಧರಿಸಿರುವ ಏರ್ ಇಂಡಿಯಾ ಇದಕ್ಕಾಗಿ 'ಮಕ್ಕಳ ದಿನಾಚರಣೆ ಯೋಜನೆ' ಜಾರಿಗೆ ತರಲು ನಿರ್ಧರಿಸಿದೆ. ಈ ಯೋಜನೆಯಲ್ಲಿ ಏರ್ ಇಂಡಿಯಾ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ತಮ್ಮ ವಿಳಾಸ ಹಾಗೂ ಪ್ರಯಾಣಿಸುವ ವಿವರಗಳನ್ನು ಏರ್ ಇಂಡಿಯಾ ಕಚೇರಿಗೆ ನವೆಂಬರ್ 30ರ ಒಳಗಾಗಿ ಕಳುಹಿಸಬೇಕಿದೆ. ಸ್ಪರ್ಥೆಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿಯಿದ್ದು, ಭಾಗವಿಹಿಸುವ ಮಕ್ಕಳು 12 ವರ್ಷದೊಳಗಿನವರಾಗಿರಬೇಕಿದೆ. ವಿಜೇತರ ಹೆಸರನ್ನು ಡಿಸೆಂಬರ್ ಮೊದಲ ವಾರದಲ್ಲಿ ಲಕ್ಕಿ ಡ್ರಾ ಮೂಲಕ ಪ್ರಕಟಿಸಲಾಗುವುದು ಎಂದು ಎರ್ ಇಂಡಿಯಾ ಹೇಳಿಕೊಂಡಿದೆ.
ಲಕ್ಕಿ ಡ್ರಾ ಮೂಲಕ ಆಯ್ಕೆಯಾದ ವಿಜೇತರಿಗೆ ಮೊದಲ ಬಹುಮಾನವಾಗಿ ನಾಲ್ಕು ಎಕಾನಮಿ ಕ್ಲಾಸ್ ಟಿಕೆಟ್ ನೀಡಲಿದೆ. ಇದರಲ್ಲಿ ದೆಹಲಿ- ಸ್ಯಾನ್, ಫ್ರಾನ್ಸಿಸ್ಕೋ- ದೆಹಲಿಗೆ ಪ್ರಯಾಣಿಸುವ ಮತ್ತು ಹಿಂದಿರುಗುವ ಟಿಕೆಟ್ ಗಳು ಲಭ್ಯವಾಗಲಿದೆ. ದ್ವಿತೀಯ ಬಹುಮಾನವಾಗಿ ದೇಶೀಯವಾಗಿ ಯಾವುದೇ ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಪ್ರಯಾಣಿಸುವ ನಾಲ್ಕು ಟಿಕೆಟ್ ಗಳು ಬಹುಮಾನವಾಗಿ ದೊರಯಲಿದೆ. ಮೂರನೇ ಬಹುಮಾನವಾಗಿ ಒಂದು ದೇಶೀಯ ಕೇಂದ್ರದಿಂದ ನಾಲ್ಕು ಟಿಕೆಟ್ ಗಳ ಕೊಡುಗೆ ದೊರಯಲಿದೆ ಎಂದು ಏರ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.