

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಲ್ಲಿ ಅರ್ಧ ಕ್ಕಿಂತಲೂ ಹೆಚ್ಚು ಮಂದಿ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. 243 ವಿಜೇತರಲ್ಲಿ 142 ಮಂದಿಯ ಮೇಲೆ ಕ್ರಿಮಿನಲ್ ಕೇಸುಗಳಿದ್ದು, ಒಟ್ಟಾರೆ ಶೇ.58 ಶಾಸಕರು ಆರೋಪಿತರು.
ಇದರಲ್ಲಿ ದೊಡ್ಡಪಕ್ಷವಾಗಿ ಹೊಮ್ಮಿರುವ ಆರ್‍ಜೆಡಿಯದು ಸಿಂಹಪಾಲು.ಇದರ 80 ಶಾಸಕರಲ್ಲಿ 46 ಮಂದಿ ಕಳಂಕಿತರು. ಕಳೆದ 2010ರ ವಿಧಾನಸಭೆಗೆ ಹೋಲಿಸಿದರೆ ಇವರಲ್ಲಿ ಒಂದು ಶೇಕಡ ಹೆಚ್ಚಳವಾಗಿದೆ. ಈ ಅಂಕಿ ಅಂಶಗಳು ಶಾಸಕರ ಅಫಿದವಿತ್ ಅನ್ನು ಆಧರಿಸಿದ್ದು, ಬಿಹಾರ ಎಲೆಕ್ಷನ್ ವಾಚ್ ಮತ್ತು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆಗಳು ಜಂಟಿ ವಿಶ್ಲೇಷಣೆಗೆ ಒಳಪಡಿಸಿವೆ.
ಅಪರಾಧ ಪ್ರಕರಣ ಎದುರಿಸುತ್ತಿರುವ 142 ಮಂದಿಯಲ್ಲಿ 98 ಮಂದಿ (ಶೇ.40) ಶಾಸಕರು ಕೊಲೆ, ಕೊಲೆಯತ್ನ, ಮತೀಯ ದ್ವೇಷ ಬಿತ್ತುವ ಯತ್ನ, ಅಪಹರಣ, ಮಹಿಳಾ ದೌರ್ಜನ್ಯದಂಥ ಗುರುತರವಾದ ಆರೋಪ ಎದುರಿಸುತ್ತಿದ್ದಾರೆ. 70 ಮಂದಿಯ ಮೇಲೆ ಈಗಾಗಲೇ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಆರ್‍ಜೆಡಿಯ ಝಂಝರ್‍ಪುರ್ ಶಾಸಕ ಗುಲಾಬ್ ಯಾದವ್ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಹತ್ತು ಮಂದಿಯ ಮೇಲೆ ಅಪಹರಣ ಪ್ರಕರಣವಿದೆ.
ಪಕ್ಷವಾರು ಆರ್‍ಜೆಡಿಯಿಂದ 46 ಮಂದಿ, ಜೆಡಿಯುನ 37 ಮಂದಿ, ಬಿಜೆಪಿಯ 34 ಮಂದಿ, ಕಾಂಗ್ರೆಸ್‍ನ 16 ಮಂದಿ, ಸಿಪಿಐಎಂಎಲ್‍ನ ಎಲ್ಲ 3 ಮಂದಿ, ಆರ್‍ಎಲ್‍ಎಸ್‍ಪಿಯ ಒಬ್ಬ, ಎಲ್‍ಜೆಪಿಯ ಇಬ್ಬರೂ ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.
ಒಟ್ಟಾರೆ ಶಾಸಕರಲ್ಲಿ ಒಬ್ಬ ಅನಕ್ಷರಸ್ಥನಾದರೆ, 93 ಮಂದಿ 5ರಿಂದ 12ನೇ ತರಗತಿ ಓದಿದವರು. 138 ಮಂದಿ ಪದವೀಧರರು. 80 ಮಂದಿ ಪುನರಾಯ್ಕೆ ಪಡೆದಿದ್ದಾರೆ. ಖಗಾರಿಯಾ ಕ್ಷೇತ್ರದಿಂದ ಜೆಡಿಯುನಿಂದ ಸ್ಪರ್ಧಿಸಿ ಗೆದ್ದ ಪೂನಂ ದೇವಿ ಯಾದವ್ ಶಾಸಕರಲ್ಲೆಲ್ಲ ಶ್ರೀಮಂತೆಯಾಗಿದ್ದು, 41 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ಭಾಗಲ್ಪುರ ಕಾಂಗ್ರೆಸ್ ಶಾಸಕ ಅಜೀತ್ ಶರ್ಮಾ (40 ಕೋಟಿ), 3ನೇ ಸ್ಥಾನದಲ್ಲಿ ಮೊಕಾಮ ಸ್ವತಂತ್ರ ಶಾಸಕ ಅನಂತ್‍ಕುಮಾರ್ ಸಿಂಗ್ (28 ಕೋಟಿ) ಇದ್ದಾರೆ. ಶಾಸಕರ ಸರಾಸರಿ ಆಸ್ತಿ ಮೌಲ್ಯ 3.02 ಕೋಟಿ.2010ರಲ್ಲಿ ಇದು 82.46 ಲಕ್ಷವಿತ್ತು.ಶೇ.52.2 ಶಾಸಕರ ವಯೋಮಾನ 25ರಿಂದ 50ರ ನಡುವೆ ಇದೆ.
20ಕ್ಕೆ ಪ್ರಮಾಣ
ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ರಚನೆಯ ಪ್ರಕ್ರಿಯೆ ನ.14ರಿಂದ ಆರಂಭವಾಗಲಿದೆ.ನೂತನ ಶಾಸಕಾಂಗ ಪಕ್ಷ ನ.14ರ ಸಂಜೆ ತನ್ನ ನಾಯಕ ನನ್ನು ಆಯ್ಕೆ ಮಾಡಲಿದ್ದು, ಪ್ರಮಾಣವಚನದ ಸ್ಥಳ ಮತ್ತು ದಿನಾಂಕವನ್ನು ನಿರ್ಧರಿಸಲಿದೆ, ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ ಎಂದು ನಿತೀಶ್ ಹೇಳಿದ್ದಾರೆ.ನ.20ರಂದು ಪ್ರಮಾಣವಚನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.