

ನವದೆಹಲಿ: ಸಮಾನ ಶ್ರೇಣಿ, ಸಮಾನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿರುವ ಎನ್.ಡಿ.ಎ ಸರ್ಕಾರದ ಕ್ರಮವನ್ನು ಐತಿಹಾಸಿಕ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಾವು ನಿವೃತ್ತ ಸೈನಿಕರಿಗೆ ನೀಡಿದ್ದ ಭವರಸೆಯನ್ನು ಈಡೇರಿಸಿ, ಆರ್ಥಿಕ ಭದ್ರತೆಯನ್ನು ಒದಗಿಸಿದ್ದಾರೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸೈನಿಕರ ಭದ್ರತೆ ಬಗ್ಗೆ ತಮಾಷೆ ಮಾಡುತ್ತಿತ್ತು ಎಂದು ಅಮಿತ್ ಶಾ ಟೀಕಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಿವೃತ್ತ ಸೈನಿಕರ ಪಿಂಚಣಿಯನ್ನು ಕಡಿಮೆಗೊಳಿಸಲಾಗಿತ್ತು. ಅಲ್ಲದೇ ಒಆರ್ ಒಪಿಗೆ ಈ ಹಿಂದಿನ ಯುಪಿಎ ಸರ್ಕಾರ ಕೇವಲ 500 ಕೋಟಿ ರೂಪಾಯಿ ಅನುದಾನ ನೀಡಿತ್ತು ಎಂದು ಅಮಿತ್ ಶಾ ತಿಳಿಸಿದ್ದಾರೆ.
ಸೈನಿಕರಿಗೆ ನಿಡಲಾಗುತ್ತಿದ ವೇತನದ ಶೇ.70 ರಷ್ಟು ಪಿಂಚಣಿಯನ್ನು ಶೇ.50 ಕ್ಕೆ ಇಳಿಸಿದ್ದು ಕಾಂಗ್ರೆಸ್, ದಶಕಗಳಿಂದ ಒಆರ್ ಒಪಿ ಗಾಗಿ ಹೋರಾಟ ನಡೆಯುತ್ತಿದ್ದರೂ, ಯುಪಿಎ ಸರ್ಕಾರ ಕೇವಲ 500 ಕೋಟಿ ಮಾತ್ರ ಅನುದಾನ ಘೋಷಿಸಿ ಸೈನಿಕರೊಂದಿಗೆ ತಮಾಷೆ ಮಾಡುತ್ತಿತ್ತು. ಭರವಸೆ ಈಡೇರಿಸುವ ನಿಟ್ಟಿನಲ್ಲಿ ಒಆರ್ ಒಪಿ ಜಾರಿಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.