

ಬೆಂಗಳೂರು: ಕಳಸಾ-ಬಂಡೂರಿ ಹಾಗೂ ಮೇಕೆದಾಟು ಯೋಜನೆ ಅನುಷ್ಠಾನ, ರೇಷ್ಮೆ ಆಮದು ಸುಂಕ ಶೇ.31ಕ್ಕೆ ಏರಿಕೆ, ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಜನಪರ ವೇದಿಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ರಮೇಶ್‍ಗೌಡ, ಕಳಸಾ ಬಂಡೂರಿ ವಿವಾದದ ವಿಚಾರದಲ್ಲಿ ತರಾತುರಿಯಲ್ಲಿ ನ್ಯಾಯಾಧಿಕರಣದ ಮೊರೆ ಹೋಗಲಾಗಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಎರಡೂ ರಾಜ್ಯಗಳ ನಡುವೆ ಸಂಧಾನ ನಡೆಸಬೇಕಿದೆ. ಈ ಯೋಜನೆಯಿಂದ 5 ಜಿಲ್ಲೆಗಳ ಜನರಿಗೆ ನೀರು ದೊರೆಯಲಿದೆ.
ಆದರೆ, ಗೋವಾ ಸರ್ಕಾರ ನ್ಯಾಯಾಧಿಕರಣದ ಮೊರೆ ಹೋಗಿದೆ. ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿ 7.5 ಟಿಎಂಸಿ ಕುಡಿಯುವ ನೀರಿಗಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿನಾಕಾರಣ ಕ್ಯಾತೆ ತೆಗೆದಿದ್ದು, ಕೇಂದ್ರ ಸರ್ಕಾರ ತಮಿಳುನಾಡಿನ ಆಗ್ರಹಕ್ಕೆ ಮಣಿಯಬಾರದು. ಯೋಜನೆ ಅನುಷ್ಠಾನಗೊಳಿಸಲು ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ರೇಷ್ಮೆ ಆಮದು ಸುಂಕವನ್ನು ಇಳಿಕೆ ಮಾಡಿರುವುದರಿಂದ ದೇಸಿ ರೇಷ್ಮೆಗೆ ಬೇಡಿಕೆ ಕಡಿಮೆಯಾಗಿದೆ. ದೇಶದ ಒಳಗೆ ರೇಷ್ಮೆ ಉತ್ಪಾದಿಸುತ್ತಿರುವಾಗ ಆಮದು ಮಾಡುವುದು ಸರಿಯಲ್ಲ. ಹೀಗಾಗಿ ಹಿಂದಿನಂತೆ ಶೇ.31ಕ್ಕೆ ಸುಂಕವನ್ನು ಏರಿಸಬೇಕು. ದೇಸಿ ರೇಷ್ಮೆ ಬೆಲೆಯ ಸಮಾನಾಂತರವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.
ಈ ಎಲ್ಲ ಬೇಡಿಕೆಗಳಿಗೆ ಆಗ್ರಹಿಸಿ ಸೆ.26ರಂದು ದೆಹಲಿಯ ಜಂತರ್‍ಮಂತರ್‍ನಲ್ಲಿ ಪ್ರತಿಭಟನೆ ನಡೆಸಲಾಗುವುದು. ರೈತರೂ ಸೇರಿದಂತೆ ರಾಜ್ಯ ಸುಮಾರು 1 ಸಾವಿರ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.