

ವಿಶ್ವಸಂಸ್ಥೆ: ಜೈಶ್-ಇ-ಮೊಹಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮತ್ತು ಪಠಾಣ್ ಕೋಟ್ ದಾಳಿಯ ಪ್ರಮುಖ ರೂವಾರಿ ಮಸೂದ್ ಅಜರ್ ಉಗ್ರಗಾಮಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಶನಿವಾರ ವಿಶ್ವಸಂಸ್ಥೆಯಲ್ಲಿ ಚೀನಾ ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಬಳಿಕ ಮಾತನಾಡಿದ ಚೀನಾದ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಲಿಯು ಜೀಯಿ, ಭಯೋತ್ಪಾದಕ ಎಂದು ಪರಿಗಣಿಸಲು ವಿಶ್ವಸಂಸ್ಥೆ ನಿಗದಿ ಪಡಿಸಿರುವ ಮಾನದಂಡಗಳನ್ನು ಮಸೂದ್ ಅಜರ್ ತಲುಪಿಲ್ಲ. ಹೀಗಾಗಿ ಆತನನ್ನು ಭಯೋತ್ಪಾದಕ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮಸೂದ್ ಅಜರ್ ನನ್ನು ಉಗ್ರಗಾಮಿಯಲ್ಲ ಎಂದು ವಿಶ್ವಸಂಸ್ಥೆ ಪರಿಗಣಿಸುವಂತೆ ಚೀನಾ ಮಾಡುತ್ತಿರುವ ಪ್ರಯತ್ನಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೀಯಿ, ವಿಶ್ವಸಂಸ್ಥೆ ಪ್ರಕಾರ ಓರ್ವ ವ್ಯಕ್ತಿ ಅಥವಾ ಸಂಸ್ಥೆಯನ್ನು ಉಗ್ರಗಾಮಿ ಅಥವಾ ಉಗ್ರ ಸಂಸ್ಥೆ ಎಂದು ಪರಿಗಣಿಸಲು ನಿರ್ಧಿಷ್ಟ ಮಾನದಂಡಗಳಿವೆ. ಆ ಪ್ರತಿಯೊಂದು ಮಾನದಂಡಗಳು ಕೂಲಂಕುಷವಾಗಿ ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಆತ ಅಥವಾ ಆ ಸಂಸ್ಥೆ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂಬುದರ ಮೇಲೆ ನಿರ್ಣಯ ಕೈಗೊಳ್ಳಲಾಗುತ್ತದೆ. ಇದನ್ನು ನಿರ್ಧರಿಸಿವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲ ಸದಸ್ಯರ ಆದ್ಯ ಕರ್ತವ್ಯವಾಗಿದೆ. ವಿಶ್ವಸಂಸ್ಥೆ ಮಾನದಂಡಗಳನ್ನು ಪರಿಶೀಲಿಸಿದಾಗ ಮಸೂದ್ ಅಜರ್ ಉಗ್ರಗಾಮಿಯಲ್ಲ ಎಂದು ಅವರು ಹೇಳಿದರು.
ಪಠಾಣ್ ಕೋಟ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮಸೂದ್ ಅಜರ್ ನನ್ನು ಜಾಗತಿಕ ಮಟ್ಟದಲ್ಲಿ ಉಗ್ರಗಾಮಿ ಎಂದು ಘೋಷಣೆ ಮಾಡುವಂತೆ ವಿಶ್ವಸಂಸ್ಥೆಯ ದೃಢೀಕರಣ ಸಮಿತಿಯನ್ನು ಭಾರತ ಒತ್ತಾಯಿಸಿತ್ತು. ಫೆಬ್ರವರಿಯಲ್ಲಿ ಉಗ್ರ ಮಸೂದ್ ಅಜರ್ ಸೇರಿದಂತೆ ಹಲವು ಉಗ್ರರ ಪಟ್ಟಿಯನ್ನು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿತ್ತು. ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ನಿರ್ಣಯದ ಮೇರೆಗೆ ವಿಶ್ವಸಂಸ್ಥೆ ನಿರ್ಣಯ ತೆಗೆದುಕೊಳ್ಳಲ್ಲಿದ್ದು, ಭಾರತದ ಪ್ರಯತ್ನಕ್ಕೆ ಇದೀಗ ಚೀನಾ ತೊಡಕಾಗಿದೆ. ತನ್ನ ವೆಟೋ ಅಧಿಕಾರವನ್ನು ಬಳಕೆ ಮಾಡುವ ಮೂಲಕ ಉಗ್ರ ಮಸೂದ್ ನನ್ನು ಉಗ್ರಗಾಮಿ ಪಟ್ಟಿಯಿಂದ ಬಚಾವ್ ಮಾಡಲು ಚೀನಾ ಪ್ರಯತ್ನಿಸುತ್ತಿದೆ.