

ಗುವಾಹಟಿ/ಕೋಲ್ಕತಾ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಸೋಮವಾರ ಆರಂಭಗೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಜತೆಗೂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ. ಈಶಾನ್ಯ ಭಾರತದ ಪ್ರಮುಖ ರಾಜ್ಯವಾಗಿರುವ ಅಸ್ಸಾಂನಲ್ಲಿಯೂ ಕಾಂಗ್ರೆಸ್ ನ ತರುಣ್ ಗಗೋಯ್ ಅವರು ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.
ಪಶ್ಚಿಮ ಬಂಗಾಳದ 18. ಅಸ್ಸಾಂನ 65 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 1 ತಿಂಗಳ ಕಾಲ ಈ ಪ್ರಕ್ರಿಯೆ ನಡೆಯಲಿದೆ. ಪಶ್ಚಿಮ ಬಂಗಾಳದ ನಕ್ಸಲ್ ಪೀಡಿತ ಪ್ರದೇಶದಗಳಾದ ಪಶ್ಚಿಮ ಮಿಡ್ನಾಪುರ, ಪುರೂಲಿಯ ಮತ್ತು ಬಂಕುರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ.
ಈ ಪ್ರದೇಶಗಳು ನಕ್ಲಲ್ ಪೀಡಿತ ಪ್ರದೇಶವಾದ್ದರಿಂದ ಈಗಾಗಲೇ ಎಚ್ಚರಿಕೆ ಕ್ರಮಕೈಗೊಂಡಿರುವ ಚುನಾವಣಾ ಆಯೋಗವು ಹೆಚ್ಚಿನ ಭದ್ರತೆಯನ್ನು ಒದಗಿಸಿದೆ. ಅಲ್ಲದೆ, ಚುನಾವಣೆ ಪ್ರಕ್ರಿಯೆಯನ್ನು ಸಂಜೆ 4 ಗಂಟೆಗೆ ಅಂತಿಮಗೊಳಿಸಲಿದೆ. ಇನ್ನು ಪುರುಲ್ಯಾ, ಮನ್ಬಜಾರ್, ಕಶಿಪುರ, ಪರ ಮತ್ತು ರಘುನಾಥ್ ಪುರದಲ್ಲಿ ಸಂಜೆ 6 ಗಂಟೆಗಳ ವರೆಗೂ ನಡೆಯಲಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದಲ್ಲಿನ 18 ಕ್ಷೇತ್ರಗಳಲ್ಲಿ 133 ಅಭ್ಯರ್ಥಿಗಳು ಕಣದಲ್ಲಿಳಿದಿದ್ದು, ಪಶ್ಚಿಮ ಬಂಗಾಳದಲ್ಲಿ ಒಟ್ಟು 6 ಹಂತಗಳಲ್ಲಿ ಚುನಾವಣೆ ನಡೆಸಲಿದೆ. ಅಸ್ಸಾಂ ರಾಜ್ಯದಲ್ಲಿ 2 ಹಂತಗಳಲ್ಲಿ ಮತದಾನ ಪೂರ್ಣಗೊಳ್ಳಲಿದೆ.
2011ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದ ಜೊತೆ ಕಾಂಗ್ರೆಸ್ ಕೈ ಜೋಡಿಸಿತ್ತು. ಅಂದು ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ 34 ವರ್ಷಗಳ ಎಡಪಕ್ಷಗಳ ಆಳ್ವಿಕೆ ಅಂತಿಮಗೊಂಡಿತ್ತು. ನಂತರ ದಿನಗಳಲ್ಲಿ ಟಿಎಂಸಿ ಪಕ್ಷದ ಜತೆಗಿನ ಸಂಬಂಧವನ್ನು ಕಾಂಗ್ರೆಸ್ ಕಡಿದುಕೊಂಡಿತ್ತು. ಇದೀಗ ಎಡಪಕ್ಷಗಳ ಜೊತೆ ಕೈಜೋಡಿಸಿರುವ ಕಾಂಗ್ರೆಸ ಪಕ್ಷ ಮೈತ್ರಿ ಮಾಡಿಕೊಂಡು ಮಮತಾ ಬ್ಯಾನರ್ಜಿಯವರನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.