

ಹೈದರಾಬಾದ್: ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಸೀಳಿದ ಗಂಡ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನ ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ, ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ದೂರಿನ ಅನ್ವಯ ಪತಿ ಹಾಗೂ ಪತ್ನಿ ಇಬ್ಬರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಪತ್ನಿ ಸೌಜನ್ಯಳ ಕುತ್ತಿಗೆ ಸೀಳಿದ ನಾಗೇಂದ್ರ ಬಾಬು ಅಲ್ಲಿಂದ ಪರಾರಿಯಾಗಿದ್ದಾನೆ.
ಸೌಜನ್ಯ ತನ್ನ ಪೋಷಕರ ಜೊತೆ ಮಾತನಾಡುತ್ತಾ ಕೋರ್ಟ್ ಆವರಣದಲ್ಲಿ ನಿಂತಿದ್ದರು. ಈ ವೇಳೆ ಚೂಪಾದ ಚಾಕುವಿನಿಂದ ಕತ್ತು ಸೀಳಿದ ನಾಗೇಂದ್ರ ಬಾಬು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪೊಲೀಸರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.