

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಏಳು ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಸರ್ಕಾರ ಮುಂದಿಟ್ಟಿದ್ದ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಸರ್ಕಾರ ಬುಧವಾರ ತಳ್ಳಿಹಾಕಿದೆ.
ತಮಿಳುನಾಡಿನ ಪ್ರಸ್ತಾಪದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕಾನೂನು ಸಚಿವಾಲಯದೊಂದಿಗೆ ಸಮಾಲೋಚನೆ ಇನ್ನೂ ಮುಂದುವರಿಯುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ರಾಜೀವ್ ಗಾಂಧಿಯ ಹಂತಕರಾದ ವಿ.ಶ್ರೀಹರನ್, ಎಜಿ. ಪೆರಾರಿವಾಲನ್, ಟಿ. ಸುತೇಂದ್ರರಾಜ, ಜಯಕುಮಾರ್, ರಾಬರ್ಟ್ ಪಯಾಸ್, ರವಿಚಂದ್ರನ್ ಮತ್ತು ನಳಿನಿಯನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಸರ್ಕಾರ ಮಾಡಿರುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಹಿಂದೂ ಪತ್ರಿಕೆ ಇಂದು ಬೆಳಗ್ಗೆ ವರದಿ ಮಾಡಿತ್ತು.
ಪ್ರಕರಣ ಸುಪ್ರೀಂ ಕೋರ್ಟ್ ನ ವಿಚಾರಣೆಗೆ ಒಳಪಟ್ಟಿರುವುದರಿಂದ ತನಗೆ ಕೈದಿಗಳನ್ನು ಬಿಡುಗಡೆ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಹೇಳಿರುವುದಾಗಿ ಕೇದ್ರ ಗೃಹ ಸಚಿವಾಲಯ ಹೇಳಿದೆ ಎಂದು ಪತ್ರಿಕೆ ಪ್ರಕಟಿಸಿದೆ.
ಅಪರಾಧಿಗಳನ್ನು ಕ್ಷಮಿಸುವಂತೆ ತಮಿಳುನಾಡು ಸರ್ಕಾರ ಕೇಂದ್ರದ ಮೊರೆ ಹೋಗುತ್ತಿರುವುದು ಇದು ಮೊದಲ ಸಲವೇನಲ್ಲ. ಜಯಲಲಿತಾ ಸರ್ಕಾರ 2014ರಲ್ಲಿ ಅಂದಿನ ಯುಪಿಎ ಸರ್ಕಾರವನ್ನು ಕೂಡ ಅಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ಕೋರಿತ್ತು.
ಕೇಂದ್ರಕ್ಕೆ ಮನವಿ ಮಾಡಿರುವ ತಮಿಳುನಾಡು ಸರ್ಕಾರ ತನ್ನ ಪ್ರಸ್ತಾಪದಲ್ಲಿ, ಅಪರಾಧಿಗಳು ಈಗಾಗಲೇ 24 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವುದರಿಂದ ಅವರನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಕೋರಿತ್ತು.