

ಬಹರೇಚ್(ಉತ್ತರಪ್ರದೇಶ): ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಹಾಗೂ ಆಯಾ ಲಂಚ ಕೇಳಿ ಚಿಕಿತ್ಸೆ ನೀಡಲು ಸತಾಯಿಸಿದ್ದು ಲಂಚ ಕೊಡಲಾಗದ ಬಡ ಹೆತ್ತವರು ತಮ್ಮ ಮಗುವನ್ನು ಕಳೆದುಕೊಂಡಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಬಹರೇಚ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಹಾಗೂ ಆಯಾ ಲಂಚ ಕೇಳಿ ಚಿಕಿತ್ಸೆ ಕೊಡದೆ ಸತಾಯಿಸಿದ ಪರಿಣಾಮ 10 ತಿಂಗಳ ಮಗು ಅಸುನೀಗಿದೆ. ತೀವ್ರ ಜ್ವರ ಹಾಗೂ ನಿತ್ರಾಣದಿಂದ ಬಳಲುತ್ತಿದ್ದ ತಮ್ಮ 10 ವರ್ಷದ ಗಂಡು ಮಗುವನ್ನು ಪೋಷಕರಾದ ಸುಮಿತಾ ಮತ್ತು ಶಿವದತ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವಿಗೆ ಬೆಡ್ ಕೊಡಿಸಲ್ ಆಸ್ಪತ್ರೆ ಸಿಬ್ಬಂದಿ ಲಂಚ ಕೇಳಿದ್ದಾರೆ. ಅಲ್ಲದೆ ಮಗುವಿಗೆ ತುರ್ತು ಇಂಜೆಕ್ಷನ್ ಕೊಡಲು ನರ್ಸ್ ಲಂಚ ಕೇಳಿದ್ದಾರೆ.
ಮಗುವಿಗೆ ಮೊದಲು ಚಿಕಿತ್ಸೆ ಮಾಡಿ ನಂತರ ನೀವು ಕೇಳಿದಷ್ಟು ಹಣವನ್ನು ನಾವು ಹೇಗಾದರೂ ಹೊಂದಿಸಿ ತರುತ್ತೇವೆ ಎಂದು ದಂಪತಿ ಗೊಗರೆದಿದ್ದಾರೆ. ಹೆತ್ತವರು ಪರಿ ಪರಿಯಾಗಿ ಬೇಡಿಕೊಂಡರು ನರ್ಸ್ ಲೇಟಾಗಿ ಇಂಜೆಕ್ಷನ್ ತಂದಿದ್ದಾಳೆ ಅಷ್ಟರಲ್ಲಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿದೆ. ಮಗುವನ್ನು ಕಳೆದುಕೊಂಡ ಹೆತ್ತವರ ರೋದನ ಮುಗಿಲು ಮುಟ್ಟಿದೆ.
ಈ ಪ್ರಕರಣದ ನಂತರ ಬಹರೇಚ್ ಜಿಲ್ಲಾ ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಓಪಿ ಪಾಂಡೆ ಅವರು ಲಂಚ ಕೇಳಿದ್ದ ಆಯಾ ಮತ್ತು ನರ್ಸ್ ಅನ್ನು ಕೆಲಸದಿಂದ ಅಮಾನತು ಮಾಡಿರುವುದಾಗಿ ಹೇಳಿದ್ದಾರೆ.